ರಷ್ಯಾ- ಉಕ್ರೇನ್‌ ಯುದ್ಧದಲ್ಲಿ ಸೋತಿದ್ದು ನ್ಯಾಟೋ!

Published : Mar 21, 2026, 12:06 PM IST
NATO Mark Rutte with world leaders

ಸಾರಾಂಶ

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ ಮೂರು ವರ್ಷಗಳು ಕಳೆದಿವೆ. ಇಂದಿಗೂ ಜಗತ್ತು ಆ ಯುದ್ಧದ ಸಾವು-ನೋವುಗಳ ಲೆಕ್ಕಾಚಾರ, ಕದನ ವಿರಾಮದ ಕುರಿತು ಚರ್ಚಿಸುತ್ತಿದೆ. ಈ ಚರ್ಚೆಗಳು ಮುಖ್ಯವಾಗಿದ್ದರೂ, ಒಂದು ಪ್ರಮುಖ ವಿಷಯವನ್ನು ಮರೆಮಾಚುತ್ತಿವೆ.

 -ಅಜಿತ್ ಶೆಟ್ಟಿ ಹೆರಂಜೆ,

ರಾಜ್ಯ ಸಹ ಸಂಚಾಲಕರು- ಪ್ರಕಾಷನ ಪ್ರಕೋಷ್ಠ, ಬಿಜೆಪಿ ಕರ್ನಾಟಕ

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ ಮೂರು ವರ್ಷಗಳು ಕಳೆದಿವೆ. ಇಂದಿಗೂ ಜಗತ್ತು ಆ ಯುದ್ಧದ ಸಾವು-ನೋವುಗಳ ಲೆಕ್ಕಾಚಾರ, ಕದನ ವಿರಾಮದ ಕುರಿತು ಚರ್ಚಿಸುತ್ತಿದೆ. ಈ ಚರ್ಚೆಗಳು ಮುಖ್ಯವಾಗಿದ್ದರೂ, ಒಂದು ಪ್ರಮುಖ ವಿಷಯವನ್ನು ಮರೆಮಾಚುತ್ತಿವೆ. ರಷ್ಯಾ ಕೇವಲ ಉಕ್ರೇನಿಯನ್ ಭೂಮಿಯನ್ನು ಹತೋಟಿಗೆ ತೆಗೆದುಕೊಳ್ಳಲು ಹೋರಾಡುತ್ತಿರಲಿಲ್ಲ. ರಷ್ಯಾಕ್ಕೆ ಅದಕ್ಕಿಂತಲೂ ಗಹನವಾದ ಉದ್ದೇಶವೊಂದಿತ್ತು- ಅದು ‘ನ್ಯಾಟೋ’ ಎಂಬ ಮಿಲಿಟರಿ ಒಕ್ಕೂಟದ ವಿಶ್ವಾಸಾರ್ಹತೆಯನ್ನು ನಾಶಪಡಿಸುವುದು. ಈ ಗುರಿಯನ್ನು ಅಳೆದು ನೋಡಿದರೆ, ರಷ್ಯಾ ಈಗ ಗೆದ್ದಿದೆ. ಈ ಜಯ ಪೂರ್ವ ಉಕ್ರೇನಿನ ರಣರಂಗದಲ್ಲಿ ಸಿಕ್ಕಿದ್ದಲ್ಲ; ಬದಲಿಗೆ ವಾಷಿಂಗ್ಟನ್ ಮತ್ತು ಬ್ರಸೆಲ್ಸ್‌ನ ಕಾರಿಡಾರ್‌ಗಳಲ್ಲಿ ಹಾಗೂ ಐರೋಪ್ಯ ಒಕ್ಕೂಟದ ಒಡೆದ ಮನಸ್ಸುಗಳಲ್ಲಿ ಮೂಡಿಬಂದಿದೆ.

ಆರಂಭದ ಭರವಸೆ

ಈ ಯುದ್ಧವನ್ನು ಅರ್ಥಮಾಡಿಕೊಳ್ಳಲು ನಾವು 1991ಕ್ಕೆ ಹೋಗಬೇಕು. ಸೋವಿಯತ್ ಒಕ್ಕೂಟ ಪತನವಾದಾಗ, ನ್ಯಾಟೋ ಒಕ್ಕೂಟವು ಪೂರ್ವದ ಕಡೆಗೆ ಒಂದು ಇಂಚೂ ವಿಸ್ತರಿಸುವುದಿಲ್ಲ ಎಂಬ ಭರವಸೆಯನ್ನು ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಜೇಮ್ಸ್ ಬಕೆರ್ ಅವರು ಯುಎಸ್‌ಎಸ್‌ಆರ್‌ ನಾಯಕ ಮೈಕಲ್ ಗೋರ್ಬಚೆವ್‌ಗೆ ಕೊಟ್ಟಿದ್ದರು. ಆದರೆ ಆ ಭರವಸೆಯನ್ನು ನಂತರದ ಮೂರು ದಶಕಗಳಲ್ಲಿ ವ್ಯವಸ್ಥಿತವಾಗಿ ಮುರಿಯಲಾಯಿತು. ನ್ಯಾಟೋ 16 ಸದಸ್ಯರಿಂದ 32ಕ್ಕೆ ಬೆಳೆಯಿತು. ಅದು ಮಾಜಿ ಸೋವಿಯತ್ ರಾಷ್ಟ್ರಗಳನ್ನು ತನ್ನೊಳಗೆ ಸೇರಿಸಿಕೊಂಡಿತು ಮತ್ತು ರಷ್ಯಾದ ಗಡಿಯ ಸಮೀಪಕ್ಕೆ ಬಂದಿತು. ರಷ್ಯಾದೊಂದಿಗೆ ಸಾವಿರ ಮೈಲಿಗಳಿಗೂ ಹೆಚ್ಚು ಗಡಿಯನ್ನು ಹಂಚಿಕೊಳ್ಳುವ ಉಕ್ರೇನ್ ಅನ್ನು ಸದಸ್ಯತ್ವಕ್ಕೆ ಪರಿಗಣಿಸಿದಾಗ, ರಷ್ಯಾದ ಸಹನೆಯ ಕಟ್ಟೆ ಒಡೆಯಿತು.

ಫೆಬ್ರವರಿ 22, 2022ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ ಪ್ರಾರಂಭಿಸಿದಾಗ ಉಕ್ರೇನನ್ನು ನ್ಯಾಟೋದಿಂದ ಹೊರಗಿಡುವುದೇ ರಷ್ಯಾದ ಏಕಮೇವ ಗುರಿ ಅಂದುಕೊಳ್ಳುವುದು ಸರಿಯಲ್ಲ. ರಷ್ಯಾದ ಅಸಲಿ ಗುರಿ, ನ್ಯಾಟೋ ಎಂಬ ಒಂದು ಸಾಂದರ್ಭಿಕ ಶಿಶುವಿನ ಮೇಲಿನ ನಂಬಿಕೆಯನ್ನು ಮುರಿಯುವುದು. ಜಗತ್ತಿಗೆ ತಾನೊಬ್ಬ ಅದ್ಭುತ ಮಿಲಿಟರಿ ಮೈತ್ರಿ ಎಂದು ತೋರಿಕೊಂಡರೂ ಒಳಗೊಳಗೆ ಅಪನಂಬಿಕೆ, ಅತಿಯಾದ ಪರಾವಲಂಬನೆಗಳಿಂದ ಎಷ್ಟೊಂದು ಟೊಳ್ಳಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಡುವುದಾಗಿತ್ತು. ಯಾವ ಒಕ್ಕೂಟವನ್ನು ನಂಬಲು ಸಾಧ್ಯವಿಲ್ಲವೋ, ಆ ಒಕ್ಕೂಟಕ್ಕೆ ಬೆಲೆ ಇರುವುದಿಲ್ಲ. ನ್ಯಾಟೋ ಇಲ್ಲದಿದ್ದರೆ ರಷ್ಯಾಕ್ಕೆ ಶಾಶ್ವತ ಭದ್ರತೆ ಸಿಕ್ಕಂತೆ. ಇದಕ್ಕಾಗಿ ರಷ್ಯಾ ಮುಂದೆ ಎಂದೂ ಗುಂಡು ಹಾರಿಸುವ ಅಗತ್ಯವಿರುವುದಿಲ್ಲ. ಉಕ್ರೇನ್ ಯಾರ ಶಕ್ತಿಯ ಬಲದಲ್ಲಿ ಘರ್ಜಿಸಿತೋ ಆ ವ್ಯವಸ್ಥೆಯನ್ನೇ ಇಲ್ಲವಾಗಿಸಿದರೆ ಮತ್ತಾವ ಭರವಸೆಯ ಮೇಲೆ ಇವರು ಯುದ್ಧ ಮಾಡಿಯಾರು?

ಉಕ್ರೇನಿನ ಮೇಲೆ ದೃಷ್ಟಿ, ನ್ಯಾಟೋದತ್ತ ಗುರಿ

ಐರೋಪ್ಯ ದೇಶಗಳ ಬಗ್ಗೆ ರಷ್ಯಾಕ್ಕೆ ಒಂದು ವಿಷಯ ಚೆನ್ನಾಗಿ ತಿಳಿದಿತ್ತು, ಅಲ್ಲಿನ ಸರ್ಕಾರಗಳು ಮತದಾರರಿಗೆ ಉತ್ತರದಾಯಿಯಾಗಿರುತ್ತವೆ. ಅಲ್ಲಿಯ ಮತದಾರರಿಗೆ ತಾಳ್ಮೆಯಂತೂ ಬಹಳ ಕಡಿಮೆ ಎಂಬುದು. ಯುದ್ಧಕ್ಕೆ ಅಪಾರ ಹಣ ಬೇಕು, ಸದಾ ‘ವೆಲ್‌ಫೇರ್‌ ಸ್ಟೇಟ್’ಗಳಂತೆ ವರ್ತಿಸುವ ಇವರು ಮೂಲಭೂತ ಸೌಕರ್ಯಗಳನ್ನು ನಾಗರಿಕರಿಗೆ ಉಚಿತವಾಗಿ ಕೊಟ್ಟಿದ್ದಾರೆ. ಯಾವಾಗ ದೀರ್ಘಾವಧಿಯ ಯುದ್ಧದ ಹಣಕಾಸಿನ ಒತ್ತಡ ಈ ವ್ಯವಸ್ಥೆಯ ಮೇಲೆ ಬೀಳುತ್ತದೆಯೋ ಕಾಲಕ್ರಮೇಣ ಸಾರ್ವಜನಿಕರಿಗೆ ಸರಕಾರದ ವಿರುದ್ಧ ಆಕ್ರೋಶ ಹೆಚ್ಚಾಗುತ್ತದೆ, ಆಗ ರಾಜಕೀಯ ಬದಲಾವಣೆಗಳು ಸಹಜವಾಗಿ ಸಂಭವಿಸುತ್ತವೆ. ಹಾಗಾಗಿ, ರಷ್ಯಾದ ತಂತ್ರವು ವೇಗವಾಗಿ ಗೆಲ್ಲುವುದಾಗಿರಲಿಲ್ಲ. ಬದಲಿಗೆ, ಪಾಶ್ಚಿಮಾತ್ಯ ದೇಶಗಳ ಆಂತರಿಕ ವಿರೋಧಾಭಾಸಗಳು ಹೊರಬರುವಂತೆ ಮಾಡಿ ಅವರ ತಾಳ್ಮೆಯ ಕಟ್ಟೆ ಒಡೆಯುವುದಾಗಿತ್ತು. ಒಕ್ಕೂಟದ ಒಳಗಿನ ಬಿರುಕುಗಳು ತಾವಾಗಿಯೇ ದೊಡ್ಡದಾಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಎರಡು ವರ್ಷಗಳ ಕಾಲ ಪಾಶ್ಚಿಮಾತ್ಯ ಜಗತ್ತು ಒಗ್ಗಟ್ಟಾಗಿ ನಿಂತಂತೆ ಕಂಡಿತು. ಮಿಲಿಟರಿ ನೆರವು ಹರಿಯಿತು, ನಿರ್ಬಂಧಗಳನ್ನು ಹೇರಲಾಯಿತು. ಹೊರಗಿನಿಂದ ನೋಡುವಾಗ ಒಕ್ಕೂಟವು ಗಟ್ಟಿಯಾಗಿತ್ತು. ಆದರೆ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಒಕ್ಕೂಟದ ಅಸಲಿಯತ್ತನ್ನು ಪ್ರಪಂಚದ ಮುಂದೆ ಬೆತ್ತಲಾಗಿಸಿದರು.

ಒಳಗಿನಿಂದಲೇ ಒಡೆದ ಒಕ್ಕೂಟ:

ರಷ್ಯಾ ಎರಡು ವರ್ಷಗಳ ಯುದ್ಧದಲ್ಲಿ ಸಾಧಿಸಲಾಗದಿದ್ದನ್ನು ಟ್ರಂಪ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಮಾಡಲು ಶುರು ಮಾಡಿದರು. ಅವರು ನ್ಯಾಟೋ ಬದ್ಧತೆಯನ್ನು ಬಹಿರಂಗವಾಗಿ ಪ್ರಶ್ನಿಸಿದರು. ಮಿತ್ರ ರಾಷ್ಟ್ರಗಳಿಂದ ಹಣಕ್ಕಾಗಿ ಬೇಡಿಕೆ ಇಟ್ಟ ರೀತಿ ಯುರೋಪಿನಲ್ಲಿ ಅಸಮಾಧಾನ ಮತ್ತು ಅಪನಂಬಿಕೆಯನ್ನು ಬಿತ್ತಿತು. ಉಕ್ರೇನನ್ನು ರಷ್ಯಾದ ಷರತ್ತುಗಳಿಗೆ ಒಪ್ಪುವಂತೆ ಒತ್ತಾಯಿಸಿದರು. ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿಯನ್ನು ತಮ್ಮ ರಾಷ್ಟ್ರಪತಿ ಭವನದಲ್ಲಿ ಮಾಧ್ಯಮಗಳ ಮುಂದೆಯೇ ಅವಮಾನಿಸಿದ್ದು ನ್ಯಾಟೋದೊಳಗಿನ ಅವಿಶ್ವಾಸದ ಪರಾಕಾಷ್ಠೆಯನ್ನು ಎತ್ತಿ ತೋರಿಸಿತು. ಆದರೆ ಅತ್ಯಂತ ನಿರ್ಣಾಯಕ ಕ್ಷಣ ಬಂದಿದ್ದು ‘ಗ್ರೀನ್‌ಲ್ಯಾಂಡ್‌’ ವಿಷಯದಲ್ಲಿ. ಗ್ರೀನ್‌ಲ್ಯಾಂಡ್‌ ಡೆನ್ಮಾರ್ಕ್‌ಗೆ ಸೇರಿದ ಪ್ರದೇಶ ಮತ್ತು ಡೆನ್ಮಾರ್ಕ್ ನ್ಯಾಟೋದ ಸದಸ್ಯ ರಾಷ್ಟ್ರ. ಯಾವಾಗ ನ್ಯಾಟೋದ ಅತ್ಯಂತ ಶಕ್ತಿಶಾಲಿ ದೇಶದ ನಾಯಕ, ತನ್ನದೇ ಮಿತ್ರರಾಷ್ಟ್ರದ ಭೂಭಾಗದ ಮೇಲೆ ಆಸೆ ಹೊಂದಿದ್ದಾನೆ ಎಂಬ ಸಂಕೇತ ನೀಡುತ್ತಾರೋ, ಆಗ ‘ಒಬ್ಬರ ಮೇಲೆ ದಾಳಿಯಾದರೆ ಅದು ಎಲ್ಲರ ಮೇಲಿನ ದಾಳಿ’ ಎಂಬ ನ್ಯಾಟೋದ ಮೂಲ ಭರವಸೆಯೇ ಅರ್ಥಹೀನವಾಗುತ್ತದೆ. ವಾಷಿಂಗ್ಟನ್ ಸ್ವತಃ ಒಂದು ಸದಸ್ಯ ರಾಷ್ಟ್ರದ ಭೂಮಿಗೆ ಬೆದರಿಕೆ ಹಾಕಬಲ್ಲದು ಎಂದಾದರೆ, ನ್ಯಾಟೋ ಯಾರನ್ನು ರಕ್ಷಿಸುತ್ತಿದೆ? ಇದೇನು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ರಷ್ಯಾದ ಗಡಿಯಲ್ಲಿರುವ ಎಸ್ಟೋನಿಯಾ, ಲಾಟ್ವಿಯಾ ಮತ್ತು ಪೋಲೆಂಡ್‌ನಂತಹ ಸಣ್ಣ ರಾಷ್ಟ್ರಗಳಿಗೆ ಇದು ಒಂದು ಭಯಾನಕ ಸಂದೇಶವನ್ನು ನೀಡಿದೆ. ಅಮೆರಿಕದ ಭದ್ರತಾ ಗ್ಯಾರಂಟಿಯ ಮೇಲೆ ಈಗ ಸಂಶಯದ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ನಂಬಿಕೆಯ ಮೇಲೆ ನಿಂತಿರುವ ಒಕ್ಕೂಟವು ಅದರ ಅತ್ಯಂತ ಶಕ್ತಿಶಾಲಿ ಸದಸ್ಯನೇ ವಿಶ್ವಾಸಾರ್ಹನಲ್ಲದಿದ್ದಾಗ ಬದುಕುಳಿಯಲು ಸಾಧ್ಯವಿಲ್ಲ.

ಉಕ್ರೇನ್ ಯುದ್ಧವನ್ನು ರಷ್ಯಾ ಗೆದ್ದ ಸ್ಥಳ:

ನೆನಪಿಡಿ, ಇತಿಹಾಸವು ರಷ್ಯಾದ ನಿಜವಾದ ಗೆಲುವನ್ನು ಉಕ್ರೇನ್‌ನಲ್ಲಿ ದಾಖಲಿಸುವುದಿಲ್ಲ, ಬದಲಿಗೆ ಇರಾನ್ ಎದುರಿನ ಅಮೆರಿಕದ ಸಂಘರ್ಷದಲ್ಲಿ ದಾಖಲಿಸುತ್ತದೆ. ಅಮೆರಿಕವು ಇರಾನ್ ವಿರುದ್ಧ ದಾಳಿ ಪ್ರಾರಂಭಿಸಿದಾಗ, ಮಧ್ಯಪ್ರಾಚ್ಯ ಮತ್ತು ಏಷ್ಯಾದ ಇಂಧನ ಹಾಗೂ ಭದ್ರತಾ ಸಂಬಂಧಗಳಲ್ಲಿ ದೊಡ್ಡ ಬದಲಾವಣೆಗಳಾದವು. ಹೊಸ ಒತ್ತಡಗಳು ನಿರ್ಮಾಣವಾದವು. ಈ ಗೊಂದಲದಲ್ಲಿ ಒಂದು ವಿಷಯ ಸ್ಪಷ್ಟವಾಯಿತು- ರಷ್ಯಾ ಕೇವಲ ಯುರೋಪಿನ ಶಕ್ತಿಯಲ್ಲ, ಬದಲಿಗೆ ಜಾಗತಿಕ ಇಂಧನ ಮತ್ತು ಭದ್ರತಾ ರಾಜಕೀಯದ ಅನಿವಾರ್ಯ ಆಟಗಾರ ಎಂದು ಸಾಬೀತಾಯಿತು. ಇವತ್ತು ಅಮೆರಿಕ ಅಂಗಲಾಚಿದರೂ ಅದರ ನ್ಯಾಟೋ ಮಿತ್ರ ಮಂಡಳಿಗಳು ಅಮೆರಿಕದ ಸಹಾಯಕ್ಕೆ ಬರುತ್ತಿಲ್ಲ. ಇರಾನ್ ಬಿಕ್ಕಟ್ಟು ಉಕ್ರೇನ್ ಯುದ್ಧವು ಏನನ್ನು ಸಾಧಿಸಲು ಹೊರಟಿತ್ತು ಎಂಬುದನ್ನು ಸ್ಪಷ್ಟಪಡಿಸಿತು. ಅಮೆರಿಕವು ಒಂದೇ ಸಮಯದಲ್ಲಿ ವಿಭಜಿತ ನ್ಯಾಟೋ, ತಾನು ಇಷ್ಟಪಡದ ಉಕ್ರೇನ್ ಯುದ್ಧ ಮತ್ತು ಇರಾನ್ ಸಂಘರ್ಷವನ್ನು ನಿಭಾಯಿಸಲು ಒದ್ದಾಡುತ್ತಿದೆ. ಅಮೆರಿಕವು ಆಂತರಿಕವಾಗಿ ವಿಭಜನೆಗೊಂಡಿದೆ ಮತ್ತು ಜಾಗತಿಕವಾಗಿ ಅತೀವ ಒತ್ತಡಕ್ಕೆ ಒಳಗಾಗಿದೆ. ಇದಕ್ಕೆ ವಿರುದ್ಧವಾಗಿ ರಷ್ಯಾ ನಿರ್ಬಂಧಗಳನ್ನು ತಡೆದುಕೊಂಡಿದೆ, ತನ್ನ ಆರ್ಥಿಕತೆಯನ್ನು ಬದಲಿಸಿಕೊಂಡಿದೆ ಮತ್ತು ಚೀನಾ ಹಾಗೂ ಜಾಗತಿಕ ದಕ್ಷಿಣದ ದೇಶಗಳೊಂದಿಗೆ (ಗ್ಲೋಬಲ್‌ ಸೌತ್‌) ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿದೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಪರವಾಗಿ ಕಟ್ಟಿದ್ದ ನೈತಿಕ ಕೋಟೆಗಳು ಹೊಸ ಬಿಕ್ಕಟ್ಟುಗಳ ಮುಂದೆ ಕುಸಿಯತೊಡಗಿದವು. ಯುರೋಪ್ ಈಗ ಅಮೆರಿಕವನ್ನು ಒಬ್ಬ ಅನಿಶ್ಚಿತ ಪಾಲುದಾರನನ್ನಾಗಿ ನೋಡುತ್ತಿದೆ.

ತೈಲ- ಎಲ್ಲದರ ಹಿಂದಿರುವ ನಿಶ್ಯಬ್ದ ಎಳೆ:

ಇವೆಲ್ಲದರ ನಡುವೆ ತೈಲದ ವಿಚಾರವು ಎಲ್ಲವನ್ನೂ ಬಯಲು ಮಾಡಿದೆ. 2022ರಲ್ಲಿ ರಷ್ಯಾದ ತೈಲವನ್ನು ಖರೀದಿಸುವುದು ಉಕ್ರೇನಿಯನ್ನರ ರಕ್ತ ಹರಿಸಲು ಹಣ ನೀಡಿದಂತೆ ಎಂದು ಪಾಶ್ಚಿಮಾತ್ಯರು ಬೊಬ್ಬೆ ಹೊಡೆದಿದ್ದರು. ಭಾರತದಂತಹ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ದೇಶಗಳನ್ನು ನಾಚಿಕೆಗೇಡಿನ ಕೆಲಸ ಮಾಡುತ್ತಿವೆ ಎಂದು ಜರಿದಿದ್ದರು. ಆದರೆ ಮೂರು ವರ್ಷಗಳ ನಂತರ, ಇರಾನ್‌ನಿಂದ ಪೂರೈಕೆ ವ್ಯತ್ಯಯವಾದಾಗ, ಅದೇ ಪಾಶ್ಚಿಮಾತ್ಯ ರಾಷ್ಟ್ರಗಳು ‘ರಷ್ಯಾದಿಂದ ಹೆಚ್ಚು ತೈಲ ಖರೀದಿಸಿ’ ಎಂದು ಗುಟ್ಟಾಗಿ ಸಂದೇಶ ನೀಡಿದವು. ಈ ಬೂಟಾಟಿಕೆಯನ್ನು ಇಡೀ ಜಗತ್ತು ಗಮನಿಸಿದೆ. ಈ ವಿಷಯದಲ್ಲಿ ಭಾರತವು ತನ್ನ ನಿಲುವನ್ನು ಉಳಿಸಿಕೊಂಡು ಜಯಶಾಲಿಯಾಗಿದೆ. ಮೂರು ವರ್ಷಗಳ ಹಿಂದೆ ಯಾವ ರಾಷ್ಟ್ರದ ತೈಲ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಪಾಲಿಗೆ ಉಕ್ರೇನಿಗಳನ್ನು ಸುಡುವ ಬೆಂಕಿಯಾಗಿತ್ತೋ ಅದೇ ತೈಲ ಇವತ್ತು ಪಾಶ್ಚಿಮಾತ್ಯ ದೇಶಗಳಿಗೆ ಅಭಿವೃದ್ಧಿಯ ಇಂಧನವಾಗಿದೆ. ಮೂರೇ ಮೂರು ವರ್ಷದಲ್ಲಿ ಪಾಶ್ಚಾತ್ಯ ದೇಶಗಳ ದೃಷ್ಟಿಕೋನ ಈ ಪರಿ ಬದಲಾವಣೆ ಆಗಿದೆ ಎಂದರೆ ಇದರ ಹಿಂದೆ ದೇಶಗಳ ಮನ ಪರಿವರ್ತನೆಯೋ ಅಥವಾ ನ್ಯಾಟೋದೊಳಗಿನ ಅಪನಂಬಿಕೆಯೋ?

ನ್ಯಾಟೋಗೆ ಹೊಡುಯುವ ಕೊನೆಯ ಮೊಳೆ:

ಗ್ರೀನ್‌ಲ್ಯಾಂಡ್‌ ವಿಷಯವು ನ್ಯಾಟೋದ ಶವಪೆಟ್ಟಿಗೆಗೆ ಹೊಡೆದ ಅಂತಿಮ ಮೊಳೆಯಾಗಿದೆ. ಯಾವಾಗ ಒಬ್ಬ ನ್ಯಾಟೋ ನಾಯಕ ತನ್ನದೇ ಮಿತ್ರ ರಾಷ್ಟ್ರದ ಭೂಮಿಯ ಮೇಲೆ ಕಣ್ಣು ಹಾಕುತ್ತಾನೋ, ಆ ಒಕ್ಕೂಟ ಅಂದೇ ಸತ್ತಂತೆ. ಇನ್ನು ಮುಂದೆ ಸಭೆಗಳು ನಡೆಯಬಹುದು, ಪ್ರಕಟಣೆಗಳು ಬರಬಹುದು, ಆದರೆ ನ್ಯಾಟೋದ ಅಗ್ನಿ ದಿವ್ಯದಂತಿರುವ ‘ಅಮೆರಿಕದ ಅಭೇದ್ಯ ಭದ್ರತಾ ಭರವಸೆ’ ಈಗ ಸಂಪೂರ್ಣವಾಗಿ ಶಿಥಿಲಗೊಂಡಿದೆ. ರಷ್ಯಾ ನ್ಯಾಟೋದ ಕೋಟೆಯನ್ನು ಬಲವಂತವಾಗಿ ಕೆಡವಲಿಲ್ಲ. ಬದಲಿಗೆ, ಕೋಟೆಯ ಕಾವಲುಗಾರನೇ ತನ್ನ ಸ್ಥಾನವನ್ನು ಬಿಟ್ಟು ಹೋಗುವಂತೆ ಮಾಡಿತು. ಅದು ನಡೆದದ್ದು ಆಗಸ್ಟ್ 15, 2025ರಂದು ಅಲಾಸ್ಕಾದ ಎಲ್ಮೆಂಡ್ರಾಫ್-ರಿಚರ್ಡ್ಸನ್ ವಾಯು ನೆಲೆಯಲ್ಲಿ. ರಾಷ್ಟ್ರಗಳಿಗೆ ಯಾವುದೇ ಪೂರ್ಣ ಕಾಲಿಕ ಮಿತ್ರರೂ ಇಲ್ಲ ಶತ್ರುಗಳು ಇಲ್ಲ, ಅದಕ್ಕೇನಿದ್ದರೂ ಇರುವುದು ತನ್ನ ಪೂರ್ಣ ಕಾಲಿಕ ರಾಷ್ಟ್ರೀಯ ಹಿತಾಸಕ್ತಿ ಮಾತ್ರ ಎಂದು ಬ್ರಿಟೀಷ್ ಪ್ರಧಾನಿ ಲಾರ್ಡ್ ಪಲ್ಮರ್ಸ್ಟನ್ 1848ರಲ್ಲಿ ಹೇಳಿದ್ದನ್ನು ಪುಟಿನ್ 2026ರಲ್ಲಿ ಮತ್ತೊಮ್ಮೆ ಸತ್ಯ ಎಂದು ಸಾಬೀತು ಮಾಡಿದ್ದಾರೆ. ರಷ್ಯಾ ಈ ಯುದ್ಧಕ್ಕೆ ದೊಡ್ಡ ಬೆಲೆ ತೆತ್ತಿದೆ ಎಂಬುದು ನಿಜ. ಆದರೆ ಯುದ್ಧಗಳನ್ನು ಗುರಿ ಸಾಧನೆಯ ಆಧಾರದ ಮೇಲೆ ಅಳೆಯಲಾಗುತ್ತದೆ. ರಷ್ಯಾದ ಗುರಿ ಉಕ್ರೇನ್ ಭೂಪಟವನ್ನು ಬದಲಿಸುವುದಾಗಿರಲಿಲ್ಲ, ಬದಲಿಗೆ ಜಾಗತಿಕ ಶಕ್ತಿಯ ನಕ್ಷೆಯನ್ನು ಬದಲಿಸುವುದಾಗಿತ್ತು. ಆ ನಕ್ಷೆಯಲ್ಲಿ ಗೆಲುವು ಈಗ ಮಾಸ್ಕೋದ ಕಡೆಯಿದೆ. ಪುಟಿನ್ ನ್ಯಾಟೋವನ್ನು ಯುದ್ಧಭೂಮಿಯಲ್ಲಿ ಸೋಲಿಸಲಿಲ್ಲ; ನ್ಯಾಟೋ ತನ್ನನ್ನು ತಾನೇ ಸೋಲಿಸಿಕೊಳ್ಳುವಂತೆ ಅವರು ಕಾದು ನೋಡಿದರು. ತಾಳ್ಮೆ ಮತ್ತು ರಣತಂತ್ರದ ಮೂಲಕ ರಷ್ಯಾ ಈ ಗೆಲುವು ತೆಹರಾನಿನಲ್ಲಿ ಗೋಚರಿಸಿದೆ.

PREV
Read more Articles on

Recommended Stories

ಮನುಷ್ಯನ ಬದುಕಿಗೆ ರಂಜಾನ್‌ ಪಾಠಗಳು
ನಿಮ್ಮ ಹೃದಯದ ಕವಾಟವನ್ನು ರಕ್ಷಿಸಲು 9 ಮಾರ್ಗಗಳು