ರಾಜ್ಯದಲ್ಲಿ 206 ಆಹಾರ ಮಳಿಗೆಗಳಿಗೆ ನೋಟಿಸ್‌ : 930 ಹಾಸ್ಟೆಲ್‌ಗಳಲ್ಲಿ ಆಹಾರ ಇಲಾಖೆಯಿಂದ ತಪಾಸಣೆ

KannadaprabhaNewsNetwork |  
Published : Aug 18, 2026, 02:00 AM ISTUpdated : Aug 18, 2026, 03:57 AM IST
Food

ಸಾರಾಂಶ

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಹಾಸ್ಟೆಲ್‌ ಅಡುಗೆ ಮನೆ, ಅಂಗನವಾಡಿ ಹಾಗೂ ಬಸ್‌ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳ ಪರಿಶೀಲನೆ ಆರಂಭಿಸಿದ್ದು, ಬಸ್‌ ನಿಲ್ದಾಣಗಳಲ್ಲಿನ ನೈರ್ಮಲ್ಯ ಕಾಪಾಡದ 206 ಆಹಾರ ಮಳಿಗೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಬೆಂಗಳೂರು : ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಹಾಸ್ಟೆಲ್‌ ಅಡುಗೆ ಮನೆ, ಅಂಗನವಾಡಿ ಹಾಗೂ ಬಸ್‌ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳ ಪರಿಶೀಲನೆ ಆರಂಭಿಸಿದ್ದು, ಬಸ್‌ ನಿಲ್ದಾಣಗಳಲ್ಲಿನ ನೈರ್ಮಲ್ಯ ಕಾಪಾಡದ 206 ಆಹಾರ ಮಳಿಗೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಹಿಂದುಳಿದ ವರ್ಗಗಳ 629 ಹಾಸ್ಟೆಲ್‌ಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ 331 ಹಾಸ್ಟೆಲ್‌ಗಳಲ್ಲಿ ತಪಾಸಣೆ ನಡೆಸಿ ಕ್ರಮವಾಗಿ 1,860 ಹಾಗೂ 556 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಜತೆಗೆ 603 ಅಂಗನವಾಡಿ ಕೇಂದ್ರಗಳ ಪರಿಶೀಲನೆ ನಡೆಸಿ 549 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದೇ ವೇಳೆ ರಾಜ್ಯಾದ್ಯಂತ 186 ಬಸ್ ನಿಲ್ದಾಣಗಳಲ್ಲಿನ 889 ಆಹಾರ ಮಳಿಗೆಗಳ ಪರಿಶೀಲನೆ ನಡೆಸಲಾಗಿದ್ದು, ನೈರ್ಮಲ್ಯ ಕಾಪಾಡಿಕೊಳ್ಳದ 206 ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಜತೆಗೆ ಸ್ಥಳದಲ್ಲೇ 55 ಸಾವಿರ ರು. ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

99 ಡಾಬಾಗಳ ಮೇಲೆ ದಾಳಿ:

ರಾಜ್ಯಾದ್ಯಂತ ವಿವಿಧ ಹೆದ್ದಾರಿಗಳ ರಸ್ತೆ ಬದಿಯ 99 ಡಾಬಾಗಳ ಮೇಲೆ ಇಲಾಖೆಯ 5 ತನಿಖಾ ತಂಡಗಳ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ನ್ಯೂನತೆಗಳು ಕಂಡುಬಂದಿರುವ ಡಾಬಾಗಳಿಂದ 3,67,500 ರು. ದಂಡ ವಿಧಿಸಲಾಗಿದೆ.

44 ಗೋದಾಮುಗಳ ವಿರುದ್ಧ ಮೊಕದ್ದಮೆ:

ರಾಜ್ಯಾದ್ಯಂತ ಆಹಾರ ಉದ್ದಿಮೆಗಳ 236 ಗೋದಾಮುಗಳನ್ನು ತಪಾಸಣೆ ನಡೆಸಲಾಗಿದ್ದು, ನೈರ್ಮಲ್ಯ ಕಾಪಾಡದ 8 ಗೋದಾಮುಗಳಿಗೆ 1.97 ಲಕ್ಷ ರು. ದಂಡ ವಿಧಿಸಲಾಗಿದ. ಇನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿದ 44 ಗೋದಾಮುಗಳ ವಿರುದ್ಧ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಲಿನಲ್ಲಿ ಕಳಪೆ ಗುಣಮಟ್ಟ ಪತ್ತೆ: 

ನೆರೆರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ 25 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವುಗಳಲ್ಲಿ ಒಂದು ಮಾದರಿ ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿದೆ.

ಶವರ್ಮಾ ಮತ್ತು ಕಬಾಬ್ ಅಸುರಕ್ಷಿತ:

ಶವರ್ಮಾ ಮತ್ತು ಕಬಾಬ್‌ಗಳ ತಯಾರಿಕೆಯಲ್ಲಿ ಅನೈರ್ಮಲ್ಯ ಹಾಗೂ ಕೃತಕ ಬಣ್ಣಗಳ ಬಳಕೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಶವರ್ಮಾದ 41 ಹಾಗೂ ಕಬಾಬ್‌ನ 21 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯಲ್ಲಿ 9 ಶವರ್ಮಾ ಮಾದರಿ ಹಾಗೂ ಒಂದು ಕಬಾಬ್ ಮಾದರಿ ಅಸುರಕ್ಷಿತ ಎಂದು ತಿಳಿದುಬಂದಿದೆ.

ಗುಣಮಟ್ಟ ಪರಿಶೀಲನೆಗೆ ವಾಚ್‌ ಟೀಂ:

ಆಹಾರ ಸುರಕ್ಷತಾ ಇಲಾಖೆಯಿಂದಲೇ ರಾಜ್ಯಾದ್ಯಂತ ಪ್ರತಿದಿನ ಹೋಟೆಲ್‌ಗಳು ಹಾಗೂ ಆಹಾರ ಉದ್ದಿಮೆಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗಿಲ್ಲ. ಹಾಗಾಗಿ ನಗರ ಪ್ರದೇಶಗಳಲ್ಲಿ ಹಿರಿಯ ನಾಗರಿಕರನ್ನು ಒಳಗೊಂಡ ಪರಿಶೀಲನಾ ತಂಡಗಳನ್ನು (ವಾಚ್‌ಟೀಂ) ರಚಿಸಿ ಅವರ ಮೂಲಕ ದೂರು ಸ್ವೀಕರಿಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

PREV
Read more Articles on

Recommended Stories

ಅಶೋಕ್ ಸಿಂಘಾಲ್ ನಿಸ್ವಾರ್ಥ ಭಾವದ ಕರ್ಮಯೋಗಿ
ಮೃಗಾಲಯಗಳು ಮನರಂಜನೆಗೂ ಸೈ, ಕಲಿಕೆಗೂ ಸೈ