ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರ್‌ ಶೋಗೆ ಇಂದಿನಿಂದ ಸಾರ್ವಜನಿರಿಗೆ ಪ್ರವೇಶ : ನೀವು ಹೀಗೆ ಹೋಗಿ

KannadaprabhaNewsNetwork | Updated : Feb 13 2025, 04:57 AM IST

ಸಾರಾಂಶ

ಮೂರು ದಿನಗಳ ಕಾಲ ವ್ಯವಹಾರ ವಹಿವಾಟು ಪೂರೈಸಿದ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’ ಗುರುವಾರ ಹಾಗೂ ಶುಕ್ರವಾರ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ.

  ಬೆಂಗಳೂರು : ಮೂರು ದಿನಗಳ ಕಾಲ ವ್ಯವಹಾರ ವಹಿವಾಟು ಪೂರೈಸಿದ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’ ಗುರುವಾರ ಹಾಗೂ ಶುಕ್ರವಾರ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ.ಮೊದಲ ಮೂರು ದಿನಗಳ ಕಾಲ ಅಡ್ವಾ ಪ್ರದೇಶಕ್ಕೆ ಮಾತ್ರ ಜನರಿಗೆ ಪ್ರವೇಶವಿತ್ತು. 

ಉಳಿದಂತೆ ₹5,000 ಟಿಕೆಟ್‌ನ ವ್ಯಾಪಾರ ಆಹ್ವಾನಿತರ ಟಿಕೆಟ್‌ ಉಳ್ಳವರು ಹಾಗೂ ವಿವಿಧ ಪಾಸ್‌ ಉಳ್ಳವರು ಮಾತ್ರ ಮೊದಲ 3 ದಿನದ ವಸ್ತು ಪ್ರದರ್ಶನ ಹಾಗೂ ಮುಖ್ಯ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಂಡಿದ್ದರು. ಇದೀಗ ಗುರುವಾರ ಮತ್ತು ಶುಕ್ರವಾರ ₹1,000 ಟಿಕೆಟ್‌ ಹಾಗೂ ₹2,500 ಟಿಕೆಟ್‌ ಪಡೆದಿರುವ ಎಲ್ಲರಿಗೂ ಮುಕ್ತವಾಗಿದ್ದು, ತೀವ್ರ ಜನದಟ್ಟಣೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಅಗತ್ಯವಾದ ಮಾರ್ಗದರ್ಶಿ ಮಾಹಿತಿ ಇಲ್ಲಿದೆ.

- ಹೇಗೆ ಟಿಕೆಟ್‌ ಪಡೆಯಬೇಕು? ಹೇಗೆ ಬರಬೇಕು? ಏನು ತರಬೇಕು? ಏನೆಲ್ಲಾ ತರಬಾರದು? ಪ್ರದರ್ಶನದಲ್ಲಿ ಏನೇನೆಲ್ಲಾ ಲಭ್ಯವಿದೆ ಎಂಬಿತ್ಯಾದಿ ಎಲ್ಲಾ ಮಾಹಿತಿಯನ್ನೂ ಇಲ್ಲಿ ಓದಬಹುದಾಗಿದೆ.

* ವೈಮಾನಿಕ ಪ್ರದರ್ಶನ ಸಮಯ:

ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆ.ವಸ್ತು ಪ್ರದರ್ಶನ: ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ.

*ಟಿಕೆಟ್‌ ಪಡೆಯುವುದು ಹೇಗೆ?:

www.aeroindia.gov.in ವೆಬ್‌ಸೈಟ್ ಅಥವಾ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಏರೋ ಇಂಡಿಯಾ ಆ್ಯಪ್‌ ಡೌನ್‌ಲೋಡ್ ಮಾಡಿ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಟಿಕೆಟ್‌ ಖರೀದಿಸಬಹುದು. ಕೇವಲ ವೈಮಾನಿಕ ಪ್ರದರ್ಶನಕ್ಕೆ (ಅಡ್ವಾ- ಏರ್‌ ಡಿಸ್‌ಪ್ಲೇ ವ್ಯೂಯಿಂಗ್ ಏರಿಯಾ) ₹1,000 ಟಿಕೆಟ್‌ ದರ ಹಾಗೂ ಅಡ್ವಾ ಮತ್ತು ವಸ್ತು ಪ್ರದರ್ಶನ ಪ್ರದೇಶಕ್ಕೆ ಭೇಟಿ ನೀಡಲು 2,500 ರು.ಗಳ ಸಾಮಾನ್ಯ ಪಾಸುಗಳನ್ನು ಆನ್‌ಲೈನ್‌ನಲ್ಲೇ ಖರೀದಿಸಬಹುದು. ಟಿಕೆಟ್‌ ನಿಗದಿತ ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಹೀಗಾಗಿ ದಿನಾಂಕದ ಬಗ್ಗೆ ಎಚ್ಚರ ವಹಿಸಬೇಕು.

 ತಲುಪುವುದು ಹೇಗೆ? 

ಬೆಂಗಳೂರು ನಗರದಿಂದ 25 ಕಿ.ಮೀ. ದೂರದಲ್ಲಿರುವ ಯಲಹಂಕ ವಾಯುನೆಲೆಗೆ ಸಾಮಾನ್ಯ ದಿನಗಳಲ್ಲಿ 40-45 ನಿಮಿಷದಲ್ಲಿ ತಲುಪಬಹುದು. ಗುರುವಾರ ಹಾಗೂ ಶುಕ್ರವಾರ ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆಯಿದ್ದು, ಸಂಚಾರದಟ್ಟಣೆ ಇರುವುದರಿಂದ ಸಾಮಾನ್ಯ ದಿನಗಳಿಗಿಂತ ಕನಿಷ್ಠ 2 ಗಂಟೆ ಮೊದಲೇ ಪ್ರಯಾಣ ಶುರು ಮಾಡಬೇಕು. ಪಾರ್ಕಿಂಗ್‌ ವ್ಯವಸ್ಥೆಗೆ ಒದ್ದಾಡುವ ಬದಲು ಟ್ಯಾಕ್ಸಿ ಅಥವಾ ಸಾರ್ವಜನಿಕ ಸಾರಿಗೆ ಆಯ್ಕೆ ಉತ್ತಮ. ಅಡ್ವಾ (₹1000 ಟಿಕೆಟ್‌) ಪ್ರದೇಶಕ್ಕೆ ತೆರಳುವವರು ನಿಟ್ಟೆ ಮೀನಾಕ್ಷಿ ಗೇಟಿನಿಂದ ಒಳಗೆ ಹೋಗಬೇಕಾಗಿರುವುದರಿಂದ ಸಾರ್ವಜನಿಕ ಸಾರಿಗೆ ಲಭ್ಯವಿರುವುದಿಲ್ಲ. ಬದಲಿಗೆ ಜಿಕೆವಿಕೆಯಿಂದ ಉಚಿತ ಸಂಪರ್ಕ ಸಾರಿಗೆ ವ್ಯವಸ್ಥೆ ಇರುತ್ತದೆ. 

ಇವು ಮಿಸ್‌ ಮಾಡಬೇಡಿ:- ಸೂರ್ಯಕಿರಣ ಪ್ರದರ್ಶನ

- ಅಮೆರಿಕಾದ ಎಫ್‌-35 ಅಬ್ಬರ

- ಎಸ್‌ಯು-57 ಪ್ರದರ್ಶನ- ತೇಜಸ್‌ ಎಲ್‌ಸಿಎ

- ಎಲ್‌ಯುಎಚ್‌ ಹೆಲಿಕಾಪ್ಟರ್‌ ಪ್ರದರ್ಶನ

ಪಾರ್ಕಿಂಗ್‌ ಎಲ್ಲಿ?

₹2,500 ಹಾಗೂ ₹5,000 ಪಾಸ್‌ಗಳಿಗೆ ಹೊರಗಿನ ಪಾರ್ಕಿಂಗ್‌ ಜಾಗದಲ್ಲಿ ಪಾರ್ಕ್‌ ಮಾಡಲು ಒಂದು ಕಾರು ಪಾಸ್ ದೊರೆಯುತ್ತದೆ. ಹೊರಗಿನ ಪಾರ್ಕಿಂಗ್‌ ಜಾಗದಲ್ಲಿ ವಾಹನ ಪಾರ್ಕ್‌ ಮಾಡಿ ಬರಬಹುದು. ಇನ್ನು ₹1,000 ಟಿಕೆಟ್ ಪಡೆದವರಿಗೆ ಜಕ್ಕೂರು ಅಥವಾ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್‌ ಜಾಗ ಹಾಗೂ ಅಲ್ಲಿಂದ ಅಡ್ವಾ ಪ್ರದೇಶಕ್ಕೆ ಉಚಿತ ಶಟಲ್‌ ಬಸ್ಸು ಸೇವೆ ಇರುತ್ತದೆ. ಅಡ್ವಾ ಪ್ರದೇಶದ ಬಳಿಯೇ ಪಾರ್ಕಿಂಗ್‌ ಪಡೆಯಬೇಕಾದರೆ ₹300 ಹೆಚ್ಚುವರಿ ಪಾವತಿಸಿ ಪಾಸ್‌ ಪಡೆಯಬಹುದು.

ಗುರುತಿನ ಚೀಟಿ ಮರೆಯಬೇಡಿ

ಪ್ರದರ್ಶನಕ್ಕೆ ಭೇಟಿ ನೀಡುವವರು ಸರ್ಕಾರದಿಂದ ನೀಡಿರುವ ಪಾಸ್‌ಪೋರ್ಟ್‌, ಮತದಾರರ ಗುರುತಿನ ಚೀಟಿ, ಆಧಾರ್‌, ಚಾಲನಾ ಪರವಾನಗಿಯಂತಹ ಅಧಿಕೃತ ಗುರುತಿನ ಚೀಟಿ ತರುವುದು ಕಡ್ಡಾಯ. ಪ್ರದರ್ಶನ ಆರಂಭಕ್ಕೆ ಒಂದು ಗಂಟೆಯ ಒಳಗಾಗಿ ಪ್ರವೇಶ ದ್ವಾರದಲ್ಲಿ ಭದ್ರತಾ ಪರಿಶೀಲನೆ ಮುಗಿಸಿದರೆ ಪೂರ್ಣ ಪ್ರಮಾಣದ ಶೋ ವೀಕ್ಷಿಸಬಹುದು. ಭದ್ರತಾ ಪರಿಶೀಲನೆ ಸುಲಭವಾಗಲು ಬರಿಗೈ ಅಥವಾ ಅಗತ್ಯ ವಸ್ತುಗಳೊಂದಿಗೆ ಮಾತ್ರ ಏರೋ ಇಂಡಿಯಾಗೆ ಬನ್ನಿ.

ಇವು ಮರೆಯಬೇಡಿ:

ಇವನ್ನು ತರಬೇಡಿ

ಯಲಹಂಕ ವಾಯುನೆಲೆಯಲ್ಲಿ ರನ್‌ವೇಯಲ್ಲಿ ಬಿಸಿ ಗಾಳಿ ಇರುವುದರಿಂದ 34 ರಿಂದ 35 ಡಿಗ್ರಿ ತಾಪಮಾನ ಜತೆಗೆ ಉರಿ ಬಿಸಿಲು ಇರಲಿದೆ. ಹೀಗಾಗಿ ಛತ್ರಿ, ಟೋಪಿ, ಸನ್‌ ಗ್ಲಾಸಸ್, ಸನ್‌ ಕ್ರೀಂ, ಕುಡಿಯುವ ನೀರಿನ ಬಾಟಲಿ ಕೈಯಲ್ಲಿರಲಿ. ಡಿಎಸ್‌ಎಲ್‌ಆರ್‌ ಕೆಮೆರಾ ಹಾಗೂ ಬೈನಾಕ್ಯುಲರ್ ತರಬಹುದು. ಆದರೆ ಡ್ರೋನ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಆಯುಧಗಳು, ಆಟಿಕೆ ಗನ್‌, ಲೇಸರ್ ಪಾಯಿಂಟರ್ಸ್‌, ಸ್ಫೋಟಕ ವಸ್ತುಗಳು, ಮೊನಚಾದ ವಸ್ತುಗಳನ್ನು ತರಬೇಡಿ.

ಯುಪಿಐ ಪೇಮೆಂಟ್‌

ನೆಚ್ಚದೆ ನಗದು ತನ್ನಿ

ಬಳ್ಳಾರಿ ರಸ್ತೆಯಲ್ಲಿನ 2ನೇ ಮುಖ್ಯದ್ವಾರದ ಬಳಿ ಲಾಸ್ಟ್ ಆ್ಯಂಡ್‌ ಫೌಂಡ್‌ ಕೌಂಟರ್‌. ಕಳುವಾದ ವಸ್ತುಗಳ ಕುರಿತು ದೂರು ನೀಡಲು ಹಾಗೂ ಪತ್ತೆಯಾದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಹುದು. ಹಾಲ್‌ ‘ಇ’ ನಲ್ಲಿನ ಹಾಲ್‌ ವ್ಯವಸ್ಥಾಪಕರ ಬಳಿ ಫೇರ್‌ ಗೈಡ್‌, ಎಕ್ಸಿಬಿಷನ್‌ ಡೈರಕ್ಟರಿ ಹಾಗೂ ಐಡೆಕ್ಸ್ ಪುಸ್ತಕ ಉಚಿತವಾಗಿ ಪಡೆಯಬುಹದು. ಇದರಲ್ಲಿ ಎಲ್ಲಾ ಮಳಿಗೆಗಳ, ಪ್ರದರ್ಶನ ಮಾಹಿತಿ ಇರುತ್ತದೆ. ಹೆಚ್ಚಿನ ಜನದಟ್ಟಣೆಯಿಂದ ನೆಟ್ವರ್ಕ್‌ ಕೈ ಕೊಡುತ್ತದೆ. ಹೀಗಾಗಿ ಖರೀದಿ ಮಾಡೋರು ಯುಪಿಐ ಪೇಮೆಂಟ್ಸ್ ನೆಚ್ಚಿಕೊಳ್ಳದೆ ಕಾರ್ಡ್ ಅಥವಾ ನಗದು ಹಣ ತರುವುದು ಉತ್ತಮ. ಜತೆಗೆ ವ್ಯಕ್ತಿಗಳನ್ನು ಮೊಬೈಲ್‌ ಮೂಲಕ ಸಂಪರ್ಕಿಸಲೂ ಕಷ್ಟವಾಗಬಹುದು. ಹೀಗಾಗಿ ಎಚ್ಚರ ವಹಿಸಿ.

ಕುಡಿಯಲು ನೀರು ಎಲ್ಲಿರುತ್ತದೆ?

ಎಚ್‌ಎಎಲ್‌ ಹಾಗೂ ಏರೋ ಇಂಡಿಯಾ ಆಯೋಜಕರ ವತಿಯಿಂದ 3 ಕಡೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮೊದಲ ಮೂರು ದಿನ ದಿನಕ್ಕೆ 1 ಲಕ್ಷ ಲೀಟರ್‌ನಂತೆ ತಲಾ 200 ಮಿ.ಲೀ.ನ 5 ಲಕ್ಷ ಬಾಟಲ್‌ಗಳನ್ನು ಹಂಚಲಾಗಿದೆ. ಕೊನೆಯ ಎರಡು ದಿನಗಳಲ್ಲಿ ತಲಾ 1.5 ಲಕ್ಷ ಲೀಟರ್‌ ನೀರು ಹಂಚಲು ಉದ್ದೇಶಿಸಲಾಗಿದ್ದು, ವೈಮಾನಿಕ ಪ್ರದರ್ಶನದ ಬಳಿ ಎರಡು ಕಡೆ ಹಾಗೂ ಇಂಡಿಯನ್‌ ಪೆವಿಲಿಯನ್‌ ಎದುರಿಗಿನ ಸ್ಟಾರ್‌ ಬಕ್‌ ಪಕ್ಕದಲ್ಲಿ ಹಾಗೂ ಇಂಡಿ ಹಟ್‌ ಬಳಿ ಕುಡಿಯುವ ನೀರು ನೀಡಲಾಗುತ್ತದೆ.

* ಮಕ್ಕಳಿದ್ದರೆ ಇವುಗಳನ್ನು ತೋರಿಸಿ?

ಹಾಲ್‌ ‘ಎ’, ಹಾಲ್‌ ‘ಇ’ ಸೇರಿ ವಿವಿಧ ಹಾಲ್‌ಗಳಲ್ಲಿರುವ ಸಿಮ್ಯುಲೇಟರ್‌ ಅನುಭವವನ್ನು ಮಿಸ್‌ ಮಾಡಬೇಡಿ. ಗೇಟ್‌ -2 ಪ್ರವೇಶದ ಬಳಿ ಇರುವ ‘ಐ ಲವ್‌ ಏರೋ ಇಂಡಿಯಾ’, ಗ್ರಿಪನ್‌ ವಿಮಾನದ ಎದುರಿಗಿನ ಪೈಲಟ್‌ ಕಟೌಟ್‌ನಲ್ಲಿ ತಲೆ ಇಟ್ಟು ತೆಗೆದುಕೊಳ್ಳುವ ಫೋಟೋ, ಎಚ್‌ಎಎಲ್‌ ಮಳಿಗೆಯಲ್ಲಿ ತುಮಕೂರಿನಲ್ಲಿ ಅಭಿವೃದ್ಧಿ ಪಡಿಸಿರುವ ಎಲ್‌ಯುಎಚ್‌ ಹೆಲಿಕಾಪ್ಟರ್‌, ಸ್ಟ್ಯಾಟಿಕ್‌ ಡಿಸ್‌ಪ್ಲೇ ಬಳಿ ಇರುವ ಯುದ್ಧ ವಿಮಾನಗಳ ಮುಂದೆ ಫೋಟೋ ಮಿಸ್‌ ಮಾಡಬೇಡಿ. ಇನ್ನು ಹಾಲ್ ‘ಇ’ ನಲ್ಲಿರುವ ವಿನ್ವೆಲ್ಲೆ ಗನ್‌ ಡಿಸ್ಪ್ಲೇನಲ್ಲಿರುವ ಮೆಷಿನ್‌ ಗನ್‌, ರಿವಾಲ್ವರ್‌ಗಳು ಹೊಸ ಆಕರ್ಷಣೆಯಾಗಿವೆ.

 17 ಮತ್ತು 23ನೇ ಮಳಿಗೆಯಲ್ಲಿ ಕ್ಲಿನಿಕ್‌:

ಬಿಸಿಲಿನ ಝಳದಿಂದ ತಲೆ ಸುತ್ತುವಿಕೆ, ಪ್ರಜ್ಞೆ ತಪ್ಪುವುದು ಉಂಟಾದರೆ ಕೂಡಲೇ ವಸ್ತು ಪ್ರದರ್ಶನದ ಏರಿಯಾ ಬಳಿ ಇರುವ 17ನೇ ಮಳಿಗೆ (ಎಲ್‌-2 ಫುಡ್‌ ಕೋರ್ಟ್‌ ಪಕ್ಕ) ಬಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಮೊದಲು ಮೂರು ದಿನಗಳ ಕಾಲ 30-40 ಮಂದಿಗೆ ಚಿಕಿತ್ಸೆ ನೀಡಿರುವ ವೈದ್ಯರು ಗುರುವಾರ ಹಾಗೂ ಶುಕ್ರವಾರ ಹೆಚ್ಚು ಮಂದಿ ತಪಾಸಣೆಗೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಜ್ಜಾಗಿದ್ದಾರೆ. ಇನ್ನು ಅಡ್ವಾ ಪ್ರದೇಶದವರು 23ನೇ ಸಂಖ್ಯೆಯ ಮಳಿಗೆ ಬಳಿ ಹೋಗಿ ವೈದ್ಯರನ್ನು ಕಾಣಬಹುದು. 

 ಆಹಾರ ಮಳಿಗೆ ಎಲ್ಲಿದೆ?

ಗೇಟ್‌-1, 2 ರಿಂದ ಒಳಗೆ ಬರುವಾಗ ಮಾರ್ಗ ಮಧ್ಯೆಯಲ್ಲಿ (ಅರ್ಜುನ್‌ ಹಾಲ್‌ ಹಿಂಭಾಗ) ಫುಡ್‌ ಕೋರ್ಟ್‌ ಇದ್ದು ವಿವಿಧ ಹೋಟೆಲ್‌ಗಳ ಮಳಿಗೆಗಳು ಅದರಲ್ಲಿವೆ. 150 ರು.ಗಳಿಂದ ತಿಂಡಿ, ಊಟದ ಮೆನು ಶುರುವಾಗುತ್ತದೆ. ತಾರಾ ಹೋಟೆಲ್‌ಗಳ ಮಳಿಗೆಗಳು ಎಲ್‌-2, ಎಲ್‌-1 ಬಳಿ ಇದ್ದು ಮೊದಲೇ ಆನ್‌ಲೈನ್‌ ಮೂಲಕ ಪಾಸು ಖರೀದಿಸಬೇಕು. ಇನ್ನು ಪ್ರದರ್ಶನದ ಜಾಗದಲ್ಲಿ ಸ್ಟಾರ್‌ ಬಕ್ಸ್‌ ಮಳಿಗೆ ಇದೆ.

* ಖರೀದಿಗೆ ಉಂಟು ಅವಕಾಶ!

ಏರೋ ಇಂಡಿಯಾಗೆ ಆಗಮಿಸುವ ಸಾರ್ವಜನಿಕರಿಗೆ ಇಂಡಿ ಹಾಟ್‌ ಮಳಿಗೆ, ಸೂರ್ಯಕಿರಣ್‌ ಹಾಗೂ ಬೆಂಗಳೂರು ಸೇನಾಧಿಕಾರಿಗಳ ಸಂಘದ ಮಳಿಗೆಗಳಲ್ಲಿ ತರಹೇವಾರಿ ವಸ್ತುಗಳು ಖರೀದಿಗೆ ಲಭ್ಯವಿದೆ. ಇಂಡಿ ಹಾಟ್‌ ಮಳಿಗೆಯಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಖ್ಯಾತವಾಗಿರುವ ಎಲ್ಲಾ ರೀತಿಯ ರೇಷ್ಮೆ ಸೀರೆಗಳು, ಉಡುಗೆ ತೊಡುಗೆಗಳು, ಚನ್ನಪಟ್ಟಣ ಗೊಂಬೆ, ಸಾಂಬಾರು ಪದಾರ್ಥ, ಟೋಪಿ, ಕೀ ಚೈನ್‌, ವಿಮಾನಗಳ ಆಕೃತಿ, ಆಭರಣಗಳು ಸೇರಿದಂತೆ ಎಲ್ಲವೂ ಲಭ್ಯವಿದ್ದು, 30 ರು.ಗಳ ಆಟದ ವಾಚ್‌ ಬ್ಯಾಂಡ್‌, 60 ರು.ಗೆ ಕಾರು, 500 ರು. ಬೆಲೆಯಿಂದ ಶುರುವಾಗುವ ವಿಮಾನದ ಪ್ರತಿಕೃತಿಗಳು, 99 ರು.ಗಳಿಂದ ಶುರುವಾಗುವ ಕೀ ಚೇನ್‌ ಹೀಗೆ ಅಗ್ಗದಿಂದ ದುಬಾರಿವರೆಗೆ ಎಲ್ಲಾ ರೀತಿಯ ದರಗಳಲ್ಲೂ ವಸ್ತುಗಳು ಖರೀದಿಗೆ ಲಭ್ಯವಿವೆ. ಸೂರ್ಯಕಿರಣ್‌ ಮಳಿಗೆಯಲ್ಲಿ ಸೂರ್ಯಕಿರಣ್‌ ನೆನಪಿಗೆ ಕೀ ಚೈನ್‌, ಸೂರ್ಯಕಿರಣ್‌ ಹೆಸರಿನ ಆಟಿಕೆ ವಿಮಾನ, ಟೀ ಶರ್ಟ್‌, ಟೋಪಿಗಳು ಖರೀದಿ ಮಾಡಬಹುದು.

Share this article