ರಿಷಭ್ ಶೆಟ್ಟಿ
ನಟ, ನಿರ್ದೇಶಕ
ಕಾಂತಾರ ಚಾಪ್ಟರ್-1 ಚಿತ್ರೀಕರಣದ ವೇಳೆ ಸಾವನ್ನು ಅಲ್ಲದಿದ್ದರೂ ಹಲವು ಸವಾಲುಗಳನ್ನು ಎದುರಿಸಿದೆವು. ಆದರೆ ತಂಡದ ಬೆಂಬಲದಿಂದ ಯಶಸ್ಸು ಸಾಧ್ಯವಾಯಿತು. ನಾವು ಇತಿಹಾಸ ಎಂದು ಪರಿಗಣಿಸುವ ದೈವಗಳ ಕುರಿತಾದ ಪುರಾಣದ ಕತೆಗಳನ್ನು ಜನರೆದುರಿಡುವುದು ನಮ್ಮ ಉದ್ದೇಶವಾಗಿತ್ತು. ಇದಕ್ಕೆ ದಿಗ್ಗಜರಿಂದ ಮೆಚ್ಚುಗೆ ಸಿಗುತ್ತಿರುವುದು ಸಂತೋಷ. ವೀಕ್ಷಕರಿಂದ ಸಿಗುತ್ತಿರುವ ಮೆಚ್ಚುಗೆ ನಮಗೆ ದೊಡ್ಡ ಪ್ರಶಸ್ತಿ. ಹಾಗಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳ ನಿರೀಕ್ಷೆಯಿಲ್ಲ. ನಮ್ಮ ಚಿತ್ರವನ್ನು ಪರಿಗಣಿಸುವುದು, ಬಿಡುವುದು ತೀರ್ಪುಗಾರರ ಕೆಲಸ.
ಕಾಂತಾರ ಚಾಪ್ಟರ್-1ಗೆ ಜನಸಾಮಾನ್ಯರಿಂದ ಹಿಡಿದು ಸಿನಿಲೋಕದ ದಿಗ್ಗಜ ನಟರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಲನಚಿತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಜಮೌಳಿ ನಿರ್ದೇಶನದೊಂದಿಗೆ ಕಾಂತಾರವನ್ನು ಹೋಲಿಸಲಾಗುತ್ತಿದೆ. ಆದರೆ ಅಷ್ಟೆಲ್ಲಾ ಹೊಗಳಿಸಿಕೊಳ್ಳಲು ನಾನಿನ್ನೂ ಬರೀ 5 ಚಿತ್ರಗಳನ್ನು ತೆರೆಮೇಲೆ ತಂದಿರುವವನು. ಅಷ್ಟೇ ಅಲ್ಲ, ಅನೇಕ ದಿಗ್ಗಜ ನಟರು, ನಿರ್ದೇಶಕರನ್ನು ನೋಡಿ ಸ್ಫೂರ್ತಿ ಪಡೆದು ಈ ಕ್ಷೇತ್ರಕ್ಕೆ ಕಾಲಿಟ್ಟಿರುವವನು. ಹೀಗಿರುವಾಗ ಸಿಗುತ್ತಿರುವ ಮೆಚ್ಚುಗೆಗಳು ಜವಾಬ್ದಾರಿಗಳಾಗಿ, ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸು ಬರುತ್ತದೆ.
ನಾನು ಸಿನಿಮಾ ಮಾಡಲು ನಿರ್ದಿಷ್ಟ ಶೈಲಿಯನ್ನೇನೂ ಅನುಸರಿಸುವುದಿಲ್ಲ. ಕಾಂತಾರದ ವಿಷಯದಲ್ಲೇ ನೋಡಿದರೆ, ಹಿಂದಿನದ್ದಕ್ಕೂ ಈಗಿನದ್ದಕ್ಕೂ ಬಹಳ ವ್ಯತ್ಯಾಸವಿದೆ. ಆದರೆ ಎರಡೂ ಚಿತ್ರಗಳಲ್ಲಿರುವ ಸಾಮಾನ್ಯ ಅಂಶವೆಂದರೆ ಅದು ದೈವ, ನಿಸರ್ಗ, ಮಾನವ ಮತ್ತು ಪರಿಸರದ ನಡುವಿನ ಸಂಘರ್ಷ. ಕಾಂತಾರದಲ್ಲಿ ಬರುವ ಪಂಜುರ್ಲಿ, ಗುಳಿಗದಂತಹ ದೈವಗಳು, ಅವುಗಳ ಕತೆಗಳನ್ನು ನಾವು ಪುರಾಣ ಎಂದುಕೊಳ್ಳುವುದಿಲ್ಲ. ಬದಲಿಗೆ, ಗತಿಸಿರುವ ಇತಿಹಾಸ ಎಂದು ಪರಿಗಣಿಸುತ್ತೇವೆ. ಎಲ್ಲಾ ದೈವಗಳ ಕತೆಗಳನ್ನು ಚಿಕ್ಕಂದಿನಿಂದಲೇ ಕೇಳುತ್ತಾ, ಮನೆಯಲ್ಲಿರುವ ದೈವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಅದೇ ಕತೆಗಳನ್ನು ಜನರ ಮುಂದೆ, ಯಾವುದೇ ರಾಜಕೀಯ, ಸಿದ್ಧಾಂತವಿಲ್ಲದೆ ಇಟ್ಟಿದ್ದೇವೆ. ನಿಜ ಹೇಳಬೇಕೆಂದರೆ, ನಮ್ಮ ಪಾಲಿಗದು ಸಿನಿಮಾ ಅಲ್ಲ, ಯುದ್ಧಕ್ಕೆ ಹೋಗಿಬಂದಂತೆ ಆಗಿತ್ತು. ತಾಂತ್ರಿಕ ತಂಡದವರಂತೂ ಯೋಧರಂತೆ ಕಾಣುತ್ತಿದ್ದರು.
ಸಾವಲ್ಲ, ಸವಾಲು ಎದುರಿಸಿದ್ದೆ:
‘ಕಾಂತಾರ ಚಿತ್ರೀಕರಣದ ವೇಳೆ ಸಾವನ್ನು ಹತ್ತಿರದಿಂದ ನೋಡಿದ್ದೆ’ ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ನೋಡಿದೆ. ಆದರೆ ನಾನು ಹೇಳಿದುದರ ಅರ್ಥ ಅದಲ್ಲ. ಈ ಸಿನಿಮಾದ ಚಿತ್ರೀಕರಣದ ವೇಳೆ ಹಲವು ಕಷ್ಟಗಳು ಎದುರಾಗಿದ್ದವು, ಕಠಿಣ ದೃಶ್ಯಗಳಿದ್ದವು ಹಾಗೂ ಅವುಗಳನ್ನು ಕೆಲ ಸ್ಥಳಗಳಲ್ಲಿ ಶೂಟ್ ಮಾಡುವುದು ಸವಾಲಾಗಿತ್ತು. ಮೊದಲ ದೃಶ್ಯದಿಂದ ಹಿಡಿದು ಕೊನೆಯ ದೃಶ್ಯದವರೆಗೆ ಎಲ್ಲವೂ ಕಷ್ಟಕರವಾಗಿತ್ತು. ಆದರೆ ನಮ್ಮ ಇಡೀ ತಂಡದ ಹಿಂದೆ ಒಂದು ಶಕ್ತಿಯಿದ್ದು, ಅದು ಎಲ್ಲರನ್ನು ಕಾಪಾಡುತ್ತಾ ಮುನ್ನಡೆಸುತ್ತಿತ್ತು. ಹೀಗಿದ್ದುದರಿಂದ, ಕಾಂತಾರದಂತಹ ಚಿತ್ರವನ್ನು ಮಾಡುವುದು ಅಷ್ಟು ಸುಲಭವಲ್ಲ ಎಂಬುದು ನನ್ನ ಮಾತಿನ ಅರ್ಥವಾಗಿತ್ತು.
ಕತೆಯ ವಿಷಯಕ್ಕೆ ಬಂದರೆ, ಮೊದಲ ಕಾಂತಾರ ಸರಳವಾಗಿತ್ತು. ತಪ್ಪು ಹಾದಿ ಹಿಡಿದಿದ್ದವನೊಬ್ಬ ಅದನ್ನು ಮನಗಾಣುತ್ತಾನೆ, ದೈವ ಆತನನ್ನು ಸರಿದಾರಿಗೆ ತರುತ್ತದೆ. ಆದರೆ ಈಗಿನ ಚಾಪ್ಟರ್-1ರಲ್ಲಿ ಬೆರ್ಮೆ ಎಂಬ ಪಾತ್ರವೇಕೆ ಬರುತ್ತದೆ? ಅದಕ್ಕೂ ರಾಜ ವಿಜಯೇಂದ್ರನಿಗೂ ಸಂಬಂಧವೇನು? ಪಾತ್ರಗಳ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ಸ್ಥಾಪಿಸಿ ಕಟ್ಟಿಕೊಡುವುದು ಕಷ್ಟದ ಕೆಲಸವಾಗಿತ್ತು. ಜತೆಗೆ, ಹಳೆಯ ಕಾಲದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದು ತಿಳಿಯದೇ ಇದ್ದುದರಿಂದ ಇನ್ನೂ ಕಷ್ಟವಾಯಿತು.
ತಂಡದ ಬೆಂಬಲವೇ ಬಲ:
ಇಡೀ ಚಿತ್ರವನ್ನು ನಿರ್ಮಿಸುವುದೇ ಒಂದು ಸವಾಲಾಗಿದ್ದರೂ, ನನ್ನಿಡೀ ತಂಡದ ಬೆಂಬಲದಿಂದಾಗಿ ಅದು ಸುಲಭವಾಯಿತು. ನನ್ನ ಪತ್ನಿ ಪ್ರಗತಿಯಂತೂ ಎರಡೆರಡು ಜವಾಬ್ದಾರಿಗಳನ್ನು ಹೊತ್ತಿದ್ದರು. ಒಂದು ಕಡೆ ಪರಿವಾರವನ್ನು ನೋಡಿಕೊಳ್ಳುತ್ತಾ, ಇನ್ನೊಂದು ಕಡೆ ನೂರಾರು ಜನರ ವಸ್ತ್ರ ವಿನ್ಯಾಸದ ಕೆಲಸ ಮಾಡುತ್ತಿದ್ದರು. 4 ದಿನ ಚಿತ್ರೀಕರಣವಾದ ಬ್ರಹ್ಮಕಲಶ ಹಾಡನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ, ಅದರಲ್ಲಿ ಎಷ್ಟೆಲ್ಲಾ ಉಡುಗೆಗಳನ್ನು ಬಳಸಲಾಗಿದೆ. ಅವುಗಳನ್ನು ಸಿದ್ಧಪಡಿಸಲು ದೇವಸ್ಥಾನಗಳ ವಿನ್ಯಾಸಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಳದ ಅಧ್ಯಯನ ಮಾಡಿದ್ದಾರೆ. ಇದರ ಹೊರತಾಗಿ ವಿಭಿನ್ನ ಸೆಟ್ ನಿರ್ಮಿಸುವುದು, ಲೈಟಿಂಗ್ ವ್ಯವಸ್ಥೆ ಮಾಡುವುದು, ದೃಶ್ಯಕ್ಕೆ ಚ್ಯುತಿ ಬರದಂತೆ ಚಿತ್ರೀಕರಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ನನ್ನ ತಂಡ ಒಟ್ಟಾಗಿ ಮಾಡಿತು. ಕೊನೆಕೊನೆಗಂತೂ 3-4 ತಿಂಗಳುಗಳ ಕಾಲ ನಮ್ಮಿಡೀ ತಂಡ ಸರಿಯಾಗಿ ಮಲಗುತ್ತಲೂ ಇರಲಿಲ್ಲ.
ಅತ್ತ ನಿರ್ಮಾಣ ಸಂಸ್ಥೆ ಹೊಂಬಾಳೆಯ ಬಗ್ಗೆ ಹೇಳುವುದಾದರೆ, ಅವರು ಕೇವಲ ಹಣ ಹೂಡಿ ಸುಮ್ಮನೆ ಕೂರಲಿಲ್ಲ. ಬದಲಿಗೆ, ಒಳ್ಳೆಯ ವಿಷಯ ಆಯ್ಕೆ ಮಾಡಿ, ಚಿತ್ರ ನಿರ್ಮಾಣದ ಪ್ರತಿ ಹಂತದಲ್ಲಿ ಜತೆ ನಿಂತಿತ್ತು. ಆ ಸಂಸ್ಥೆಗೆ ದೈವ, ದೇವರು, ಸಂಸ್ಕೃತಿ, ಜಾನಪದಗಳ ಬಗ್ಗೆ ಸಿನಿಮಾ ಮಾಡುವುದರಲ್ಲಿ ವಿಶೇಷ ಆಸಕ್ತಿ ಇರುವುದರಿಂದಲೇ ಕಾಂತಾರ ನಿರ್ಮಾಣಕ್ಕೆ ಸೂಕ್ತ ಎಂದು ಪರಿಗಣಿಸಿದ್ದೆವು.
ಸ್ತ್ರೀ ಪಾತ್ರಕ್ಕೂ ಪ್ರಧಾನ್ಯತೆ:
ಇಂದು ಸಮಾಜದಲ್ಲಿ ನೋಡಿದರೆ, ಸ್ತ್ರೀಯರು ಮತ್ತು ಪುರುಷರು ಸಮಾನ ಶಕ್ತಿಯುಳ್ಳವರಾಗಿದ್ದಾರೆ. ನಟನೆ, ನಿರ್ದೇಶನ, ಬರವಣಿಗೆಯಂತಹ ಕ್ಷೇತ್ರಗಳಲ್ಲೂ ಸಮಾನವಾಗಿ ತೊಡಗಿಸಿಕೊಂಡಿದ್ದಾರೆ. ಪುರಾಣದಲ್ಲೂ ಬ್ರಹ್ಮ, ವಿಷ್ಣು, ಮಹೇಶ್ವರರ ಮೇಲೆ ದೇವಿಯನ್ನು ಶಕ್ತಿಯಾಗಿ ತೋರಿಸಲಾಗಿದೆ. ಇದನ್ನೇ ಅನುಸರಿಸಿಕೊಂಡು ಕಾಂತಾರ ಸೇರಿದಂತೆ ನನ್ನೆಲ್ಲಾ ಚಿತ್ರಗಳಲ್ಲೂ ಮಹಿಳೆಯರಿಗೆ ಪ್ರಾಧಾನ್ಯತೆ ನೀಡುತ್ತೇನೆ.
ರಾಷ್ಟ್ರೀಯ ಪ್ರಶಸ್ತಿಯ ನಿರೀಕ್ಷೆಯಿಲ್ಲ:
ನಾನು ಮೊದಲಿನಿಂದಲೂ ಪಾಲಿಸಿಕೊಂಡು ಬರುತ್ತಿರುವ ನಿಯಮವೆಂದರೆ, ಉತ್ಸಾಹ ಮತ್ತು ನಿರೀಕ್ಷೆಗಳು ಇರಬಾರದು. ಪ್ರಶಸ್ತಿಗಳನ್ನೂ ನಾವು ನಿರೀಕ್ಷಿಸಲಾಗದು. ಕಾರಣ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡುವುದು ತೀರ್ಪುಗಾರರ ಕೆಲಸ. ಅ.1ರಂದು ಕಾಂತಾರದ ಪ್ರೀಮಿಯಂ ಪ್ರದರ್ಶನ ನೀಡುವ ಮೂಲಕ ನಾವದನ್ನು ಜನರಿಗೆ ಅರ್ಪಿಸಿಯಾಗಿದೆ. ಜತೆಗೆ, ನಮ್ಮಂತೆ ಇನ್ನೂ ಅನೇಕ ಕಲಾವಿದರು, ಚಿತ್ರಗಳು ಇವೆ. ನಾವಂತೂ ನಮ್ಮ ಕೆಲಸ ಮಾಡಿಯಾಯಿತು. ಅದಕ್ಕೆ ಪ್ರತಿಯಾಗಿ ಜನರು ಪ್ರಶಸ್ತಿಗಿಂತ ದೊಡ್ಡದೊಡ್ಡ ಬಹುಮಾನವನ್ನು ಪ್ರಶಂಸೆಗಳ ರೂಪದಲ್ಲಿ ಕೊಡುತ್ತಿದ್ದಾರೆ.