ಎಂಬಿಎ ಮುಗಿಸಿ ಔಷಧ ಕಂಪನಿಗಳಲ್ಲಿ ಊರೂರು ತಿರುಗಿ ಮಾರ್ಕೆಟಿಂಗ್ ಮಾಡುತ್ತಿದ್ದೆ. ಹಾಗೆ ಒಮ್ಮೆ ಅಹಮದಾಬಾದಿನಲ್ಲಿ ಹೋಗುವಾಗ ಮರದ ಗಾಣ ನೋಡಿ ತಾತನ ನೆನಪಾಯಿತು. ಚಾಮರಾಜನಗರ ಜಿಲ್ಲೆ ಉಡಿಗಾಲ ಗ್ರಾಮದಲ್ಲಿ ತಮ್ಮ ತಾತ ಎತ್ತಿನ ಗಾಣದ ಮೂಲಕ ಎಣ್ಣೆ ತೆಗೆದು ಮಾರುತ್ತಿದ್ದ ಕುಲಕಸುಬನ್ನು ಅಪ್ಪ ಮುಂದುವರೆಸಲಿಲ್ಲ. ಮೈಸೂರು ಸೇರಿದ ಅಪ್ಪ ಬಟ್ಟೆ ಅಂಗಡಿ ಜೊತೆಗೆ ಟೈಲರಿಂಗ್ ಮುಂದುವರೆಸಿ ನಮ್ಮನ್ನು ಬೆಳೆಸಿದರು. ಈಗ ಎತ್ತುಗಳಿಲ್ಲದೆ ಮರದ ಗಾಣ ನಡೆಸಬಹುದಲ್ಲ ಎಂಬ ಯೋಚನೆ ಶುರುವಾಯಿತು. ಜೊತೆಗೆ ಅದರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದೆ.
2016ರಲ್ಲಿ ಮನೆಯ ಕಡೆಗಿನ ಜವಾಬ್ದಾರಿಗಳಿಂದಾಗಿ 75 ಸಾವಿರ ರೂಪಾಯಿ ಸಂಬಳ ಬರುತ್ತಿದ್ದ ಕೆಲಸ ಬಿಡಲು ಧೈರ್ಯವಾಗಲಿಲ್ಲ. ಕೆಲಸಕ್ಕೆ ಹೋಗುತ್ತಲೇ ಉಳಿತಾಯದ ಹಣದಿಂದ ಮೊದಲು ಒಂದು ಮರದ ಗಾಣ ಹಾಕಿ ಅವ್ವಾಸ್ ಆಯಿಲ್ ಶುರು ಮಾಡಿದೆ. ಸಹದ್ಯೋಗಿಗಳ ಬೇಡಿಕೆಯಂತೆ ಅರಳಣ್ಣೆ ಮಾಡಿ ಕೊಡತೊಡಗಿದೆ. ನಂತರ ಕೊಬ್ಬರಿ ಎಣ್ಣೆಗೆ ಬೇಡಿಕೆ ಶುರುವಾಯಿತು. ಆ ನಂತರ ಶೇಂಗಾ ಮತ್ತಿತರ ಎಣ್ಣೆಗೆ ಬೇಡಿಕೆ ಬರತೊಡಗಿತು. ಹಂತ ಹಂತವಾಗಿ ವಿಸ್ತರಿಸುತ್ತಾ ಹೋದೆ. ಮೂರು ವರ್ಷ ತುಂಬುವಾಗ ಗಾಣದ ಎಣ್ಣೆ ವ್ಯವಹಾರದಲ್ಲೇ ಬದುಕು ನಡೆಸಬಹುದೆಂಬ ಧೈರ್ಯ ಬಂದ ಮೇಲೆ ಕೆಲಸಕ್ಕೆ ಗುಡ್ ಬೈ ಹೇಳಿದೆ. ಅಷ್ಟರಲ್ಲಿ ಬಂದ ಕೊರೋನಾ ಸಂಕಷ್ಟವು ಜನರಲ್ಲಿ ಆರೋಗ್ಯದ ಅರಿವು ಮೂಡಿಸಿತು. ಅವ್ವಾಸ್‌ಗೆ ಬೇಡಿಕೆ ದುಪ್ಪಟ್ಟಾಗತೊಡಗಿತು ಎಂದು ಅವ್ವಾಸ್ ಆಯಿಲ್ ಮಿಲ್ ಸಂಸ್ಥಾಪಕ ಎಂ. ಮಹದೇವಸ್ವಾಮಿ ತಮ್ಮ ಉದ್ಯಮ ಜರ್ನಿಯನ್ನು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡರು.
ಈಗ ಮೈಸೂರು ಒಂದರಲ್ಲೇ 10 ಕಡೆ ಅವ್ವಾಸ್ ಆಯಿಲ್ ಮಿಲ್ ಮತ್ತು ಅಂಗಡಿ ಇದೆ. ಬೆಂಗಳೂರಿನ ಪದ್ಮನಾಭನಗರದಲ್ಲಿ ಹೊಸ ಶಾಖೆ ಮುಂದಿನ ತಿಂಗಳು ಆರಂಭವಾಗುತ್ತಿದೆ. ಪ್ರತಿದಿನ 500 ರಿಂದ 600 ಲೀಟರ್ ವಿವಿಧ ಎಣ್ಣೆಗಳು ಮಾರಾಟ ಆಗುತ್ತಿದೆ. ಜೊತೆಗೆ ಗ್ರಾಹಕರೇ ತರುವ ಎಣ್ಣೆಕಾಳುಗಳನ್ನು ಅವರ ಕಣ್ಣೆದುರೇ ಅರೆದು ಎಣ್ಣೆ ತೆಗೆದುಕೊಡುವ ಕೆಲಸವನ್ನೂ ಮಾಡುತ್ತಿದೆ ಅವ್ವಾಸ್ ಆಯಿಲ್ ಮಿಲ್. ಕಳೆದ ವರ್ಷ 4 ಕೋಟಿ ರು. ವಹಿವಾಟು ದಾಟಿರುವ ಅವ್ವಾಸ್ ಆಯಿಲ್ ಮಿಲ್‌ನ ವಿಶೇಷ ಎಂದರೆ ಅವರಿನ್ನೂ ಆಯಿಲ್ ಮಾರ್ಕೆಟಿಂಗ್‌ಗೆ ಇಳಿದಿಲ್ಲ. ಸಿದ್ಧತೆ ನಡೆಸಿದ್ದಾರೆ ಅಷ್ಟೇ.
ಎಣ್ಣೆ ತೆಗೆಯುವ ಜೊತೆಗೆ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಜವೆ ಹಿಟ್ಟು, ಮೆಣಸಿನಕಾಯಿ ಪುಡಿ ಸೇರಿದಂತೆ 17 ಬಗೆಯ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದೆ ಅವ್ವಾಸ್ ತಂಡ. ಮೈಸೂರು ಶ್ರೀರಾಮಪುರ ಎರಡನೇ ಹಂತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಅವ್ವಾಸ್‌ಗೆ ಬರುವ ಬೇಡಿಕೆ ಪೂರೈಸಲು ನಮ್ಮ ಘಟಕ ವಿಸ್ತರಣೆಗೆ ಒಂದೂವರೆ ವರ್ಷದ ಹಿಂದೆ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕಪೆಕ್)ದ ಮೂಲಕ 45 ಲಕ್ಷ ರೂ ಪಿಎಂಎಫ್ಎಂಇ ಸಾಲ ದೊರೆಯಿತು. ಅದರಿಂದ ನಮ್ಮ ಉತ್ಪಾದನೆ, ಮಾರ್ಕೆಟಿಂಗ್ ಉತ್ತಮ ಪಡಿಸಿಕೊಳ್ಳಲು ಸಹಾಯವಾಗಿದೆ. ಸಬ್ಸಿಡಿಯೂ ಸಿಗಲಿದೆ ಎಂದು ಹೇಳಿದ್ದಾರೆ ಎನ್ನುತ್ತಾ ತಮ್ಮ ಭವಿಷ್ಯದ ಯೋಜನೆ ವಿವರಿಸಿದರು ಮಹದೇವಸ್ವಾಮಿ. ಫ್ರಾಂಚೈಸಿ ದೊರೆಯಲಿದೆ
ಮರದ ಗಾಣದ ಎಣ್ಣೆ ಸ್ವಲ್ಪ ದುಬಾರಿ ಎನಿಸುವುದರಿಂದ ಜನ ನೋಡಿ ಆರೋಗ್ಯಕರ ಎಣ್ಣೆ ಪಡೆಯಲಿ ಎಂಬ ಕಾರಣಕ್ಕೆ ಆನ್‌ಲೈನ್ ವ್ಯಾಪಾರಕ್ಕೆ ಹೋಗಿರಲಿಲ್ಲ. ಈಗ ಅಮೆಜಾನ್ ಜೊತೆಗೂ ಒಪ್ಪಂದ ಆಗುತ್ತಿದೆ. ನಮ್ಮದೇ ಆನ್‌ಲೈನ್ ಕೂಡ ರೆಡಿಯಾಗುತ್ತಿದೆ. ಜೊತೆಗೆ ಫ್ರಾಂಚೈಸಿ ನೀಡಲು ಕೂಡ ಯೋಜನೆ ರೂಪಿಸುತ್ತಿದ್ದೇವೆ. ಮೈಸೂರು ಜಿಲ್ಲೆಯಲ್ಲೇ 36 ಶಾಖೆ ತೆರೆಯುವ ಗುರಿ ನನ್ನದು. ಮೈಸೂರು ಜಿಲ್ಲೆಯ ಪ್ರತಿ ತಾಲೂಕಲ್ಲೂ ನಮ್ಮ ಘಟಕ ಇರಬೇಕು. ಹಣದ ಕ್ರೂಢೀಕರಣ ಆದಂತೆಲ್ಲ ಹಂತ ಹಂತವಾಗಿ ಇವನ್ನು ನಿಜವಾಗಿಸುತ್ತೇನೆ. ಪ್ರಸ್ತುತ ನಮ್ಮಲ್ಲಿ 28 ಜನರಿಗೆ ಉದ್ಯೋಗ ನೀಡಿದ್ದೇನೆ. ಎಲ್ಲರಿಗೂ ನಿತ್ಯ ಊಟ - ತಿಂಡಿ ಉಚಿತವಾಗಿ ನೀಡುತ್ತೇವೆ. ಅಡುಗೆ ಮಾಡಲೆಂದೇ ಜನರನ್ನು ನೇಮಿಸಿದ್ದೇನೆ. ಎಲ್ಲರಿಗೂ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ, 25 ಲಕ್ಷ ರೂ. ಮೌಲ್ಯದ ಜೀವ ವಿಮೆಯನ್ನೂ ಮಾಡಿಸಿದ್ದೇನೆ. ನನ್ನ ಜೊತೆ ಶ್ರಮಿಸುವವರ ಮೇಲಿನ ಕಾಳಜಿ ಮತ್ತು ಕರ್ತವ್ಯ ಎಂದು ಮಾಡಿದ್ದೇನೆ. ವಿದೇಶಕ್ಕೆ ರಫ್ತು ಮಾಡುವ ಆಸೆ ಇದೆಯಾದರೂ ಅದಕ್ಕಾಗಿ ಮಾಡಿಸಬೇಕಾದ ಸರ್ಟಿಫಿಕೇಶನ್‌ಗಳಿಗೆ ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ಮೊದಲಿಗೆ ನಮ್ಮ ಮೈಸೂರು ಜಿಲ್ಲೆಯಾದ್ಯಂತ ಅವ್ವಾಸ್ ಎಣ್ಣೆ ಬಳಕೆ ಹೆಚ್ಚಾಗಬೇಕು. ಹೊರಗಿನ ಜಿಲ್ಲೆಗಳಲ್ಲಿ ಫ್ರಾಂಚೈಸಿ ಕೊಟ್ಟು ಅವ್ವಾಸ್ ವಿಸ್ತರಿಸುತ್ತೇನೆ. ಜೊತೆಗೆ ದೊಡ್ಡ ದೊಡ್ಡ ಅಂಗಡಿ, ಹೋಟೆಲ್ಗಳಿಗೆ ಸಗಟು ವ್ಯಾಪಾರ ವಿಸ್ತರಿಸಲು ಸಹ ಸಿದ್ಧತೆ ಮಾಡಿದ್ದೇನೆ ಎಂದರು ಮಹದೇವಸ್ವಾಮಿ.
ಅವ್ವಾಸ್ ಎಣ್ಣೆ ಮತ್ತಿತರ ಉತ್ಪನ್ನಗಳಿಗೆ ಸಂಪರ್ಕಿಸಿ - 7349424288
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.