‘ದಲಿತ ಕ್ರಿಶ್ಚಿಯನ್‌’ ತಾರತಮ್ಯ ಕ್ರೈಸ್ತರಲ್ಲಿ ಇಲ್ಲ

Published : Sep 25, 2025, 08:45 AM IST
Christianity

ಸಾರಾಂಶ

ಜಾತಿಗಣತಿಗೆ 47 ಜಾತಿಗಳ ಕೈಬಿಟ್ಟ ಆಯೋಗ :  ಮತಾಂತರಕ್ಕೆ ಕುಮ್ಮಕ್ಕು ಎಂಬ ಹೇಳಿಕೆಯಲ್ಲಿ ಎಷ್ಟು ತಥ್ಯವಿದೆ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಬೆಂಗಳೂರು ಕ್ಯಾಥೋಲಿಕ್‌ ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ। ಪೀಟರ್‌ ಮಚಾದೊ.

 ಡಾ। ಪೀಟರ್‌ ಮಚಾದೊ, ಧರ್ಮಾಧ್ಯಕ್ಷರು, ಕ್ಯಾಥೋಲಿಕ್‌ ಮಹಾಧರ್ಮ ಕ್ಷೇತ್ರ, ಬೆಂಗಳೂರು. 

ಸಂಪತ್ ತರೀಕೆರೆ 

ಹಿಂದುಳಿದ ವರ್ಗಗಳ ಆಯೋಗವು ರಾಜ್ಯದಲ್ಲಿ ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ತೀವ್ರ ಚರ್ಚೆಗೆ ಗುರಿಯಾಗಿದೆ. ಜಾತಿಗಳ ಪಟ್ಟಿಯಲ್ಲಿ ಕ್ರಿಶ್ಚಿಯನ್‌ ಜತೆ ತಳಕು ಹಾಕಿ ಪ್ರಕಟಿಸಿದ್ದ 46 ಹಿಂದೂ ಜಾತಿಗಳ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮತಾಂತರಕ್ಕೆ ಆಯೋಗವೇ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪವೂ ವ್ಯಕ್ತವಾಗಿತ್ತು. ಬೆನ್ನಲ್ಲೇ ಸೂಕ್ಷ್ಮತೆ ಅರಿತ ಆಯೋಗವು ಎರಡು ಹಂತದಲ್ಲಿ 47 ಜಾತಿಗಳ ಪಟ್ಟಿಯನ್ನೇ ನಮೂನೆಯಿಂದ ಕೈಬಿಟ್ಟಿದೆ. ಆಯೋಗದ ಈ ನಡೆ ಬಗ್ಗೆ ಕ್ರೈಸ್ತ ಧರ್ಮದ ಅನುಯಾಯಿಗಳ ಅಭಿಪ್ರಾಯವೇನು? ಮೂಲ ಜಾತಿಗಳನ್ನು ಉಳಿಸಿಕೊಳ್ಳುವುದಕ್ಕೆ ಈ ಧರ್ಮದ ಮುಖ್ಯಸ್ಥರ ಸಹಮತವಿದೆಯೇ? ಅಥವಾ ಆಯೋಗದ ನಡೆಗೆ ಬೆಂಬಲವಿದೆಯೇ? ಮತಾಂತರಕ್ಕೆ ಕುಮ್ಮಕ್ಕು ಎಂಬ ಹೇಳಿಕೆಯಲ್ಲಿ ಎಷ್ಟು ತಥ್ಯವಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಬೆಂಗಳೂರು ಕ್ಯಾಥೋಲಿಕ್‌ ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ। ಪೀಟರ್‌ ಮಚಾದೊ.

*ಕ್ರೈಸ್ತ ಧರ್ಮೀಯರ ಮೂಲ ಬಿಂಬಿಸುವ ಹಿಂದೂಜಾತಿಗಳನ್ನು ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿ, ವಿರೋಧ ಬಂದ ಮೇಲೆ ಹಿಂಪಡೆದಿದೆ. ಇದು ಸರಿಯೇ? ಕ್ರಿಶ್ಚಿಯನ್‌ ಹಿಂದೂ ಜಾತಿಗಳ ಪಟ್ಟಿಯ ಕುರಿತು ರಾಜಕೀಯ ವಿವಾದ ಬೇಸರದ ಸಂಗತಿ. ಜನರು ಸ್ವಯಂಪ್ರೇರಿತವಾಗಿ ನೀಡಿದ ಮಾಹಿತಿಯನ್ನು ಗೌರವಿಸಬೇಕು. ಜನರ ನಂಬಿಕೆ, ಜೀವನಾನುಭವಗಳನ್ನು ರಾಜಕೀಯದ ಆಧಾರದ ಮೇಲೆ ತಿರಸ್ಕರಿಸುವುದು ಅನ್ಯಾಯ.

*ಕ್ರಿಶ್ಚಿಯನ್‌ಗೆ ಮತಾಂತರ ಆದ ನಂತರವೂ ಹಿಂದೂ ಜಾತಿಗಳ ಮೀಸಲಾತಿ ಪಡೆಯುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮ್ಮ ನಿಲುವು: ಸಾಮಾಜಿಕ ನ್ಯಾಯ ಯಾರಿಗೂ ಕಳೆದುಹೋಗಬಾರದು. ಹಕ್ಕುಗಳನ್ನು ಕಾಪಾಡುವುದು ಮುಖ್ಯ. ಮೀಸಲಾತಿ ಸೌಲಭ್ಯವು ಜನರ ಹಿತಕ್ಕಾಗಿ ಮುಂದುವರಿಯಬೇಕು. ಹಿಂದುಳಿದ ಅಥವಾ ನಿಮ್ನ ವರ್ಗದವರು ಯಾವುದೇ ಧರ್ಮ ಸ್ವೀಕರಿಸಿದರೂ ಅವರ ಸಾಮಾಜಿಕ ಸ್ಥಿತಿ ಗತಿಗೆ ಅನುಗುಣವಾಗಿ ಅವರಿಗೆ ಸರ್ಕಾರ ಕೊಡ ಮಾಡುವ ಮೀಸಲಾತಿ ಸೌಲಭ್ಯ ದೊರಕಬೇಕು. ಇದರಲ್ಲಿ ತಾರತಮ್ಯವಿರಬಾರದು.

*ಅಸಲಿಗೆ, ನಿಮ್ಮ ಧರ್ಮದಲ್ಲಿ ಜಾತಿ ವ್ಯವಸ್ಥೆ ಇದೆಯೇ? ಕ್ರೈಸ್ತ ಧರ್ಮದಲ್ಲಿ ಜಾತಿ ಎಂಬ ಧಾರ್ಮಿಕ ತತ್ತ್ವವಿಲ್ಲ. “ಎಲ್ಲರೂ ದೇವರ ಮಕ್ಕಳು” ಎನ್ನುವುದು ನಮ್ಮ ನಂಬಿಕೆ. ಮಾನವ ಸಮಾನತೆ ಕ್ರೈಸ್ತ ಧರ್ಮದ ಮೂಲಭೂತ ಸಿದ್ಧಾಂತ.

*ಹಾಗಿದ್ದರೆ ಲಿಂಗಾಯತ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌ ಎಂಬಿತ್ಯಾದಿ ಮೂಲವನ್ನು ಉಳಿಸಿಕೊಳ್ಳುವುದು ಎಷ್ಟು ಸರಿ? ಧರ್ಮಾಂತರವಾದವರ ಹಿನ್ನೆಲೆಯ ಗುರುತು ಉಳಿಯುತ್ತದೆ. ಆದರೆ ಕ್ರಿಶ್ಚಿಯನ್‌ ಧರ್ಮದಲ್ಲಿ ಎಲ್ಲರೂ ಸಮಾನರು. ಸಮಾಜದಲ್ಲಿ ಆ ಗುರುತು ಕಂಡರೂ, ದೇವರ ಮುಂದೆ ಎಲ್ಲರೂ ಒಂದೇ.

* ಕ್ರಿಶ್ಚಿಯನ್‌ ಹಿಂದೂ ಜಾತಿಗಳ ಪಟ್ಟಿ ಮೂಲಕ ಸರ್ಕಾರವೂ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪವಿದೆಯಲ್ಲ? ಮತಾಂತರಕ್ಕೆ ಸರ್ಕಾರ ಅಥವಾ ಪಟ್ಟಿ ಉತ್ತೇಜನ ನೀಡುತ್ತದೆ ಎಂಬ ಆರೋಪ ಅಸತ್ಯ. ಮತಾಂತರವು ವ್ಯಕ್ತಿಯ ಸ್ವತಂತ್ರವಾದ ‍‍ವೈಯಕ್ತಿಕ ನಿರ್ಧಾರ. ಇದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಯಾವ ಅಧಿಕಾರವೂ ಅದನ್ನು ಕಿತ್ತುಕೊಳ್ಳಬಾರದು.

* ಮತಾಂತರ ಹೆಚ್ಚಾದರೆ ಅಥವಾ ಮತಾಂತರ ಆಗಿರುವ ಹಿಂದೂಗಳೆಲ್ಲರೂ ಕ್ರಿಶ್ಚಿಯನ್‌ ಎಂದು ನಮೂದಿಸಿದರೆ ಮುಂದೊಂದು ದಿನ ಕ್ರೈಸ್ತರಿಗಿರುವ ಅಲ್ಪಸಂಖ್ಯಾತ ಮಾನ್ಯತೆಗೆ ಧಕ್ಕೆ ಆಗಲ್ಲವೇ? ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಯಾವುದೇ ಧಕ್ಕೆಯಿಲ್ಲ. ಕ್ರಿಶ್ಚಿಯನ್ನರು ಶಾಂತಿಯುತವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಾರೆ. ನಮ್ಮ ತ್ಯಾಗ, ಕೊಡುಗೆಗಳು ಯಾವಾಗಲೂ ದೇಶದ ಹಿತಕ್ಕೆ ಸಮರ್ಪಿತ.

* ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆಗುವ ಎಲ್ಲ ಜಾತಿಗಳನ್ನೂ ಸಮಾನವಾಗಿ ಸ್ವೀಕರಿಸಲಾಗುತ್ತಿದೆಯೇ ಅಥವಾ ಅಲ್ಲಿಯೂ ಜಾತಿಯತೆ ಇದೆಯೇ? ಹೌದು, ಕ್ರಿಶ್ಚಿಯನ್‌ ಧರ್ಮಕ್ಕೆ ಬಂದ ಎಲ್ಲ ಜಾತಿಗಳನ್ನು ಸಮಾನವಾಗಿ ಸ್ವೀಕರಿಸಲಾಗುತ್ತದೆ. ಯಾವುದೇ ಭೇದವಿಲ್ಲ. ದೇವರ ಮನೆಯ ಬಾಗಿಲು ಎಲ್ಲರಿಗೂ ತೆರೆದಿದೆ.

* ಪ್ರೊಟೆಸ್ಟೆಂಟ್‌, ಕ್ಯಾಥೋಲಿಕ್‌ ಆಗಲಿ, ಮತಾಂತರಿಗಳನ್ನು ಮುಕ್ತವಾಗಿ ಸ್ವೀಕರಿಸೋದಿಲ್ಲ. ಕಾನೂನು ಮಾನ್ಯತೆ ಕೇಳುತ್ತೆ? ಈ ವೈರುಧ್ಯ ಯಾಕೆ? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಕುರಿತು ಕಾನೂನು ನಿರ್ಧಾರಗಳು ಪ್ರತ್ಯೇಕ. ನಾವು ನ್ಯಾಯದ ಪರವಾಗಿ ನಿಲ್ಲುತ್ತೇವೆ. ಶೋಷಿತರಿಗೆ ನ್ಯಾಯ ದೊರೆಯುವಂತೆ ಕಾನೂನು ಬಲಪಡಿಸಬೇಕು.

* ಕಾನೂನು ಪ್ರಕಾರ ಮತಾಂತರ ಆದರೆ ಮೀಸಲಾತಿ ಸೇರಿದಂತೆ ಮೂಲ ಜಾತಿಯ ಸೌಲಭ್ಯ ಕಳೆದುಕೊಳ್ಳುತ್ತಾರಲ್ಲ? ಮತಾಂತರದ ನಂತರ ಮೀಸಲಾತಿ ಹಕ್ಕು ಕಳೆದುಕೊಳ್ಳುವ ಸಮಸ್ಯೆ ಕಾನೂನು ಸಂಬಂಧಿತದ್ದು. ಇದರ ಪರಿಹಾರ ಸರ್ಕಾರ ಮತ್ತು ನ್ಯಾಯಾಂಗದಿಂದ ಬರಬೇಕಾಗಿದೆ. ಸಾಮಾಜಿಕ ನ್ಯಾಯ ಯಾರಿಗೂ ಕಳೆದುಹೋಗಬಾರದು ಎಂಬುದು ನಮ್ಮ ಅಭಿಪ್ರಾಯ.

* ಜಾತಿಗಣತಿಯಲ್ಲಿ ಭಾಗವಹಿಸುತ್ತಿರುವ ಕ್ರಿಶ್ಚಿಯನ್‌ ಸಮುದಾಯಕ್ಕೆ ನೀವು ನೀಡುವ ಕರೆಯೇನು? ಕ್ರಿಶ್ಚಿಯನ್‌ ಸಮುದಾಯಗಳು ತಮ್ಮನ್ನು ನಿಷ್ಠೆಯಿಂದ, ಧೈರ್ಯದಿಂದ ಗುರುತಿಸಿಕೊಳ್ಳಬೇಕು. ಸತ್ಯವೇ ನಮ್ಮ ಶಕ್ತಿ. ಜಾತಿಗಣತಿಯಲ್ಲಿ ತಪ್ಪಿಲ್ಲದೆ, ನಿಜವಾಗಿ ಬರೆಸುವುದು ನಮ್ಮ ಕರ್ತವ್ಯ.

* ಕ್ರೈಸ್ತ ಧರ್ಮಕ್ಕೆ ಆಗುತ್ತಿರುವ ಮತಾಂತರ ತಡೆಯಲು ಏನಾದರೂ ಕ್ರಮಗಳು ಇವೆಯೇ? ಮತಾಂತರ ತಡೆಯುವ ಪ್ರಶ್ನೆಯೇ ಬರುವುದಿಲ್ಲ. ಅದು ವ್ಯಕ್ತಿಯ ಸ್ವಾತಂತ್ರ್ಯ. ನಾವು ಮಾಡುವ ಕೆಲಸ- ಪ್ರೀತಿಯಿಂದ ಸೇವೆ ನೀಡುವುದು. ಸೇವೆಯ ಮೂಲಕವೇ ಕ್ರಿಸ್ತನ ಪ್ರೀತಿಯನ್ನು ತೋರಿಸುತ್ತೇವೆ.

* ಮೊದಲು ಕ್ರೈಸ್ತರು ಎಂದರೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅಪ್ರತಿಮ ಸೇವೆ ನೀಡುವವರು ಎಂಬುದಿತ್ತು. ಈಗ ಕೇವಲ ಮತಾಂತರ ಮಾಡುವವರು ಎಂಬ ಆರೋಪ ಉಳಿದುಕೊಂಡಿದೆಯಲ್ಲಾ? ಕ್ರೈಸ್ತರು ಎಂದರೆ ಇಂದಿಗೂ ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಯಲ್ಲಿ ಅಪ್ರತಿಮರು. ಮತಾಂತರದ ಆರೋಪಗಳು ಕೇವಲ ರಾಜಕೀಯ. ನಮ್ಮ ಕೆಲಸ ಜನರ ಹಿತಕ್ಕಾಗಿ, ಮತಾಂತರಕ್ಕಾಗಿ ಅಲ್ಲ.

* ಕ್ರಿಶ್ಚಿಯನ್‌ ಧರ್ಮದಲ್ಲೂ ದಲಿತ ಕ್ರೈಸ್ತರೆಂಬ ಜಾತಿ ಇದೆಯೇ? “ದಲಿತ ಕ್ರಿಶ್ಚಿಯನ್” ಎನ್ನುವುದು ಕಾನೂನು, ಸಾಮಾಜಿಕ ಸಂದರ್ಭಗಳಲ್ಲಿ ಬಳಸುವ ಪದ. ಧಾರ್ಮಿಕವಾಗಿ ಕ್ರಿಶ್ಚಿಯನ್‌ ಧರ್ಮದಲ್ಲಿ ಎಲ್ಲರೂ ಸಮಾನರು. ದೇವರ ದೃಷ್ಟಿಯಲ್ಲಿ ಯಾವ ತಾರತಮ್ಯವೂ ಇಲ್ಲ.

* ಕ್ರಿಶ್ಚಿಯನ್‌ನಲ್ಲೂ ಪಂಥಗಳ ಆಧಾರದ ಮೇಲೆ ತಾರತಮ್ಯ ಇದೆಯೇ? ಪಂಥಗಳ ವೈವಿಧ್ಯವಿದೆ. ಆದರೆ ಮೂಲ ನಂಬಿಕೆ ಒಂದೇ- ಕ್ರಿಸ್ತನಲ್ಲಿಯ ಏಕತೆ. ನಮ್ಮ ವೈವಿಧ್ಯವೇ ನಮ್ಮ ಬಲ, ಅದನ್ನು ವಿಭಜನೆಯಂತೆ ನೋಡಬಾರದು.

* ಮತಾಂತರ ಆಗಿರುವವರನ್ನು ಕ್ಯಾಥೋಲಿಕ್‌, ಪ್ರಾಟೆಸ್ಟೆಂಟ್‌ ಇಬ್ಬರೂ ಸ್ವೀಕರಿಸುವುದಿಲ್ಲ. ಹಿಂದೂ ಧರ್ಮದಲ್ಲಿನ ಅಸಮಾನತೆಯಿಂದ ನಿಮ್ಮ ಬಳಿಗೆ ಬರುವ ಶೋಷಿತರಿಗೆ ನೀವು ಶೋಷಣೆ ಮಾಡಿದಂತೇ ಆಯಿತಲ್ಲವೇ? ಮತಾಂತರವಾದವರನ್ನು ಕ್ರಿಶ್ಚಿಯನ್‌ ಧರ್ಮದಲ್ಲಿ ಮುಕ್ತವಾಗಿ ಸ್ವೀಕರಿಸಲಾಗುತ್ತದೆ. ಯಾರಿಗೂ ಶೋಷಣೆ ಮಾಡುವುದಿಲ್ಲ. ನಮ್ಮ ಬಾಗಿಲು ಯಾವಾಗಲೂ ತೆರೆದಿದೆ, ಏಕೆಂದರೆ ಕ್ರಿಸ್ತನ ಪ್ರೀತಿ ಎಲ್ಲರಿಗೂ ಸೇರಿದೆ.

* ಮತಾಂತರದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮತಾಂತರದ ಮುಖ್ಯ ಕಾರಣ ಮಾನವೀಯ ಗೌರವ, ಸಮಾನತೆ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಹುಡುಕುವುದು. ಶೋಷಣೆ, ಅಸಮಾನತೆ, ಅನ್ಯಾಯದಿಂದ ಮುಕ್ತರಾಗಲು ಜನರು ಕ್ರಿಸ್ತನಲ್ಲಿರುವ ಸ್ವಾತಂತ್ರ್ಯವನ್ನು ಆರಿಸುತ್ತಾರೆ.

PREV
Read more Articles on

Recommended Stories

ಎಸ್ ಎಲ್ ಭೈರಪ್ಪ ನಮ್ಮನೆಯಲ್ಲಿ ಒಂದು ವಾರ ಇದ್ದರು - ಬಾನು ಮುಷ್ತಾಕ್
ಮೈಸೂರಿನಲ್ಲಿ ಎಸ್‌.ಎಲ್. ಭೈರಪ್ಪ : ಮಿತಭಾಷಿ, ಶಿಸ್ತಿನ ಸಿಪಾಯಿ