ಕಾಂತಾರ ಸಾಕು. ಕರ್ನಾಟಕದ ಹೊಸ ಕತೆ ಹೇಳಿ

Published : Oct 11, 2025, 11:51 AM IST
Kantara Chapter 1 BO

ಸಾರಾಂಶ

ಕನ್ನಡಾಂಬೆ ಭುವನೇಶ್ವರಿಯ ಒಡಲಿನಲ್ಲಿ ಅನೇಕ ಕಥೆಗಳಿವೆ. ಅದನ್ನು ಜಗತ್ತಿನ ಮುಂದೆ ಸುಂದರವಾಗಿ ಬಿಚ್ಚಿಡುವ ಕಥೆಗಾರ ಬೇಕು. ರಿಷಬ್ ಅವರಲ್ಲಿ ನಾನು ಆ ಸಾಧ್ಯತೆಗಳನ್ನು ಕಂಡೆ. ಐತಿಹಾಸಿಕ ಮತ್ತು ಚಾರಿತ್ರಿಕ ಘಟನೆಗಳನ್ನು, ಭಾರತ- ಕರ್ನಾಟಕದ ಗತ ವೈಭವದ ಕಥೆಗಳನ್ನು ರಿಷಬ್‌ ಅವರು ರಸವತ್ತಾಗಿ ಕಟ್ಟಿಕೊಡಬಹುದು.

-ಅಜಿತ್ ಶೆಟ್ಟಿ ಹೆರಂಜೆ

ಕನ್ನಡಾಂಬೆ ಭುವನೇಶ್ವರಿಯ ಒಡಲಿನಲ್ಲಿ ಅನೇಕ ಕಥೆಗಳಿವೆ. ಅದನ್ನು ಜಗತ್ತಿನ ಮುಂದೆ ಸುಂದರವಾಗಿ ಬಿಚ್ಚಿಡುವ ಕಥೆಗಾರ ಬೇಕು. ರಿಷಬ್ ಅವರಲ್ಲಿ ನಾನು ಆ ಸಾಧ್ಯತೆಗಳನ್ನು ಕಂಡೆ. ಐತಿಹಾಸಿಕ ಮತ್ತು ಚಾರಿತ್ರಿಕ ಘಟನೆಗಳನ್ನು, ಭಾರತ- ಕರ್ನಾಟಕದ ಗತ ವೈಭವದ ಕಥೆಗಳನ್ನು ರಿಷಬ್‌ ಅವರು ರಸವತ್ತಾಗಿ ಕಟ್ಟಿಕೊಡಬಹುದು. ಅದನ್ನು ಮಾಡಿ. ಇನ್ನೂ ಕಾಂತಾರದ ಸುತ್ತವೇ ಯಾಕೆ? ಕರುನಾಡಿನಲ್ಲಿ ಕಥೆಗಾರನಿಗೆ ಹೇಳಲು ಕಥೆಗಳ ಬರವಿಲ್ಲ, ಕಥೆಗಾರನ ಬರ ಇದೆ.

ಮುಂದೊಂದು ಕಾಲ ಬರ್ತದೆ...

ಇದು ‘ಕಾಂತಾರ’ ಸಿನಿಮಾದ ಬಹಳ ಜನಪ್ರಿಯ ಡೈಲಾಗ್. ‘ಕಾಂತಾರ ಚಾಪ್ಟರ್‌ 1’ ನೋಡಿದಾಗ ನನಗೆ ಆ ಸಾಲುಗಳು ಪದೇಪದೇ ನೆನಪಿಗೆ ಬಂದವು. ಬಹಳ ಹಿಂದೆ, ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ದಿವಂಗತ ಪಂಡಿತ್ ದೀನದಯಾಳ್ ಉಪಾಧ್ಯಾಯರು, ‘ರಾಷ್ಟ್ರ ಕೇವಲ ಭೌಗೋಳಿಕ ಸತ್ಯವಲ್ಲ. ಅದು ಸಾಂಸ್ಕೃತಿಕ ಆತ್ಮ. ಕಲೆ, ಸಾಹಿತ್ಯವೇ ಅದರ ಉಸಿರು’ ಅಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ‘ಕಲೆಯು ಸಮಾಜದ ಕನಸುಗಳನ್ನು ಹೆಣೆಯುವ ಭಾಷೆ. ಅದು ನಾಗರಿಕತೆಯ ಆತ್ಮದ ಅಭಿವ್ಯಕ್ತಿಯ ಮಾಧ್ಯಮ. ಅದೊಂದು ಐಷಾರಾಮಿ ವಸ್ತುವಲ್ಲ’ ಅಂದಿದ್ದರು. ಭಾರತ ಸೇರಿದಂತೆ ಜಗತ್ತಿನ ಯಾವುದೇ ನಾಗರಿಕತೆ ತನ್ನಲ್ಲಿರುವ ಜೀವಂತಿಕೆಯನ್ನು ಪ್ರಚುರಪಡಿಸಲು ಇರುವ ಏಕೈಕ ಮಾಧ್ಯಮವೇ ಸಾಹಿತ್ಯ ಮತ್ತು ಕಲೆ. ಕಾಲಕಾಲಕ್ಕೂ ಕಲಾವಿದರು ಅದೇ ನಾಗರಿಕತೆಯ ವಕ್ತಾರರೂ ಪ್ರವರ್ತಕರೂ ಆಗುತ್ತಾರೆ. ಯಾವಾಗ ಇಂತಹ ಸಂಸ್ಕೃತಿಯ ವಾಹಕರಾಗುವ ಕಲಾವಿದರು ಪಥ ಭ್ರಷ್ಟರಾಗುತ್ತಾರೋ ಅದು ಸಮಾಜದಲ್ಲಿ ಅನೇಕ ಭಾವ-ವಿಕಾರ ಮತ್ತು ಅಪಸವ್ಯಗಳಿಗೆ ನಾಂದಿ ಆಗುತ್ತದೆ. ಬ್ರಿಟಿಷರು ಭಾರತಕ್ಕೆ ಬಂದಾಗ ಮೊದಲು ಮಾಡಿದ್ದೇ ಇದನ್ನು. ಅವರು ದೇಶ ಬಿಟ್ಟು ಹೋದ ಮೇಲೆ ತಮ್ಮ ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಕಮ್ಯುನಿಸ್ಟರಿಗೆ, ನಗರ ನಕ್ಸಲರಿಗೆ ಜವಾಬ್ದಾರಿ ಕೊಟ್ಟರು. ಹಾಗಾಗಿ ಅವರು ಭಾರತೀಯ ಕಲಾ ಪ್ರಕಾರದ ತುಂಬೆಲ್ಲಾ ಆಕ್ರಮಿಸಿ ಭಾರತದ ಸಾಂಸ್ಕೃತಿಕ ವಲಯವನ್ನು ಸಾಧ್ಯವಾದಷ್ಟು ವಿಕೃತಗೊಳಿಸಿದರು. ಅದೂ ಒಂದು ಕಾಲ.. ಆಗ ತಾಯಿ ಭಾರತಿ ಮನಸ್ಸಿನಲ್ಲೇ ಅಂದುಕೊಂಡಿರಬೇಕು ‘ಮುಂದೊಂದು ಕಾಲ ಬರ್ತದೆ’ ಅಂತ!

‘ಕಾಂತಾರ ಚಾಪ್ಟರ್‌ 1’ ಸಿನಿಮಾ ಆ ‘ಕಾಲ’ ಬಂದಿದೆ ಎಂಬುದರ ಘೋಷಣೆ ಮಾಡಿದೆ. 75 ವರ್ಷಗಳ ಕಾಲ ದೇಶದ ಸಾಂಸ್ಕೃತಿಕ ವಲಯದ ಇಡೀ ವ್ಯವಸ್ಥೆಯನ್ನು ಎಡಪಂಥೀಯರು ಬುಡಮೇಲು ಮಾಡಿದರು. 2014ರಿಂದ ಪರಿಸ್ಥಿತಿ ಬದಲಾಯಿತು. ದೇಶದಲ್ಲಿ ಮೋದಿ ಸರಕಾರ ಬಂತು, ಭಾರತದ ಸಾಂಸ್ಕೃತಿಕ ಪುನರುಜ್ಜೀವನ ಕಾರ್ಯ ಶುರುವಾಯಿತು. ರಿಷಬ್ ಶೆಟ್ಟಿ, ವಿವೇಕ್ ಅಗ್ನಿಹೋತ್ರಿ ಅವರಂತಹ ಅನೇಕ ಸುಪುತ್ರರಿಗೆ ತಾಯಿ ಭಾರತಿ ಪ್ರೇರಣೆ ಕೊಟ್ಟಳು. ಸಮಾಜದ ಮಾನಸಿಕತೆ ಬದಲಾಗತೊಡಗಿತು. ಇಷ್ಟು ದಿನ ಅಪಸವ್ಯಗಳನ್ನೇ ಮಾಡಿಕೊಂಡು ಬಂದವರನ್ನು ಜನ ತಿರಸ್ಕರಿಸಿದರು. ಅವರು ಕಟ್ಟಿದ ಸುಳ್ಳಿನ ಕೋಟೆಗಳು ಬೀಳತೊಡಗಿದವು. ಕಾಂತಾರದಂತಹ ಬಹಳಷ್ಟು ಸಿನಿಮಾಗಳ ಯಶಸ್ಸು, ಸಮಾಜದೊಳಗೆ ಅವು ಎಬ್ಬಿಸಿರುವ ಹೊಸ ಅಲೆ, ಹೊತ್ತಿಸಿರುವ ಸಾಂಸ್ಕೃತಿಕ ಪುನರುಜ್ಜೀವನದ ಕಿಚ್ಚು ಕಾಳ್ಗಿಚ್ಚಾಗಿ ಹಬ್ಬಿ ನಗರ ನಕ್ಸಲರು ಇಷ್ಟು ದಿನ ಕಟ್ಟಿದ ವ್ಯವಸ್ಥೆ ಅವರ ಕಣ್ಣೆದುರೇ ಸುಟ್ಟು ಬೂದಿ ಮಾಡುತ್ತಿದೆ.

ಕಾಂತಾರ 1 ಕನ್ನಡ ಸಿನಿಮಾದ ಮೈಲಿಗಲ್ಲು

ಭಾರತೀಯ ಸಿನಿಮಾಗಳು ಅಂದರೆ ಬಾಲಿವುಡ್ ಅನ್ನುವ ಕಾಲವೊಂದಿತ್ತು. ಅದರಲ್ಲಿ ಸಾಕಷ್ಟು ಉತ್ತಮ ಚಿತ್ರಗಳೂ ಬಂದವು. ಆದರೆ ಯಾವಾಗ ನಗರ ನಕ್ಸಲರು ಅವುಗಳ ಮೇಲೆ ಹಿಡಿತ ಸಾಧಿಸಿದರೋ ಅಲ್ಲಿಂದ ದೇಶದ ಅಸ್ಮಿತೆಯನ್ನು ಕೊಲ್ಲುವ, ಭಾರತದ ಕುಟುಂಬ ವ್ಯವಸ್ಥೆಯನ್ನು ಒಡೆಯುವ, ಭಾರತದ ಸನಾತನ ನಂಬಿಕೆ ಆಚರಣೆಗಳನ್ನು ಅವಮಾನಿಸುವ, ಮುಂದಿನ ತಲೆಮಾರುಗಳು ಈ ನಂಬಿಕೆಗಳನ್ನು ಆಚರಿಸಲು ಅಸಹ್ಯ ಪಡುವಂತಹ ವಾತಾವರಣವನ್ನು ಬಾಲಿವುಡ್ ಸೃಷ್ಟಿ ಮಾಡಿತು. ಇದಕ್ಕೆ ವಿರುದ್ಧವಾದ, ದೇಶದ ನಂಬಿಕೆಗಳಿಗೆ ಪೂರಕವಾದ ಚಿತ್ರಗಳು ಬಂದಾಗ ವ್ಯವಸ್ಥೆಯೊಳಗಿದ್ದ ಬ್ರಹ್ಮರಾಕ್ಷಸರು ಅವನ್ನು ಸೋಲಿಸಿದರು. ಇಂತಹ ಸಂದರ್ಭದಲ್ಲಿ ದಕ್ಷಿಣ ಭಾರತದ ಚಿತ್ರೋದ್ಯಮ ಮಾತ್ರ ದೇಶದ ಸಂಸ್ಕೃತಿಗೆ ಪೂರಕವಾದ ಸಿನಿಮಾಗಳನ್ನು ಮಾಡುವುದನ್ನು ನಿಲ್ಲಸಲೇ ಇಲ್ಲ. ಕನ್ನಡದಲ್ಲಿ ಡಾ। ರಾಜಕುಮಾರ್ ಅವರು ಇಂತಹ ಸಿನಿಮಾಗಳ ಮೂಲಕ ದಂತಕಥೆಯಾದರು. ಇವತ್ತಿಗೂ ಶ್ರೀಕೃಷ್ಣದೇವರಾಯ, ರಾಘವೇಂದ್ರ ಸ್ವಾಮಿ, ಬೇಡರ ಕಣ್ಣಪ್ಪ ಅಂದಾಗಲೆಲ್ಲ ಕನ್ನಡಿಗರ ಮನಸ್ಸಿನಲ್ಲಿ ಮೂಡುವುದು ಡಾ। ರಾಜಕುಮಾರ್ ಅವರ ಚಿತ್ರದ ಪಾತ್ರಗಳೇ. ಆದರೆ ಅವು ಬಹುತೇಕ ಕರ್ನಾಟಕಕ್ಕೆ ಸೀಮಿತವಾದವು. ನಂತರ ಬಂದದ್ದು ಅದೇ ‘ಹೊಡಿ ಬಡಿ-ಕೆಂಚಾಲೋ ಮಂಚಾಲೋ’ ಸಿನಿಮಾಗಳು. ತಮಿಳು, ತೆಲುಗು, ಮಲಯಾಳಿ ಚಿತ್ರಗಳು ಕ್ರಮೇಣ ಬಾಲಿವುಡ್ ಮೀರಿ ಬೆಳೆದವು. ಬಾಹುಬಲಿ ಮೊದಲ ಬಾರಿಗೆ ಭಾರತೀಯ ಸಿನಿಮಾಗಳ ಕಾಲ ಬಂದಿತು ಅಂದರೆ, ಕನ್ನಡದ ಕೆಜಿಎಫ್ ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಎತ್ತಿತು.

ರಾಮಾಯಣ, ಮಹಾಭಾರತಕ್ಕಿಂತ ಬೇಕಾ?

ಹಾಲಿವುಡ್‌ನ ಗ್ರಾವಿಟಿ ಸಿನಿಮಾದ ಬಜೆಟಿಗಿಂತ ಕಡಿಮೆ ಬಜೆಟ್‌ನಲ್ಲಿ ಭಾರತ ಮಂಗಳಯಾನ ಮಾಡಿತು ಎಂದು ನಾವು ಹಮ್ಮೆ ಪಡುತ್ತೇವೆ. ಆದರೆ ಭಾರತದ ಚಿತ್ರರಂಗದಿಂದ ಯಾಕೆ ಗ್ರಾವಿಟಿ, ಅವತಾರ್ ಅಥವಾ ಟೈಟಾನಿಕ್‌ನಂತಹ ಸಿನಿಮಾಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಆಗಲಿಲ್ಲ ಅನ್ನುವ ಪ್ರಶ್ನೆಯನ್ನು ಯಾರೂ ಎತ್ತಲಿಲ್ಲ. ಅಮೆರಿಕದ ಪಾಲಿಗೆ ಅವರಿಗೆ ಹೇಳಿಕೊಳ್ಳುವ ಯಾವುದೇ ನಾಗರಿಕತೆಯ ಹಿನ್ನೆಲೆ ಇಲ್ಲ. ಆದರೆ ಯೂರೋಪ್ ಇವತ್ತು ಸಂಪೂರ್ಣವಾಗಿ ಕ್ರಿಶ್ಚಿಯನ್ನೀಕರಣಗೊಂಡರೂ ತಮ್ಮ ಸಿನಿಮಾಗಳ ಮೂಲಕ ಇವತ್ತಿಗೂ ಅವರ ಪೂರ್ವಜರ ಕಥೆಗಳನ್ನು ಜೀವಂತವಾಗಿ ಇಟ್ಟಿದ್ದಾರೆ ಮತ್ತು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಭಾರತದ ರಾಮಾಯಣ ಅಥವಾ ಮಹಾ ಭಾರತದಂತಹ ವಿಷಯಗಳೂ ಅದೆಷ್ಟು ಚಿತ್ರಗಳಿಗೆ ವಿಷಯ ವಸ್ತುಗಳಾಗಬಹುದಿತ್ತು? ಅದೆಷ್ಟು ಅದ್ಭುತವಾಗಿ ಸಿನಿಮಾಗಳನ್ನು ಮಾಡಬಹುದಿತ್ತು, ಮಾಡಲಿಲ್ಲ.

ಚಾರಿತ್ರಿಕ ಕಥೆಯೊಂದನ್ನು ಇವತ್ತು ಅದ್ಭುತ ಸೆಟ್ ಹಾಕಿ ವಿಎಫ್‌ಎಕ್ಸ್ ತಂತ್ರಜ್ಞಾನದ ಜೊತೆಗೆ ಅಷ್ಟೇ ನುರಿತ ತಂತ್ರಜ್ಞರನ್ನು ಬಳಸಿಕೊಂಡು ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ ರಿಷಬ್. ಎರಡೂವರೆ ಗಂಟೆಯ ಈ ಸಿನಿಮಾದಲ್ಲಿ ನಂಬಿಕೆ, ಆಚರಣೆಗಳಿಗೆ ಎಲ್ಲೂ ಚ್ಯುತಿ ಆಗದಂತೆ ಮನೋಜ್ಞವಾಗಿ ಸಿನಿಮಾ ಮೂಡಿ ಬಂದಿದೆ. ಕ್ಲೈಮಾಕ್ಸಿನಲ್ಲಿ ಜನ ಕೈಮುಗಿದು ಸಿನಿಮಾ ನೋಡುತ್ತಿರುವುದನ್ನು ನಾನು ಕಣ್ಣಾರೆ ಕಂಡೆ. ಒಂದು ಸಿನಿಮಾ ಮಾಡಬೇಕಾದ ನಿಜವಾದ ಕೆಲಸ ಇದು. ಇದು ಕಲೆ ಮತ್ತು ಕಲಾವಿದನಿಂದ ಆಗಬೇಕಾಗಿರುವ ದೇಶಸೇವೆ. ಇದನ್ನೇ ಪಂಡಿತ್ ದೀನದಯಾಳರು ಹಾಗೂ ಮೋದಿಯವರು ಹೇಳಿದ್ದು. ಜನರನ್ನು ತಮ್ಮ ಕಲೆಯ ಮೂಲಕ ಮರಳಿ ತಮ್ಮ ಬೇರುಗಳ ಬಳ್ಳಿಗೆ ತರುವುದು. ಹಾಗಾದಾಗ ಮಾತ್ರ ಅದನ್ನು ಸಾಂಸ್ಕೃತಿಕ ಪುನರುತ್ಥಾನ ಅನ್ನುತ್ತಾರೆ. ಕಾಂತಾರ ಆ ನಿಟ್ಟಿನಲ್ಲಿ ಒಂದು ಅದ್ಭುತ ಪ್ರಯತ್ನ. ಇನ್ನು ಈ ಸಿನಿಮಾ ಯಾವುದೋ ಫಿಲ್ಮ್ ಸಿಟಿಯ ಸ್ಟುಡಿಯೋದಲ್ಲಿ ನಿರ್ಮಾಣವಾದುದಲ್ಲ. ಕುಂದಾಪುರದ ಸುತ್ತಮುತ್ತಲಿನ ಹಳ್ಳಿಯಲ್ಲಿ ಸೆಟ್‌ಗಳನ್ನು ಹಾಕಿ ನಿರ್ಮಾಣ ಮಾಡಿರುವ ಸಿನಿಮಾ. ಸುಮಾರು 7 ಸಾವಿರ ಕುಟುಂಬಗಳ ಜೀವನ ನಿರ್ವಹಣೆ ಇದರಿಂದ ಸಾಧ್ಯವಾಗಿದೆ. ನಿಜವಾಗಲೂ ದೈವ ಒಲಿದವರಿಗೆ ಮಾತ್ರ ಇಷ್ಟು ಅದ್ಭುತವಾದ ಸಿನಿಮಾ ಮಾಡಲು ಸಾಧ್ಯ. ಹಿಂದೆ ಡಾ। ರಾಜ್ ಅವರು ರಾಘವೇಂದ್ರ ಗುರುಗಳ ಸಿನಿಮಾ ಮಾಡುವಾಗ ವೃತನಿಷ್ಠರಾಗಿ ಮಠಕ್ಕೆ ಹೋಗಿ ಒಂದಷ್ಟು ಸಮಯ ಇದ್ದು ನಂತರ ಸಿನಿಮಾ ಮಾಡಿದ್ದರಂತೆ. ಕಾಂತಾರ ನೋಡಿದಾಗ ನನಗೆ ರಿಷಬ್ ವಿಚಾರದಲ್ಲೂ ಅದೇ ಬದ್ಧತೆ ಕಾಣಿಸಿತು. ಅವರ ಉಳಿದ ಅಭಿನಯಕ್ಕಿಂತ ಅವರ ಮೇಲೆ ದೈವ ಬಂದಾಗ ಅದು ಅವರ ಅಭಿನಯವೋ ಅಥವಾ ನಿಜವಾಗಿಯೇ ದೈವ ಅವರ ಮೇಲೆ ಬಂತೋ ಅನ್ನುವ ರೀತಿಯಲ್ಲಿತ್ತು.

ಕಾಂತಾರ ಬಿಟ್ಟು ಹೊರಗೆ ಬನ್ನಿ

ಕನ್ನಡಾಂಬೆ ಭುವನೇಶ್ವರಿಯ ಒಡಲಿನಲ್ಲಿ ಅನೇಕ ಕಥೆಗಳಿವೆ. ಅದನ್ನು ಜಗತ್ತಿನ ಮುಂದೆ ಸುಂದರವಾಗಿ ಬಿಚ್ಚಿಡುವ ಕಥೆಗಾರ ಬೇಕು. ರಿಷಬ್ ಅವರಲ್ಲಿ ನಾನು ಆ ಸಾಧ್ಯತೆಗಳನ್ನು ಕಂಡೆ. ಕುಮಾರ ರಾಮ, ಹೊಯ್ಸಳರ ಕಥೆ, ರಾಣಿ ಅಬ್ಬಕ್ಕನ ಕಥೆ, ಮೈಸೂರಿನ ಒಡೆಯರ ಕಥೆ ಇನ್ನೂ ಅನೇಕ ಐತಿಹಾಸಿಕ ಮತ್ತು ಚಾರಿತ್ರಿಕ ಘಟನೆಗಳನ್ನು, ಭಾರತ- ಕರ್ನಾಟಕದ ಗತ ವೈಭವದ ಕಥೆಗಳನ್ನು ರಿಷಬ್‌ ಅವರು ರಸವತ್ತಾಗಿ ಕಟ್ಟಿಕೊಡಬಹುದು. ಅದನ್ನು ಮಾಡಿ. ಇನ್ನೂ ಕಾಂತಾರದ ಸುತ್ತವೇ ಯಾಕೆ? ಕರುನಾಡಿನಲ್ಲಿ ಕಥೆಗಾರನಿಗೆ ಹೇಳಲು ಕಥೆಗಳ ಬರವಿಲ್ಲ, ಕಥೆಗಾರನ ಬರ ಇದೆ. ನೀವು ಕಥೆಗಾರನಾಗುವ ಎಲ್ಲ ಸಾಧ್ಯತೆಗಳನ್ನು ಕಾಣುತ್ತಿದ್ದೇನೆ. ಸಾಕು ಕಾಂತಾರ, ಹೊರಗೆ ಬನ್ನಿ. ಹೊಸ ಕಥೆಗಳನ್ನು ಹೇಳಿ. ಇಂದು ಆ ‘ಕಾಲ’ ಬಂದಿದೆ.

PREV
Read more Articles on

Recommended Stories

ಬೀಸ್ಪೋಕ್ ಎಐ ಏರ್ ಕಂಡಿಷನರ್‌ ಗಳ ಮೇಲೆ ಗೋ ಸೇವ್ ಟುಡೇ ಆಫರ್ ಘೋಷಿಸಿದ ಸ್ಯಾಮ್‌ಸಂಗ್
ಹೀರೋ ಮೋಟೋಕಾರ್ಪ್‌ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ