ಬೆಂಗಳೂರಲ್ಲಿ ನವರಾತ್ರಿ ಆರಂಭ: ದೇವಸ್ಥಾನಗಳಲ್ಲಿ ಪೂಜೆ, ಮನೆಗಳಲ್ಲಿ ಬೊಂಬೆ ಪ್ರತಿಷ್ಠಾಪನೆ

KannadaprabhaNewsNetwork |  
Published : Sep 23, 2025, 02:08 AM IST
BANASHANKARI | Kannada Prabha

ಸಾರಾಂಶ

ಶರನ್ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಬನಶಂಕರಿ ಸೇರಿ ಪ್ರಮುಖ ದೇವಸ್ಥಾನಗಳಲ್ಲಿ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದ್ದು, ಮನೆಗಳಲ್ಲಿ ಸಂಪ್ರದಾಯಸ್ಥರು ನವರಾತ್ರಿ ಬೊಂಬೆ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶರನ್ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಬನಶಂಕರಿ ಸೇರಿ ಪ್ರಮುಖ ದೇವಸ್ಥಾನಗಳಲ್ಲಿ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದ್ದು, ಮನೆಗಳಲ್ಲಿ ಸಂಪ್ರದಾಯಸ್ಥರು ನವರಾತ್ರಿ ಬೊಂಬೆ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದ್ದಾರೆ.

ಅಶ್ವಯುಜ ಶುದ್ಧ ಪಾಡ್ಯಮಿಯಿಂದ ನವಮಿವರೆಗೆ ಅಂದರೆ ಒಂಬತ್ತು ದಿನಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ ದೇವಸ್ಥಾನಗಳಲ್ಲಿ ಕಲಶ ಸ್ಥಾಪನೆ ಮಾಡಿ ಹೋಮ ಹವನಾದಿಗಳನ್ನು ನೆರವೇರಿಸಲಾಯಿತು.

ನಗರದ ಬನಶಂಕರಿ ದೇವಸ್ಥಾನದಲ್ಲಿ 110ನೇ ಶರನ್ನವರಾತ್ರಿ ಆಚರಣೆ ನಡೆಯುತ್ತಿದ್ದು, ಸೋಮವಾರ ಅರಿಶಿನ ಕುಂಕುಮ ಅಲಂಕಾರ ಮಾಡಲಾಯಿತು. ಶಾಕಾಂಬರಿ ಅಮ್ಮನವರ ಉತ್ಸವ ಮೂರ್ತಿಗೆ ಶ್ರೀ ಲಲಿತಾದೇವಿ ಅಲಂಕಾರ ಮಾಡಿ ಪೂಜಿಸಲಾಯಿತು. ಸಹಸ್ರ ಮೋದಕ ಗಣಪತಿ ಹೋಮ ನಡೆಯಿತು. ಹಬ್ಬದ ಮೊದಲ ದಿನವಾದ ಕಾರಣ ಸಾಕಷ್ಟು ಭಕ್ತರು ಆಗಮಿಸಿ ದರ್ಶನ ಕೈಗೊಂಡು ಪ್ರಸಾದ ಸ್ವೀಕರಿಸಿದರು.

ನವರಾತ್ರಿಯ ಎರಡನೇ ದಿನವಾದ ಮಂಗಳವಾರ ದೇವಿಗೆ ಶಂಖ ಅಲಂಕಾರ, ಸೆ.24ರಂದು ಹಣ್ಣಿನ ಅಲಂಕಾರ, ಸೆ.25 ಮುತ್ತಿನ ಅಲಂಕಾರ, ಸೆ.26 ಬಳೆ ಅಲಂಕಾರ, ಸೆ.27 ಲಲಿತಾ ಪರಮೇಶ್ವರಿ ಅಲಂಕಾರ, ಸೆ.28 ತರಕಾರಿ ಅಲಂಕಾರ, ಸೆ.29 ಸರಸ್ವತಿ ಅಲಂಕಾರ, ಸೆ.30 ಮಹಿಷಮರ್ದಿನಿ ಅಲಂಕಾರ ಹಾಗೂ ಅ.1 ವಿಜಯದಶಮಿಯಂದು ಅಂಬಾರಿ ಅಲಂಕಾರ ಮಾಡಲಾಗುವುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದರು.

ಉಳಿದಂತೆ ಮಹಾಲಕ್ಷ್ಮಿ ಲೇಔಟ್ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ಸೇವಾ ಸಮಿತಿಯಿಂದ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು. ಅದರಂತೆ ನಗರದ ಮತ್ತೀಕೆರೆಯ ಶ್ರೀ ಚೌಡೇಶ್ವರಿ ದೇವಿ ದೇವಾಲಯ, ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಾಲಯ, ಗಂಗಮ್ಮ ದೇವಿ ದೇವಾಲಯ, ಮೆಜೆಸ್ಟಿಕ್‌ ಬಳಿಯ ಅಣ್ಣಮ್ಮ ದೇವಾಲಯ, ಶೇಷಾದ್ರಿಪುರಂನ ಮಹಾಲಕ್ಷ್ಮೀ ದೇವಾಲಯಗಳಲ್ಲೂ ವಿಶೇಷ ಹೋಮ, ಅಲಂಕಾರ ಪೂಜೆಗಳು ಜರುಗಿದವು.

ಟಿ.ಆರ್‌.ಮಿಲ್‌ ಬಳಿಯ ಬಂಡೀಕಾಳಮ್ಮ, ಮುತ್ಯಾಲನಗರದ ಮುತ್ಯಾಲಮ್ಮ ದೇವಿ ದೇವಾಲಯ, ಶಂಕರ ಮಠದ ಶ್ರೀ ಶಾರದಾ ದೇವಿ ದೇವಳ, ಮಲ್ಲೇಶ್ವರದ ಕನ್ನಿಕಾ ಪರಮೇಶ್ವರಿ ದೇವಾಲಯ, ವಿವಿಪುರಂನ ವಾಸವಿದೇವಿ ದೇವಾಲಯ ಸೇರಿ ನಗರದ ದೇವಿ ದೇವಾಲಯಗಳಲ್ಲಿ ಒಂಬತ್ತು ದಿನಗಳ ಕಾಲ ನಿತ್ಯ ವಿಶೇಷ ಅಲಂಕಾರ ಹಾಗೂ ಪೂಜೆಗಳು ನಡೆಯಲಿವೆ.

ಮನೆಗಳಲ್ಲಿ ಸಂಪ್ರದಾಯಸ್ಥರು ಬೊಂಬೆಗಳನ್ನು ಪ್ರತಿಷ್ಠಾಪಿಸಿದ್ದಾರೆ. ಮುಖ್ಯವಾಗಿ ಸಾಂಕೇತಿಕ ಆಚರಣೆ ಕಲಶ ಸ್ಥಾಪನೆ ಮಾಡಿ ದುರ್ಗೆಯನ್ನು ಪೂಜೆಗೆ ಆಹ್ವಾನಿಸಿ ಶೈಲಪುತ್ರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಬೊಂಬೆ ಪ್ರತಿಷ್ಠಾಪನೆ ಪೂಜೆಯನ್ನು ಘಟಸ್ಥಾಪನೆಯೊಂದಿಗೆ ಪ್ರಾರಂಭಿಸಲಾಯಿತು. ಮಹಿಳೆಯರು ದೇವಿಯನ್ನು ಆರಾಧಿಸಿ, ಆರತಿ ಮತ್ತು ನೈವೇದ್ಯ ಅರ್ಪಿಸಿ, ದುರ್ಗಾ ಸಪ್ತಶತಿ ಪಠಿಸಿದರು.

PREV

Recommended Stories

ಸ್ಪಾರ್ಕ್ಲೀ ಡೆನಿಮ್‌ನಲ್ಲಿ ಬಾಲಿವುಡ್‌ ಸುಂದರಿಯರು : ಆಲಿಯಾ ಭಟ್‌ಗೆ ಫೇವರೆಟ್‌,
ಟ್ರಂಪ್‌ ವೀಸಾ ಪ್ರಹಾರ: ಸ್ವಾವಲಂಬಿ ಭಾರತಕ್ಕೆ ತೆರೆದ ಅವಕಾಶ