ಹ್ಯಾಂಡ್‌ಶೇಕ್ ಎಂಬುದು ಸ್ನೇಹ ಬೆಳೆಸುವುದಕ್ಕೆ, ಬಾಂಧವ್ಯ ವೃದ್ಧಿಸುವುದಕ್ಕೆ ಮೀಸಲಾಗಬೇಕಿಲ್ಲ. ಹ್ಯಾಂಡ್‌ಶೇಕ್ ಮಾಡದೆ ಅದನ್ನು ಒಂದು ಅಸ್ತವಾಗಿ ಕೂಡ ಬಳಸಬಹುದು, ಸೊಕ್ಕು ಮೆರೆವ ಶತ್ರು ದೇಶದ ಆಟಗಾರರಿಗೆ ತಕ್ಕ ಪಾಠ ಕಲಿಸುವ ಸಾಧನ ಕೂಡ ಮಾಡಿಕೊಳ್ಳಬಹುದು. ಭಾರತ- ಪಾಕಿಸ್ತಾನ ಕ್ರಿಕೆಟ್ ತಂಡಗಳ ಹ್ಯಾಂಡ್ ಶೇಕ್ ವಿವಾದದ ಹಿನ್ನೆಲೆಯಲ್ಲೊಂದು ಲೇಖನ
• ಎಂ.ಎಲ್. ಲಕ್ಷ್ಮೀಕಾಂತ್
ಮುದುಕ. ಹುಚ್ಚ, ಹೆದರಿ ಮುದುರಿ ಕುಳಿತಿರುವ ನಾಯಿ.. ಹೀಗಂತ
ಸ್ನೇಹಿತರಿಗೆ ಹೇಳಿದರೂ ಅವರಿಗೆ
ಪಿತ್ತ ನೆತ್ತಿಗೇರುವಷ್ಟು ಕೋಪ ಬಂದುಬಿಡುತ್ತದೆ. ಇನ್ನು
ಶತ್ರುವಿನ ಬಗ್ಗೆ ಈ ರೀತಿ ಬಡಬಡಾಯಿಸಿದರೆ? ಕತೆ ಮುಗಿದೇಹೋಯಿತು. ಕೆರಳಿಸುವ ಇಂತಹ ಪದಪುಂಜಗಳನ್ನೆಲ್ಲಾ ಹಿಂದೊಮ್ಮೆ ಪ್ರಯೋಗಿಸಿದ್ದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ವಿಶ್ವದ ದೊಡ್ಡಣ್ಣ', ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ! ನಾಲಿಗೆಯಲ್ಲೇ ರಾಕೆಟ್ ಬಿಡುವ ವಾಗ್ದಾಳಿಕೋರ ಟ್ರಂಪ್ ಸುಮ್ಮನಿದ್ದವರನ್ನೇ ಬಿಡದ ಆಸಾಮಿ. ಇನ್ನು ಕೆಣಕಿದವರನ್ನು ಬಿಡೋದುಂಟೆ? ಶುರುವಾಯಿತು ನೋಡಿ: ಕಿಮ್ ಜಾಂಗ್ ಕುಳ್ಳ, ಧಡಿಯ, ರಾಕೆಟ್‌ಮ್ಯಾನ್. ರೋಗಹಿಡಿದ ನಾಯಿ ಎಂದೆಲ್ಲಾ ಮಾಂಜಾ ಕೊಟ್ಟಿದ್ದರು. 2018ರ ಮೊದಲಾರ್ಧದಲ್ಲಿ ಈ ಇಬ್ಬರೂ ನಾಯಕರ ಬೀದಿ ಜಗಳ ನೋಡಿ 'ಅಯ್ಯೋ' ಎಂದವರಿಗಿಂತ ಖುಷಿ ಪಟ್ಟ ಜಾಗತಿಕ ನಾಯಕರೇ ಹೆಚ್ಚು. ಒಂದು ಹಂತದಲ್ಲಿ ಉತ್ತರ ಕೊರಿಯಾವನ್ನು ನಾಶ ಮಾಡಿಬಿಡುತ್ತೇನೆ ಎಂದು ಟ್ರಂಪ್ ಧಮಕಿ ಹಾಕಿದ್ದೂ ಆಯಿತು. ಅಮೆರಿಕ, ಜತೆಗೆ ದಕ್ಷಿಣ ಕೊರಿಯಾವನ್ನೂ ಅಣ್ವಸ್ತ್ರ ಬಳಸಿ ಉಡೀಸ್ ಮಾಡಿಬಿಡುತ್ತೇನೆ ಎಂದು ಕಿಮ್ ಕೂಡ ಅಬ್ಬರಿಸಿದ್ದೂ ಆಯಿತು. ಉತ್ತರ ಕೊರಿಯಾ ಅಣ್ವಸ್ತ್ರ ಹೊಂದುತ್ತಿದೆ ಎಂಬ ವಿಚಾರ ಎರಡೂ ದೇಶಗಳನ್ನು ಯುದ್ಧದ ಅಂಚಿಗೆ ತಂದು ನಿಲ್ಲಿಸಿತ್ತು. ಅದೇನಾಯಿತೋ, ಕೆಲವೇ ವಾರಗಳಲ್ಲಿ ಚಿತ್ರಕತೆಯೇ ಬದಲು. ಸಿಂಗಾಪುರದಲ್ಲಿ ಇಬ್ಬರೂ ನಾಯಕರು ಮುಖಾಮುಖಿಯಾದರು. ಒಬ್ಬರನ್ನೊಬ್ಬರನ್ನು ನೋಡುತ್ತಿದ್ದಂತೆ ಇಬ್ಬರ ಬಲಗೈಗಳು ಮುಂದೆ ಬಂದವು. ಕುಲುಕಿದವು. ಅಷ್ಟೆ, ಇಬ್ಬರೂ ಎಲ್ಲವನ್ನೂ ಮರೆತರು. ಟ್ರಂಪ್ -ಕಿಮ್ ಹ್ಯಾಂಡ್‌ಶೇಕ್ ಮಾಡುತ್ತಿರುವ ಫೋಟೋಗಳು ಜಗತ್ತಿನ ಉದ್ದಗಲಕ್ಕೂ ಪಸರಿಸಿದವು. ಅದು ವಿಶ್ವಕಂಡ ಪ್ರಮುಖ ಹ್ಯಾಂಡ್‌ಶೇಕ್‌ಗಳಲ್ಲಿ ಒಂದು!
ಇಬ್ಬರ ನಡುವಿನ ಸಂಭಾಷಣೆಗೆ ಶ್ರೀಕಾರ
ಇಬ್ಬರು ಗೆಳೆಯರು ಅಪರೂಪಕ್ಕೆ ಭೇಟಿಯಾದಾಗ ಅವರಿಗೆ ಅರಿವಿಲ್ಲದಂತೆಯೇ ಕೈಗಳು ಮುಂದೆ ಬಂದು ಕುಲುಕಲಾರಂಭಿಸುತ್ತವೆ. ವಿದಾಯ ಹೇಳುವಾಗ ಮತ್ತದೇ ಪ್ರಕ್ರಿಯೆ. ಎಷ್ಟು ಹೊತ್ತು ಎಂಬುದು ಸಂದರ್ಭ, ಸನ್ನಿವೇಶದ ಮೇಲೆ ಅವಲಂಬಿತ.
ಬಿಸಿನೆಸ್ ಡೀಲ್‌ಗಳು ಶುರುವಾಗುವುದು, ಸಂಪನ್ನಗೊಳ್ಳುವುದೂ ಹ್ಯಾಂಡ್‌ಶೇಕ್‌ಗಳಿಂದಲೇ, ಎಂದಿಗೂ ಭೇಟಿಯಾಗಿಲ್ಲದವರು ಮೊದಲ ಬಾರಿಗೆ ಮುಖಾಮುಖಿಯಾದಾಗ ಮಾತಿಗೂ ಮುನ್ನವೇ ಆರಂಭವಾಗುವ ಮೌನ ಭಾಷೆ ಹ್ಯಾಂಡ್‌ಶೇಕ್. ಪಂದ್ಯಾವಳಿಗಳ ಆರಂಭ, ಅಂತ್ಯವಾಗುವುದು ಹ್ಯಾಂಡ್‌ಶೇಕ್ ಮೂಲಕವೇ. ವಿಶ್ವ ನಾಯಕರು ಹ್ಯಾಂಡ್‌ಶೇಕ್ ಇಲ್ಲದೆ ಭೇಟಿಯಾಗುವುದನ್ನು ಊಹಿಸಲೂ ಆಗುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪುಗೆಯ ರಾಜತಾಂತ್ರಿಕತೆಯನ್ನು ಜಗತ್ತಿನಾದ್ಯಂತ ಪಸರಿಸಿದ್ದರೂ, ಅದು ಕೂಡ ಬಹುತೇಕ ಸಂದರ್ಭಗಳಲ್ಲಿ ಹ್ಯಾಂಡ್‌ಶೇಕ್ ಮೂಲಕವೇ ಆರಂಭವಾಗುತ್ತದೆ.
ಇಂತಿಪ್ಪ ಹ್ಯಾಂಡ್‌ಶೇಕ್, ಕೋವಿಡ್ ತುತ್ತ ತುದಿಯಲ್ಲಿದ್ದಾಗ 'ಶೇಕ್' ಆಗಿಬಿಟ್ಟಿತ್ತು. ವಿಶ್ವ ನಾಯಕರು ಸಾಮಾಜಿಕ ಅಂತರ ಕಾಯ್ದುಕೊಂಡು ಭಾಷಣ ಮಾಡಿದರೂ, ಅದು ಮುಗಿದ ಖುಷಿಯಲ್ಲಿ ಕೋವಿಡನ್ನೇ ಮರೆತು ಪರಸ್ಪರ ಕೈಕುಲುಕಿ, ಬಳಿಕ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ ಘಟನೆಗಳೂ ನಡೆದವು. ಹ್ಯಾಂಡ್‌ಶೇಕ್ ಮಾಡುವುದೇ ಅಪರಾಧ ಎನ್ನುವ ರೀತಿ. ಕೋವಿಡ್ ಆರಂಭದ ದಿನಗಳಲ್ಲಿ ಹ್ಯಾಂಡ್‌ಶೇಕ್ ಮಾಡಿ ವೈರಸ್
ಅಂಟಿಸಿಕೊಂಡವರೂ ಇದ್ದಾರೆ. ಬೀದಿ ನಾಯಿಗಳಿಗೆ ರಸ್ತೆಗಳಲ್ಲಿ ಮಧ್ಯರಾತ್ರಿ ಬಳಿಕ ಒಬ್ಬಂಟಿಯಾಗಿ ಬೈಕ್ ಸವಾರ ಸಿಕ್ಕರೆ ಹೇಗೋ, ಹಾಗೆಯೇ ಹ್ಯಾಂಡ್‌ಶೇಕ್ ಎಂಬುದು ವೈರಸ್‌ಗಳಿಗೆ ಒಂದು ರೀತಿ ಭಾಳ ಇಷ್ಟ. ಕೈಕುಲುಕುವುದರಿಂದ ಕೋವಿಡ್ ಹಬ್ಬುತ್ತದೆ ಎಂದು ಹೇಳಿದ್ದೇ ತಡ, ವಿಶ್ವಮಟ್ಟದಲ್ಲಿ ಹ್ಯಾಂಡ್‌ಶೇಕ್ ಪರಿಪಾಠವೇ ನಿಂತುಹೋಯಿತು. ಪರಸ್ಪರ ಕಾಲು ಡಿಕ್ಕಿ ಹೊಡೆಸಿಕೊಳ್ಳುವ, ಮೊಣಕೈಗಳನ್ನು ಸಂಧಿಸುವ ಮೂಲಕ ಶುಭಾಶಯ ಅಥವಾ ವಿದಾಯ ಹೇಳುವ ಅನ್ವೇಷಣೆಗಳೆಲ್ಲಾ ಹೊರಬಂದವು. ಇನ್ನು ಹ್ಯಾಂಡ್‌ಶೇಕ್ ಯುಗ ಬಹುಶಃ ಮುಗಿದೇ ಹೋಯಿತು ಎಂದು ಅಮೆರಿಕದಿಂದ ಆಸ್ಟ್ರೇಲಿಯಾದವರೆಗೂ ಹಲವು ತಜ್ಞರು ಭವಿಷ್ಯ ಹೇಳತೊಡಗಿದರು. ಆದರೆ ಅದೆಲ್ಲಾ ನಿಜವಾಗಲಿಲ್ಲ.
ಶುರುವಾಗಿದ್ದು ಹೇಗೆ?
ಹ್ಯಾಂಡ್‌ಶೇಕ್ ಇತಿಹಾಸ ಕೆದಕುತ್ತಾ ಹೋದರೆ ಕತೆ ಗ್ರೀಸ್‌ಗೆ ಕರೆದೊಯ್ಯುತ್ತದೆ. ಪುರಾತನ ಕಾಲದಲ್ಲಿ ಜನರು ಆಯುಧಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು. ದೇಹದ ಎಡಭಾಗದಲ್ಲಿ ಸೊಂಟಕ್ಕೆ ಖಡ್ಗ ಸಿಕ್ಕಿಸಿಕೊಳ್ಳುವುದು, ಅಪಾಯ ಎದುರಾದಾಗ ಬಲಗೈನಿಂದ ಖಡ್ಗ ಎಳೆದು ದಾಳಿ ಮಾಡುವುದು ವಿಧಾನ. ಥೇಟ್ ರಾಜರ ಆಳ್ವಿಕೆಯಲ್ಲಿದ್ದ ಪದ್ದತಿ. ಅಂತಹ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯನ್ನು ಮುಖಾಮುಖಿಯಾಗಿ, ಮಾತನಾಡುವುದು ಹೇಗೆ? ಆತ ಎದುರಿದ್ದವನನ್ನು ಹೇಗೆ ತಾನೆ ನಂಬುತ್ತಾನೆ? ಆತ
ಕೊಂದುಬಿಟ್ಟರೆ? ಅಂತಹ ಸಂದೇಹಗಳಿಗೆಲ್ಲಾ ಉತ್ತರವಾಗಿ ಕಂಡಿದ್ದು- ಪರಸ್ಪರ ಕೈ ಚಾಚಿ ಕೈ ಹಿಡಿದುಕೊಂಡು ಮಾತನಾಡುವ ಅಭ್ಯಾಸ.
ದೇಹದ ಎಡಭಾಗದಲ್ಲಿ ಖಡ್ಗ ಇದ್ದಾಗ ವ್ಯಕ್ತಿ ಬಲಗೈಯನ್ನು ಮುಂದೆ ನೀಡುತ್ತಾನೆ ಎಂದರೆ, ಅದು ಶಾಂತಿಯ ಪ್ರಸ್ತಾಪ ಎಂದು ಜನರು ನಂಬತೊಡಗಿದರು. ಎದುರಿಗಿದ್ದ ವ್ಯಕ್ತಿಯ ಹಸ್ತವನ್ನು ಹಿಡಿದುಕೊಂಡಾಗ ದಾಳಿ ಮಾಡುವ ಪ್ರಮೇಯವೇ ಬರುವುದಿಲ್ಲ ಎಂಬ ವಿಶ್ವಾಸ ಇಮ್ಮಡಿಯಾಯಿತು. ಅದು ಆಗ ಶಾಂತಿಯ ವಿಧಾನವಾಗಿ ಜನಪ್ರಿಯವಾಯಿತು. ಕಾಲಾನಂತರದಲ್ಲಿ ಯುರೋಪ್‌ಗೂ ಇದು ವಿಸ್ತರಣೆಯಾಯಿತು. ಖಡ್ಗವನ್ನೇನೋ ಎಡಭಾಗದಲ್ಲಿ ಸಿಕ್ಕಿಸಿಕೊಂಡಿರುತ್ತಾರೆ ನಿಜ. ಆದರೆ ಬಲಗೈನಲ್ಲಿ ತುಂಬು ತೋಳಿನ ಅಂಗಿ ರೀತಿಯ ವಸ್ತ್ರದ ಒಳಗೆ ಚಾಕು ಇಟ್ಟುಕೊಂಡು ಅದನ್ನು ಬಳಸಿ ದಾಳಿ ಮಾಡಿಬಿಟ್ಟರೆ? ಆ ಸಂದೇಹವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಬಂದಿದ್ದೇ ಶೇಕ್. ಅರ್ಥಾತ್ ಹ್ಯಾಂಡ್‌ಶೇಕ್. ಇಬ್ಬರು ವ್ಯಕ್ತಿಗಳು ಪರಸ್ಪರ ನಂಬಿಕೆಯಿಂದ ಕೈಹಿಡಿದು, ಕುಲುಕಿದರೆ, ಅಂಗಿಯ ಒಳಗಿದ್ದ ಕತ್ತಿ, ಚೂರಿಗಳೆಲ್ಲಾ ಜಾರಿಬೀಳುತ್ತವೆ. ಅಪಾಯ ತಗ್ಗುತ್ತದೆ ಎಂಬಲ್ಲಿಂದ ಶುರುವಾಯಿತು ಇದು. ಜಗತ್ತಿನ ನಾನಾ ನಾಗರಿಕತೆಗಳಲ್ಲಿ ಇದರ ಉಲ್ಲೇಖವಿದೆ. ಕ್ರಿಸ್ತಪೂರ್ವ 8ನೇ ಶತಮಾನದಲ್ಲೂ ಹ್ಯಾಂಡ್‌ಶೇಕ್ ಮಾಡುತ್ತಿದ್ದಕ್ಕೆ ಶಿಲಾ ಶಾಸನಗಳು ಇವೆ. ಬಲಗೈ ಬದಲು ಎಡಗೈನಲ್ಲಿ ಖಡ್ಗ ಹಿಡಿಯುವವರನ್ನು ಹೇಗೆ ನಿರ್ವಹಿಸುತ್ತಿದ್ದರು ಎಂಬುದಕ್ಕೆ ಉತ್ತರ ಲಭ್ಯವಿಲ್ಲ.
ಹ್ಯಾಂಡ್ ಶೇಕ್ ಮಾಡೋದು ಹೇಗೆ?
ಪಾಶ್ಚಾತ್ಯ ದೇಶಗಳಲ್ಲಿ ಇಬ್ಬರು ಮುಖಾಮುಖಿಯಾದಾಗ ಅತ್ಯಂತ ಬಿಗಿಯಾಗಿ ಕೈಗಳನ್ನು ಹಿಡಿದು ಕುಲುಕಲಾಗುತ್ತದೆ. ಅದು ಅತ್ಯಂತ ವಿಶ್ವಾಸಾರ್ಹ ಬಾಂಧವ್ಯದ ಸಂಕೇತ ಎಂದೇ ಜನ ಭಾವಿಸುತ್ತಾರೆ. ಭಾರತವೂ ಸೇರಿದಂತೆ ಏಷ್ಯಾ ದೇಶಗಳಲ್ಲಿ ಅಷ್ಟು ಬಿಗಿಯಾಗಿ ಹ್ಯಾಂಡ್‌ಶೇಕ್ ಮಾಡಿದರೆ, ಇನ್ನೊಮ್ಮೆ ನೀವು ಎದುರಾದಾಗ ನಿಮಗೆ ಕೈ ನೀಡುವುದಕ್ಕೂ ಜನ ಹಿಂದೆ ಮುಂದೆ ನೋಡುತ್ತಾರೆ. ಇಲ್ಲೆಲ್ಲಾ ಅತ್ಯಂತ ಸೌಮ್ಯ ಪ್ರಮಾಣದಲ್ಲಿ ಕೈಕುಲುಕಬೇಕು. ಕೆಲವರು ಹ್ಯಾಂಡ್‌ಶೇಕ್ ಮಾಡುವಾಗ ಕೈಗಳನ್ನು ಮಿತವಾಗಿ ಅದುಮುತ್ತಾರೆ. ಇನ್ನು ಕೆಲವರು ಹ್ಯಾಂಡ್ ಶೇಕ್ ಕೊಡಲೋ, ಬೇಡವೋ ಎಂಬ ಹಿಂಜರಿಕೆಯಲ್ಲೇ ಕೈಕೊಟ್ಟು ಕಸಿವಿಸಿ ಉಂಟು ಮಾಡುತ್ತಾರೆ. ಒಂದಷ್ಟು ಮಂದಿ ಟಾಯ್ಲೆಟ್‌ನಿಂದ ಹೊರಬಂದು ಒದ್ದೆ ಕೈಯನ್ನೇ ಎದುರಿದ್ದವರಿಗೆ ಕೊಟ್ಟು ಅವರನ್ನು ಮುಜುಗರಕ್ಕೆ ದೂಡುವ ನಿದರ್ಶನಗಳಿಗೇನೂ ಕಮ್ಮಿ ಇಲ್ಲ. ನೆಗಡಿಯಾಗಿದ್ದವರು ಸಿಂಬಳ ಒರೆಸಿಕೊಂಡ ಕೂಡಲೇ ಹ್ಯಾಂಡ್ ಶೇಕ್ ಮಾಡಿರುವ ವಿಷಯ ಗೊತ್ತಾಗಿ ಅವರ ಎದುರೇ ಕೈತೊಳೆಯಲೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕುವ ಅನೇಕ ಪ್ರಸಂಗಗಳು ನಿತ್ಯ ಜೀವನದಲ್ಲಿ ಕಂಡುಬರುತ್ತವೆ. ಅರಬ್ ದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಹ್ಯಾಂಡ್‌ಶೇಕ್ ಮಾಡಿದರೆ ಶೇಖ್‌ಗಳು ಏನು ಮಾಡುತ್ತಾರೋ ಎಂಬ ಭಯದಲ್ಲೇ ಕೈಕುಲುಕುವ ಧೈರ್ಯವನ್ನು ಪುರುಷರು ತೋರುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಹೆಂಗಸರೇ ಕೈ ಮುಂದೆ ಮಾಡಿದರೆ ಮಾತ್ರ ಹ್ಯಾಂಡ್‌ಶೇಕ್, ಹ್ಯಾಂಡ್‌ಶೇಕ್ ಮಾಡುವುದರಿಂದ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇನ್ನೂ ಏನೇನೋ ಆಗುತ್ತದೆ. ಎಂಬುದನ್ನು ಜಗತ್ತಿನಾದ್ಯಂತ ಹೇಳುವವರು ಸಾಕಷ್ಟು ಮಂದಿ ಇದ್ದಾರೆ.
ಹ್ಯಾಂಡ್‌ಶೇಕ್ ಎಂಬುದು ಸ್ನೇಹ ಬೆಳೆಸುವುದಕ್ಕೆ, ಬಾಂಧವ್ಯ ವೃದ್ಧಿಸುವುದಕ್ಕೆ ಮೀಸಲಾಗಬೇಕಿಲ್ಲ. ಹ್ಯಾಂಡ್ ಶೇಕ್ ಮಾಡದೆ ಅದನ್ನು ಒಂದು ಅಸ್ತ್ರವಾಗಿ ಕೂಡ ಬಳಸಬಹುದು, ಸೊಕ್ಕು ಮೆರೆವ ಶತ್ರು ದೇಶದ ಆಟಗಾರರಿಗೆ ತಕ್ಕ ಪಾಠ ಕಲಿಸುವ ಸಾಧನ ಕೂಡ ಮಾಡಿಕೊಳ್ಳಬಹುದು. ಇದಕ್ಕೆ ಮೊನ್ನೆ ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳ ಹ್ಯಾಂಡ್‌ಶೇಕ್ ವಿವಾದವನ್ನು ನೋಡಿದ್ದೀರಲ್ವಾ?