ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಹೊಸ ಏರ್ ಟ್ರಾಫಿಕ್‌ ಕಂಟ್ರೋಲ್ ಟವರ್‌

KannadaprabhaNewsNetwork |  
Published : Dec 01, 2025, 04:00 AM IST
ATC

ಸಾರಾಂಶ

ದೇಶದ ಮೂರನೇ ಹೆಚ್ಚು ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣವಾಗಿರುವ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ವಿಮಾನಗಳ ಹಾರಾಟವನ್ನು ಸಮರ್ಥವಾಗಿ ನಿಭಾಯಿಸಲು, ಹೊಸ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ (ಎಟಿಸಿ) ನಿರ್ಮಾಣ ಯೋಜನೆ ರೂಪಿಸಲಾಗಿದೆ.

 ಬೆಂಗಳೂರು :  ದೇಶದ ಮೂರನೇ ಹೆಚ್ಚು ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣವಾಗಿರುವ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ವಿಮಾನಗಳ ಹಾರಾಟವನ್ನು ಸಮರ್ಥವಾಗಿ ನಿಭಾಯಿಸಲು, ಹೊಸ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ (ಎಟಿಸಿ) ನಿರ್ಮಾಣ ಯೋಜನೆ ರೂಪಿಸಲಾಗಿದೆ.

4000 ಎಕರೆಗೂ ಹೆಚ್ಚು ಪ್ರದೇಶದಲ್ಲಿರುವ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದಾಗ ಒಂದು ರನ್‌ ವೇ ಗಮನದಲ್ಲಿಟ್ಟುಕೊಂಡು ಎಟಿಸಿ ನಿರ್ಮಿಸಲಾಗಿತ್ತು. ಆದರೀಗ, ಎರಡನೇ ಟರ್ಮಿನಲ್ ಮತ್ತು ರನ್‌ವೇ ಕಾರ್ಯ ನಿರ್ವಹಿಸುತ್ತಿವೆ. ವಿಮಾನ ಮತ್ತು ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಪ್ರತಿನಿತ್ಯ ದೇಶ-ವಿದೇಶಗಳಿಗೆ 750 ವಿಮಾನಗಳು ಹಾರಾಟ ನಡೆಸುತ್ತಿವೆ. ಹೀಗಾಗಿ ಹಾಲಿ ಬೇಡಿಕೆ ಮತ್ತು ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಎಟಿಸಿ ನಿರ್ಮಾಣಕ್ಕಾಗಿ ವಿನ್ಯಾಸ ಮತ್ತು ಅಭಿವೃದ್ಧಿಗೆ ಬಿಐಎಎಲ್ ಅರ್ಜಿ ಆಹ್ವಾನಿಸಿದೆ.

2027ರಲ್ಲಿ ನೂತನ ಟವರ್ ಸಜ್ಜು

2027ರಲ್ಲಿ ನೂತನ ಟವರ್ ಸಜ್ಜುಗೊಳಿಸುವ ಗುರಿ ಹೊಂದಲಾಗಿದೆ. ನೂತನ ಟವರ್‌ನಿಂದ ಹೆಚ್ಚಿನ ವಿಮಾನಗಳ ಆಗಮನ, ನಿರ್ಗಮನ ಮತ್ತು ಸಂಬಂಧಿಸಿದ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ವಿಮಾನ ಹಾರಾಟ ಕಾರ್ಯಾಚರಣೆಯ ಸುರಕ್ಷತೆ ಹೆಚ್ಚಳ, ತುರ್ತು ಪರಿಸ್ಥಿತಿ ನಿರ್ವಹಣೆಯನ್ನು ಬಲಪಡಿಸುವುದು, ಹವಾಮಾನ ಪರಿಸ್ಥಿತಿಯ ಅರಿಯುವಿಕೆಯಲ್ಲಿ ಸುಧಾರಣೆ ಸೇರಿದಂತೆ ಅನೇಕ ಅನುಕೂಲತೆಗಳನ್ನು ಹೊಸ ಎಟಿಸಿ ಕಲ್ಪಿಸಲಿದೆ. ವಿಶ್ರಾಂತಿ ಕೊಠಡಿ ಸೇರಿದಂತೆ ನವೀನ ಸೌಲಭ್ಯಗಳು ಹೊಸ ಎಟಿಸಿ ಹೊಂದಿರಲಿದೆ.

2024ರಲ್ಲಿ 4.3 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿದ್ದ ಕೆಐಎ, ಭವಿಷ್ಯದಲ್ಲಿ ವಾರ್ಷಿಕ 11.4 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವಂತೆ ಸಮರ್ಥಗೊಳಿಸಲು ಅನೇಕ ಮೂಲಸೌಕರ್ಯ ಸುಧಾರಣೆ ಕ್ರಮಗಳನ್ನು ಬಿಐಎಎಲ್‌ ಕೈಗೆತ್ತಿಕೊಂಡಿದೆ. ಅದರಲ್ಲಿ ನೂತನ ಎಟಿಸಿ ನಿರ್ಮಾಣವೂ ಸೇರಿದೆ. 

ದೇಶಿಯ ವಿಮಾನ ಹಾರಾಟದಲ್ಲಿ ಮುಂಬೈ ಹಿಂದಿಕ್ಕಿದ ಬೆಂಗಳೂರು:

ದೇಶೀಯ ಮಾರ್ಗದ ವಿಮಾನಗಳ ಹಾರಾಟದಲ್ಲಿ ವಾಣಿಜ್ಯ ನಗರಿ ಮುಂಬೈ ವಿಮಾನ ನಿಲ್ದಾಣವನ್ನು ಬೆಂಗಳೂರು ವಿಮಾನ ನಿಲ್ದಾಣ ಹಿಂದಿಕ್ಕಿದೆ. ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 20,819 ವಿಮಾನಗಳನ್ನು ಬೆಂಗಳೂರು ನಿರ್ವಹಿಸಿದ್ದರೆ, ಮುಂಬೈ 20,540 ವಿಮಾನಗಳನ್ನು ನಿರ್ವಹಿಸಿದೆ. ದೇಶದ 60ಕ್ಕೂ ಹೆಚ್ಚು ನಗರಗಳಿಗೆ ಬೆಂಗಳೂರಿನಿಂದ ವಿಮಾನಗಳು ಹಾರಾಡುತ್ತವೆ. ವಿಮಾನಗಳ ಸಂಖ್ಯೆ ಹೆಚ್ಚಿದ್ದರೂ, ಪ್ರಯಾಣಿಕರ ಸಂಖ್ಯೆಯಲ್ಲಿ ಮುಂಬೈ ಮುಂದಿದೆ. ಮುಂಬೈ ಹಾಗೂ ಬೆಂಗಳೂರು ಕ್ರಮವಾಗಿ 32 ಲಕ್ಷ ಹಾಗೂ 31 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿವೆ.

PREV
Read more Articles on

Recommended Stories

ರಾಜ್ಯ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆಗೆ ಜನ ತತ್ತರ
ಸಂಚಾರ ಪೊಲೀಸರ ‘ಇ-ಆಕ್ಸಿಡೆಂಟ್ ರಿಪೋರ್ಟ್‌’ಗೆ ಸಾರ್ವಜನಿಕರಿಂದ ಭಾರೀ ಸ್ಪಂದನೆ