;Resize=(412,232))
ನವದೆಹಲಿ: ಮಧುರೈ ಜಿಲ್ಲೆಯ ತಿರುಪ್ಪರನ್‌ಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗುವಂತೆ ಆದೇಶ ಇದ್ದರೂ ಅದನ್ನು ಪಾಲನೆ ಮಾಡಲಾಗದ್ದಕ್ಕೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಕ್ಷಮೆಯಾಚಿಸಿದೆ. ಸುಪ್ರೀಂ ಆದೇಶ ಪಾಲನೆಯಾಗದಿರಲು ಅರುಳ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಮಂಡಳಿಯುವ ದೀಪ ಬೆಳಗುವ ಕಾರ್ಯಕ್ಕಾಗಿ ನಿಯೋಜಿತ ತಂಡಕ್ಕೆ ಅನುಮತಿ ನೀಡದಿರುವುದೇ ಮೂಲ ಕಾರಣ ಎಂದು ಸರ್ಕಾರ ಆರೋಪಿಸಿದೆ.
ವಿವಾದ ಸಂಬಂಧ ಮಧುರೈನ ಜಿಲ್ಲಾಧಿಕಾರಿ ಬುಧವಾರ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ವಸ್ತುಸ್ಥಿತಿ ವರದಿ ಸಲ್ಲಿಸಿದ್ದು, ಅದರಲ್ಲಿ ‘ನ.20ರ ಕೋರ್ಟ್ ಆದೇಶ ಪಾಲನೆಗೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿತ್ತು. ಆದರೆ, ದೇವಸ್ಥಾನದ ಆಡಳಿತ ಮಂಡಳಿಯು ದೀಪ ಬೆಳಗುವ ಉದ್ದೇಶದಿಂದ ರಚಿಸಿದ್ದ 10 ಮಂದಿ ತಂಡಕ್ಕೆ ಒಪ್ಪಿಗೆಯನ್ನೇ ನೀಡಿರಲಿಲ್ಲ, ಅದರ ಬದಲು ಉಚ್ಚಿಪಿಳ್ಳಯಾರ್ ಮಂಟಪದಲ್ಲೇ ಕಾರ್ತಿಗೈ ದೀಪ ಬೆಳಗಲು ನಿರ್ಧರಿಸಿತು. ಹೀಗಾಗಿ ಕೋರ್ಟ್ ಆದೇಶ ಪಾಲನೆ ಸಾಧ್ಯವಾಗಿಲ್ಲ. ಕಂದಾಯ ಇಲಾಖೆಯಾಗಲಿ, ಪೊಲೀಸ್ ಇಲಾಖೆಯಾಗಲಿ ದೇಗುಲದ ಈ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಾಗಲಿಲ್ಲ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ’ ಎಂದು ತಿಳಿಸಿದೆ.
ನಾನು ಕೋರ್ಟ್ ಆದೇಶ ಪಾಲನೆಗೆ ಬದ್ಧನಾಗಿದ್ದೆ. ಉದ್ದೇಶಪೂರ್ವಕವಾಗಿ ಆದೇಶ ಉಲ್ಲಂಘಿಸಿಲ್ಲ. ನ್ಯಾಯಾಲಯದ ಆದೇಶ ಬಗ್ಗೆ ನನಗೆ ಗೌರವವಿದೆ. ನ್ಯಾಯಾಲಯ ನೀಡುವ ಯಾವುದೇ ಆದೇಶ ಪಾಲಿಸಲು ಬದ್ಧ. ದೀಪೋತ್ತೂನ್‌ನಲ್ಲಿ ದೀಪ ಬೆಳಗಲು ಸಾಧ್ಯವಾಗದಿದ್ದದ್ದಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ತಮ್ಮ ವಸ್ತುಸ್ಥಿತಿ ವರದಿಯಲ್ಲಿ ತಿಳಿಸಿದ್ದಾರೆ.
ಮಂಡಳಿ ನಿರ್ಧಾರ:
ಕೋರ್ಟ್‌ಗೆ ಸಲ್ಲಿಸಿದ ಈ 16 ಪುಟಗಳ ವರದಿಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಪುರಾತತ್ವ ಸರ್ವೆ ಇಲಾಖೆ ಮತ್ತು ಪೊಲೀಸ್ ಕಮಿಷನರ್ ಅವರ ಜತೆಗೆ ಸಮಾಲೋಚಿಸಿ ದೇವಸ್ಥಾನ ಒಪ್ಪಿಗೆ ನೀಡಿದ 10 ಮಂದಿ ತಂಡದಿಂದ ದೀಪ ಬೆಳಗಲು ಸೂಚಿಸಲಾಗಿತ್ತು. ಮಂಗಳವಾರ ಸಂಜೆ 6ರಿಂದ 6.30ರ ನಡುವೆ ಈ ದೀಪ ಬೆಳಗಬೇಕಿತ್ತು. ಆದರೆ, ಅಂದರೆ ಆ ಸಮಯದಲ್ಲಿ ಯಾವುದೇ ತಂಡ ಸ್ಥಳಕ್ಕೆ ಬರಲಿಲ್ಲ.
ದೇವಸ್ಥಾನದ ಆಡಳಿತ ಮಂಡಳಿ, ಪುರೋಹಿತರು ಮತ್ತು ತಿರುವಣ್ಣಾಮಲೈನ ತಜ್ಞರು ದೀಪಬೆಳಗುವ 10 ಮಂದಿ ಪ್ರಸ್ತಾಪಿತ ತಂಡದ ಭಾಗವಾಗಿದ್ದರು. ಆದರೆ, ಜಿಲ್ಲಾಧಿಕಾರಿ ಪ್ರಕಾರ ದೇವಸ್ಥಾನದ ಆಡಳಿತ ಈ ತಂಡಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ಬಗ್ಗೆ 2 ಬಾರಿ ಜ್ಞಾಪನೆಯನ್ನೂ ಮಾಡಲಾಗಿತ್ತು. ಜಿಲ್ಲಾಡಳಿತದ ಅಧಿಕಾರಿಗಳು ಮತ್ತಿತರರಿದ್ದ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ನ.24ರ ಬೆಳಗ್ಗೆ 10.30ಕ್ಕೆ ಕಳುಹಿಸಿದ ಸಂದೇಶದಲ್ಲೂ ದೇವಸ್ಥಾನದ ಕಾರ್ಯಕಾರಿ ಅಧಿಕಾರಿಗಳು 10 ಮಂದಿ ಪ್ರಸ್ತಾಪಿತ ತಂಡಕ್ಕೆ ಅನುಮತಿ ನೀಡುವಂತೆ ಧರ್ಮದರ್ಶಿ ಮಂಡಳಿಗೆ ವಿನಂತಿಸಿತ್ತು. ಆದರೆ, ಸಂಜೆ 3.47ರ ಹೊತ್ತಿಗೂ ತಂಡಕ್ಕೆ ಅನುಮತಿ ಸಿಕ್ಕಿರಲಿಲ್ಲ. ಸಂಜೆ 3.47ರ ವೇಳೆಗೆ ಈ ಬಗ್ಗೆ ಮತ್ತೆ ಜ್ಞಾಪನೆ ಮಾಡಲಾಗಿತ್ತು. ಆದರೆ, ಸಂಜೆ 7.32ಕ್ಕೆ ದೇವಸ್ಥಾನ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಧರ್ಮದರ್ಶಿ ಮಂಡಳಿಯು ಉಚ್ಚಿ ಪಿಳ್ಳಯಾರ್ ಮಂಟಪದಲ್ಲೇ ದೀಪ ಬೆಳಗಲು ನಿರ್ಣಯಿಸಿದ ಕುರಿತು ಮಾಹಿತಿ ನೀಡಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.