ಕನ್ನಡಪ್ರಭ ವಾರ್ತೆ ಮಂಡ್ಯ
ಸಾಹಿತಿ ಟಿ.ಸತೀಶ್ ಜವರೇಗೌಡರ ಜೀವನ್ಮುಖಿ ಕವನ ಸಂಕಲನದಲ್ಲಿನ ಅಪ್ಪ ಕವನವು ವಿಜಯನಗರ ಜಿಲ್ಲೆಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ತರಗತಿಗಳ ಪಠ್ಯಪುಸ್ತಕಕ್ಕೆ ಆಯ್ಕೆಯಾಗಿದೆ.
ರಾಜ್ಯ ಶಿಕ್ಷಣ ನೀತಿ ಅಡಿಯಲ್ಲಿ ಸಿದ್ಧಪಡಿಸಿರುವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಬಿ.ಎಸ್ಸಿ., ಬಿ.ಎಸ್ಸಿ(ಜಿ.ಎಂ.ಟಿ.), ಮತ್ತು ಬಿಸಿಎ ಪದವಿ ತರಗತಿಗಳ ನಾಲ್ಕನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯಪುಸ್ತಕವಾದ ವಿಜ್ಞಾನ ಸೌರಭಕ್ಕೆ ‘ಅಪ್ಪ’ ಕವನ ಸೇರ್ಪಡೆಯಾಗಿ ಸ್ಥಾನ ಪಡೆದಿದೆ.
ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಮಂಗಲ ಟಿ.ಸತೀಶ್ ಜವರೇಗೌಡರು ಮಂಡ್ಯ ಮಾತ್ರವಲ್ಲದೆ ನಾಡಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದಲ್ಲಿ ಚಿರಪರಿಚಿತರು. ಸಜಗೌ ಎಂಬ ಕಾವ್ಯ ನಾಮದಲ್ಲಿ ಜೀವನ್ಮುಖಿ, ಸಂಜೆ ಮಳೆ, ಹೊಳೆ ಜಂಗಮನ ಜೋಳಿಗೆ, ಗಾಳಿಪಟ, ಕುಹೂ ಕುಹೂ ಕೋಗಿಲೆ, ದಿವ್ಯ ದೀವಿಗೆ ಕವನ ಸಂಕಲನಗಳನ್ನು ರಚಿಸಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಉಪಾಧ್ಯಕ್ಷ, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಮತ್ತು ಅದಮ್ಯ ರಂಗಶಾಲೆ ಗೌರವ ಕಾರ್ಯದರ್ಶಿಯಾಗಿಯೂ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸತೀಶ್ ಜವರೇಗೌಡ ಅವರು ಮೈಸೂರು ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳ ಬಿ.ಎಸ್ಸಿ., ಬಿಎಸ್ಸಿ (ಜಿ.ಎಂ.ಟಿ.), ಬಿಸಿಎ ನಾಲ್ಕನೆಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮುಂದಿನ ಮೂರು ವರ್ಷಗಳ ಶೈಕ್ಷಣಿಕ ಅವಧಿಯವರೆಗೂ ಈ ಅಪ್ಪ ಕವನ ಪಠ್ಯವಾಗಿ ಬೋಧಿಸಲ್ಪಡಲಿದೆ.
ವೃತ್ತಿಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕ ಮತ್ತು ಪ್ರವೃತ್ತಿಯಲ್ಲಿ ಸೃಜನಶೀಲ ಪ್ರತಿಭಾವಂತ ಕವಿ ಟಿ.ಸತೀಶ್ ಜವರೇಗೌಡರ ಕವನವು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಇತ್ತೀಚಿಗಷ್ಟೇ ಸತೀಶ್ ಜವರೇಗೌಡರ ಬೆಳಕಿಗೂ ಶೋಕದ ಗ್ರಹಣ ಎಂಬ ಕವನವು ಶಿವಮೊಗ್ಗದ ಕುವೆಂಪು ವಿವಿಯ ಬಿ.ಎಸ್ಸಿ. ಪದವಿಯ ತೃತೀಯ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯಪುಸ್ತಕದ ವಿಜ್ಞಾನ ಸೌರಭಕ್ಕೆ ಆಯ್ಕೆಯಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳ ಬಿ.ಎಸ್ಸಿ.ಯ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 2025 ರಿಂದ 2018ರ ಶೈಕ್ಷಣಿಕ ವರ್ಷದವರೆಗೂ ಈಗಾಗಲೇ ಬೋಧಿಸಲ್ಪಡುತ್ತಿರುವುದನ್ನು ಸ್ಮರಿಸಬಹುದು.