ಬೆಂಗಳೂರು : ಕೇವಲ ಹಣದಿಂದ ಪ್ರತಿಯೊಂದನ್ನು ಅಳೆಯುವಂತಹ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದ್ದು, ಇಂತಹ ಸಮಾಜದ ಶುದ್ಧೀಕರಣಕ್ಕೆ ಅಧ್ಯಾತ್ಮ ಅಗತ್ಯವಾಗಿವೆ ಎಂದು ಹೃದ್ರೋಗ ತಜ್ಞ, ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಆಯೋಜಿಸಿದ್ದ ಕಾಶೀ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮತ್ತು ಶ್ರೀಸಿದ್ಧಾಂತ ಶಿಖಾಮಣಿ ಅಧ್ಯಾತ್ಮ ಪ್ರವಚನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಶಿಕ್ಷಣ ಕಲಿತವರ ಸಂಖ್ಯೆ ಹೆಚ್ಚಾಗಿದೆ. ಆದರೆ ಶಿಕ್ಷಣವಂತರಿಗಿಂತ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು. ವಿದ್ಯಾವಂತರೆಂದರೆ ವಿವೇಕ, ವಿನಯ, ವಿವೇಚನೆಯುಳ್ಳ ಜನರ ಅಗತ್ಯವಿದೆ. ಅಂತಹವರ ಸಂಖ್ಯೆಯನ್ನು ಹೆಚ್ಚಿಸಲು ಮಠ-ಪೀಠಗಳ ಧರ್ಮಗುರುಗಳ ಪಾತ್ರ ಪ್ರಮುಖವಾಗಿದೆ. ಇಂದು ಕಲಿತವರಿಂದಲೇ ಸಮಾಜದಲ್ಲಿ ಹೆಚ್ಚು ಹಾನಿಯಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ನಡೆಸುವ ಪರೀಕ್ಷೆಯಲ್ಲಿ ಎಲ್ಲರಿಗೂ ಒಂದೇ ರೀತಿಯ ಪ್ರಶ್ನೆಗಳಿರುತ್ತವೆ. ಆದರೆ ಜೀವನದ ಪರೀಕ್ಷೆಯಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಪ್ರಶ್ನೆಗಳು ಎದುರಾಗುತ್ತವೆ.
ಇನ್ನೊಬ್ಬರನ್ನು ನೋಡಿ ಕಾಪಿ ಮಾಡಿದರೆ ಜೀವನದ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುತ್ತಾರೆ. ಹಿಂದೆಲ್ಲಾ ಮಂತ್ರದಿಂದ ಎಲ್ಲವನ್ನು ಸಾಧಿಸುತ್ತಿದ್ದರು. ನಂತರದ ದಿನಗಳಲ್ಲಿ ತಂತ್ರಜ್ಞಾನದಿಂದ ಸಾಧಿಸುವಂತಾಯಿತು. ಇತ್ತೀಚೆಗೆ ಕೆಲವರು ಕುತಂತ್ರದಿಂದ ಸಾಧಿಸಲು ಮುಂದಾಗಿದ್ದಾರೆ. ಶ್ರಮದ ಅನ್ನ, ಭಕ್ತಿಯ ಪೂಜೆ, ಶ್ರದ್ಧೆಯ ವಿದ್ಯೆ ಕೊಟ್ಟೇ ಕೊಡುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ಕಾಶೀ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು. ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸಿ.ಯು.ಉಮಾದೇವಿ ಉಪಸ್ಥಿತರಿದ್ದರು.