ನಗರದಲ್ಲಿ ಈವರೆಗೆ 22 ಲಕ್ಷ ಆಸ್ತಿಗಳು ಖಾತಾ ಹೊಂದಿದ್ದು, ಈ ಪೈಕಿ ಖಾತೆ ಹೊಂದಿರದ ಸುಮಾರು 5 ಲಕ್ಷ ಆಸ್ತಿಗಳು ಆಸ್ತಿ ತೆರಿಗೆ ಪಾವತಿಸಿ, ಆಸ್ತಿ ಗುರುತು ಸಂಖ್ಯೆ ಪಡೆದ ಬಳಿಕ ಅವರಿಗೆ ಖಾತಾ ನೀಡುವ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಬಿಬಿಎಂಪಿ
ಬೆಂಗಳೂರು : ನಗರದಲ್ಲಿ ಈವರೆಗೆ 22 ಲಕ್ಷ ಆಸ್ತಿಗಳು ಖಾತಾ ಹೊಂದಿದ್ದು, ಈ ಪೈಕಿ ಖಾತೆ ಹೊಂದಿರದ ಸುಮಾರು 5 ಲಕ್ಷ ಆಸ್ತಿಗಳು ಆಸ್ತಿ ತೆರಿಗೆ ಪಾವತಿಸಿ, ಆಸ್ತಿ ಗುರುತು ಸಂಖ್ಯೆ ಪಡೆದ ಬಳಿಕ ಅವರಿಗೆ ಖಾತಾ ನೀಡುವ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಈಗಾಗಲೇ 22 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿದ್ದು, ಎ ಅಥವಾ ಬಿ ಖಾತೆಯನ್ನು ಹೊಂದಿವೆ. ಆ ಎಲ್ಲ ಆಸ್ತಿಗಳಿಗೆ ಕರಡು ಇ-ಖಾತಾವನ್ನು ಸಿದ್ಧಪಡಿಸಲಾಗಿದೆ. ಉಳಿದ ಇನ್ನೂ 5 ಲಕ್ಷ ಆಸ್ತಿಗಳು ಯಾವುದೇ ಖಾತಾ ಹೊಂದಿಲ್ಲ. ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಅಂತಹ ಆಸ್ತಿಗಳು ಸೇಲ್‌ಡೀಡ್ ನೋಂದಣಿ ದಿನಾಂಕದಿಂದ ತೆರಿಗೆ ಪಾವತಿಸಬೇಕು. ಅಂತಹ ಆಸ್ತಿಗಳಿಗೆ ಹೊಸದಾಗಿ ಖಾತಾ ವಿತರಿಸಲು ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದರು.
ನ. 30ರೊಳಗೆ ತೆರಿಗೆ ಪಾವತಿಸಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರು ನ. 30ರೊಳಗೆ ಬಾಕಿ ತೆರಿಗೆ ಪಾವತಿಸಿದರೆ ದಂಡ ಮತ್ತು ಬಡ್ಡಿ ಮನ್ನಾ ಆಗಲಿದೆ. ಒಂದು ವೇಳೆ ಬಾಕಿ ತೆರಿಗೆ ಪಾವತಿಸದಿದ್ದರೆ ಡಿ.1ರಿಂದ ಬಾಕಿ ತೆರಿಗೆ ಜತೆಗೆ ದುಬಾರಿ ದಂಡ ಮತ್ತು ಬಡ್ಡಿ ವಸೂಲಿ ಮಾಡಲಾಗುವುದು. ವಸತಿಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕಲಾಗುವುದು. ಖಾತಾ ಹೊಂದಿಲ್ಲದ ಆಸ್ತಿಗಳ ಮಾಲೀಕರು ಈಗಲೇ ಎಚ್ಚೆತ್ತುಕೊಂಡು ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ದುಬಾರಿ ಮೊತ್ತ ಪಾವತಿಸಬೇಕಾಗಲಿದೆ ಎಂದು ಮುನೀಶ್ ಮೌದ್ಗಿಲ್ ಎಚ್ಚರಿಕೆ ನೀಡಿದರು.
ಆಸ್ತಿಗಳ ಜಿಪಿಎಸ್ ಮ್ಯಾಪಿಂಗ್: ನಗರದಲ್ಲಿನ ಪ್ರತಿ ಆಸ್ತಿಗಳ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗುತ್ತಿದೆ. ಜತೆಗೆ ಆಸ್ತಿಗಳನ್ನು ಜಿಪಿಎಸ್ ಮ್ಯಾಪಿಂಗ್ ಮಾಡಲಾಗುತ್ತಿದೆ. ಅದಕ್ಕಾಗಿ ಈ ಹಿಂದೆಯೇ ಡ್ರೋನ್ ಸರ್ವೇ ಮಾಡಿ ನಗರದಲ್ಲಿ ಆಸ್ತಿಗಳ ಚಿತ್ರವನ್ನು ತೆಗೆದುಕೊಂಡು, ನಿರ್ಮಿತಿ ಪ್ರದೇಶ ಸೇರಿ ಜಿಪಿಎಸ್ ಮ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು.