ಸಣ್ಣ ತೊಟ್ಟಿ ಅಥವಾ ಕೊಳದಲ್ಲೂ ‘ಮುತ್ತು ಕೃಷಿ’ ಮಾಡಿ : ಮಾಹಿತಿಗೆ ಮುಗಿ ಬಿದ್ದ ಜನ

KannadaprabhaNewsNetwork |  
Published : Nov 15, 2024, 01:30 AM ISTUpdated : Nov 15, 2024, 07:51 AM IST
Pearl | Kannada Prabha

ಸಾರಾಂಶ

 ಸಿಹಿ ನೀರಿನಲ್ಲಿ ಕಪ್ಪೆಚಿಪ್ಪು ಬಿಟ್ಟು ತಯಾರಿಸುವ ‘ಮುತ್ತು ಕೃಷಿ’ ಬಗ್ಗೆ ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಜನರು ಮುಗಿಬಿದ್ದು ಮಾಹಿತಿ ಪಡೆಯುತ್ತಿದ್ದುದು ‘ಮುತ್ತಿನ ಗಮ್ಮತ್ತಿ’ಗೆ ಸಾಕ್ಷಿಯಾಗಿತ್ತು.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ‘ಮುತ್ತು’ ಸಮುದ್ರದಲ್ಲಿ ಮಾತ್ರ ಸಿಗುವುದಿಲ್ಲ, ಬಯಸಿದರೆ ಸಣ್ಣ ತೊಟ್ಟಿ ಅಥವಾ ಕೊಳದಲ್ಲೂ ‘ಮುತ್ತು ಕೃಷಿ’ ಮಾಡಿ ಪಡೆಯಬಹುದು. ಸಿಹಿ ನೀರಿನಲ್ಲಿ ಕಪ್ಪೆಚಿಪ್ಪು ಬಿಟ್ಟು ತಯಾರಿಸುವ ‘ಮುತ್ತು ಕೃಷಿ’ ಬಗ್ಗೆ ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಜನರು ಮುಗಿಬಿದ್ದು ಮಾಹಿತಿ ಪಡೆಯುತ್ತಿದ್ದುದು ‘ಮುತ್ತಿನ ಗಮ್ಮತ್ತಿ’ಗೆ ಸಾಕ್ಷಿಯಾಗಿತ್ತು.

ಮುತ್ತಿನ ಕೃಷಿ ಲಾಭದಾಯಕವೂ ಆಗಿರುವುದರಿಂದ 500ಕ್ಕೂ ಅಧಿಕ ಜನರು ಈಗಾಗಲೇ ಬೆಂಗಳೂರು ಕೃಷಿ ವಿವಿಯಿಂದ ತರಬೇತಿ ಪಡೆದಿದ್ದಾರೆ. ಸುಮಾರು 200 ಜನರು ಮುತ್ತು ‘ಉತ್ಪಾದನೆ’ಯಲ್ಲಿ ತೊಡಗಿಸಿಕೊಂಡಿದ್ದಾರೆ. 3000 ಲೀ. ಸಾಮರ್ಥ್ಯದ ನೀರಿನ ತೊಟ್ಟಿಯಲ್ಲಿ 50000 ರು. ವೆಚ್ಚ ಮಾಡಿ ಒಂದೂವರೆಯಿಂದ ಎರಡು ವರ್ಷ ಕಪ್ಪೆ ಚಿಪ್ಪಿನ ‘ಸಾಕಣೆ’ ಮಾಡಿದರೆ 50 ಸಾವಿರ ರು. ನಿವ್ವಳ ಲಾಭವನ್ನೂ ಗಳಿಸಬಹುದು.

ಈ ಬಗ್ಗೆ ಮಾಹಿತಿ ನೀಡಿದ ವಿವಿಯ ಒಳನಾಡು ಮೀನುಗಾರಿಕೆ ಘಟಕದ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟಪ್ಪ, ಭಾರತದಲ್ಲಿ ಸುಮಾರು 52 ಪ್ರಬೇಧದ ಕಪ್ಪೆಚಿಪ್ಪು ಜೀವಿಗಳಿದ್ದು, ಲ್ಯಾಮೆಲಿಡನ್ಸ್‌ ಮಾರ್ಜಿನಾಲಿಸ್‌, ಲ್ಯಾಮೆಲಿಡನ್ಸ್‌ ಕೊರಿಯಾನಸ್‌ ಮತ್ತು ಪರ್ರೇಸಿಯಾ ಕೊರುಗಾಟ ಮಾತ್ರವೇ ಸಿಹಿ ನೀರು ಮುತ್ತು ಕೃಷಿಗೆ ಯೋಗ್ಯವಾಗಿವೆ’ ಎಂದು ವಿವರಿಸಿದರು.

ಕತ್ತೆ ಸಾಕಾಣಿಕೆಗೆ ಕೋಟಿ ರು. ಹೂಡಿಕೆ!: ಮಧುಗಿರಿಯ ‘ಕ್ಷೀರ ಸಾಗರ್‌ ಡಾಂಕಿ ಫಾರಂ’ ಮಳಿಗೆ ಕೃಷಿ ಮೇಳದಲ್ಲಿ ಜನರ ಗಮನ ಸೆಳೆಯಿತು. ‘ಕತ್ತೆ: ಭವಿಷ್ಯದ ಚಿನ್ನದ ಗಣಿ’ ಎಂಬ ಟ್ಯಾಗ್‌ಲೈನ್‌ ಇದ್ದದ್ದು ಸಹ ವಿಶೇಷವಾಗಿತ್ತು. ಕತ್ತೆಯ ಹಾಲು, ಸೋಪು, ಕ್ರೀಂ, ಗಂಜಲ, ಗೊಬ್ಬರವನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. 250 ಎಂ.ಎಲ್‌. ಕತ್ತೆಯ ಹಾಲಿಗೆ 625 ರು. ಇದ್ದು ಕೃಷಿ ಮೇಳದ ಹಿನ್ನೆಲೆಯಲ್ಲಿ 125 ರು. ರಿಯಾಯಿತಿ ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಫಾರಂನ ಡಾ.ರಂಗೇಗೌಡ, ‘2ವರ್ಷದ ಹಿಂದೆ ಮೂವರು ಪಾಲುದಾರರು ಸೇರಿಕೊಂಡು ಒಂದು ಕೋಟಿ ರು. ಹೂಡಿಕೆ ಮಾಡಿ  ಫಾರಂ ಪ್ರಾರಂಭಿಸಿದೆವು. 80 ಕತ್ತೆಗಳನ್ನು ಖರೀದಿಸಿದ್ದು 6 ತಿಂಗಳಿನಿಂದೀಚೆಗೆ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದ್ದೇವೆ. ಕೃಷಿ ಮೇಳದಲ್ಲಿ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.

ಶಾಂತಮ್ಮಗೆ ರಾಜ್ಯ ಮಟ್ಟದ ಪ್ರಶಸ್ತಿ: ಜೀವನದಲ್ಲಿ ಉಂಟಾದ ಅಡೆತಡೆಗೆ ಕುಗ್ಗದೆ ಕೃಷಿಯಲ್ಲಿ ತೊಡಗಿರುವ ರಾಮನಗರ ಜಿಲ್ಲೆಯ ಕಗ್ಗಲಹಳ್ಳಿಯ ಶಾಂತಮ್ಮ ಅವರಿಗೆ ಕೃಷಿ ಮೇಳದಲ್ಲಿ ‘ಕ್ಯಾನ್‌ ಬ್ಯಾಂಕ್‌ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 6 ಎಕರೆ ಜಮೀನನ್ನು ಹೊಂದಿರುವ ಇವರು ರಾಗಿ, ತೊಗರಿ, ಅವರೆ, ಅಲಸಂದೆ, ಜೋಳ, ಹೆಸರುಕಾಳು, ತೆಂಗು, ಅಡಿಕೆ, ಮಾವು, ಬಾಳೆ, ಪಪ್ಪಾಯ ಬೆಳೆಗಳನ್ನು ಬೆಳೆಯುತ್ತಿದ್ದು ರೇಷ್ಮೆ ಹುಳು ಸಾಕಾಣಿಕೆಯಲ್ಲೂ ಉತ್ತಮ ಇಳುವರಿ ಪಡೆದಿದ್ದಾರೆ. ಹಸು, ಮೇಕೆ, ಕುರಿ ಸಾಕಣೆಯನ್ನೂ ಮಾಡುತ್ತಿದ್ದು ಇದಕ್ಕೆ ಬೇಕಾದ ಹುಲ್ಲನ್ನು ತಮ್ಮ ಜಮೀನಿನಲ್ಲೇ ಬೆಳೆಯುತ್ತಿದ್ದಾರೆ.

ಬೆಲೆಯಲ್ಲಿ ಈ ಕೋಳಿಯೇ ‘ರಾಜ’: ಎಂತಹ ದಷ್ಟಪುಷ್ಟವಾದ ಕೋಳಿ ಎಂದರೂ ಅದರ ಬೆಲೆ ಸಾವಿರ ದಾಟುವುದಿಲ್ಲ ಎನ್ನುವ ನಡುವೆ ರಾಜಾ-2 ತಳಿಯ ಕೋಳಿಯ ಬೆಲೆ 3500 ರುಪಾಯಿ ಇದೆ. ವಿವಿಧ ವಾತಾವರಣಕ್ಕೆ ಇದು ಸುಲಭವಾಗಿ ಹೊಂದಿಕೊಳ್ಳಲಿದೆ. ಇನ್ನು ಗಿರಿರಾಜ, ಸ್ವರ್ಣಧಾರ ಕೋಳಿಗಳ ಮೌಲ್ಯವೂ ತಲಾ 600 ರು. ಆಗಿದೆ.

ಮನಸೆಳೆವ ಮತ್ಸ್ಯಲೋಕ: ಬಣ್ಣ-ಬಣ್ಣದ ಥರಹೇವಾರಿ ಮೀನುಗಳು ಕೃಷಿ ಮೇಳದಲ್ಲಿ ಜನರ ಗಮನ ಸೆಳೆದವು, ಗೋಲ್ಡ್‌ ಫಿಶ್‌, ಗೆಂಡೆ, ತಿಲಾಪಿರು, ಜೈಂಟ್‌ ವೈರಲ್‌, ಬಾಲನ್‌ ಮೋಲಿ, ಗಪ್ಪ ಮತ್ತಿತರ ತಳಿಯ ಮೀನುಗಳು ಆಕರ್ಷಣೀಯವಾಗಿದ್ದವು. ಮೀನು ಮರಿಗಳನ್ನು ಮಾರಾಟ ಮಾಡುತ್ತಿದ್ದರಿಂದ ಜನರು ಆಕ್ವೇರಿಯಂನಲ್ಲಿಡಲು ತಮಗಿಷ್ಟವಾದ ಮರಿಗಳನ್ನು ಖರೀದಿಸುತ್ತಿದ್ದರು.

3.82 ಲಕ್ಷ ಜನ ಭೇಟಿ: ಕೃಷಿ ಮೇಳದ ಮೊದಲನೆ ದಿನವಾದ ಗುರುವಾರ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು, ಸಹಕಾರ ಸಂಘಗಳ ಸದಸ್ಯರು, ರೈತರು, ಸಾರ್ವಜನಿಕರು ಸೇರಿದಂತೆ ಒಟ್ಟಾರೆ 3.82 ಲಕ್ಷ ಜನ ಭೇಟಿ ನೀಡಿದ್ದಾರೆ. ವಿವಿಯ ರಿಯಾಯಿತಿ ದರದ (50 ರು.) ಮುದ್ದೆ ಊಟವನ್ನು 9,350 ಜನ ಸವಿದಿದ್ದಾರೆ.

ಸಂಚಾರ ಪೊಲೀಸರೊಂದಿಗೆ ವಾಗ್ವಾದ: ತಿಂಡ್ಲು ಭಾಗದಿಂದ ಕೃಷಿ ಮೇಳಕ್ಕೆ ಆಗಮಿಸುವ ರಸ್ತೆಯನ್ನು ಬಂದ್‌ ಮಾಡಿದ್ದರಿಂದ ಯಾವಾಗಲೂ ಆ ಕಡೆಯಿಂದ ಆಗಮಿಸುತ್ತಿದ್ದ ಸಾರ್ವಜನಿಕರು ಸಂಚಾರ ಪೊಲೀಸರು, ಜಿಕೆವಿಕೆಯ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದು ಕಂಡುಬಂತು.

PREV

Recommended Stories

ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಅತ್ಯಂತ ಮನಮೋಹಕ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 650