ಕನ್ನಡಪ್ರಭ ವಾರ್ತೆ
ಈ ಹಿಂದೆ ಕೇವಲ ಅನಿವಾರ್ಯ ಪರಿಸ್ಥಿತಿ ಅಥವಾ ತುರ್ತು ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ಮಾತ್ರ ಪಡೆಯಲಾಗುತ್ತಿದ್ದ ವೈಯಕ್ತಿಕ ಸಾಲಗಳು (ಪರ್ಸನಲ್ ಲೋನ್), ಇಂದು ದೇಶದ ಯುವಜನತೆಯಲ್ಲಿ ಜೀವನಶೈಲಿಯ ಕನಸುಗಳನ್ನು ನನಸಾಗಿಸಿಕೊಳ್ಳುವ ಪಕ್ಕಾ ಯೋಜಿತ ಆರ್ಥಿಕ ಅಸ್ತ್ರವಾಗಿ ಮಾರ್ಪಟ್ಟಿವೆ. ಮುಖ್ಯವಾಗಿ ನವ ಪೀಳಿಗೆಯ ''ಜೆನ್-ಜೀ'' ಹಾಗೂ ಹೊಸದಾಗಿ ದುಡಿಯಲು ಆರಂಭಿಸಿರುವ ಉದ್ಯೋಗಿಗಳು ಪ್ರವಾಸ, ವಿವಾಹ ಸಂಭ್ರಮ ಹಾಗೂ ಜೀವನಶೈಲಿಯ ಅಗತ್ಯ ವಸ್ತುಗಳ ಖರೀದಿಯಂತಹ ಐಚ್ಛಿಕ ಅನುಭವಗಳಿಗಾಗಿ ಸಾಲ ಪಡೆಯಲು ಹೆಚ್ಚು ಮುಕ್ತ ಮನಸ್ಸು ಮಾಡುತ್ತಿದ್ದಾರೆ. ಹಳೆಯ ತಲೆಮಾರು ಸಾಲವನ್ನು ಆತಂಕ ಹಾಗೂ ಅಪಾಯಕಾರಿ ದೃಷ್ಟಿಯಿಂದಲೇ ನೋಡುತ್ತಿದ್ದರೆ, ಇಂದಿನ ಯುವ ಪೀಳಿಗೆ ತಮ್ಮ ಭವಿಷ್ಯದ ಗಳಿಕೆಯನ್ನು ಸರಿದೂಗಿಸಿ, ಸದ್ಯದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಸಬಲೀಕರಣದ ಸಾಧನವಾಗಿ ಸಾಲವನ್ನು ಸ್ವೀಕರಿಸುತ್ತಿದ್ದಾರೆ.
ಸಾಲ ಪಡೆಯುವ ಒಲವು ಹೆಚ್ಚುತ್ತಿದ್ದರೂ, ಅದು ಮರುಪಾವತಿ ಶಿಸ್ತನ್ನು ಕಡೆಗಣಿಸಿಲ್ಲದಿರುವುದು ವಿಶೇಷ. ಯುವ ಸಾಲಗಾರರಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚಿದ್ದು, ಉತ್ತಮ ಕ್ರೆಡಿಟ್ ಸ್ಕೋರ್ (ಸಿಬಿಲ್) ಕಾಯ್ದುಕೊಳ್ಳುವ ಜಾಗೃತಿ ಹಾಗೂ ಸಮಯಕ್ಕೆ ಸರಿಯಾಗಿ ಕಂತು ಪಾವತಿಸುವ ಬದ್ಧತೆ ಹೆಚ್ಚಿದೆ. ತಮ್ಮ ಮಾಸಿಕ ಆದಾಯದ ಮಿತಿಯೊಳಗಷ್ಟೇ ಸಾಲ ಪಡೆದು, ಮಿತಿಮೀರಿದ ಸಾಲದ ಸುಳಿಗೆ ಸಿಲುಕದಂತೆ ಇಂದಿನ ಗ್ರಾಹಕರು ಎಚ್ಚರಿಕೆ ವಹಿಸುತ್ತಿದ್ದಾರೆ.ಇನ್ನೊಂದೆಡೆ, ಆರ್ಥಿಕವಾಗಿ ಸದೃಢರಾಗಿರುವ ಶ್ರೀಮಂತ ವರ್ಗವು ನಗದು ನಿರ್ವಹಣೆಗೆ ಪರ್ಸನಲ್ ಕ್ರೆಡಿಟ್ ಲೈನ್‌ಗಳ ಮೊರೆ ಹೋಗುತ್ತಿದೆ. ತಕ್ಷಣದ ಹಣಕಾಸು ಅಗತ್ಯಗಳಿಗಾಗಿ ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಂತಹ ದೀರ್ಘಾವಧಿಯ ಹೂಡಿಕೆಗಳನ್ನು ತರಾತುರಿಯಲ್ಲಿ ಮಾರಾಟ ಮಾಡಿ ನಷ್ಟ ಅನುಭವಿಸುವ ಬದಲು, ಇಂತಹ ಅಲ್ಪಾವಧಿ ಸಾಲ ಸೌಲಭ್ಯಗಳನ್ನು ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದ್ದಾರೆ.