ಹಣಕ್ಕಾಗಿ ಮತ ಮಾರಿಕೊಂಡ್ರೆ, ನಮ್ಮ ಜೀವನ ನಾಶ: ವೆಂಕಟ್‌

KannadaprabhaNewsNetwork |  
Published : Apr 14, 2026, 02:00 AM IST
13ಜಿಯುಡಿ1a | Kannada Prabha

ಸಾರಾಂಶ

ಸಂವಿಧಾನದ ಮೂಲಕ ನಾವು ಪಡೆದುಕೊಂಡಂತಹ ಮತದಾನದ ಹಕ್ಕನ್ನು ಹಣಕ್ಕೆ ಮಾರಿಕೊಂಡರೇ ನಮ್ಮ ಜೀವನ ಸರ್ವನಾಶ ಮಾಡಿಕೊಂಡಂತೆ. ಆದ್ದರಿಂದ ತಾವು ಜನರ ಸಮಸ್ಯೆಗಳನ್ನು ಬಗೆಹರಿಸುವಂತಹ ಪಕ್ಷದ ಪರ ನಿಲ್ಲಬೇಕು ಎಂದು ಕರ್ನಾಟಕ ಗ್ರಾಮೀಣ ಕೃಷಿ ಕೂಲಿಕಾರರ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸಂವಿಧಾನದ ಮೂಲಕ ನಾವು ಪಡೆದುಕೊಂಡಂತಹ ಮತದಾನದ ಹಕ್ಕನ್ನು ಹಣಕ್ಕೆ ಮಾರಿಕೊಂಡರೇ ನಮ್ಮ ಜೀವನ ಸರ್ವನಾಶ ಮಾಡಿಕೊಂಡಂತೆ. ಆದ್ದರಿಂದ ತಾವು ಜನರ ಸಮಸ್ಯೆಗಳನ್ನು ಬಗೆಹರಿಸುವಂತಹ ಪಕ್ಷದ ಪರ ನಿಲ್ಲಬೇಕು ಎಂದು ಕರ್ನಾಟಕ ಗ್ರಾಮೀಣ ಕೃಷಿ ಕೂಲಿಕಾರರ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಹಮ್ಮಿಕೊಂಡಿದ್ದ 3ನೇ ಕರ್ನಾಟಕ ಗ್ರಾಮೀಣ ಕೃಷಿ ಕೂಲಿಕಾರರ ಜಿಲ್ಲಾ ಸಮ್ಮೇಳನ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಚುನಾವಣಾ ವೇಳೆ ಹಣ ಸೇರಿ ಇತರೆ ಆಮಿಷಗಳಿಗೆ ಬಲಿಯಾಗಿ 5 ವರ್ಷಗಳ ಕಾಲ ವಿವಿಧ ಸಮಸ್ಯೆಗಳನ್ನು ಎದುರಿಸುತ್ತೇವೆ. ಕಳೆದ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಸಭೆಗಳನ್ನು ಮಾಡಿದಾಗ ಜನರು ಸೇರಿರುವುದನ್ನು ಕಂಡು ಸಿಪಿಎಂ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಮೂಡಿತ್ತು. ಆದರೆ 2000 ರು.ಹಣದ ಮುಂದೆ ನಾವು ಸೋಲಬೇಕಾಯಿತು. ಇದೀಗ ಗೆದ್ದವರು, ವೋಟು ಹಾಕಿದವರು ಮನೆಯಲ್ಲಿದ್ದರೇ, ಸಿಪಿಎಂ ಪಕ್ಷ ಸದಾ ಜನರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಹೋರಾಟಗಳನ್ನು ಮಾಡುತ್ತಿದೆ.

ಇನ್ನೂ ಗ್ಯಾಸ್ ಬೆಲೆ ಹೆಚ್ಚಾಗಲು ಗಲ್ಫ್ ರಾಷ್ಟ್ರಗಳ ಯುದ್ದ ಕಾರಣವಲ್ಲ. ನರೇಂದ್ರ ಮೋದಿ ಕಾರಣ. ಅದೇ ರೀತಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ವಿವಿಧ ಆಮಿಷಗಳನ್ನು ತೋರಿಸಿದ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಸಹ ಜನರಿಗಾಗಿ ಏನು ಮಾಡಲಿಲ್ಲ. ಮದುವೆಗೆ ಈ ಹಿಂದೆ ವರದಕ್ಷಿಣೆಯಾಗಿ ಹಣ ಕೇಳುತ್ತಿದ್ದರು, ಆದರೆ ಇದೀಗ ಒಳ್ಳೆಯ ವರ ಬೇಕು ಎಂದರೇ ಕನಿಷ್ಠ 2 ಎಕರೆ ಜಮೀನು ಇರಬೇಕು ಎಂದು ಬೇಡಿಕೆ ಹಾಕುತ್ತಿದ್ದಾರೆ. ಜಮೀನಿಗೆ ಅಷ್ಟೊಂದು ಬೇಡಿಕೆಯಿದೆ. ಆದರೆ ನಿಮ್ಮ ಬಳಿ ಜಮೀನೇ ಇಲ್ಲ. ನಮ್ಮ ಹೋರಾಟದ ಮುಖ್ಯ ಉದ್ದೇಶವೇ ಕನಿಷ್ಠ ಒಂದು ಕುಟುಂಬಕ್ಕೆ 2 ಎಕರೆ ಜಮೀನು ಕೊಡಿಸುವುದು ಎಂದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಡಾ.ಅನೀಲ್ ಕುಮಾರ್ ಮಾತನಾಡಿ, ಇಡೀ ವಿಶ್ವದಲ್ಲಿ ನೈತಿಕತೆ ಇರುವಂತಹ ಏಕೈಕ ಪಕ್ಷ ಎಂದರೇ ಅದು ಸಿಪಿಎಂ ಪಕ್ಷ. ಕೆಲವೊಂದು ಕಾರಣಗಳಿಂದ ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾಯ್ತು. ಆದರೆ ಕೆಲವೊಂದು ಕಾರಣಗಳಿಂದ ನಾನು ಸೋತೆ. ಆದರೆ ನಾನು ಮಾರಾಟವಾಗಿದ್ದೇನೆ ಎಂದು ನಾನು ಸಿಪಿಎಂ ಪಕ್ಷದವರು ಎಂದು ಹೇಳಿಕೊಂಡವರೇ ಮಾತನಾಡಿದರು. ಆದರೆ ನಾನು ನಿಷ್ಠಾವಂತ ಕಾರ್ಯಕರ್ತ. ಪಕ್ಷ ಹೇಳಿದಂತೆ ನಾನು ಮುನ್ನೆಡೆಯುವವ ವ್ಯಕ್ತಿ ಎಂದರು.

ಇನ್ನೂ ಕಳೆದ 15 ವರ್ಷಗಳ ಹಿಂದೆ ದಿವಂಗತ ಶ್ರೀರಾಮರೆಡ್ಡಿ ಹಾಗೂ ನಾನು ಚಿಕ್ಕಬಳ್ಳಾಪುರದಲ್ಲಿ ಪ್ರೆಸ್ ಮೀಟ್ ಮಾಡಿದ್ದೆವು. ಅಂದು ಕೊಳಚೆ ನೀರು ನಮ್ಮ ಭಾಗಕ್ಕೆ ಬೇಡ. ನಮ್ಮಲ್ಲಿ ಪ್ಲೋರೋಸಿಸ್ ಹೆಚ್ಚಾಗಿ ನರಳಾಡುತ್ತಿದ್ದೇವೆ. ಕೊಳಚೆ ನೀರಿನ ವಿಷಪೂರಿತ ನೀರು ನಮಗೆ ಬೇಡ ಎಂದು ಹೇಳಿದ್ದೆವು. ಆದರೂ ಇಂದು ಕೊಳಚೆ ನೀರು ಪೂರೈಕೆ ಆಗುತ್ತಿದೆ. ಇದಿರಂದ ದೊಡ್ಡ ಪ್ರಮಾದ ಸಂಭವಿಸಬಹುದಾಗಿದೆ. ಉಳುವವನೇ ಭೂಮಿಯ ಒಡೆಯ ಎಂಬ ಹೋರಾಟ ಮಾಡಿದ್ದು, ಸಿಪಿಎಂ ಪಕ್ಷ ಅದರಿಂದಲೇ ಇಂದು ಹಲವರಿಗೆ ಭೂಮಿ ಸಿಕ್ಕಿದೆ. ಇದೀಗ ಮತ್ತೆ ಈ ಹೋರಾಟ ಮಾಡಬೇಕಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡೂ ಪಕ್ಷಗಳು ಜನರಿಗೆ ಮೋಸ ಮಾಡುವುದು ಬಿಟ್ಟರೇ ಬೇರೆನೂ ಮಾಡೋಲ್ಲ ಎಂದು ಆರೋಪಿಸಿದರು.

ಇನ್ನೂ ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಸಂಘಟನೆಯ ರಾಜ್ಯ ಅಧ್ಯಕ್ಷ ಪುಟ್ಟಮಾದಪ್ಪ, ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ನಾರಾಯಣ, ಚಿಕ್ಕಗಂಗಪ್ಪ, ಜಯರಾಮರೆಡ್ಡಿ, ಸಿದ್ದಗಂಗಪ್ಪ ಸೇರಿದಂತೆ ಕೆಪಿಆರ್ಎಸ್, ಸಿಐಟಿಯು ಹಾಗೂ ಸಿಪಿಎಂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

PREV

Recommended Stories

ತಿಳಿದಿದ್ದೂ ಮರೆತಿರಬಹುದಾದ 6 ಬಹುಮುಖ್ಯ ಸಲಹೆ
ಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮ : ಸಿಎಂ