ಬೆಂಗಳೂರು : 2025ನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ತುದಿಗಾಲಲ್ಲಿ ನಿಂತಿದ್ದು, ಪಾರ್ಟಿ ಮೂಡ್‌ಗೆ ಜಾರಿ ತಡರಾತ್ರಿವರೆಗೆ ಭರ್ಜರಿ ಮೋಜು ಮಸ್ತಿಯಲ್ಲಿ ತೇಲಲು ಜನ ಕಾತುರರಾಗಿದ್ದಾರೆ. ನೂತನ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಇದಕ್ಕಾಗಿ ರಾಜಧಾನಿಯ ಪ್ರತಿಷ್ಠಿತ ತಾಣಗಳು ಸಜ್ಜಾಗಿವೆ.
ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್‌ಗಳ, ಮಾರತ್ತಹಳ್ಳಿ ರಸ್ತೆಗಳು ವಿದ್ಯುದಲಂಕಾರದಿಂದ ಜಗಮಗಿಸುತ್ತಿವೆ. ಹೊಟೆಲ್, ಪಬ್ ಹೋಂ ಸ್ಟೇ ಜೊತೆಗೆ ಕಾರ್ಪೊರೆಟ್ ಕಂಪನಿ ಪಾರ್ಟಿಗಳ ಜೊತೆಗೆ ಮನೆಗಳಲ್ಲೂ ಪಾರ್ಟಿಯನ್ನು ಖಾಸಗಿಯಾಗಿಯೂ ಆಯೋಜನೆ ಮಾಡಿಕೊಳ್ಳಲಾಗಿದೆ.
ಸೋಮವಾರವೇ ಬ್ರಿಗೇಡ್ ರೋಡ್, ಚರ್ಚ್‌ಸ್ಟ್ರೀಟ್‌ಗಳಲ್ಲಿ ಕಟ್ಟಡ, ಮರಗಳನ್ನು ವಿದ್ಯುದೀಪಗಳಿಂದ ವಿಶೇಷವಾಗಿ ಅಲಂಕೃಗೊಳಿಸಲಾಗಿದೆ. ಪಾರ್ಟಿಗಳಿಗೆ ಅನುಕೂಲವಾಗುವಂತ ಸೆಟ್‌ಗಳನ್ನು ಹೊಟೆಲ್‌ಗಳಲ್ಲಿ ಅಳವಡಿಸಲಾಗಿದೆ. ಬೃಹತ್ ಸ್ಕ್ರೀನಗಳನ್ನು ಅಳವಡಿಸಲಾಗಿದ್ದು, ಪಾರ್ಟಿಯ ಮತ್ತು ಏರಿಸಲು ಬೇಕಾದಂತ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಸೋಮವಾರವೇ ಜನ ಆಗಮಿಸಿ ಅಲಂಕೃತಗೊಂಡ ಸ್ಥಳಗಳಲ್ಲಿ ನಿಂತು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡುಬಂತು. ಜೊತೆಗೆ ಪಬ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿ ಆಯೋಜನೆ ಬಗ್ಗೆ ವಿಚಾರಿಸುವುದು, ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.
ಬ್ಯಾರಿಕೇಡ್ ಅಳವಡಿಕೆ: ಬ್ರಿಗೇಡ್ ರಸ್ತೆಯಲ್ಲಿ ಕಿಕ್ಕಿರಿದು ಜನ ಸೇರುವುದರಿಂದ ಜನರ ಓಡಾಟಕ್ಕೆ ಅನುಕೂಲ ಆಗುವಂತೆ ಸೋಮವಾರ ಬ್ಯಾರಿಕೇಡ್ ಹಾಕಲಾಗಿದೆ. ಭದ್ರತೆಗಾಗಿ ಸಿ.ಸಿ.ಕ್ಯಾಮೆರಾ , ಅಗತ್ಯ ಸೂಚನೆ ಸಲಹೆ ನೀಡಲು ಮೈಕ್‌ಗಳನ್ನು ಅಳವಡಿಸಿದ್ದಾರೆ. ಶ್ವಾನದಳ, ವಿದ್ವಂಸಕ ತಡೆ ತಂಡದಿಂದ ತಪಾಸಣೆ ನಡೆಸಲಾಗಿದೆ. ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಆಗಮಿಸಿ ಭದ್ರತೆಯನ್ನು ಪರಿಶೀಲಿಸಿ ಅಗತ್ಯ ಸೂಚನೆ ನೀಡಿದ್ದಾರೆ. ಸನಿಹದ ಹೊಟೆಲ್‌ಗಳಿಗೆ ತೆರಳಿ ಸಿ.ಸಿ.ಟಿವಿಗಳನ್ನು ವೀಕ್ಷಿಸಿದ್ದಾರೆ.
ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆ ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಅನುಮತಿ ನೀಡಿದೆ. ಸಾರ್ವಜನಿಕರಿಗೆ ನಿಗದಿತ ಸಮಯದ ಮಿತಿಯೊಳಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶವಿದ್ದು, ಅದಾದ ಬಳಿಕ ಪಾರ್ಟಿಗಳನ್ನು ಮುಂದುವರಿಸದಂತೆ ಹಾಗೂ ಗ್ರಾಹಕರನ್ನು ಕಳಿಸುವಂತೆ ಹೊಟೆಲ್‌ನವರಿಗೆ ಸೂಚಿಸಿದ್ದಾರೆ.
ಏನು ಮಾಡಬೇಕು:
1) ಮುಖ್ಯವಾಗಿ ಯುವತಿಯರು, ಮಹಿಳೆಯರು ಅಪಾಯ ಎನ್ನಿಸಿದ, ವಿಪರೀತ ಜನಸಂದಣಿ ಸ್ಥಳದಿಂದ ದೂರವಿರಿ. ತಮ್ಮ ಚಲನವಲನದ ಮಾಹಿತಿ ಕುಟುಂಬಕ್ಕೆ ನೀಡಿ. ಮನೆಗೆ ಲೈವ್ ಲೊಕೇಶನ್ ಮೂಲಕ ಸಂಪರ್ಕದಲ್ಲಿರಿ. ಬೆಲೆಬಾಳುವ ಆಭರಣ ಧರಿಸದಿರಿ.
2) ಅಧಿಕೃತ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಿ, ಹೆಚ್ಚು ಬೆಳಕಿರುವ ಪ್ರದೇಶದಲ್ಲೇ ಇರಬೇಕು.
3) ಪೊಲೀಸ್, ಭದ್ರತಾ ಸಿಬ್ಬಂದಿ ಜೊತೆಗೆ ಸಹಕರಿಸಿ. ನಿಗದಿತ ರಸ್ತೆಗಳಲ್ಲೇ ಸಂಚರಿಸಿ.
4) ಪಾರ್ಟಿಗೆ ಬಂದು ಹೋಗುವಾಗ ಆಟೋ, ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಅಧಿಕೃತತೆ ಖಾತ್ರಿಪಡಿಸಿಕೊಳ್ಳಿ.
5) ಇತರೆ ಧರ್ಮದವರ ಭಾವನೆಗೆ ಘಾಸಿಯಾಗದಂತೆ ವರ್ಷಾಚರಣೆ ಮಾಡಿ.
ಏನು ಮಾಡಬಾರದು:
1) ಮದ್ಯಪಾನ, ಮಾದಕ ವಸ್ತು ಸೇವನೆ ಮಾಡದಿರಿ. ಅಮಲಿನಲ್ಲಿ ವಾಹನ ಸಂಚಾರ, ವೀಲಿಂಗ್, ನಿರ್ಬಂಧಿತ ಪ್ರದೇಶ ಪ್ರವೇಶ ಬೇಡ.
2) ಪೊಲೀಸ್ ಬ್ಯಾರಿಕೇಡ್ ದಾಟಿ ಹೋಗುವ, ಸಾರ್ವಜನಿಕ ಸ್ವತ್ತು ಹಾನಿ ಮಾಡಬೇಡಿ.
3) ವಿಕೃತ ಮುಖವಾಡ ಧರಿಸುವುದು, ಹಾರ್ನ್, ಪೀಪಿ ಊದುವುದು ಮಾಡದಿರಿ.
4) ತಮಾಷೆ, ಮೋಜಿಗಾಗಿ ಪೊಲೀಸ್ ತುರ್ತು ಸಂಖ್ಯೆ, ಸಹಾಯವಾಣಿಗೆ ಕರೆ ಮಾಡಬೇಡಿ.
5) ತಮ್ಮ ಜೊತೆಗಿನ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ.
ತಡರಾತ್ರಿ 2 ಗಂಟೆಯವರೆಗೆ ಮೆಟ್ರೋ, ಸಾರಿಗೆ ಸೇವೆ ಲಭ್ಯ
ಬಿಎಂಟಿಸಿಯು ಡಿಸೆಂಬರ್ 31ರಂದು ಎಂಜಿ ರಸ್ತೆಯಿಂದ ನಗರದ ನಾನಾ ಪ್ರದೇಶಗಳಿಗೆ ರಾತ್ರಿ 11 ರಿಂದ ತಡರಾತ್ರಿ 2 ಗಂಟೆಯವರೆಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ನಮ್ಮ ಮೆಟ್ರೋ ಡಿ. 31 ರ ತಡರಾತ್ರಿ ತನ್ನ ಸೇವಾ ಅವಧಿಯನ್ನು ವಿಸ್ತರಿಸಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಆ ದಿನ ರಾತ್ರಿ (ಜನವರಿ 1 ರಂದು) 2 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ರಾತ್ರಿ 2.40ಕ್ಕೆ ಹೊರಡಲಿದೆ. ರಾತ್ರಿ 11 ಗಂಟೆಯಿಂದ 2.40 ವರೆಗೂ ಪ್ರತಿ 10 ನಿಮಿಷಕ್ಕೊಂದು ರೈಲು ಲಭ್ಯವಿರಲಿವೆ. ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್ ಹಿನ್ನೆಲೆ ಪ್ರಯಾಣಿಕರು ಟ್ರಿನಿಟಿ, ಕಬ್ಬನ್ ಪಾರ್ಕ್ ಮೂಲಕ ಸಂಚಾರ ನಡೆಸಬಹುದು.