ತಾಯಿಯಂದಿರ ಮಾನಸಿಕ ಸ್ಥೈರ್ಯಕ್ಕೆ ಯೋಗ ದಿವ್ಯೌಷಧ

Published : Aug 07, 2026, 11:20 AM IST
motherhood

ಸಾರಾಂಶ

ತಾಯಿಯಾದ ಬಳಿಕ ಮಹಿಳೆಯರ ದೈಹಿಕ, ಮಾನಸಿಕ ಸ್ಥಿರತೆ ಸ್ಥಿತಿ ಸಹಜತೆ ಮರಳುವುದಿಲ್ಲ. ದೈಹಿಕ, ಭಾವನಾತ್ಮಕ ಒತ್ತಡ ಅವರನ್ನು ಇನ್ನಿಲ್ಲದಂತೆ ಕಾಡುತ್ತದೆ. ಆದರೆ ಅವರಿಗೆ ಆ ಸಂದರ್ಭದಲ್ಲಿ ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗುವುದು ಯೋಗ.

ಡಾ। ಶಿವಪ್ರಸಾದ್‌ ಶೆಟ್ಟಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು, ಉಜಿರೆ

ತಾಯ್ತನ ಪ್ರತಿ ಮಹಿಳೆಯ ಜೀವನದಲ್ಲೂ ಅತ್ಯಂತ ಅಮೂಲ್ಯ ಅನುಭವ. ಆದರೆ ಹೆರಿಗೆಯ ನಂತರದ ಅವಧಿ ಮಹಿಳೆಯ ದೇಹ ಮತ್ತು ಮನಸ್ಸಿನಲ್ಲಿ ಮಹತ್ತರ ಬದಲಾವಣೆಗಳನ್ನು ಉಂಟುಮಾಡುವ ಸೂಕ್ಷ್ಮ ಹಂತ. ಗರ್ಭಧಾರಣೆಯ ಒಂಬತ್ ಬದಲಾವಣೆಗಳು ಹೆರಿಗೆಯ ನಂತರ ತಕ್ಷಣವೇ ಸಹಜ ಸ್ಥಿತಿಗೆ ಮರಳುವುದಿಲ್ಲ. ಈ ಸಮಯದಲ್ಲಿ ತಾಯಂದಿರು ದೈಹಿಕ ಆಯಾಸ, ಬೆನ್ನುನೋವು, ನಿದ್ರಾಹೀನತೆ, ಹಾರ್ಮೋನುಗಳ ಏರುಪೇರು, ಆತಂಕ ಹಾಗೂ ಭಾವನಾತ್ಮಕ ಒತ್ತಡವನ್ನು ಅನುಭವಿಸುವುದು ಸಾಮಾನ್ಯ. ಕೆಲವರಲ್ಲಿ ಪ್ರಸವೋತ್ತರ ಖಿನ್ನತೆಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಯೋಗವು ದೈಹಿಕ ಮತ್ತು ಮಾನಸಿಕ ಪುನಶ್ಚೇತನಕ್ಕೆ ಸುರಕ್ಷಿತ, ನೈಸರ್ಗಿಕ ಹಾಗೂ ಪರಿಣಾಮಕಾರಿ ಮಾರ್ಗ.

ದೈಹಿಕ ಚೇತರಿಕೆಗೆ ನೆರವು:

ಹೆರಿಗೆಯ ಸಮಯದಲ್ಲಿ ಹೊಟ್ಟೆ ಮತ್ತು ಪೆಲ್ವಿಕ್ ಫ್ಲೋರ್ ಸ್ನಾಯುಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತವೆ. ಇದರಿಂದ ಸೊಂಟನೋವು, ಬೆನ್ನುನೋವು ಮತ್ತು ಸ್ನಾಯುಗಳ ದುರ್ಬಲತೆ ಉಂಟಾಗಬಹುದು. ಹಾಗಾಗಿ ವೈದ್ಯರ ಸಲಹೆಯಂತೆ ಸರಿಯಾದ ಸಮಯದಲ್ಲಿ ಆರಂಭಿಸುವ ಯೋಗಾಭ್ಯಾಸವು ದೇಹದ ಸ್ನಾಯುಗಳನ್ನು ಪುನಃ ಬಲಪಡಿಸಲು ಸಹಕಾರಿ. ಮಾರ್ಜಾರಾಸನ, ಭುಜಂಗಾಸನ, ಶಶಾಂಕಾಸನ ಹಾಗೂ ಸ್ಟ್ರೆಚಿಂಗ್ ಅಭ್ಯಾಸಗಳು ಬೆನ್ನುಮೂಳೆಯನ್ನು ಬಲಪಡಿಸಿ ನೋವನ್ನು ಕಡಿಮೆ ಮಾಡುತ್ತವೆ. ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು ಮತ್ತು ಮೂಲಬಂಧ ಅಭ್ಯಾಸಗಳು ಸ್ನಾಯುಗಳ ಕಾರ್ಯಕ್ಷಮತೆಯನ್ನು ಸುಧಾರಿಸಿ ದೇಹವು ತನ್ನ ಸಹಜ ಸ್ಥಿತಿಗೆ ಮರಳಲು ನೆರವಾಗುತ್ತವೆ. ಇದರೊಂದಿಗೆ ಯೋಗವು ದೇಹದ ರಕ್ತಸಂಚಾರವನ್ನು ಉತ್ತಮಗೊಳಿಸಿ ಆಯಾಸವನ್ನು ಕಡಿಮೆ ಮಾಡುತ್ತದೆ ಹಾಗೂ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಲುಣಿಸುವ ತಾಯಂದಿರಿಗೆ ಸಹಕಾರಿ:

ಹೆರಿಗೆಯ ನಂತರ ಎದೆಹಾಲುಣಿಸುವುದರಿಂದ ಉಂಟಾಗುವ ದೈಹಿಕ ದಣಿವು ಮತ್ತು ಮಾನಸಿಕ ಒತ್ತಡವು ಕೆಲವು ಸಂದರ್ಭಗಳಲ್ಲಿ ಹಾಲಿನ ಉತ್ಪಾದನೆಗೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ನಾಡಿಶೋಧನ ಪ್ರಾಣಾಯಾಮ, ಆಳವಾದ ಉಸಿರಾಟದ ಅಭ್ಯಾಸಗಳು ಹಾಗೂ ಧ್ಯಾನವು ದೇಹವನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತವೆ. ಮನಸ್ಸು ನೆಮ್ಮದಿಯಲ್ಲಿದ್ದಾಗ ತಾಯಿಯ ದೇಹದಲ್ಲಿ ಹಾಲಿನ ಉತ್ಪಾದನೆಗೆ ಸಹಕಾರಿ ಹಾರ್ಮೋನುಗಳ ಕಾರ್ಯಚಟುವಟಿಕೆ ಸುಗಮವಾಗುತ್ತದೆ. ಜೊತೆಗೆ ಮತ್ಸ್ಯಾಸನದಂತಹ ಎದೆಗೂಡನ್ನು ಹಿಗ್ಗಿಸುವ ಸರಳ ಆಸನಗಳು ಹಾಲುಣಿಸುವ ಸಂದರ್ಭದಲ್ಲಿ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತವೆ.

ಮಾನಸಿಕ ಆರೋಗ್ಯಕ್ಕೂ ಆಸರೆ:

ಹೆರಿಗೆಯ ನಂತರ ತಾಯಂದಿರಲ್ಲಿ ಭಾವನೆಗಳ ಏರುಪೇರು, ಆತಂಕ, ಕಿರಿಕಿರಿ ಹಾಗೂ ಕಾರಣವಿಲ್ಲದ ಅಳುಕು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಪ್ರತಿದಿನ 15 ರಿಂದ 20 ನಿಮಿಷಗಳ ಧ್ಯಾನ, ಯೋಗನಿದ್ರೆ ಹಾಗೂ ಶವಾಸನ ಅಭ್ಯಾಸ ಮಾಡುವುದರಿಂದ ನರಮಂಡಲ ಶಾಂತವಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿನಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯೋಗವು ಉತ್ತಮ ನಿದ್ರೆಗೆ ಸಹಕಾರಿ ಆಗುವುದರಿಂದ ದೈಹಿಕ ಹಾಗೂ ಮಾನಸಿಕ ಚೇತರಿಕೆ ವೇಗವಾಗಿ ನಡೆಯುತ್ತದೆ.

ಆಹಾರ, ಜೀವನಶೈಲಿಯ ಪಾತ್ರ:

ಯೋಗದ ಜೊತೆಗೆ ಸಮತೋಲನಯುತ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಮುಖ್ಯ. ಹೆರಿಗೆಯ ನಂತರ ತಾಯಂದಿರು ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಹಾಗೂ ನಾರಿನಾಂಶಯುಕ್ತ ಆಹಾರವು ದೇಹದ ಪುನಶ್ಚೇತನವನ್ನು ವೇಗಗೊಳಿಸುತ್ತದೆ. ತಾಜಾ ಹಣ್ಣುಗಳು, ತರಕಾರಿಗಳು, ಮೊಳಕೆ ಬಂದ ಧಾನ್ಯಗಳು, ಸಿರಿಧಾನ್ಯಗಳು, ಸಾಕಷ್ಟು ನೀರು ಹಾಗೂ ನೈಸರ್ಗಿಕ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಸಮರ್ಪಕ ವಿಶ್ರಾಂತಿ ಮತ್ತು ಸಾಕಷ್ಟು ನಿದ್ರೆಯೂ ಚೇತರಿಕೆಗೆ ಅತ್ಯಗತ್ಯ.

ತಾಯಿ-ಮಗುವಿನ ಬಾಂಧವ್ಯ ಗಟ್ಟಿ:

ಯೋಗವು ಕೇವಲ ದೇಹವನ್ನು ಆರೋಗ್ಯವಾಗಿ ಇಡುವುದಲ್ಲ, ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿಯೂ ಸಹಕಾರಿಯಾಗಿದೆ. ಮನಸ್ಸು ಶಾಂತವಾಗಿರುವ ತಾಯಿ ಮಗುವಿನ ಅಗತ್ಯಗಳನ್ನು ಹೆಚ್ಚು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಲ್ಲಳು. ತಾಯಿಯ ಆತ್ಮವಿಶ್ವಾಸ ಹೆಚ್ಚಿದಂತೆ ಮಗುವಿನ ಆರೈಕೆಯೂ ಉತ್ತಮವಾಗುತ್ತದೆ. ಆರೋಗ್ಯವಂತ ಹಾಗೂ ಸಂತೋಷದಿಂದಿರುವ ತಾಯಿಯು ಮಗುವಿನ ಬೆಳವಣಿಗೆಯ ಮೇಲೂ ಉತ್ತಮ ಪರಿಣಾಮ ಬೀರುತ್ತಾಳೆ.

ಕುಟುಂಬದ ಬೆಂಬಲವೂ ಅಷ್ಟೇ ಮುಖ್ಯ:

ಹೆರಿಗೆಯ ನಂತರದ ಆರೈಕೆಯಲ್ಲಿ ಯೋಗದ ಜೊತೆಗೆ ಕುಟುಂಬದ ಸದಸ್ಯರ ಸಹಕಾರವೂ ಅತ್ಯಂತ ಮಹತ್ವದ್ದಾಗಿದೆ. ಹೊಸ ತಾಯಿಗೆ ದೈಹಿಕ ವಿಶ್ರಾಂತಿ, ಮಾನಸಿಕ ಬೆಂಬಲ ಹಾಗೂ ಪ್ರೋತ್ಸಾಹ ದೊರೆತಾಗ ಆಕೆಯ ಚೇತರಿಕೆ ಇನ್ನಷ್ಟು ವೇಗವಾಗುತ್ತದೆ. ಪತಿ ಮತ್ತು ಕುಟುಂಬದವರು ಮಗುವಿನ ಆರೈಕೆಯಲ್ಲಿ ಪಾಲ್ಗೊಳ್ಳುವುದರಿಂದ ತಾಯಿಯ ಒತ್ತಡ ಕಡಿಮೆಯಾಗುತ್ತದೆ. ಆಕೆಗೆ ತನ್ನ ಆರೋಗ್ಯದ ಕಡೆ ಗಮನಹರಿಸಲು ಸಮಯ ಸಿಗುತ್ತದೆ. ಯೋಗಾಭ್ಯಾಸವನ್ನು ಕುಟುಂಬದವರು ಪ್ರೋತ್ಸಾಹಿಸಿದರೆ ಅದು ನಿಯಮಿತ ಜೀವನಶೈಲಿಯ ಭಾಗವಾಗುತ್ತದೆ. ಆರೋಗ್ಯವಂತ ತಾಯಿ, ಸಂತೋಷದ ಕುಟುಂಬ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಕುಟುಂಬದ ಬೆಂಬಲ ಹಾಗೂ ಯೋಗ ಎರಡೂ ಪರಸ್ಪರ ಪೂರಕವಾಗಿವೆ.

ಗಮನಿಸಬೇಕಾದ ಅಂಶಗಳು:

ಪ್ರತಿಯೊಬ್ಬ ಮಹಿಳೆಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುತ್ತದೆ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಯೋಗಾಭ್ಯಾಸ ಆರಂಭಿಸಬಾರದು.

*ಸಾಮಾನ್ಯ ಹೆರಿಗೆಯಾದರೆ ವೈದ್ಯರ ಸಲಹೆಯ ಮೇರೆಗೆ ಸುಮಾರು 6 ವಾರಗಳ ನಂತರ ಸರಳ ಯೋಗಾಭ್ಯಾಸ ಆರಂಭಿಸಬಹುದು.

*ಸಿಸೇರಿಯನ್ ಹೆರಿಗೆಯಾದರೆ 8-10 ವಾರಗಳ ನಂತರ ಮಾತ್ರ ವೈದ್ಯರ ಅನುಮತಿಯೊಂದಿಗೆ ಅಭ್ಯಾಸ ಆರಂಭಿಸುವುದು ಸುರಕ್ಷಿತ.

*ಆರಂಭದಲ್ಲೇ ಕಠಿಣ ಆಸನಗಳನ್ನು ಮಾಡುವ ಬದಲು ಪ್ರಾಣಾಯಾಮ, ಉಸಿರಾಟದ ವ್ಯಾಯಾಮ ಹಾಗೂ ನಿಧಾನವಾದ ಚಲನೆಯಿಂದ ಆರಂಭಿಸಬೇಕು.

*ಯೋಗದ ಜೊತೆಗೆ ಪೌಷ್ಟಿಕ ಆಹಾರ, ಸಾಕಷ್ಟು ನೀರಿನ ಸೇವನೆ, ಉತ್ತಮ ವಿಶ್ರಾಂತಿ ಹಾಗೂ ಸಕಾರಾತ್ಮಕ ಮನೋಭಾವವೂ ಸಮಾನವಾಗಿ ಮುಖ್ಯವಾಗಿವೆ.

ಹಾಗಾಗಿ ತಾಯ್ತನವು ಕೇವಲ ಮಗುವಿನ ಆರೈಕೆಯಷ್ಟೇ ಅಲ್ಲ, ತಾಯಿಯ ಆರೋಗ್ಯದ ಪುನರುತ್ಥಾನದ ಹಂತವೂ ಆಗಿದೆ. ಈ ಸಮಯದಲ್ಲಿ ಸ್ವಯಂ ಆರೈಕೆಗೆ ಆದ್ಯತೆ ನೀಡುವುದು ಅಗತ್ಯ. ಪ್ರತಿದಿನ ಕೇವಲ 20 ರಿಂದ 30ನಿಮಿಷಗಳ ಯೋಗಾಭ್ಯಾಸವು ದೈಹಿಕ ಶಕ್ತಿ, ಮಾನಸಿಕ ನೆಮ್ಮದಿ ಹಾಗೂ ಭಾವನಾತ್ಮಕ ಸಮತೋಲನವನ್ನು ನೀಡುವ ಅತ್ಯುತ್ತಮ ನೈಸರ್ಗಿಕ ವಿಧಾನವಾಗಿದೆ.  

ಆರೋಗ್ಯವಂತ ತಾಯಿಯೇ ಆರೋಗ್ಯವಂತ ಮಗುವಿನ ಬೆಳವಣಿಗೆಗೆ ಭದ್ರ ಅಡಿಪಾಯವಾಗುತ್ತಾಳೆ. ಆದ್ದರಿಂದ ಹೆರಿಗೆಯ ನಂತರದ ಆರೈಕೆಯಲ್ಲಿ ಯೋಗವನ್ನು ಜೀವನಶೈಲಿಯ ಭಾಗವಾಗಿಸಿಕೊಂಡರೆ, ತಾಯಿ ಮತ್ತು ಮಗುವಿನ ಆರೋಗ್ಯಕರ ಭವಿಷ್ಯಕ್ಕೆ ಅದು ಮಹತ್ವದ ಕೊಡುಗೆ ನೀಡುತ್ತದೆ.

PREV
Read more Articles on

Recommended Stories

ವಿದ್ಯಾರ್ಥಿಗಳ ಪರ ಕಾನೂನಿಗೆ ವಿಪಕ್ಷಗಳ ವಿರೋಧ ಏಕೆ?
ಸಮಸ್ತ ಶೋಷಿತರ ಆಶಾ ಕಿರಣ ಪರಮೇಶ್ವರ್‌