ಬೆಂಗಳೂರು : ವೈದ್ಯಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಅಪರೂಪದ ವೈದ್ಯ ಡಾ. ಥಾಮಸ್ ಚಾಂಡಿಯವರಿಗೆ ಗೌರವ ಸನ್ಮಾನ ಸಂದಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿರುವ ಹೊಸ್ಮಟ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಸ್ ಸಂಸ್ಥೆಯು ಸಂಸ್ಥಾಪಕರ ದಿನವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ತಮ್ಮ ಗೌರವಾನ್ವಿತ ಸಂಸ್ಥಾಪಕ ಡಾ. ಥಾಮಸ್ ಚಾಂಡಿಯವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಪ್ರತಿಮೆಯನ್ನು ಸ್ಥಾಪಿಸಿದೆ.
ಜೊತೆಗೆ ಮಗ್ರಾತ್ ರಸ್ತೆಯಲ್ಲಿರುವ ಹೊಸ್ಮಟ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ನ 4ನೇ ಮಹಡಿಯಲ್ಲಿ ಅತ್ಯಾಧುನಿಕ ಹೊಸ ಓಪಿಡಿ ವಿಭಾಗವನ್ನು ಉದ್ಘಾಟಿಸಿದೆ.ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಡಯಾಸಿಸ್ ನ ಆರ್ಚ್‌ಬಿಷಪ್ ಮೋಸ್ಟ್ ರೆವ್. ಡಾ. ಪೀಟರ್ ಮಚಾದೋ, ಶಾಂತಿನಗರ ಶಾಸಕ ಶ್ರೀ ಎನ್. ಎ. ಹ್ಯಾರಿಸ್ ಮತ್ತು ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತರಾದ ಶ್ರೀಮತಿ ನಿಶಾ ಮಿಲೆಟ್ ಭಾಗವಹಿಸಿದ್ದರು .ಈ ಕಾರ್ಯಕ್ರಮದಲ್ಲಿ ಡಾ. ಚಾಂಡಿಯವರ ಅತ್ಯುನ್ನತ ಕಾರ್ಯಗಳನ್ನು ಸ್ಮರಿಸಲಾಯಿತು. ಆಸ್ಪತ್ರೆಯ ‘ಮೇಕ್ ಮಿ ವಾಕ್’ ಯೋಜನೆಯ ಮೂಲಕ ಯುವ ಜನರ ಬದುಕು ಬದಲಿಸುವ ಕಾರ್ಯಗಳನ್ನು ಮುಂದುವರಿಸುವುದಾಗಿ ಸಾರಲಾಯಿತು.
ನಿಮ್ಮ ಜೀವನ ಮುಖ್ಯ ಎಂಬ ಹೊಸ್ಮಟ್ ನ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಈ ವರ್ಷ ದೈಹಿಕ ದೋಷಗಳಿಂದ ಬಳಲುತ್ತಿರುವ ಸವಲತ್ತು-ವಂಚಿತ 10 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವುದಾಗಿ ತಿಳಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸ್ಮಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಅನೀಶಾ ಚಾಂಡಿ ಎಕಾರ್ಟ್ ಅವರು, ‘ನನ್ನ ತಂದೆಯವರು ರೋಗಕ್ಕೆ ಚಿಕಿತ್ಸೆ ಕೊಡುವುದಷ್ಟೇ ವೈದ್ಯಕೀಯ ಸೇವೆ ಅಲ್ಲ, ಬದಲಿಗೆ ಘನತೆಯನ್ನು ಮರಳಿ ಒದಗಿಸುವುದು ಎಂದು ನಂಬಿದ್ದರು.
‘ಮೇಕ್ ಮಿ ವಾಕ್’ ಯೋಜನೆಯ ಅಡಿಯಲ್ಲಿ ನಡೆಯುವ ಪ್ರತೀ ಶಸ್ತ್ರಚಿಕಿತ್ಸೆ, ನಾವು ಒದಗಿಸುವ ಆರೈಕೆ ಎಲ್ಲವೂ ಕೂಡ ಅವರು ಕಂಡ ಕನಸಿನ ಮುಂದುವರಿಕೆಯಾಗಿದೆ. ಇದೀಗ ಹೊಸ ಓಪಿಡಿ ವಿಭಾಗ ಉದ್ಘಾಟಿಸಲಾಗಿದ್ದು, ಅತ್ಯುತ್ತಮ ಕಾಳಜಿ ತೋರುವ ನಮ್ಮ ಪ್ರಯಾಣದಲ್ಲಿ ಮತ್ತೊಂದು ಹೆಜ್ಜೆಯಾಗಿದೆ’ ಎಂದು ಹೇಳಿದರು.ಬೆಂಗಳೂರು ಆರ್ಚ್‌ಬಿಷಪ್ ಮೋಸ್ಟ್ ರೆವ್. ಡಾ. ಪೀಟರ್ ಮಚಾದೋ ಅವರು, “ಡಾ. ಥಾಮಸ್ ಚಾಂಡಿಯವರು ಸಮಾಜಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು ಮತ್ತು ಯಾವಾಗಲೂ ನೆನಪಿನಲ್ಲಿ ಇರುತ್ತಾರೆ. ಅವರು ಒಬ್ಬ ಅದ್ಭುತ ಆರ್ಥೋಪೆಡಿಕ್ ಸರ್ಜನ್ ಆಗಿದ್ದರು, ದೂರದರ್ಶಿ ನಾಯಕನಾಗಿದ್ದರು ಮತ್ತು ಮಾನವತಾವಾದಿಯಾಗಿದ್ದರು’ ಎಂದು ಹೇಳಿದರು.
ಶಾಂತಿನಗರ ಶಾಸಕರಾದ ಶ್ರೀ ಎನ್. ಎ. ಹ್ಯಾರಿಸ್ ಅವರು , ‘ಡಾ. ಚಾಂಡಿಯವರು ಕರುಣೆಯ ಆಧಾರದ ಮೇಲೆ ಸಂಸ್ಥೆಗಳನ್ನು ನಿರ್ಮಿಸಿದರೇ ಹೊರತು ಕಮರ್ಷಿಯಲ್ ವಿಚಾರದ ಕಡೆಗೆ ಗಮನ ಕೊಡಲಿಲ್ಲ. ಹೊಸ್ಮಟ್ ಆಸ್ಪತ್ರೆಯು ವೈದ್ಯಕೀಯ ಸೇವೆಯು ಮಾನವೀಯತೆಯ ಸೇವೆ ಎಂಬ ಅವರ ನಂಬಿಕೆಯನ್ನು ಪ್ರತಿಪಾದಿಸುತ್ತದೆ’ ಎಂದು ಹೇಳಿದರು.ಒಲಿಂಪಿಯನ್ ಶ್ರೀಮತಿ ನೀಶಾ ಮಿಲೆಟ್ ಅವರು ವೈಯಕ್ತಿಕ ನೆನಪನ್ನು ಹಂಚಿಕೊಳ್ಳುತ್ತಾ, ‘ಬಹುತೇಕ ಆಸ್ಪತ್ರೆಗಳು ನನ್ನ ಭುಜಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಸೂಚಿಸಿದ್ದವು.
ಆದರೆ ಡಾ. ಚಾಂಡಿಯವರು ಕೇವಲ ಫಿಸಿಯೋಥೆರಪಿಯನ್ನು ಶಿಫಾರಸು ಮಾಡಿದರು ಮತ್ತು ಅದು ಮಾಯಾಜಾಲದಂತೆ ಕೆಲಸ ಮಾಡಿತು. ಅವರು ಕ್ರೀಡಾಪಟುಗಳ ಅಗತ್ಯಗಳನ್ನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದರು. ಅವರು ಪರಿಣತಿ ಜೊತೆಗೆ ಸಹಾನುಭೂತಿ ಹೊಂದಿದ ವೈದ್ಯರಾಗಿದ್ದರು’ ಎಂದರು.ಈ ಆಚರಣೆಯ ಭಾಗವಾಗಿ ಬಿಬಿಎಂಪಿ ಜೊತೆಗಿನ ಸಹಯೋಗದಲ್ಲಿ ಮಗ್ರಾತ್ ರಸ್ತೆ, ವಿವೇಕನಗರ ಮತ್ತು ವಿಕ್ಟೋರಿಯಾ ಲೇಔಟ್‌ನಲ್ಲಿ ಒಂದು ವಾರಗಳ ಕಾಲ ಸ್ವಚ್ಛ ಬೆಂಗಳೂರು ಅಭಿಯಾನ ನಡೆಸಲಾಯಿತು.
ಈ ಮೂಲಕ ಡಾ. ಚಾಂಡಿಯವರ ಆರೋಗ್ಯಕರ, ಸ್ವಚ್ಛ ಸಮಾಜ ನಿರ್ಮಿಸುವ ಕನಸಿಗೆ ಗೌರವ ಸಲ್ಲಿಸಲಾಯಿತು.ಹೊಸ್ಮಟ್ ಆಸ್ಪತ್ರೆಯು ಈಗ ಒಂದು ಮಲ್ಟಿಸ್ಪೆಷಾಲಿಟಿ ಸಂಸ್ಥೆಯಾಗಿ ಬೆಳೆದಿದ್ದು, ಆರ್ಥೋಪೆಡಿಕ್ಸ್ ನಿಂದ ರೋಗ ತಡೆಗಟ್ಟುವ ಚಿಕಿತ್ಸೆ ಮತ್ತು ವೃದ್ಧರಿಗೆ ಮನೆಯಲ್ಲಿ ವೈದ್ಯಕೀಯ ಸೇವಾ ಸೌಲಭ್ಯ ಒದಗಿಸುವವರೆಗೆ ಅಭಿವೃದ್ಧಿ ಹೊಂದಿದ್ದು, ತನ್ನ ಸಂಸ್ಥಾಪಕರ ತತ್ವಗಳ ಪಾಲನೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ