ಸಮೃದ್ಧಿ ಸಿರಿ, ಧರ್ಮಸ್ಥಳ ಸಂಸ್ಥೆಗೊಂದು ಗರಿ

Published : Jun 07, 2026, 01:01 PM IST
Vice President CP Radhakrishnan Visits Dharmasthala inauguration SIRI Industrial Park

ಸಾರಾಂಶ

ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಬೇಕು, ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದು ಬರಿ ಬಾಯಿ ಮಾತಿನ ಕೆಲಸವಾಗಿತ್ತು. ಆದರೆ, ಈ ಮಾತನ್ನು ಕೃತಿಗಿಳಿಸಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿ ಅವರ ಬಾಳಿಗೊಂದು ಬೆಳಕಾಗುವಂತಹ ಕೆಲಸ ಮಾಡಿದ ಹೆಗ್ಗಳಿಕೆ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯದ್ದು.

ಉಮಾಶಂಕರ ಕಾರ್ಯ

ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಬೇಕು, ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದು ಬರಿ ಬಾಯಿ ಮಾತಿನ ಕೆಲಸವಾಗಿತ್ತು. ಆದರೆ, ಈ ಮಾತನ್ನು ಕೃತಿಗಿಳಿಸಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿ ಅವರ ಬಾಳಿಗೊಂದು ಬೆಳಕಾಗುವಂತಹ ಕೆಲಸ ಮಾಡಿದ ಹೆಗ್ಗಳಿಕೆ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯದ್ದು.

ಭಾನುವಾರ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಅನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಉದ್ಘಾಟಿಸಿ ಅಧಿಕೃತವಾಗಿ ಚಾಲನೆ ಕೊಟ್ಟರು. ಆ ಮೂಲಕ ರಾಜ್ಯದ ಆರ್ಥಿಕವಾಗಿ ದುರ್ಬಲರಾದ ಮಹಿಳೆಯರಿಗೊಂದು ಭರವಸೆಯ ದಾರಿಮಾಡಿಕೊಟ್ಟರು.

ಇಂತಹದ್ದೊಂದು ಸಂಸ್ಥೆಯ ಹುಟ್ಟು ಇಂದು ಅಥವಾ ನೆನ್ನೆಯ ಕನಸಲ್ಲ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಧರ್ಮಪತ್ನಿ ಡಾ.ಹೇಮಾವತಿ ವಿ.ಹೆಗ್ಗಡೆಯವರ ಕನಸು. ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಸದೊಂದು ಅವಕಾಶ ಸೃಷ್ಟಿಸಿ ಅವರಿಗೊಂದು ನೆಲೆ ಕಲ್ಪಿಸಿಕೊಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವಂತೆ, ಒಂದು ಸಂಸಾರದಲ್ಲಿ ಹೆಣ್ಣು ಆರ್ಥಿಕವಾಗಿ ಸಬಲಳಾದರೆ, ಆಕೆ ತನ್ನ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕಾರಣವಾಗುತ್ತಾಳೆ ಎಂಬ ನಂಬಿಕೆಯಿಂದ 2004ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಲ್ಯಾಲ ಪ್ರದೇಶದಲ್ಲಿ ಆರಂಭಿಸಿದ ಸಂಸ್ಥೆ.

ಮಾತೃಶ್ರೀ ಇಂಡಸ್ಟ್ರೀಯಲ್ ಪಾರ್ಕ್ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ 22 ವರ್ಷದ ಸಾಧನೆಯ ಹೆಗ್ಗುರುತು. ಈ ಇಂಡಸ್ಟ್ರೀಯಲ್ ಪಾರ್ಕ್ ಬೆಳ್ತಂಗಡಿಯ ರೆಂಕೆದಗುತ್ತು ಎಂಬಲ್ಲಿ ಏಳು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಈ ಸಂಸ್ಥೆಯ ವಿಶೇಷವೆಂದರೆ, ಸಿರಿ ಸಂಸ್ಥೆಯಲ್ಲಿ ಯಾವುದೇ ರೀತಿಯ ವಿಶೇಷ ಅನುಭವ ಇಲ್ಲದ ಗ್ರಾಮೀಣ ಮಹಿಳೆಯರಿಗೆ ವೇತನ ಸಹಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಅವರಿಂದ ಉತ್ತಮ ಗುಣಮಟ್ಟದ ಸಿದ್ಧ ಉಡುಪುಗಳು, ಉಪ್ಪಿನಕಾಯಿ, ಮಸಾಲ, ಕರಿದ ತಿಂಡಿಗಳು, ಕೋಕಂ ಜ್ಯೂಸ್, ಶೇಂಗಾ ಚಿಕ್ಕಿ, ರೆಕ್ಸಿನ್ ಬ್ಯಾಗುಗಳು, ತೀರ್ಥದ ಬಾಟಲಿಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಬಿಡುಗಡೆ ಮಾಡುತ್ತದೆ.

ಇದಕ್ಕಾಗಿ ಉಪ್ಪಿನಕಾಯಿ ಉತ್ಪಾದನಾ ಘಟಕ, ಕೋಲ್ಡ್ ಸ್ಟೋರೇಜ್ ಘಟಕ, ಪುಷ್ಟಿ, ಮಸಾಲ ಹಾಗೂ ಕರಿದ ತಿಂಡಿಗಳ ಉತ್ಪಾದನಾ ಘಟಕ, ಕೋಕಂ ಜ್ಯೂಸ್, ಶೇಂಗಾ ಚಿಕ್ಕಿ ಉತ್ಪಾದನೆ ಮತ್ತು ದೀಪದ ಎಣ್ಣೆ, ಕೊಬ್ಬರಿ ಎಣ್ಣೆ ಪ್ಯಾಕಿಂಗ್ ಘಟಕ, ಶುಚಿಕಾರಕಗಳ ಉತ್ಪಾದನಾ ಘಟಕ, ಅಗರಬತ್ತಿ ಉತ್ಪನ್ನ, ಸಿದ್ದ ಉಡುಪುಗಳು, ರೆಕ್ಸಿನ್ ಬ್ಯಾಗುಗಳು, ತೀರ್ಥಬಾಟಲಿ ಉತ್ಪಾದನಾ ಘಟಕ ಹೀಗೆ ಹಲವು ಉತ್ಪನ್ನಗಳ ಉತ್ಪಾದನಾ ಘಟಕಗಳು ವ್ಯವಸ್ಥಿತವಾಗಿ ಇಲ್ಲಿ ಕಾರ್ಯಾಚರಣೆ ಆರಂಭಿಸಿವೆ.

ಇಲ್ಲಿ ದೂರದಿಂದ ಬರುವ ಮಹಿಳೆಯರಿಗೆ ಸಹಕಾರಿಯಾಗುವ ಉದ್ದೇಶದಿಂದ ಸುಸಜ್ಜಿತ ವಸತಿಗೃಹ (ಬ್ರಾಹ್ಮಣಿ), ಸಿಬ್ಬಂದಿಯ ಮಕ್ಕಳಿಗೆ ಶಿಶುವಿಹಾರ ಕೇಂದ್ರ (ಮಗು), ಬಿಸಿ ಭೋಜನದ ವ್ಯವಸ್ಥೆ (ನೈವೇದ್ಯ), ಎಟಿಎಂ ಸೌಲಭ್ಯ, ಸಿರಿ ಮಳಿಗೆ, ಸಿರಿ ಕೆಫೆ, ಗೋದಾಮು ಸೌಕರ್ಯಗಳನ್ನು ನಿರ್ಮಿಸಲಾಗಿದೆ. ಸುಸ್ಥಿರ ಅಭಿವೃದ್ಧಿಯ ಉದ್ದೇಶದಿಂದ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೌರಶಕ್ತಿ ಫಲಕಗಳನ್ನು ಅಳವಡಿಸಿ ಸ್ವಚ್ಛ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಇಲ್ಲಿ ಉತ್ಪಾದನೆಯಾಗುತ್ತಿರುವ ಆಹಾರ ಉತ್ಪನ್ನಗಳನ್ನು ಪ್ರತಿ ಹಂತದಲ್ಲಿಯೂ ಪರೀಕ್ಷಿಸಲು ಆಹಾರ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯವನ್ನೂ ಸ್ಥಾಪಿಸಲಾಗಿದೆ. ಉದ್ಯೋಗಿಗಳಿಗೆ ವೇತನ ಕೂಡ ಸರ್ಕಾರದ ನಿಯಮದಂತೆ ನೀಡಲಾಗುತ್ತಿದೆ. ಉತ್ಕೃಷ್ಟ ಉತ್ಪನ್ನಗಳ ತಯಾರಿಕೆಗಾಗಿ ಉದ್ಯೋಗಿಗಳಿಗೆ ತರಬೇತಿಯನ್ನೂ ಸಂಸ್ಥೆಯ ವತಿಯಿಂದಲೇ ನೀಡಿ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಇಂಡಸ್ಟ್ರೀಯಲ್ ಪಾರ್ಕ್ ಆರಂಭಿಸುವುದಕ್ಕೂ ಹಿಂದೆ ಸಿರಿ ತನ್ನ ಉತ್ಪನ್ನಗಳನ್ನು ತಯಾರಿಸಲು ಪೂರಕವಾಗುವಂತೆ ಸುಮಾರು 50ರಿಂದ 60 ಹಳ್ಳಿಗಳಲ್ಲಿ ಘಟಕಗಳನ್ನು ಸ್ಥಾಪಿಸಿ ಅಲ್ಲಿರುವ ಬಡ ಮಹಿಳೆಯರಿಗೆ ಉತ್ಪಾದನೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಪೂರೈಸಿ ಅವರಿಂದ ತಯಾರಿಸಲಾದ ಉತ್ಪನ್ನಗಳನ್ನು ಸಿರಿ ಸಂಸ್ಥೆಗೆ ತಂದು ಆಯ್ದ ಪ್ರದೇಶಗಳಲ್ಲಿ ಸಿರಿ ಬ್ರಾಂಡ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೇರೆ ಬೇರೆ ಕಡೆಗಳಲ್ಲಿರುವ ಘಟಕಗಳಿಂದ ಉತ್ಪನ್ನಗಳನ್ನು ಸಿರಿ ಸಂಸ್ಥೆಗೆ ಸಾಗಿಸಲು ಅಧಿಕ ಸಾಗಾಟದ ವೆಚ್ಚವಾಗುತ್ತಿರುವುದರ ಜೊತೆಗೆ ಉತ್ಪನ್ನಗಳ ಗುಣಮಟ್ಟ ಕಾಪಾಡಲು ಬಹಳಷ್ಟು ಸಮಸ್ಯೆಗಳಾಗುತ್ತಿತ್ತು.

ಈ ಬಗ್ಗೆ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆಎನ್ ಜನಾರ್ಧನ ಅವರು, ಮಾತೃಶ್ರೀ ಡಾ.ಹೇಮಾವತಿ ಹೆಗಡೆ ಅವರಲ್ಲಿ ಚರ್ಚಿಸಿದಾಗ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜೊತೆಗೆ ಸ್ತ್ರೀ ಸಬಲೀಕರಣದ ಗುರಿ ಇಟ್ಟುಕೊಂಡು ಎಲ್ಲಾ ಉತ್ಪನ್ನಗಳನ್ನು ಒಂದೇ ಸೂರಿನಡಿ ಕಾರ್ಯಾಚರಿಸುವ ನಿಟ್ಟಿನಲ್ಲಿ ಡಾ.ಹೇಮಾವತಿ ಹೆಗ್ಗಡೆ ಅವರ ಸಹಕಾರದಿಂದ ಬೆಳ್ತಂಗಡಿಯ ರೇಂಕದ ಗುತ್ತಿವಿನಲ್ಲಿ ಏಳು ಎಕರೆ ಜಾಗವನ್ನು 2023ರ ಫೆಬ್ರವರಿಯಲ್ಲಿ ಖರೀದಿಸಲಾಯಿತು.

ಈ ವಿಶಾಲವಾದ ಪರಿಸರದಲ್ಲಿ 71 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 1.50 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಸಿರಿ ಸಂಸ್ಥೆಗೆ ನೂತನ ಬೃಹತ್ ಕಟ್ಟಡವನ್ನು ನಿರ್ಮಿಸಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲು ಉದ್ದೇಶಿಸಲಾಯಿತು. ಈ ಯೋಜನೆಗೆ 2023ರ ಮಾರ್ಚ್ ತಿಂಗಳಲ್ಲಿ ಡಾ.ಹೇಮಾವತಿ ಹೆಗ್ಗಡೆಯವರು ಶಿಲನ್ಯಾಸ ನೆರವೇರಿಸಿದರು. ಸುಂದರವಾದ ಕಲ್ಪನೆಗೂ ಮೀರಿದ ಸುಸಜ್ಜಿತ ಕಟ್ಟಡ ನಿರ್ಮಾಣವಾಯಿತು. ಇಲ್ಲಿ ಸಿರಿ ಉತ್ಪನ್ನಗಳ ಉತ್ಪಾದನಾ ಕಾರ್ಯ ಆರಂಭಿಸಲಾಗಿದೆ.

ಕಂಪನಿ ಕಾಯ್ದೆ 2013ರ ಅಡಿಯಲ್ಲಿ ಸಂಸ್ಥೆಯನ್ನು ನೋಂದಾಯಿಸಲಾಗಿದೆ

ಇಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಸಾವಿರ ಸ್ವಸಹಾಯ ಗುಂಪುಗಳ ಮಾಲೀಕತ್ವ ಹೊಂದಿರುವ ಕಂಪನಿ ಕಾಯ್ದೆ 2013ರ ಅಡಿಯಲ್ಲಿ ಸಂಸ್ಥೆಯನ್ನು ನೋಂದಾಯಿಸಲಾಗಿದೆ. ಸಿರಿ ಸಂಸ್ಥೆ ಯಾವುದೇ ಲಾಭದ ಉದ್ದೇಶವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದರಿಂದ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಂಡಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಹೊಂದಿರುವ ಸಿರಿ ಸಂಸ್ಥೆಯಲ್ಲಿ ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಉತ್ಕೃಷ್ಟ ಗುಣಮಟ್ಟದ ಗೃಹಪಯೋಗಿ ಆಹಾರ ಉತ್ಪನ್ನಗಳು, ಸಿರಿಧಾನ್ಯಗಳು, ಸಿದ್ಧ ಉಡುಪುಗಳು, ಅಗರಬತ್ತಿ, ಶುಚಿಕಾರಕ ಫಿನಾಯಿಲ್, ವಾಷಿಂಗ್ ಪೌಡರ್ ಸೇರಿ ಹಲವು ಉತ್ಪನ್ನಗಳನ್ನು ಸಿರಿ ಬ್ರಾಂಡನಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 5000ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಶ್ರಯ ನೀಡಿ ಅವರ ಬಾಳು ಹಸನಾಗಿಸುವಲ್ಲಿ ಶ್ರಮಿಸುತ್ತಿದೆ. ಸಿರಿ ಕೇಂದ್ರ ಕಚೇರಿ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ವೇಣೂರು, ಗೇರುಕಟ್ಟೆ, ಉಪ್ಪಿನಂಗಡಿ, ನಾರಾವಿ, ಗುರುವಾಯನಕೆರೆ, ಪುಂಜಾಲಕಟ್ಟೆ ಇತ್ಯಾದಿ ಕಡೆಗಳಿಂದ ಕೆಲಸಕ್ಕೆ ಬರುವ ಸಿಬ್ಬಂದಿಗೆ ಸಂಜೆ ಮತ್ತು ಬೆಳಿಗ್ಗೆ ಕೆಲಸಕ್ಕೆ ಹಾಜರಾಗಲು ಹಾಸ್ಟೆಲ್ ಸೌಲಭ್ಯವಿದೆ, ದೂರದ ಊರುಗಳಿಂದ ಸಿರಿ ಸಂಸ್ಥೆಗೆ ಉದ್ಯೋಗಕ್ಕಾಗಿ ಬರುವ ಮಹಿಳೆಯರಿಗೆ ಸಿರಿ ಸಂಸ್ಥೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ ಒದಗಿಸಲಾಗಿದೆ. 11 ವಸತಿಗೃಹಗಳು, ಮೆಡಿಟೇಶನ್ ಕೊಠಡಿ ಸೌಲಭ್ಯವಿದೆ.

ಇಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಿಬ್ಬಂದಿಯ ಐದು ವರ್ಷದೊಳಗಿನ ಪುಟ್ಟ ಮಕ್ಕಳಿಗೆ ಶಿಶುವಿಹಾರ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮಕ್ಕಳು ಊಟ ಆಟೋಟಗಳನ್ನು ಆಡಿ ಬೆಳೆಯಲು ಅವಕಾಶ ಕಲ್ಪಿಸಲಾಗಿದೆ.

ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಒದಗಿಸಲು ಸುಸಜ್ಜಿತ ಭೋಜನ ಶಾಲೆ ನಿರ್ಮಿಸಲಾಗಿದೆ. ತನ್ಮೂಲಕ ಇತರ ಖಾಸಗಿ ಸಂಸ್ಥೆಗಳಲ್ಲಿ ಇರುವಂತೆ ಎಲ್ಲಾ ಸಿಬ್ಬಂದಿಗಳಿಗೂ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಸಚಿ-ರುಚಿಯಾದ ಬಿಸಿ ಊಟದ ವ್ಯವಸ್ಥೆ ಒದಗಿಸಲಾಗಿದೆ. ಜೊತೆಗೆ ಹಾಸ್ಟಲ್ ನಲ್ಲಿ ವಾಸವಿರುವ ಸಿಬ್ಬಂದಿಗಳಿಗೂ ರಿಯಾಯಿತಿ ದರದಲ್ಲಿ ಪೌಷ್ಟಿಕಾಂಶದ ಊಟ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕೆನರಾ ಬ್ಯಾಂಕ್ ನಿಂದ ಎಟಿಎಂ ವ್ಯವಸ್ಥೆ ಇದೆ. ಮಕ್ಕಳಿಗೆ ಸಿರಿ ಕೆಫೆ, ಸಿರಿ ಮಳಿಗೆ, ಗೋದಾಮಿನ ಸೌಲಭ್ಯವಿದೆ.

ಇದಲ್ಲದೆ, ಧಾರವಾಡ ಸೌರಶಕ್ತಿಯಿಂದ ಬೆಳಗುತ್ತಿರುವ ಸಿರಿ ಮಿಲ್ಲೆಟ್ ಕೆಫೆ ಆರಂಭಿಸಲಾಗಿದೆ. ಧಾರವಾಡದಲ್ಲಿಯೇ ಸಿರಿ ಮಿಲ್ಲೆಟ್ ಜ್ಯೂಸ್ ಸೆಂಟರ್ ಧಾರವಾಡ ಸಿರಿ ಮಿಲ್ಲೆಟ್ ಕೆಫೆ ಅಂಗಡಿ, ಸಿರಿ ಸಂಸ್ಥೆಯ ಮಾರಾಟ ಜಾಲಗಳನ್ನು ಒಳಗೊಂಡಿದೆ. ಇದಲ್ಲದೆ, ಸ್ವಂತ ಮಳಿಗೆಗಳನ್ನೂ ಸಂಸ್ಥೆ ಹೊಂದಿದೆ.

ಇದಲ್ಲದೇ, ಸಿರಿ ಸಂಸ್ಥೆ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಒಳಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ, ಮಂಗಳೂರು, ಧಾರವಾಡ, ಹಾಸನ, ಬೆಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗಳೂ ಸೇರಿ ಸಿರಿ ಸಂಸ್ಥೆಯು ತನ್ನದೇ ಆದ 14 ಮಳಿಗೆಗಳನ್ನು ಒಳಗೊಂಡಿದೆ. ಆ ಮೂಲಕ ಸಿರಿ ಉತ್ಪನ್ನಗಳನ್ನು ಮತ್ತು ಫ್ರಾಂಚೈಸಿ ಮಳಿಗೆಗಳನ್ನು ಕಾರ್ಯನಿರ್ವಹಿಸುತ್ತಿವೆ.

ಅಮೆಜಾನ್ ಸೇರಿ ಆನ್ ಲೈನ್ ನಲ್ಲೂ ಲಭ್ಯ

ಸಿರಿ ಸಂಸ್ಥೆಯು ತನ್ನದೇ ಆದ ವಿತರಣಾ ಜಾಲವನ್ನು ಹೊಂದಿದೆ. ಪ್ರಸ್ತುತ ಸಿರಿ ಸಂಸ್ಥೆಯ ನೂತನ ವೆಬ್ಸೈಟ್ ಆರಂಭಿಸಲಾಗಿದೆ ಮತ್ತು ಆನ್ ಲೈನ್ ವ್ಯಾಪಾರದ ಪ್ಲಾಟ್ ಫಾರ್ಮ್ ಅನುಷ್ಠಾನಗೊಳಿಸಲಾಗಿದೆ. ಪ್ರಮುಖ ಈ ಕಾಮರ್ಸ್ ಫ್ಲಾಟ್ ಫಾರ್ಮ್ ಗಳಾದ ಅಮೆಜಾನ್ ಫ್ಲಿಪ್ ಕಾರ್ಟ್ ಬ್ಲಿಂಕಿಟ್ ಮತ್ತು ಬಿಗ್ ಬಾಸ್ಕೆಟ್ ಗಳಲ್ಲೂ ಸಿರಿ ಉತ್ಪನ್ನ ಮಾರುಕಟ್ಟೆ ಮಾಡಲು ಪ್ರಾರಂಭಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಒಟ್ಟಾರೆ ಸಿರಿ ಸಂಸ್ಥೆಯ ಗುಣಮಟ್ಟದ ಉತ್ಪನ್ನಗಳಿಗೆ ಸಿರಿಧಾನ್ಯಗಳಿಗೆ ರಾಜ್ಯಾದ್ಯಂತ ಉತ್ತಮ ಬೇಡಿಕೆ ಇದೆ.

ಸಿರಿ ಸಂಸ್ಥೆ ಧಾರವಾಡದಲ್ಲಿ ಮಿಲ್ಲೆಟ್ ಕೆಫೆ ಹೊಂದಿದೆ. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನಾ ಘಟಕದಲ್ಲಿ ಮಿಲ್ಲೆಟ್ ರಸ್ಕ್, ಬ್ರೆಡ್, ಕುಕ್ಕೀಸ್ ಸೇರಿದಂತೆ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು ನಿವಾರಕ ಹಾಗೂ ಉತ್ತಮ ಜೀವನಕ್ರಿಯೆಗೆ ಸಹಕಾರಿಯಾಗುವ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ.

ಮಿಲ್ಲೆಟ್ ದೋಸೆ ಮಿಕ್ಸ್, ಇಡ್ಲಿ ಮಿಕ್ಸ್ ಇತ್ಯಾದಿ ರೆಡಿ ಟು ಕುಕ್ ಉತ್ಪನ್ನಗಳನ್ನು ಉತ್ಪಾದಿಸಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಧಾರವಾಡದಲ್ಲಿ ಎಸ್ ಡಿ ಎಮ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಎರಡು ಸಿರಿ ಮಿಲ್ಲೆಟ್ ಕೆಫೆಗಳು ಮತ್ತು ಒಂದು ಜ್ಯೂಸ್ ಸೆಂಟರ್ ಹಾಗೂ ಧಾರವಾಡದ ಜನತಾ ಶಿಕ್ಷಣ ಸಮಿತಿಯ ವಠಾರದಲ್ಲಿ ಒಂದು ಶ್ರೀಮಿಲೆಟ್ಸ್ ತೆರೆಯಲಾಗಿದೆ. ಮೊಸರನ್ನ, ಜೋಳದ ರೊಟ್ಟಿ, ಆನಿಯನ್ ಪಕೋಡ, ವೆಜ್ ಸ್ಯಾಂಡ್ವಿಚ್, ಜೋಳದ ವಡ ಇತ್ಯಾದಿ ಉತ್ತಮ ಗುಣಮಟ್ಟದಲ್ಲಿ ಬಿಸಿ ಬಿಸಿ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಪ್ರಥಮವಾಗಿ ಪ್ರಾರಂಭಿಸಲಾಗಿರುವ ಏಕೈಕ ಸಿರಿಧಾನ್ಯದ ಉಪಹಾರ ಗೃಹದಲ್ಲಿ ಶುಚಿ ರುಚಿಯಾದ ಆರೋಗ್ಯಕರ ಸಿರಿಧಾನ್ಯಗಳ ಭೋಜನ ಮತ್ತು ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ಉಣಬಡಿಸಲಾಗುತ್ತಿದೆ. ವಿವಿಧ ಬಗೆಯ ಆರೋಗ್ಯಕರ ಪಾನಿಯಗಳನ್ನು ನೀಡಲಾಗುತ್ತಿದೆ. ಧರ್ಮಸ್ಥಳ, ಮಂಗಳೂರು, ಧಾರವಾಡ, ಹಾಸನ, ಬೆಂಗಳೂರಿನ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗಳಲ್ಲಿ ಸಿರಿ ಮಳಿಗೆಗಳನ್ನು ತೆರೆಯಲಾಗಿದೆ.

ಸಿರಿ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ರಮೇಶ್ ಅರವಿಂದ್ ಒಪ್ಪಂದ ಮಾಡಿಕೊಂಡಿದ್ದಾರೆ. ಒಟ್ಟಾರೆ, ಕಡಿಮೆ ಬೆಲೆ ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಿರಿ ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಮುಂದಿನ ದಿನಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಬಡ ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡಲು ಸಾಧ್ಯವಾಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಸಿರಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು ಆ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ಸಿರಿ ಸಂಸ್ಥೆ ಒಂದು ಹೆಜ್ಜೆ ಮುಂದಿದೆ

PREV
Read more Articles on

Recommended Stories

ಜೂನ್ 5 ವಿಶ್ವ ಪರಿಸರ ದಿನ - ಇಂದು ಪರಿಸರ ರಕ್ಷಣೆ, ಕಾಳಜಿಗೆ ಮೀಸಲು ದಿನ....
ಹಣವನ್ನು ನಿಮ್ಮತ್ತ ಸೆಳೆಯಲು 5 ಸೂತ್ರಗಳು