ಬೆಳ್ಳಿ ಮೇಲೆ ಹೂಡಿಕೆ ಮಾಡಲು ಇದು ಸಕಾಲವೇ : ಸಿಲ್ವರೇ ಈಗ ಬಂಗಾರ

Published : Oct 14, 2025, 12:37 PM IST
silver

ಸಾರಾಂಶ

ವಿಶೇಷ ಸಂದರ್ಭದಲ್ಲಿ ಉಡುಗೊರೆಯಾಗಿ ಬೆಳ್ಳಿ ದೀಪ ಕೊಡುವುದು, ಬೆಳ್ಳಿಯ ದೇವತಾ ವಿಗ್ರಹ ನೀಡುವುದು, ಮದುವೆಯ ವೇಳೆಗೆ ಬೆಳ್ಳಿಯ ಸಾಮಗ್ರಿಗಳನ್ನು ನೀಡುವುದು ಅನಾದಿ ಕಾಲದಿಂದ ಅನೂಚಾನಾಗಿ ನಡೆದುಕೊಂಡು ಬಂದಿದೆ.

ಭಾರತದಲ್ಲಿ ಬೆಳ್ಳಿ ಹೂಡಿಕೆಗಿಂತಲೂ ಪರಂಪರೆಯ ಭಾಗವಾಗಿ, ಭಾವನಾತ್ಮಕ ನೆಲೆಯಲ್ಲಿ ಜನರಿಗೆ ಹೆಚ್ಚು ಹತ್ತಿರ. ಹಾಗಾಗಿ ಬೆಳ್ಳಿ ಕಾಲ್ಗೆಜ್ಜೆ ಮತ್ತಿತ್ಯಾದಿ ಆಭರಣಗಳಿಗೆ ಹೆಚ್ಚು ಗೌರವ. ಜೊತೆಗೆ ವಿಶೇಷ ಸಂದರ್ಭದಲ್ಲಿ ಉಡುಗೊರೆಯಾಗಿ ಬೆಳ್ಳಿ ದೀಪ ಕೊಡುವುದು, ಬೆಳ್ಳಿಯ ದೇವತಾ ವಿಗ್ರಹ ನೀಡುವುದು, ಮದುವೆಯ ವೇಳೆಗೆ ಬೆಳ್ಳಿಯ ಸಾಮಗ್ರಿಗಳನ್ನು ನೀಡುವುದು ಅನಾದಿ ಕಾಲದಿಂದ ಅನೂಚಾನಾಗಿ ನಡೆದುಕೊಂಡು ಬಂದಿದೆ. ಆದರೆ ಈಗ ಇವೆಲ್ಲಕ್ಕಿಂತ ಹೆಚ್ಚಾಗಿ ಹೂಡಿಕೆ ವಿಚಾರದಲ್ಲಿ ಬೆಳ್ಳಿಯ ವಿಚಾರ ಹೆಚ್ಚೆಚ್ಚು ಕೇಳಿ ಬರುತ್ತಿದೆ.

ಹೆಚ್ಚುತ್ತಿರುವ ಹೂಡಿಕೆ: ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳಿಯ ಬೆಲೆ ಲಕ್ಷ ದಾಟಿದೆ. ಬೆಳ್ಳಿಯ ನಾಣ್ಯಗಳ ಖರೀದಿ, ಬೆಳ್ಳಿಯ ಬಾರ್‌ಗಳು, ಬೆಳ್ಳಿಯ ಆಭರಣಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಗ್ಲೋಬಲ್‌ ಟ್ರೆಂಡ್‌, ಡಾಲರ್‌ ಎದುರು ರುಪಾಯಿ ಬೆಲೆ ಏರಿಳಿತಗಳಂಥಾ ಅಂಶಗಳು ಬೆಳ್ಳಿಯ ಮೌಲ್ಯದ ಮೇಲೆ ನೇರ ಪರಿಣಾಮ ಬೀರುತ್ತಿವೆ.

ಪ್ರಸ್ತುತ ಮಾರುಕಟ್ಟೆ ಸ್ಥಿತಿ

2023ರಲ್ಲಿ ಬೆಳ್ಳಿ ಬೆಲೆ ಕೆಜಿಗೆ 70,000 ದಿಂದ 75,000ವರೆಗೆ ಇತ್ತು. ಈಗ ಈ ದರದಲ್ಲಿ ಏರಿಕೆಯಾಗಿದೆ. ಡಾಲರ್‌ ಎದುರು ರೂಪಾಯಿಯ ದರ ಕುಸಿತ, ಹೆಚ್ಚುತ್ತಿರುವ ಜಾಗತಿಕ ಬೇಡಿಕೆ ಇದಕ್ಕೆ ಕಾರಣ. ಬೆಳ್ಳಿಗೆ ಡಿಮ್ಯಾಂಡ್‌ ಏರುತ್ತಲೇ ಇರುವ ಕಾರಣ ಬೆಲೆಯೂ ಇನ್ನಷ್ಟು ಹೆಚ್ಚಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

 ಜಾಗತಿಕ ಮಟ್ಟದಲ್ಲಿ ಸೌರ ಪ್ಯಾನೆಲ್, ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ ಬೆಳ್ಳಿ ಉಪಯೋಗವಾಗುತ್ತದೆ. ಸದ್ಯಕ್ಕೀಗ ಬೇಡಿಕೆಗೆ ತಕ್ಕಷ್ಟು ಬೆಳ್ಳಿಯ ಪೂರೈಕೆಯಾಗುತ್ತಿಲ್ಲ. ಕಳೆದ ವರ್ಷ ಸಿಲ್ವರ್‌ ಇನ್ಸ್ಟಿಟ್ಯೂಟ್ ನೀಡಿದ ಲೆಕ್ಕದ ಪ್ರಕಾರ 184.3 ಮಿಲಿಯನ್ ಔನ್ಸ್‌ನಷ್ಟು ಬೆಳ್ಳಿಯ ಕೊರತೆ ಇತ್ತು. ಇದು ಈ ವರ್ಷವೂ ಮುಂದುವರಿದಿದೆ.

ಬೆಳ್ಳಿ ಹೂಡಿಕೆದಾರರು ಗಮನಿಸಬೇಕಾದ ಅಂಶಗಳು

- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದರೆ ಆಮದು ವೆಚ್ಚ ಹೆಚ್ಚಾಗಿ ಬೆಳ್ಳಿಯ ದರ ಏರಬಹುದು.

- ದೀಪಾವಳಿ ಹಬ್ಬದ ಸಮಯದಲ್ಲಿ ಬೆಳ್ಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದು ಬೆಲೆಯನ್ನೂ ಏರಿಸಬಹುದು.

- ಸದ್ಯ ಜಾಗತಿಕ ಮಟ್ಟದಲ್ಲಿನ ರಾಜಕೀಯ ಅನಿಶ್ಚಿತತೆಯ ನಡುವೆ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ವಿಶ್ಲೇಷಕರು ಹೇಳುತ್ತಾರೆ. ಅವರ ಪ್ರಕಾರ ಬೆಳ್ಳಿ ದರ ಕೆಜಿಗೆ 1,15,000 ರು.ವರೆಗೂ ಏರಿಕೆಯಾಗಬಹುದು.

- ಬೆಳ್ಳಿ ಅತೀ ಹೆಚ್ಚು ಬಳಕೆಯಾಗುವ ಸೋಲಾರ್‌ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮ ದೇಶದಲ್ಲಿ ಬೆಳೆಯುತ್ತಿರುವುದರಿಂದ ಬೆಳ್ಳಿಯ ಬೇಡಿಕೆ ಹೆಚ್ಚಾಗಬಹುದೇ ಹೊರತು ಕುಸಿಯುವ ಸಾಧ್ಯತೆ ಕಡಿಮೆ.

ಹೂಡಿಕೆಯ ಅಪಾಯಗಳು

- ಬೆಳ್ಳಿ ಬೆಲೆಯಲ್ಲಿ ಏರಿಳಿತಗಳು ಹೆಚ್ಚು. ಇದು ಬಂಗಾರದಷ್ಟು ಸ್ಥಿರವಲ್ಲ.

- ಆಮದು ತೆರಿಗೆಗಳು ಮತ್ತು ಜಿಎಸ್‌ಟಿ ಬೆಲೆಯಿಂದ ಹೂಡಿಕೆದಾರರಿಗೆ ಸಮಸ್ಯೆಯಾಗಬಹುದು.

- ಡಾಲರ್ ಬಲಿಷ್ಠವಾದರೆ ಅಥವಾ ಜಾಗತಿಕ ಆರ್ಥಿಕ ಕುಸಿತವಾಗಿದರೆ ಬೆಳ್ಳಿಯ ಬೆಲೆ ಇಳಿಯಬಹುದು.

ಒಟ್ಟಿನಲ್ಲಿ ನೀವು ದೀರ್ಘಕಾಲಿಕ ಹೂಡಿಕೆದಾರರಾದರೆ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ನಡೆ. ಅಲ್ಪಕಾಲಿಕ ಹೂಡಿಕೆಗೆ ಬೆಲೆ ಏರಿಳಿತದ ಅಪಾಯ ಇದೆ. ಯಾವುದಕ್ಕೂ ತಜ್ಞರ ಸಲಹೆ ಪಡೆದು ಹೂಡಿಕೆಗೆ ಮುಂದಾಗುವುದು ಉತ್ತಮ.

PREV
Read more Articles on

Recommended Stories

ಕಾಂತಾರಕ್ಕೆ ಅಗೋಚರ ಶಕ್ತಿಯದ್ದೇ ಅಭಯ : ರಿಷಭ್‌
ಫುಡ್‌ ಸ್ಟೋರೀಸ್‌ : ಮುದುಕ ಮತ್ತು ಲೇಡಿ ಸಪ್ಲೈಯರ್‌