;Resize=(412,232))
ಕಾಲಕ್ಕೆ ತಕ್ಕಂತೆ ಬದಲಾಗುರುವ ಟಿವಿಎಸ್ ಕಂಪನಿ ಕಾಲಕ್ಕೆ ತಕ್ಕ ವೇಗ, ಮೆಚ್ಚಿಸಬಲ್ಲ ವಿನ್ಯಾಸ ಹೊಂದಿರುವ ಹೈಪರ್ ಸ್ಪೋರ್ಟ್ ಸ್ಕೂಟರ್ ತಂದಿದೆ. ಹೆಸರು ಟಿವಿಎಸ್ ಎನ್‌ಟಾರ್ಕ್ 150. ಕ್ಯೂಟ್ ಆದ ದೇಹಾಕಾರ, ಎದ್ದು ಕಾಣುವಂತಹ ಬಣ್ಣಗಳ ಸಂಯೋಜನೆ ಹೊಂದಿರುವ ಎನ್‌ಟಾರ್ಕ್ ಓಡಿಸುತ್ತಿದ್ದರೆ ಒಂದಿಬ್ಬರಾದರೂ ಹಿಂತಿರುಗಿ ನೋಡುತ್ತಾರೆ. ಅಷ್ಟರ ಮಟ್ಟಿಗೆ ಈ ಸ್ಕೂಟರ್ ಗೆದ್ದಿದೆ.
ಹಾಗಂತ ಎನ್‌ಟಾರ್ಕ್ ಸರಣಿ ಹೊಸತಲ್ಲ, ಆದರೆ ಈ 150 ಸಿಸಿ ರೇಸ್ ಎಡಿಷನ್ ಹೊಸತು. ಇದರ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು, ಟೈಲ್ ಲೈಟ್ ಎಲ್ಲವೂ ಈ ಸ್ಕೂಟರ್ ಅನ್ನು ಎಲ್ಲಿಯೇ ನಿಂತಿದ್ದರೂ ಎದ್ದು ಕಾಣಿಸುತ್ತವೆ. ಅದಕ್ಕೆ ತಕ್ಕಂತೆ ಇದರ 149.7 ಸಿಸಿ ಏರ್-ಕೂಲ್ಡ್ ಎಂಜಿನ್ ಅದ್ಭುತ ಪವರ್ ಹೊಂದಿದೆ. ಆಕ್ಸಲರೇಟರ್ ಕೊಟ್ಟರೆ ಸಾಕು ಸಕತ್ತಾಗಿ ಓಡುತ್ತಾದೆ. ರೋಡ್ ಗ್ರಿಪ್, ಬ್ರೇಕಿಂಗ್ ಸೂಪರಾಗಿದೆ. ಇದರಲ್ಲಿ ಸ್ಟ್ರೀಟ್ ಮತ್ತು ರೇಸ್ ಎಂಬ ಎರಡು ಮೋಡ್‌ಗಳಿವೆ. ರೇಸ್ ಮೋಡ್ ಹಾಕಿಟ್ಟರೆ ಓವರ್‌ಟೇಕ್ ಮಾಡುವಾಗ ಬಹಳ ಮೃದುವಾಗಿ ದಾಟಿಹೋಗುತ್ತದೆ.
770 ಎಂಎಂ ಸೀಟ್ ಎತ್ತರವಿರುವುದರಿಂದ ಎತ್ತರದ ಮಂದಿಯೂ ಸುಲಭವಾಗಿ ಕೂರಬಹುದು. ಪಿಲಿಯನ್ ರೈಡರ್‌ಗೂ ಆರಾಮದಾಯಕ ಸ್ಥಳವಿದೆ. ಸಿಂಗಲ್ ಚಾನಲ್ ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ರೈಡಿಂಗ್ ಸೊಗಸು ಹೆಚ್ಚಿಸುತ್ತದೆ. ಸೀಟ್ ಕೆಳಗಿರುವುದು 22 ಲೀ ಸ್ಟೋರೇಜ್ ಮಾತ್ರ. ಒಂದು ಹೆಲ್ಮೆಟ್ ಇಡಬಹುದು. ಸೋರೆಕಾಯಿ, ಕುಂಬಳಕಾಯಿ ಇತ್ಯಾದಿ ಇಡುವುದು ಸ್ವಲ್ಪ ಕಷ್ಟ.
ಟಿಎಫ್‌ಟಿ ಡಿಸ್‌ಪ್ಲೇ ಮತ್ತು ಟಿಎಫ್‌ಟಿ ಇಲ್ಲದ ಡಿಸ್‌ಪ್ಲೇ ಹೊಂದಿರುವ ಎರಡು ವೇರಿಯೆಂಟ್‌ಗಳು ಲಭ್ಯ. ಸ್ಮಾರ್ಟ್‌ವಾಚ್ ಜೊತೆ ಕನೆಕ್ಟ್ ಮಾಡಬಹುದಾದಷ್ಟು ಇದು ಆಧುನಿಕ. ಜೊತೆಗೆ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಅಲೆಕ್ಸಾ ಇಂಟಿಗ್ರೇಷನ್, ಕ್ರ್ಯಾಶ್ ಅಲರ್ಟ್ ಮುಂತಾದ ಫೀಚರ್‌ಗಳಿವೆ.
ಒಟ್ಟಾರೆಯಾಗಿ ನೋಡುವುದಾದರೆ ₹1,09,400 ಲಕ್ಷದಿಂದ ₹1,18,400 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ಈ ಸ್ಟೈಲಿಶ್ ಸ್ಕೂಟರ್, ತಕ್ಷಣದ ವೇಗ, ಆಕರ್ಷಕ ವಿನ್ಯಾಸ, ಅದ್ಭುತ ಕಾರ್ಯಕ್ಷಮತೆ, ಸಾಕಷ್ಟು ಫೀಚರ್‌ಗಳನ್ನು ಬಯಸುವ ಮಂದಿಗೆ ಉತ್ತಮ ಆಯ್ಕೆ.