ಫುಡ್‌ ಸ್ಟೋರೀಸ್‌ : ಮುದುಕ ಮತ್ತು ಲೇಡಿ ಸಪ್ಲೈಯರ್‌

Published : Oct 12, 2025, 12:25 PM IST
A waiter carries two cups of Turkish coffee at a coffee shop in Istanbul (Image/Reuters)

ಸಾರಾಂಶ

ಅತ್ತ ಮಧ್ಯಾಹ್ನವೂ ಅಲ್ಲ, ಇತ್ತ ಬೆಳಗ್ಗೆಯೂ ಅಲ್ಲ ಎಂಬ ಹೊತ್ತಲ್ಲಿ ಆ ಮುದುಕ ಮುಂಬೈನ ಜುಹೂ ಬೀಚ್ ಸಮೀಪದ ರೆಸ್ಟೊರೆಂಟ್‌ಗೆ ಬರುತ್ತಿದ್ದ. ಸಿಡುಕು ಮುಖ, ನಿದ್ದೆಗೆಟ್ಟ ಕಣ್ಣು, ಸ್ಥೂಲ ಶರೀರದ ಆ ಆಸಾಮಿ ಬಂದ ಕೂಡಲೆ ಹೊಟೇಲಿನ ವಾತಾವರಣದಲ್ಲಿ ಅಸ್ಪಷ್ಟ ಪ್ರಕ್ಷುಬ್ಧತೆ ಆವರಿಸುತ್ತಿತ್ತು.

ಅತ್ತ ಮಧ್ಯಾಹ್ನವೂ ಅಲ್ಲ, ಇತ್ತ ಬೆಳಗ್ಗೆಯೂ ಅಲ್ಲ ಎಂಬ ಹೊತ್ತಲ್ಲಿ ಆ ಮುದುಕ ಮುಂಬೈನ ಜುಹೂ ಬೀಚ್ ಸಮೀಪದ ರೆಸ್ಟೊರೆಂಟ್‌ಗೆ ಬರುತ್ತಿದ್ದ. ಸಿಡುಕು ಮುಖ, ನಿದ್ದೆಗೆಟ್ಟ ಕಣ್ಣು, ಸ್ಥೂಲ ಶರೀರದ ಆ ಆಸಾಮಿ ಬಂದ ಕೂಡಲೆ ಹೊಟೇಲಿನ ವಾತಾವರಣದಲ್ಲಿ ಅಸ್ಪಷ್ಟ ಪ್ರಕ್ಷುಬ್ಧತೆ ಆವರಿಸುತ್ತಿತ್ತು. ಹೊಟೇಲಿನ ಕೆಲಸಗಾರರು ಅಪಾಯದ ಮುನ್ಸೂಚನೆ ಹೊತ್ತವರಂತೆ ಓಡಾಡುತ್ತಿದ್ದರು. ಆ ಮುದುಕ ಸಮುದ್ರಕ್ಕೆ ಅಭಿಮುಖವಾಗಿದ್ದ ಟೇಬಲ್‌ 7ರಲ್ಲಿ ಆಸೀನನಾಗುತ್ತಿದ್ದ. ಹೊಟೇಲ್ ಮ್ಯಾನೇಜ್‌ಮೆಂಟ್‌ ಆದೇಶದಂತೆ ಆ ಸೀಟು ಆತನಿಗೇ ಮೀಸಲಾಗಿತ್ತು.

ನಿಲೀಮಾ ಎಂಬ ಹೆಸರಿನ ಲೇಡಿ ಸಪ್ಲೈಯರ್‌ ಮಂದಹಾಸ ಬೀರುತ್ತ ಆತನ ಟೇಬಲ್‌ ಸಮೀಪಿಸಿ ಅಂದಿನ ತಿನಿಸುಗಳ ಪಟ್ಟಿಯನ್ನು ಆತನ ಮುಂದೆ ಇಡುತ್ತಿದ್ದಳು. ಆತ ಸಿಡುಕುತ್ತ ಪೂರಿ ಸಾಗು ಕಡೆ ಬೊಟ್ಟು ಮಾಡಿ,‘ಕ್ವಿಕ್‌..’ ಅನ್ನುತ್ತಿದ್ದ. ಕೆಲವೇ ಕ್ಷಣದಲ್ಲಿ ಆತನ ಮುಂದೆ ಬಂಗಾರದ ಬಣ್ಣದ ಪೂರಿ, ಸಾಗು ಇರುತ್ತಿತ್ತು. ಆ ದಿನ ಚೆನ್ನಾಗಿದ್ದರೆ ಆತ ಪೂರಿಯನ್ನು ಸಾಗುವಿನಲ್ಲದ್ದಿ ಮಗುವಿನಂತೆ ತಿನ್ನುತ್ತಿದ್ದ. ಕೊನೆಯ ತುತ್ತು ಗಂಟಲಲ್ಲಿ ಇಳಿಯುವ ಮೊದಲೇ ಬಿಸಿ ಬಿಸಿ ಮಸಾಲೆ ಚಾಯ್‌ ಆತನ ಟೇಬಲ್‌ನಲ್ಲಿರುತ್ತಿತ್ತು. ಸಂತೃಪ್ತಿಯಿಂದ ಚಹಾ ಹೀರಿ ಹೊರನಡೆಯುತ್ತಿದ್ದ. ವಾರದಲ್ಲಿ ಒಮ್ಮೆಯೂ ಎರಡು ದಿನವೋ ಇಂಥಾದ್ದನ್ನು ನಿಲೀಮಾ ನೋಡುತ್ತಿದ್ದಳು.

ಉಳಿದ ದಿನಗಳಲ್ಲಿ ಆತ ಪೂರಿಯನ್ನು ಸ್ಪರ್ಶಿಸಿ ಪ್ಲೇಟನ್ನು ಜೋರಾಗಿ ಆಚೆ ತಳ್ಳುತ್ತಿದ್ದ, ‘ಇದೇನು, ಸತ್ತ ಇಲಿಯಂತೆ ತಣ್ಣಗಿದೆ..’ಎಂದು ಗರ್ಜಿಸುತ್ತಿದ್ದ. ಆಕೆ ಆ ಪ್ಲೇಟನ್ನೆತ್ತಿ ಮತ್ತೆ ಬಿಸಿ ಪೂರಿ, ಫ್ರೆಶ್‌ ಸಾಗು ತರುತ್ತಿದ್ದಳು. ಮಣಮಣ ಬೈಯುತ್ತಲೇ ತಿಂದು ಟೀಯತ್ತ ನಿರ್ಲಕ್ಷದಿಂದ ನೋಡಿ, ‘ಟೀ ತಣ್ಣಗಾಗಿದೆ.. ಇದನ್ನು ತಿಪ್ಪೆಗೆ ಚೆಲ್ಲಿ ಬಾ’ ಎಂದು ಬೈಯುತ್ತಿದ್ದ. ಆಕೆ ಸಹನೆಯಿಂದ ಬಿಸಿ ಟೀ ತಂದುಕೊಡುತ್ತಿದ್ದಳು. ‘ನನ್ನ ಕರುಳು ಸುಟ್ಟು ಹೋಗಬೇಕು, ಅಷ್ಟು ಬಿಸಿ ಟೀ ಬೇಕು ನಂಗೆ..’ ಅಂತ ಅರಚಾಡುತ್ತಿದ್ದ.

ಇದು ಒಂದಲ್ಲ, ಎರಡಲ್ಲ. ಕೆಲವು ವರ್ಷಗಳಿಂದ ನಿಲೀಮಾ ನೋಡಿಕೊಂಡು ಬಂದ ದಿನಚರಿ. ಅವಳಿಲ್ಲ ಎಂದರೆ ಹೊಟೇಲಿನಲ್ಲಿದ್ದ ಇತರರಿಗೆ ಮುದುಕ ಬಂದಾಗ ಜೀವ ಬಾಯಿಗೆ ಬಂದ ಹಾಗಿರುತ್ತಿತ್ತು.

ಅಂದೂ ಆಕೆ ಎಂದಿನಂತೆ ಸಮುದ್ರದ ಬದಿಯಲ್ಲಿದ್ದ ಟೇಬಲ್‌ 7 ಅನ್ನು ಸ್ವಚ್ಛಗೊಳಿಸಿ, ಮುದುಕನ ಬರವನ್ನು ಎದುರು ನೋಡುತ್ತಿದ್ದಳು. ನಡು ಮಧ್ಯಾಹ್ನವಾದರೂ ಆತನ ಸುಳಿವಿಲ್ಲ. ಆ ರಾತ್ರಿಯಿಡೀ ಯೋಚನೆಗಿಟ್ಟುಕೊಂಡಿತು. ಅವರಿಗೆ ಏನಾಗಿರಬಹುದು, ಅಷ್ಟಕ್ಕೂ ಆ ವಿಲಕ್ಷಣ ಮುದುಕ ಯಾರು, ಆತನ ಆ ಸ್ವಭಾವದ ಹಿನ್ನೆಲೆ ಏನು.. ಎಷ್ಟು ಯೋಚಿಸಿದರೂ ವಿಷಯ ತಿಳಿಯಲಿಲ್ಲ.

ಮರುದಿನವೂ ಇಲ್ಲ, ಇಡೀ ವಾರ ಮುದುಕನ ಅನುಪಸ್ಥಿತಿಯಲ್ಲಿ ಟೇಬಲ್‌ ನಂಬರ್‌ 7 ಮಂಕಾಗಿತ್ತು. ‘ರಿಸರ್ವ್ಡ್‌’ ಅನ್ನೋ ಬೋರ್ಡ್‌ ಅಣಕಿಸುವಂತಿತ್ತು. ಅವಳು ಆ ಬೋರ್ಡ್‌ ಪಕ್ಕಕ್ಕೆ ಸರಿಸಿ ಅಲ್ಲಿಂದ ಕಾಣುತ್ತಿದ್ದ ನಡುಹೊತ್ತಿನ ಸಮುದ್ರವನ್ನೇ ದಿಟ್ಟಿಸುತ್ತಿದ್ದಳು. ಅಂಥಾದ್ದೊಂದು ಹೊತ್ತಲ್ಲಿ ಒಬ್ಬ ವ್ಯಕ್ತಿ ಆಕೆಗೆ ಒಂದು ಬಾಕ್ಸ್‌ ಮತ್ತೊಂದು ಕವರ್‌ ಕೊಟ್ಟ.

ಅದರಲ್ಲೊಂದು ಪತ್ರ.

‘ಮಗಳೇ,

ನಾನು ಎಡ್ವರ್ಡ್‌. ಹೀಗಂದರೆ ನಿನಗೆ ತಿಳಿಯಲಿಕ್ಕಿಲ್ಲ. ನೀನು ಕೆಲಸ ಮಾಡುವ ಹೊಟೇಲಿಗೆ ಬರುತ್ತಿದ್ದ ಸಿಡುಕು ಮೂತಿ ಮುದುಕ. ನಾನೊಬ್ಬ ರಿಟೈರ್ಡ್‌ ಮಿಲಿಟ್ರಿ ಆಫೀಸರ್‌. ನನ್ನ ಸಿಡುಕು ಸ್ವಭಾವದಿಂದ ನನ್ನ ಹೆಂಡತಿ, ಮಕ್ಕಳನ್ನೆಲ್ಲ ದೂರ ಮಾಡಿಕೊಂಡೆ. ಒಂದಿಬ್ಬರು ಸ್ನೇಹಿತರಷ್ಟೇ ನನಗಿದ್ದದ್ದು. ನನ್ನ ಈ ಸ್ವಭಾವವನ್ನು ನೋಡಿಯೂ ನನ್ನ ಕೊನೆಯ ದಿನದವರೆಗೆ ಬೇಸರಿಸದೇ ಸೇವೆ ಮಾಡಿದವಳು ನೀನೊಬ್ಬಳೇ. ನಿನ್ನ ಈ ಪ್ರೀತಿಗೆ ಏನು ಕೊಟ್ಟರೂ ಕಡಿಮೆಯೇ.

ನೀನೀಗ ಹೊಟೇಲಿನಲ್ಲಿ ನನನ್ನು ಮಿಸ್‌ ಮಾಡಿಕೊಳ್ಳುತ್ತೀಯೋ ಇಲ್ಲವೋ ಗೊತ್ತಿಲ್ಲ, ನಾನಿಲ್ಲದ ನನ್ನ ಮನೆ ಈಗ ನಿನ್ನದೇ. ಅಲ್ಲೂ ಕಿಟಕಿ ಪಕ್ಕ ಒಂದು ಟೇಬಲ್‌ ಇದೆ. ಅಪ್ಪಿತಪ್ಪಿ ಈ ಮುದುಕನ ನೆನಪಾದರೆ ನೀನಲ್ಲಿ ಒಂದು ಗಳಿಗೆ ಕೂತು ಈ ಮುದುಕನನ್ನು ನೆನೆಸಿ ಮುಗುಳ್ನಗಬಹುದು.

- ಇಂತೀ ಪ್ರೀತಿಯ

ಎಡ್ವರ್ಡ್‌ ನೊರೋನ್ಹಾ ಎಂ ಕೆ’

ಆ ಬಾಕ್ಸ್‌ನಲ್ಲಿ ಮುದುಕನ ಆಸ್ತಿ ಪತ್ರವೂ ಇತ್ತು.

ಅಂದು ಸುಮಾರು ಹೊತ್ತು ನಿಲೀಮಾ ಟೇಬಲ್‌ 7 ನಲ್ಲಿ ದಿಕ್ಕೇ ತೋಚದಂತೆ ಕೂತು ಸಮುದ್ರದ ನೀಲಿಯನ್ನೇ ದಿಟ್ಟಿಸುತ್ತಿದ್ದಳು.

ನಿಧಾನಕ್ಕೆ ಅವಳ ಮುಖದಲ್ಲಿ ಮುಗುಳ್ನಗೆ ಮರೆಯಾಗಿ ಸಿಡುಕು ಮೂಡತೊಡಗಿತು.

PREV
Read more Articles on

Recommended Stories

ಹ್ಯಾಂಡ್‌ಶೇಕ್ ಮಾಡದಿರುವುದೂ ಒಂದು ಅಸ್ತ್ರ! ಹ್ಯಾಂಡ್‌ಶೇಕ್ ಶುರುವಾಗಿದ್ದು ಹೇಗೆ? ಏಕೆ?
ಕತ್ತಲೆಯಲ್ಲಿ ಕತ್ತಲೆಯನ್ನೇ ಕಂಡ ಡಾ ಹೇಮಾ ಸಾನೆ