ಬೆಂಗಳೂರು : ಕ್ಷಿಪ್ರವಾಗಿ ಹರಡುವ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಬಿಬಿಎಂಪಿಯು ಮೆಟ್ರೋ ಪಾಲಿಟನ್ ಸರ್ವಲೆನ್ಸ್ ಯೂನಿಟ್ (ಮಹಾನಗರ ಕಣ್ಗಾವಲು ಘಟಕ) ಆರಂಭಿಸಲು ಮುಂದಾಗಿದೆ.
ದೇಶಾದ್ಯಂತ ಕೊರೋನಾ ತುರ್ತು ಪರಿಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದ 20 ಮಹಾನಗರದಲ್ಲಿ ಮೆಟ್ರೋ ಪಾಲಿಟನ್ ಸರ್ವಲೆನ್ಸ್ ಯೂನಿಟ್ ಆರಂಭಿಸಲು ತೀರ್ಮಾನಿಸಿತ್ತು. ಈ ಘಟಕ ಆರಂಭಿಸಲು ಆಗುವ ವೆಚ್ಚ ಹಾಗೂ ಸಿಬ್ಬಂದಿಯನ್ನು ಕೇಂದ್ರ ಸರ್ಕಾರವೇ ಒದಗಿಸಿಕೊಡಲಿದೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಆ ಘಟಕಗಳನ್ನು ನಿರ್ವಹಣೆ ಮತ್ತು ಮೇಲುಸ್ತುವಾರಿ ನೋಡಿಕೊಳ್ಳಬೇಕಾಗಲಿದೆ.
ಬಿಬಿಎಂಪಿಯು ಶೇಷಾದ್ರಿ ರಸ್ತೆಯಲ್ಲಿರುವ ಎಫ್‌ಎಸ್‌ಎಸ್‌ಎಐ ಕಚೇರಿ ಆವರಣದಲ್ಲಿ ನಾಲ್ಕು ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡದಲ್ಲಿ ಕಣ್ಗಾವಲು ಘಟಕ ಆರಂಭಿಸಲು ತೀರ್ಮಾನಿಸಿದೆ. ಈ ಘಟಕದಲ್ಲಿ 17 ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ನಗರದ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆ, ಕ್ಲಿನಿಕ್ಸ್ ಹಾಗೂ ಲ್ಯಾಬ್‌ಗಳಲ್ಲಿ ಪತ್ತೆಯಾಗುವ ಸಾಂಕ್ರಮಿಕ ಸೋಂಕು, ರೋಗಗಳ ದತ್ತಾಂಶವನ್ನು ಸಂಗ್ರಹಿಸುವುದು. ವಿಶ್ಲೇಷಣೆ ಮಾಡುವುದು. ಜತೆಗೆ, ಸೋಂಕು ಅಥವಾ ರೋಗ ತ್ವರಿತವಾಗಿ ಹರಡುವ ಲಕ್ಷಣ ಕಂಡು ಬಂದರೆ ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ವಿಭಾಗದ ನೆರವಿನೊಂದಿಗೆ ಕ್ರಮ ಕೈಗೊಂಡು ನಿಯಂತ್ರಣಕ್ಕೆ ಸಹರಿಸಲಿದೆ.
ಡೆಂಘೀ, ಚಿಕನ್ ಫಾಕ್ಸ್, ಕಾಲರಾ, ಕೊರೋನಾ ಸೇರಿದಂತೆ ಮೊದಲಾದ ಸೋಂಕು ಪತ್ತೆ ಹಾಗೂ ನೀರು ಕಲುಷಿತ ಕುರಿತು ಸಂಶಯ ಉಂಟಾದರೆ ನೀರಿನ ಪರೀಕ್ಷೆಗೆ ಲ್ಯಾಬ್ ಸ್ಥಾಪಿಸಲಾಗುತ್ತಿದೆ. ಈವರೆಗೆ ಬಿಬಿಎಂಪಿಯು ನೀರಿನ ಪರೀಕ್ಷೆಗೆ ಖಾಸಗಿ ಲ್ಯಾಬ್ ಅಥವಾ ಬೆಂಗಳೂರು ಜಲಮಂಡಳಿಯ ಲ್ಯಾಬ್ ಮೊರೆ ಹೋಗಬೇಕಾಗಿತ್ತು. ಇನ್ನು ಮುಂದೆ ಈ ಲ್ಯಾಬ್‌ನಲ್ಲಿಯೇ ಪರೀಕ್ಷೆ ಮಾಡಬಹುದಾಗಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶದ ಮೂರು ನಗರದಲ್ಲಿ ಈಗಾಗಲೇ ಮೆಟ್ರೋ ಪಾಲಿಟನ್ ಸರ್ವಲೆನ್ಸ್ ಯೂನಿಟ್ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ನಾಲ್ಕನೇ ಘಟಕ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.