;Resize=(412,232))
ವಾಷಿಂಗ್ಟನ್: ಕಳೆದೊಂದು ವರ್ಷದಿಂದ ಬಾಹ್ಯಾಕಾಶದಲ್ಲಿ ಅಲೆಯುತ್ತಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನ ಭಾಗವೊಂದು ಬುಧವಾರ ಬೆಳಗ್ಗೆ ಚಂದ್ರನ ಗುರುತ್ವಾಕರ್ಷಣೆಯ ಸೆಳೆತಕ್ಕೆ ಸಿಕ್ಕು ಅದಕ್ಕಪ್ಪಳಿಸಿದೆ. ಪರಿಣಾಮ ಭೂಮಿಗೂ ಕಾಣುವಷ್ಟು ಪ್ರಖರ ಬೆಳಕು ಉತ್ಪತ್ತಿಯಾಗಿದೆ. ಒಂದು ಸ್ಕೂಲ್ ಬಸ್‌ನಷ್ಟು ದೊಡ್ಡದಿದ್ದ 4 ಟನ್ ತೂಕದ ರಾಕೆಟ್ ಗಂಟೆಗೆ 5,400 ಮೈಲಿಯ ವೇಗದಲ್ಲಿ ಕ್ರ್ಯಾಶ್ ಆದ ಜಾಗದಲ್ಲಿ 60 ಅಡಿ ಅಗಲ ಹಾಗೂ 12 ಅಡಿ ಆಳದ ಕುಳಿ ಸೃಷ್ಟಿಯಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಚಂದ್ರನ ಐನ್‌ಸ್ಟೈನ್ ಕುಳಿಯ ಬಳಿ ಕ್ರ್ಯಾಶ್ ಆಗಿದ್ದು, ಈ ಪ್ರಕ್ರಿಯೆ ಅಥವಾ ಪರಿಣಾಮದ ಸ್ಪಷ್ಟ ವೀಕ್ಷಣೆ ಈ ವರೆಗೆ ಸಾಧ್ಯವಾಗಿಲ್ಲ. ಆದಕಾರಣ, ಚಂದ್ರನ ಸುತ್ತ ಸುತ್ತುತ್ತಿರುವ ತಮ್ಮ ನೌಕೆಗಳ ಸಹಾಯದಿಂದ ರಾಕೆಟ್ ಬಿದ್ದ ಜಾಗದ ಫೋಟೋಗಳನ್ನು ಸೆರೆಹಿಡಿಯಲು ಅಮೆರಿಕದ ನಾಸಾ ಮತ್ತು ದಕ್ಷಿಣ ಕೊರಿಯಾದ ಬಾಹ್ಯಾಕಾಶ ಸಂಸ್ಥೆಗಳು ಯತ್ನಿಸುತ್ತಿವೆ.
ತಾನು ಹೊತ್ತುತಂದಿದ್ದ ಬಾಹ್ಯಾಕಾಶ ನೌಕೆಗಳನ್ನು ಗಮ್ಯಸ್ಥಾನಕ್ಕೆ ತಲುಪಿಸಿದ ಬಳಿಕ ಇಂಧನ ಖಾಲಿಯಾದ ಪರಿಣಾಮ ದಿಕ್ಕು-ದೆಸೆಯಿಲ್ಲದೆ ಅಂತರಿಕ್ಷದಲ್ಲಿ ಈ ರಾಕೆಟ್ ತೇಲಾಡುತ್ತಿತ್ತು. ಹೀಗೆ ಅಲೆಯುತ್ತಿದ್ದ ವೇಳೆ ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ, ಅದರತ್ತ ಆಕರ್ಷಿಸಲ್ಪಟ್ಟು, ಅಪ್ಪಳಿಸಿದೆ. ಚಂದ್ರನ ಮೇಲೆ ಕುಳಿಗಳ ಸೃಷ್ಟಿಯ ಬಗೆಗಿನ ಅಧ್ಯಯನಕ್ಕೆ ಈ ಪ್ರಕ್ರಿಯೆ ಸಹಕಾರಿಯಾಗಿದೆ.