ಕೋಲಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸುದ್ದಿಗೋಷ್ಠಿ । ಜಿಲ್ಲಾ ರಕ್ಷಣಾಧಿಕಾರಿ ಎಂ. ನಾರಾಯಣ್ ಮನವಿ
ಯಾವುದೇ ಸಮಾಜ ಘಾತುಕ ಕೃತ್ಯಗಳು, ಅಪರಾಧ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವುದು ನಾಗರೀಕರ ಜವಾಬ್ದಾರಿಯಾಗಿದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಕೈ ಜೋಡಿಸುವ ಮೂಲಕ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಎಂ. ನಾರಾಯಣ ಮನವಿ ಮಾಡಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಮಟ್ಟದ ಪೊಲೀಸ್ ಪರೇಡ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದ್ದು , ಇಲಾಖೆಯಲ್ಲಿ ಒಂದು ಸಾವಿರ ಜನ ಪೊಲೀಸ್ ಸಿಬ್ಬಂದಿ ಮಾತ್ರ ಇದ್ದಾರೆ, ಜನಸಂಖ್ಯೆಗೆ ಅಗತ್ಯವಾದಷ್ಟು ಸಿಬ್ಬಂದಿಗಳ ಕೊರತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ನಾಗರೀಕರ ಸಹಕಾರ ಕೋರಲಾಗಿದೆ ಎಂದರು.ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ೩೭ ಹತ್ಯೆಗಳಾಗಿದೆ, ಈ ಪೈಕಿ ೩೬ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ, ವೈಯಕ್ತಿಕ ದ್ವೇಷ ಮತ್ತು ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ ೯ ಪ್ರಕರಣ, ಪತಿ, ಪತ್ನಿಯರಲ್ಲಿ ಕಲಹದ ೨ ಪ್ರಕರಣ, ಹಣಕಾಸು ಮತ್ತು ಭೂ ವ್ಯವಹಾರಗಳಲ್ಲಿ ೩ ಪ್ರಕರಣ, ಕಾನೂನು ಬಾಹಿರ, ಪ್ರೀತಿ, ಪ್ರೇಮ ಸಂಬಂಧಿತ ೭ ಪ್ರಕರಣಗಳು, ಅತ್ಯಾಚಾರ ಕೊಲೆ ೨ ಪ್ರಕರಣ, ಪೂರ್ವ ಯೋಜಿತ ೪ ಪ್ರಕರಣ, ತಂದೆ, ತಾಯಿಯೇ ತಮ್ಮ ಮಕ್ಕಳನ್ನು ಹತ್ಯೆ ಮಾಡಿರುವ ೭ ಪ್ರಕರಣಗಳು, ನ್ಯಾಯಾಲಯದ ೧ ಪ್ರಕರಣ, ತಪ್ಪು ಮಾಹಿತಿಯ ಪತ್ತೆ ೧ ಪ್ರಕರಣ, ಪತ್ತೆಯಾಗದ ೧ ಪ್ರಕರಣ ಸೇರಿದಂತೆ ಒಟ್ಟು ೩೭ ಪ್ರಕರಣಗಳಿದ್ದವು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಿಂದ ೧೯೫ ನಾಗರೀಕರಿಗೆ ಕರೆ ಮಾಡಿ ವಿಚಾರಣೆ ನಡೆಸಲಾಗಿದೆ, ಹಲವಾರು ಪ್ರಕರಣಗಳಲ್ಲಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿರುವ ಕಾರ್ಯಕ್ಕೆ ೬೯೬೭ ಜನರು ಲೋಕ ಸ್ಪಂದನೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ, ೧೦೪೪ ಮಂದಿ ಶ್ಲಾಘಿಸಿದ್ದು, ಇಲಾಖೆಯಿಂದ ಹಾಗೂ ಮುಖ್ಯಮಂತ್ರಿಗಳಿಂದ ಶ್ಲಾಘನೆಗೆ ನಮ್ಮ ಜಿಲ್ಲಾ ಪೊಲೀಸ್ ಪಾತ್ರವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೧೯ ಜನ ರೌಡಿಗಳನ್ನು ಗಡಿಪಾರು ಮಾಡಿದೆ, ೪೯೮ ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ೫೮ ಮಂದಿಯನ್ನು ರೌಡಿಶೀಟ್‌ನಿಂದ ತೆಗೆದು ೧೧೦ ಜನ ರೌಡಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ತಿಕ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ೨೮ ದಿನಗಳ ಕಾಲ ಬಾಲಾ ಅಪರಾಧಿ ಜೈಲಿನಲ್ಲಿ ಇದ್ದನು. ಆರೋಪಿಯು ಅಪ್ರಾಪ್ತನೆಂಬ ಕಾರಣಕ್ಕೆ ಶಿಕ್ಷೆಯ ಪ್ರಮಾಣದಲ್ಲಿ ಕಡಿಮೆ ಮಾಡದಂತೆ ನಾವು ನ್ಯಾಯಾಲಯಕ್ಕೆ ಪ್ರಕರಣ ದಾಖಲಾತಿಗೆ ಶಿಫಾರಸ್ಸು ಮಾಡಿದ್ದರೂ ಆರೋಪಿಗೆ ಜಾಮೀನು ಮಂಜೂರು ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್, ಡಿ.ವೈ.ಎಸ್.ಪಿ ಮಲ್ಲೇಶ್, ನಂದಕುಮಾರ್, ಡಿ.ಆರ್. ವಿಭಾಗದ ರಘು ಇದ್ದರು.