ಯಡಿಯೂರಪ್ಪನವರೂ ನಕ್ಕರು

ಹಲವಾರು ತಾಲೂಕು, ಜಿಲ್ಲಾ ಸಮ್ಮೇಳನಗಳಲ್ಲೂ ನಾನು ಭಾಗವಹಿಸಿರುವೆ. ರಾಜ್ಯ ಮಟ್ಟದ ಸಮ್ಮೇಳನಗಳಿಗೆ ಹೋಲಿಸಿದರೆ ಜಿಲ್ಲಾ ಮತ್ತು ತಾಲೂಕು ಸಮ್ಮೇಳನಗಳಲ್ಲಿ ಗೊಂದಲಗಳು ಕಡಿಮೆ.

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದೆ. ಸಮ್ಮೇಳನವನ್ನು ಉದ್ಘಾಟಿಸಲು ಯಡಿಯೂರಪ್ಪನವರೇ ಬಂದಿದ್ದರು. ನಾನೂ ವೇದಿಕೆಯ ಮೇಲಿದ್ದೆ. ಉದ್ಘಾಟನೆಯ ನಂತರ ನನ್ನ ಉಪನ್ಯಾಸವಿತ್ತು. ಆದರೆ ಉದ್ಘಾಟನೆ ಮಾಡಿದ ಬಳಿಕ ಯಡಿಯೂರಪ್ಪನವರು ನನ್ನ ಹತ್ತಿರ ಮಾತನಾಡಲು ಹೇಳಿದರು. ನನ್ನ ಸರದಿ ಈಗಲ್ಲ ಅಂದರೂ ಕೇಳದೆ ‘ಈಗ ಸ್ವಲ್ಪ ಹೊತ್ತು ಮಾತಾಡಿ. ಆಮೇಲೆ ನಾನಿರುವುದಿಲ್ಲ. ನಿಮ್ಮ ಹಾಸ್ಯ ನಾನು ಕೇಳಬೇಕು’ ಅಂದರು. ನನಗೆ ಅದೆಷ್ಟು ಗಾಬರಿಯಾಯಿತು ಅಂದರೆ ಸಂಬೋಧನೆ ಮಾಡುವಾಗ ಶಿಕಾರಿಪುರದ ಸಾಹಿತ್ಯಾಭಿಮಾನಿಗಳೆ ಅನ್ನುವ ಬದಲು ಸಕಲೇಶಪುರದ ಸಾಹಿತ್ಯಭಿಮಾನಿಗಲೇ ಅಂದಿದ್ದೆ. ಜನರು ಶಿಕಾರಿಪುರ ಎಂದು ತಿದ್ದಿದರು. ನನ್ನ ತಪ್ಪಿನ ಅರಿವಾದರೂ ತೋರಿಸಿಕೊಳ್ಳದೆ ‘ನನಗೆ ಗೊತ್ತು. ನೀವು ಕೇಳಿಸಿಕೊಳ್ಳುತ್ತಿದ್ದೀರೋ ಇಲ್ಲವೋ ಎಂದು ಪರೀಕ್ಷಿಸಲು ಹಾಗೆ ಹೇಳಿದ್ದು’ ಎಂದೆ. ನನ್ನ ಅಂಕಣಗಳಲ್ಲಿ, ಚುಟುಕುಗಳಲ್ಲಿ ನಾನು ಯಡಿಯೂರಪ್ಪ ಅವರನ್ನು ಸಾಕಷ್ಟು ತಮಾಷೆಮಾಡಿದ್ದೆ. ಆದರೂ ಅವರು ನನ್ನ ಹಾಸ್ಯಭಾಷಣವನ್ನು ಕೇಳಿ ನಸುನಗೆ ಬೀರಿದ್ದನ್ನು ನೋಡಿ ಆಶ್ಚರ್ಯವಾಗಿತ್ತು.

ಒಂದು ಪ್ರೇಮ ಪತ್ರಕ್ಕೆ ಎರಡು ಉತ್ತರಗಳು

ಎಂಬತ್ತರ ದಶಕದಲ್ಲಿ ಪತ್ರಿಕೆಗಳಲ್ಲಿ ಕವನ, ಲೇಖನ ಪ್ರಕಟವಾದರೆ, ಪ್ರಶಸ್ತಿ ಬಂದರೆ ಪರಿಚಿತರಿಂದ ಮಾತ್ರ ಪತ್ರ ಬರುತ್ತಿತ್ತು. ತರಂಗ ಪತ್ರಿಕೆ ಕವನದ ಜೊತೆ ಫೋಟೊ ಮತ್ತು ವಿಳಾಸ ಹಾಕತೊಡಗಿದ ಮೇಲೆ ಅಪರಿಚಿತ ಅಭಿಮಾನಿಗಳಿಂದಲೂ ಪತ್ರಗಳು ಬರತೊಡಗಿದವು. ಕವಿತೆಯ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವ ಪತ್ರಗಳ ಜೊತೆಗೆ ಧನ ಸಹಾಯ ಕೇಳುವ, ‘ಈ ಪತ್ರದಲ್ಲಿರುವ ಸ್ತೋತ್ರದ 25 ಪ್ರತಿಗಳನ್ನು ಮಾಡಿ ಹಂಚಿರಿʼ ಎಂಬಂತಹ ಪತ್ರಗಳೂ ಇರುತ್ತಿದ್ದವು. ನಾನು ಮದುವೆಯಾದ ಸಮಯದಲ್ಲಿ ತರಂಗದಲ್ಲಿ ನನ್ನ ಕವನ ಫೋಟೋ ಸಮೇತ ಪ್ರಕಟವಾಗಿತ್ತು ಅಂದಿದ್ದೆನಲ್ಲವೆ? ಅದನ್ನು ಮೆಚ್ಚಿ ಹಲವಾರು ಪತ್ರಗಳು ಬಂದಿದ್ದವು. ಅವುಗಳನ್ನು ನಾನು ಮತ್ತು ಭಾರತಿ ಜೊತೆಯಾಗಿ ಕುಳಿತು ಓದತೊಡಗಿದೆವು. ಇದ್ದಕ್ಕಿದ್ದಂತೆ ಭಾರತಿ ಒಂದು ಪತ್ರವನ್ನು ನನಗೆ ಕೊಟ್ಟು ಅಳುತ್ತ ಎದ್ದು ಹೋದಳು. ನಾನು ಆ ಪತ್ರವನ್ನು ಓದಿದಾಗ ಅಳುವಿನ ಕಾರಣ ತಿಳಿಯಿತು. ಬೆಂಗಳೂರಿನ ಗೀತಾ ಎನ್ನುವ ಹುಡುಗಿ ಕವನದ ಬಗ್ಗೆ ಮೆಚ್ಚುಗೆಯ ಜೊತೆಗೆ, ‘ನಿಮ್ಮ ಭಾವಚಿತ್ರ ನನಗೆ ತುಂಬಾ ಹಿಡಿಸಿತು. ನಿಮಗೆ ಮದುವೆ ಆಗಿರದಿದ್ದರೆ ನಾನು ನಿಮ್ಮನ್ನು ಮದುವೆಯಾಗಲು ಬಯಸುವೆ. ಯಾವುದಕ್ಕೂ ಕೂಡಲೆ ಉತ್ತರಿಸಿʼ ಎಂದು ಬರೆದಿದ್ದಳು. ನನ್ನ ಗ್ರಹಚಾರಕ್ಕೆ ಆ ಪತ್ರ ಭಾರತಿಯ ಕೈಗೆ ಸಿಕ್ಕಿತ್ತು. ಆ ದಿನವಿಡೀ ಅವಳು ಮುಸು ಮುಸು ಅಳುತ್ತಲೆ ಇದ್ದಳು.


ಪ್ರೇಮ ಪತ್ರ ಬರೆದವಳಿಗೆ ‘ನನಗೆ ಮದುವೆಯಾಗಿದೆ. ಇನ್ನು ಮೇಲೆ ನನಗೆ ಇಂತಹ ಪತ್ರ ಬರೆಯಬೇಡಿʼ ಎಂದು ಉತ್ತರ ಬರೆದು ಅದನ್ನು ಭಾರತಿಗೆ ತೋರಿಸಿದೆ. ಆಗ ಭಾರತಿಗೆ ಸ್ವಲ್ಪ ಸಮಾಧಾನವಾಯಿತು. ಈ ಪ್ರಕರಣ ಅಲ್ಲಿಗೆ ಮುಗಿಯಿತು ಅಂತ ನಾನು ಭಾವಿಸಿದ್ದೆ. ಆದರೆ ಕೆಲವು ದಿನಗಳ ನಂತರ ಆ ಹುಡುಗಿಯಿಂದ ಇನ್ನೊಂದು ಪತ್ರ ಬಂತು. ಅದರಲ್ಲಿ ಅವಳು, ‘ನಿಮ್ಮ ಎರಡೂ ಪತ್ರಗಳು ಬಂದಿವೆ. ಮೊದಲ ಪತ್ರದಲ್ಲಿ ನನಗೆ ಮದುವೆಯಾಗಿದೆ ಎಂದು ಬರೆದಿರುವಿರಿ. ಆದರೆ ಇನ್ನೊಂದು ಪತ್ರದಲ್ಲಿ ಫೋಟೋ ಕಳುಹಿಸಿ ಎಂದಿದ್ದೀರಿ. ಇದೆಂಥ ಕಪಟ ನಾಟಕ ನಿಮ್ಮದುʼ ಎಂದು ಬರೆದಿದ್ದಳು. ನಾನು ಬರೆದದ್ದು ಒಂದೇ ಪತ್ರ. ಅವಳು ಏನೋ ಭ್ರಮೆ ಅಥವಾ ಗೊಂದಲದಲ್ಲಿ ಹಾಗೆ ಬರೆದಿರಬಹುದು ಎಂದುಕೊಂಡು ಸುಮ್ಮನಾದೆ. ಅವಳಿಂದ ಮತ್ತೂ ಒಂದು ಪತ್ರ ಬಂತು. ಅದರಲ್ಲಿ ಆಕೆ, ‘ಫೋಟೋ ಕಳಿಸಿ ಎಂದು ಬರೆದ ಎರಡನೆ ಪತ್ರದಲ್ಲಿ ‘ಪಾರ್ವತೀಶ ಅಂತ ಸಹಿ ಮಾಡಿ ಮನೆ ವಿಳಾಸ ಬರೆದಿದ್ದೀರಿ. ಅದು ನಿಮ್ಮ ನಿಜವಾದ ಹೆಸರು. ಡುಂಡಿರಾಜ ಕಾವ್ಯನಾಮ ಇರಬಹುದೆ? ಯಾವುದಕ್ಕೂ ಉತ್ತರ ಹಾಕಿ’ ಎಂದು ಬರೆದಿದ್ದಳು. ಎರಡನೆ ಪತ್ರದ ರಹಸ್ಯ ಆಗ ಬಯಲಾಯಿತು. ಅದನ್ನು ಬರೆದದ್ದು ನಮ್ಮ ಮನೆಗೆ ಬಂದಿದ್ದ ನನ್ನ ಅಕ್ಕನ ಮಗ ಪಾರ್ವತೀಶ. ಇದು ಜೀವನದಲ್ಲಿ ನನಗೆ ಬಂದ ಏಕೈಕ ಪ್ರೇಮ ಪತ್ರದ ಕತೆ.

ನಾಡಿಗ ಹಾಡ್ತಾನ ನಾಡಿಗ, ಕನ್ನಡ ನಾಡಿಗ

ಒಮ್ಮೆ ಕವಿ ಸುಮತೀಂದ್ರ ನಾಡಿಗರು ಯಾವುದೋ ಸಮಾರಂಭಕ್ಕೆ ಮಂಗಳೂರಿಗೆ ಬಂದಿದ್ದರು. ರಾತ್ರಿ ಅವರೊಂದಿಗೆ ಅನೌಪಚಾರಿಕ ಗೋಷ್ಠಿ. ನಾಡಿಗರಿದ್ದರೆ ಕೇಳಬೇಕೆ? ಬಿಸಿ ಬಿಸಿ ಚರ್ಚೆ, ಯಾರನ್ನೋ ಹೊಗಳುವುದು, ಇನ್ನಾರನ್ನೋ ತೆಗಳುವುದು, ಸ್ವ ಕುಚಮರ್ದನ, ಹಾಡು ಹರಟೆಗಳ ಭರಾಟೆಯಲ್ಲಿ ಊಟದ ನೆನಪಾಗುವಾಗ ಮಧ್ಯರಾತ್ರಿ ಕಳೆದಿತ್ತು.

‘ಇಲ್ಲಿ ಒಳ್ಳೆಯ ಸಸ್ಯಾಹಾರಿ ಊಟ ಎಲ್ಲಿ ಸಿಗುತ್ತೆ?’ ಎಂಬ ನಾಡಿಗರ ಪ್ರಶ್ನೆಗೆ ನಾನು

‘ಇಷ್ಟು ಹೊತ್ತಿನಲ್ಲಿಎಲ್ಲೂ ಊಟ ಸಿಗೋಲ್ಲ. ಹಂಪನಕಟ್ಟೆಯಲ್ಲಿ ಬಿಸಿ ಬಿಸಿ ಇಡ್ಲಿ ಸಿಗುತ್ತೆ.‌ ನಡೀರಿ ಸಾರ್, ಹೋಗೋಣ’ ಅಂದೆ.

ಅದಕ್ಕೆ ನಾಡಿಗರ ಪ್ರತಿಕ್ರಿಯೆ ಕೇಳಿ ನಾವೆಲ್ಲರೂ ಬಿದ್ದು ಬಿದ್ದು ನಕ್ಕೆವು. ಅವರು ಹೇಳಿದ್ದು-

‘ಹಂಪನ ಕಟ್ಟೆಯೆ? ನಾನು ಬರೋದಿಲ್ಲ. ಆ ಹಂಪನಾ ಇರುವಲ್ಲಿ ನಾನು ಇರಲಾರೆ’. ನಾಡಿಗರಿಗೆ ಹಂಪನಾ ಎಂದೇ ಖ್ಯಾತರಾಗಿದ್ದ ಸಾಹಿತಿ ಹಂ.ಪ.ನಾಗರಾಜಯ್ಯನವರ ಮೇಲೆ ಬೇಸರವಿತ್ತು. ಕಂಬಾರರ ಮೇಲೂ ಕೋಪವಿತ್ತು.

‘ನಾಡಿಗ ಹಾಡ್ತಾನ ನಾಡಿಗ, ಕನ್ನಡ ನಾಡೀಗ

ಆ ಕಂಬಾರಂಗೆ ಏನ್‌ ಮಾಡ್ತಾನ್‌ ನೋಡೀಗ’

ಎಂದು ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದ ಗೀ ಗೀ ಪದವಂತೂ ನಾನು ‘ಎಂದೂ ಮರೆಯದ ಹಾಡುʼ ಆಕಾಶವಾಣಿಗಾಗಿ ಸುಮತೀಂದ್ರ ನಾಡಿಗರನ್ನು ಸಂದರ್ಶಿಸುವ ಅವಕಾಶ ನನಗೆ ಸಿಕ್ಕಿತ್ತು. ನಾಡಿಗರು ತುಂಬಾ ಪರಿಣಾಮಕಾರಿಯಾಗಿ ಕವನ ವಾಚನ ಮಾಡುತ್ತಿದ್ದರು. ತೀರಿಕೊಳ್ಳುವುದಕ್ಕಿಂತ ಒಂದು ವರ್ಷ ಮೊದಲು ನಾಡಿಗರು ಅವರ ಪತ್ನಿಯೊಂದಿಗೆ ನಮ್ಮ ಮನೆಗೆ ಬಂದಿದ್ದರು. ನನ್ನ ಬರೆಯುವ ಕೋಣೆಗೆ ಬಂದು ಗೋಡೆಯ ಮೇಲಿದ್ದ ನನ್ನ

ಬರೆಯುವುದೆಂದರೆ

ಹೆರಿಗೆಯ ಹಾಗೆ ಏನಂತಿ?

ಹಾಗಾದರೆ

ನೀ ಸಾಹಿತಿಯಲ್ಲ ಬಾಣಂತಿ

ಎಂಬ ಹನಿಗವನ ಓದಿ ‘ಇನ್ನಷ್ಟು ಮತ್ತಷ್ಟು ಹೆರಬೇಕಾಗಿ ವಿನಂತಿ’ ಎಂದು ನಕ್ಕಿದ್ದರು.

ಮೊಗೇರಿಯಲ್ಲಿ ಕಿ. ರಂ.

ಕನ್ನಡ ಕಾವ್ಯದ ಬಗ್ಗೆ ಅದರಲ್ಲೂ ಅಡಿಗರ ಕಾವ್ಯದ ಕುರಿತು ಅತ್ಯುತ್ಸಾಹದಿಂದ ಮಾತನಾಡುತ್ತಿದ್ದ ವಿಮರ್ಶಕ ಕಿ. ರಂ.ನಾಗರಾಜ ಅವರನ್ನು ನಾನು ಮೊದಲ ಸಲ ಭೇಟಿಯಾದದ್ದು 1984ರಲ್ಲಿ. ಮಂಗಳೂರು ವಿ.ವಿ. ಕನ್ನಡ ವಿಭಾಗಕ್ಕೆ ಅತಿಥಿಯಾಗಿ ಬಂದಿದ್ದ ಅವರಿಗೆ ನನ್ನನ್ನು ಪರಿಚಯಿಸಿದವರು ಗೆಳೆಯ ಶಿವರಾಮ್‌ ಪಡಿಕ್ಕಲ್. ಬೆಂಗಳೂರಿಗೆ ಹೋದ ನಂತರ ನಾನು ಅವರಿಗೆ ಕೊಟ್ಟಿದ್ದ ನನ್ನ ಎರಡು ಪುಸ್ತಕಗಳ ಬಗ್ಗೆ ಮತ್ತು ಕೃಷ್ಣ ನಶ್ಯದ ಬಗ್ಗೆ ಪತ್ರ ಬರೆದಿದ್ದರು. ಆಮೇಲೆ ಬೆಂಗಳೂರಿನಲ್ಲಿ ಅನೇಕ ಬಾರಿ ಅವರನ್ನು ಭೇಟಿಯಾಗಿದ್ದೆ. ಅವರೊಂದಿಗೆ ಮಾತನಾಡಿದಾಗಲೆಲ್ಲ ಕಾವ್ಯದ ಬಗೆಗಿನ ನನ್ನ ಕುತೂಹಲ, ಗೊಂದಲ ಇನ್ನಷ್ಟು ಹೆಚ್ಚುತ್ತಿತ್ತು. ನಾನು ಬ್ರಹ್ಮಾವರದಲ್ಲಿದ್ದಾಗ ಕಿ.ರಂ. ಯಾವುದೋ ಕಾರ್ಯಕ್ರಮಕ್ಕೆ ಉಡುಪಿಗೆ ಬಂದಿದ್ದರು. ಕಾರ್ಯಕ್ರಮದ ಬಳಿಕ ನಡೆದ ರಾತ್ರಿಯ ಗೋಷ್ಠಿಯಲ್ಲಿ ಅವರೊಂದಿಗೆ ಮಾತನಾಡುತ್ತಿದ್ದಾಗ, ‘ನೀವು ಅಡಿಗರ ಸಂಬಂಧಿಕರು ಅಂತೀರಿ. ನಾಳೆ ಅವರ ಮೊಗೇರಿ ಮನೆ ನನಗೆ ತೋರಿಸಿ ನೋಡೋಣʼ ಎಂದು ಸವಾಲು ಹಾಕಿದರು. ಅಲ್ಲೆ ಇದ್ದ ಮುರಳೀಧರ ಉಪಾಧ್ಯರು, ‘ನಾನೂ ಬರುತ್ತೇನೆ. ನನ್ನ ಗೆಳೆಯರ ಕಾರಿನಲ್ಲಿ ಹೋಗೋಣʼ ಎಂದರು.

ಮರುದಿನ ಬೆಳಿಗ್ಗೆ 9 ಗಂಟೆಗೆ ಉಪಾಧ್ಯರು ಕಿ.ರಂ. ಅವರೊಂದಿಗೆ ಬ್ರಹ್ಮಾವರಕ್ಕೆ ಬರುತ್ತೇನೆ ಅಂದಿದ್ದರು. ಕಿ.ರಂ. ಏಳುವುದು ತಡವಾದ್ದರಿಂದ ಬರುವಾಗ ಗಂಟೆ ಹತ್ತಾಗಿತ್ತು. ಕಾಫಿ ಕುಡಿದು ಭಾರತಿಯನ್ನೂ ಕರೆದುಕೊಂಡು ಮೊಗೇರಿಗೆ ಹೊರಟೆವು. ಕಿ.ರಂ.ಒಳ್ಳೆಯ ಲಹರಿಯಲ್ಲಿದ್ದರು. ದಾರಿಯುದ್ದಕ್ಕೂ ಅಡಿಗರ ಕವನದ ಬಗ್ಗೆ ಕಾರಿನಲ್ಲೆ ವಿಚಾರ ಸಂಕಿರಣ ನಡೆದಿತ್ತು. ಮೊಗೇರಿ ದೇವಸ್ಥಾನದ ಹತ್ತಿರ ಕಾರು ನಿಲ್ಲಿಸಿ ‘ಇನ್ನು 100 ಮೀಟರ್‌ ಗದ್ದೆ ಅಂಚಿನಲ್ಲಿ ನಡೆದುಕೊಂಡು ಹೋಗಬೇಕುʼ ಅಂದೆ. ಕಾರಿನಿಂದ ಇಳಿದ ಕಿ.ರಂ. ‘ಅಡಿಗರು ನಡೆದಾಡಿದ ಮಣ್ಣು. ಎಲ್ಲರೂ ಇಲ್ಲೇ ಕುಳಿತುಕೊಂಡು ಅವರ ಕವನ ಓದೋಣʼ ಎಂದು ಮಣ್ಣು ರಸ್ತೆಯ ಮೇಲೆ ಕುಳಿತು ಬಿಟ್ಟರು. ಭಾರತಿ ‘ಬೇಗ ಅವರನ್ನು ಮನೆಗೆ ಕರೆದುಕೊಂಡು ಬನ್ನಿʼ ಎಂದು ಮನೆಗೆ ಹೋದಳು. ಉಪಾಧ್ಯರು ಕಿ.ರಂ. ಅವರ ಸೂಚನೆಯಂತೆ ಅಡಿಗರ ಕವನ ಸಂಕಲನ ತಂದಿದ್ದರು. ಅವರು ಆರಿಸಿದ ಕವನ ಓದತೊಡಗಿದರು. ಕಿ.ರಂ. ಕಣ್ಣು ಮುಚ್ಚಿಕೊಂಡು ತಲೆದೂಗುತ್ತಿದ್ದರು. ಅಷ್ಟು ಹೊತ್ತಿಗೆ ಊರಿನ ಕೆಲವರು ದೂರದಲ್ಲಿ ನಿಂತು ನಮ್ಮನ್ನು ಅಚ್ಚರಿಯಿಂದ ನೋಡುತ್ತಿರುವುದನ್ನು ನಾನು ಗಮನಿಸಿದೆ. ಅಲ್ಲೇ ಇದ್ದರೆ ಇನ್ನಷ್ಟು ಜನರು ಸೇರಿ ನಾವು ನಗೆಪಾಟಲಿಗೆ ಈಡಾಗುವ ಸಂಭವವಿತ್ತು. ಕಿ.ರಂ.ಅವರನ್ನು ಒತ್ತಾಯದಿಂದ ಎಬ್ಬಿಸಿ ಮನೆಗೆ ಕರೆದುಕೊಂಡು ಹೋದೆ.

ಮನೆಯ ಹೆಬ್ಬಾಗಿಲಿನಲ್ಲೆ ಕುಳಿತುಕೊಂಡರು. ಅಲ್ಲಿದ್ದ ಕೆಲಸದಾಳು ಶಂಕ್ರನ ಹತ್ತಿರ ‘ಜಗತ್ತಿನ ಶ್ರೇಷ್ಠ ಕವಿ ಯಾರು? ಗೊತ್ತಾ?ʼ ಎಂದು ಕೇಳಿದರು. ಅವನು ‘ಗೊತ್ತಿಲ್ಲ’ ಎಂದ. ‘ಯೋಚನೆ ಮಾಡು’ ಅಂದರು . ಆತ ಸ್ವಲ್ಪ ಯೋಚಿಸಿ ‘ನೀವೆಯಾ?ʼ ಅಂದ. ಅಷ್ಟು ಹೊತ್ತಿಗೆ ನನ್ನ ಮಾವ ಬಂದರು. ಇವರು ಅಡಿಗರ ತಮ್ಮ ಎಂದು ಕಿ.ರಂ.ಗೆ ಪರಿಚಯಿಸಿದೆ. ಮಾವನವರು ‘ಹ್ವಾಯ್‌, ಎಷ್ಟು ಹೊತ್ತಿಗೆ ಬಂದ್ರಿ? ನಾನು ಒಂದು ಕ್ರಿಯೆ ನಡೆಸುಕೆ ಹೋಯಿದ್ದೆ. ಸ್ನಾನ ಮಾಡಿ ಬತ್ತೆ. ಒಳಗೆ ಬಂದ್‌ ಕೂಕಣಿ’ ಅಂದರು. ಕಿ.ರಂ. ‘ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರಪ್ರಯೋಗದಲಿ ಪಾರಂಗತ’ ಎಂಬ ಅಡಿಗರ ಭೂಮಿಗೀತದ ಸಾಲನ್ನು ಹೇಳಿ ನಕ್ಕರು. ಮಧ್ಯಾಹ್ನ ಊಟ ಮಾಡಿ ತುಸು ಹೊತ್ತು ಮಲಗಿದರು. ವಾಪಾಸು ಹೋಗುವಾಗ ನನ್ನ ಮಾವನವರ ಕಾಲು ಮುಟ್ಟಿ ನಮಸ್ಕರಿಸಿದ್ದರು.

ಪಂಚ ಪಾಂಡವರಿಗೆ ಒಬ್ಬಳು ದ್ರೌಪದಿ

ಅಜೆಕಾರು ನನ್ನ ಕೇಂದ್ರ ಶಾಖೆ. ಅಲ್ಲಿ ಎರಡು ದಿನ ಕೆಲಸ ಮಾಡಿ ಉಳಿದ ನಾಲ್ಕು ದಿನಗಳಲ್ಲಿ ಮುದ್ರಾಡಿ, ಕಾರ್ಕಳ, ದೂಪದಕಟ್ಟೆ ಮತ್ತು ಮಾಳ ಎಂಬ ಇನ್ನೂ ನಾಲ್ಕು ಶಾಖೆಗಳಿಗೆ ಹೋಗಿ ಕೆಲಸಮಾಡಬೇಕಿತ್ತು. ಪಂಚ ಪಾಂಡವರಿಗೆ ಒಬ್ಬಳು ದ್ರೌಪದಿ ಇದ್ದಂತೆ ಐದು ಶಾಖೆಗಳಿಗೆ ನಾನು ಒಬ್ಬ ಕೃಷಿ ಅಧಿಕಾರಿ. ಕೆಲಸಕ್ಕೆ ಹಾಜರಾದ ದಿನ ಅಜೆಕಾರು ಶಾಖೆಯ ಮೆನೇಜರ್ ಮಧುಕರ ಮಲ್ಯರು ಒಂದು ಹಳೆಯ ರಾಜದೂತ್‌ ಬೈಕ್ ತೋರಿಸಿ ಇದು ನಿಮಗೆ ಎಂದರು! ಅದನ್ನು ನೋಡಿ ನನಗೆ ಶಾಕ್. ಮಂಗಳೂರು, ಉಡುಪಿಯಲ್ಲಿ ಖಾಸಗಿ ಬಸ್ಸುಗಳ ಸೌಕರ್ಯ ಎಷ್ಟು ಚೆನ್ನಾಗಿತ್ತು ಎಂದರೆ ಓಡಾಡಲು ನನ್ನದೇ ಆದ ವಾಹನ ಬೇಕು ಅನ್ನಿಸಲೇ ಇಲ್ಲ. ಹೀಗಾಗಿ ನಾನು ಬೈಕ್ ಅಥವಾ ಸ್ಕೂಟರ್ ಕಲಿಯುವ ಗೋಜಿಗೆ ಹೋಗಿರಲಿಲ್ಲ. ಆದರೆ ಇಲ್ಲಿ ನನಗಿಂತ ಮೂರು ಪಟ್ಟು ತೂಕದ ಬೈಕ್ ಬಿಡುವುದನ್ನು ಕಲಿಯುವುದು ಅನಿವಾರ್ಯವಾಯಿತು. ಬೈಕ್ ಓಡಿಸುವುದು ನಾನು ಎಣಿಸಿದಷ್ಟು ಕಠಿಣ ಅನ್ನಿಸಲಿಲ್ಲ. ನಿಜಕ್ಕೂ ಕಷ್ಟ ಅನ್ನಿಸಿದ್ದು ಆ ಹೆಣ ಭಾರದ ಬೈಕನ್ನು ಸೆಂಟ್ರಲ್ ಸ್ಟ್ಯಾಂಡ್‌ ಹಾಕಿ ನಿಲ್ಲಿಸುವುದು!

ನಮ್ಮ ಮನೆ ರಸ್ತೆಗಿಂತ 15 ಅಡಿಯಷ್ಟು ಕೆಳಗಿತ್ತು. ಹೀಗಾಗಿ ಹೊರಗೆ ಹೋಗಬೇಕಾದರೆ ಬೆಟ್ಟವನ್ನು ಏರುವಂತೆ ಮಣ್ಣು ರಸ್ತೆಯ ಮೇಲೆ ಬೈಕ್ ಹತ್ತಿಸಬೇಕು. ಅರ್ಧ ದೂರ ಏರುವಷ್ಟರಲ್ಲಿ ಬೈಕ್ ಆಫ್ ಆಗಿ ಹಿಮ್ಮುಖವಾಗಿ ಚಲಿಸುತ್ತ ಅಂಗಳಕ್ಕೆ ಮರಳಿ ಬರುತ್ತಿತ್ತು. ಪುನಃ ಅದನ್ನು ಬೈದುಕೊಳ್ಳುತ್ತ ತುಳಿದು ತುಳಿದು ಸ್ಟಾರ್ಟ್ ಮಾಡಲು ಒದ್ದಾಡುತ್ತಿದ್ದೆ. ದಿನವೂ ಹೀಗೆ ನಾಲ್ಕಾರು ಬಾರಿ ಹತ್ತಿ ಇಳಿದ ಬಳಿಕ ಕೊನೆಗೊಮ್ಮೆ ಬೈಕ್ ರಸ್ತೆಗೆ ಹೋಗುತ್ತಿತ್ತು. ನನ್ನಾಕೆ ದೇವರಿಗೆ ಕೈ ಮುಗಿದು ನನಗೆ ಟಾಟಾ ಮಾಡಿ ಗೇಟ್ ಹಾಕಿಕೊಳ್ಳುತ್ತಿದ್ದಳು. ಬ್ಯಾಂಕು ಬೈಕಿನದಾದರೂ ನಿಯಮಾನುಸಾರ ಖಾಸಗಿ ಉಪಯೋಗಕ್ಕೂ ಬಳಸಬಹುದಿತ್ತು. ನಾನು ಬೈಕ್ ಬಿಡಲು ಶುರು ಮಾಡಿ ಎರಡು ತಿಂಗಳಾದರೂ ಹಿಂದೆ ಕುಳಿತುಕೊಳ್ಳಲು ನನ್ನಾಕೆ ಸಿದ್ಧಳಿರಲಿಲ್ಲ. ತುಂಬಾ ಒತ್ತಾಯ ಮಾಡಿದ ಬಳಿಕ ಒಂದು ದಿನ ಧೈರ್ಯ ಮಾಡಿದಳು. ನಮ್ಮಿಬ್ಬರ ಮಧ್ಯೆ ನಮ್ಮ ಮೂರು ವರ್ಷದ ಮಗಳು ಸಹಜಾಳನ್ನು ಕೂರಿಸಿಕೊಂಡು ಮಿತ್ರರೊಬ್ಬರ ಮನೆಗೆ ಹೊರಟೆವು.

ದಾರಿಯುದ್ದಕ್ಕೂ ಅದೂ ಇದೂ ಮಾತಾಡುತ್ತಿದ್ದ ನನ್ನಾಕೆ ‘ಅಡ್ಡಿಲ್ಯೆ. ನೀವ್ ಬೈಕ್ ಲಾಯ್ಕ್ ಬಿಡತ್ರಿ’ಎಂದು ಬೆನ್ನು ತಟ್ಟಿದಳು.

ಹೆಂಡತಿಯ ಹೊಗಳಿಕೆ ಕೇಳಿ ನಾನು ಹಿರಿ ಹಿರಿ ಹಿಗ್ಗಿದೆ. ಮುಖ್ಯ ರಸ್ತೆ ಮುಗಿದು ಕೆಂಪು ಮಣ್ಣಿನ ದಾರಿಯಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಲು ಶುರುವಾಯಿತು. ನನ್ನಾಕೆ ‘ನಿಧಾನ ನಿಧಾನ’ ಅಂದಳು. ನಾನು ʼಡೋಂಟ್ ವರಿʼ ಅನ್ನುತ್ತಾ ಬ್ಯಾಲೆನ್ಸ್ ಮಾಡಿಕೊಂಡು ಮುಂದೆ ಸಾಗಿದೆ. ಸುಮಾರು 100 ಮೀಟರ್ ಹೋದ ನಂತರ ಹೆಂಡತಿಯ ಹತ್ತಿರ ‘ರೈಟಾ? ಲೆಫ್ಟಾ?’ ಅಂತ ಕೇಳಿದೆ. ಉತ್ತರ ಬರಲಿಲ್ಲ. ಇನ್ನೊಮ್ಮೆ ಕೇಳಿದಾಗ ಮಗಳು ‘ಅಮ್ಮ ಇಲ್ಲ. ಓ ಅಲ್ಲಿ ನಡ್ಕೊಂಡು ಬರ್ತಾ ಇದಾಳೆ’ ಅಂದಳು. ಬೈಕ್ ನಿಲ್ಲಿಸಿ ಅವಳಿದ್ದಲ್ಲಿಗೆ ಓಡಿದೆ. ಬೈಕ್ ಸ್ಕಿಡ್ ಆದಾಗ ಅವಳು ಬೈಕಿಂದ ಬಿದ್ದದ್ದು ನನಗೆ ಗೊತ್ತೇ ಆಗಿರಲಿಲ್ಲ. ಬೀಳುವಾಗ ನೆಲಕ್ಕೆ ಕೈ ಊರಿಕೊಂಡದ್ದರಿಂದ ಅಂಗೈಯಲ್ಲಿ ಗಾಯವಾಗಿ ರಕ್ತ ಸುರಿಯುತ್ತಿತ್ತು. ನಾನು ಅವಳನ್ನು ಬೀಳಿಸಿದ್ದಲ್ಲದೆ ‘ನಿಂಗೆ ಬೈಕ್ ಮ್ಯಾಲೆ ಕೂತ್ಕಂಬ್ಕೆ ಬತ್ತಿಲ್ಲೆ’ ಅಂದದ್ದು ಗಾಯದ ಮೇಲೆ ಉಪ್ಪು ಸವರಿದಂತಾಯಿತು. ಇನ್ನೊಮ್ಮೆ, ನಾನು ಬ್ಯಾಂಕಿನಿಂದ ಬಂದು ಬೈಕ್‌ ನಿಲ್ಲಿಸುತ್ತಿದ್ದಾಗ ಅಪ್ಪ ಬಂದ್ರು ಎಂದು ಖುಷಿಯಿಂದ ಓಡಿ ಬಂದ ಮಗಳ ಕಾಲಿಗೆ ಬಿಸಿ ಸೈಲೆನ್ಸರ್‌ ತಾಗಿ ತುಂಬಾ ನೋವು ಅನುಭವಿಸಿದ್ದಳು.

(ಸದ್ಯದಲ್ಲೆ ಪ್ರಕಟವಾಗಲಿರುವ ಎಚ್.ಡುಂಡಿರಾಜ್ ಅವರ ಆತ್ಮಕಾದಂಬರಿ ‘ಡುಂಡಿ ಯಾತ್ರೆʼಯಿಂದ ಆಯ್ದ ಭಾಗಗಳು)