ಟೀಕಾಕಾರರನ್ನು ಬಂಧಿಸಲು ದ್ವೇಷ ಬಿಲ್‌ ತಂದಿದ್ದೇವೆ ಎಂಬುದು ಸುಳ್ಳು

Published : Dec 28, 2025, 09:48 AM IST
DK Shivakumar

ಸಾರಾಂಶ

ಕಾಂಗ್ರೆಸ್ ಪಕ್ಷದ ರಾಜಕಾರಣ ಜನರ ಬದುಕಿನ ಮೇಲೆ ನಿಂತಿದ್ದರೆ, ಬಿಜೆಪಿಯ ರಾಜಕಾರಣ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವುದರ ಮೇಲೆ ನಿಂತಿದೆ. ದೇಶದ ಯಾವುದೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೋಮುವಾದ ಪುಟಿದೇಳುತ್ತದೆ.  

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

ಕಾಂಗ್ರೆಸ್ ಪಕ್ಷದ ರಾಜಕಾರಣ ಜನರ ಬದುಕಿನ ಮೇಲೆ ನಿಂತಿದ್ದರೆ, ಬಿಜೆಪಿಯ ರಾಜಕಾರಣ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವುದರ ಮೇಲೆ ನಿಂತಿದೆ. ದೇಶದ ಯಾವುದೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೋಮುವಾದ ಪುಟಿದೇಳುತ್ತದೆ. ಕೋಮು ಶಕ್ತಿಗಳು ವಿಜೃಂಭಿಸಿ ಅಮಾಯಕರ ಕಗ್ಗೊಲೆಗಳಾಗುತ್ತವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ಮೇಲಂತೂ ಕೋಮು ಸೌಹಾರ್ದತೆ ಮಾಯವಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯು ಅಧಿಕಾರವನ್ನು ಕಸಿದುಕೊಂಡು ‘ಡಬಲ್ ಎಂಜಿನ್ ಸರ್ಕಾರ’ ಎಂದು ಹೇಳಿಕೊಂಡು, ಕೋಮು ದಳ್ಳುರಿಯನ್ನು ಡಬಲ್ ಮಾಡಿಬಿಟ್ಟಿತ್ತು. ಇಂತಹ ಸಮಯದಲ್ಲಿ ಶಾಂತಿ ನೆಮ್ಮದಿಯ ಬದುಕಿಗೆ ಜನರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿ ಬಹುಮತ ನೀಡಿದರು. ಜನರು ಗ್ಯಾರಂಟಿಗಳ ಜೊತೆಗೆ ನೆಮ್ಮದಿಯ ಬದುಕಿಗಾಗಿಯೂ ನಮಗೆ ಮತ ನೀಡಿದ್ದಾರೆ. ಅಂತಹ ಸ್ವಸ್ಥ, ಆರೋಗ್ಯಕರ ಹಾಗೂ ಕೋಮು ಸೌಹಾರ್ದದ ಸಮಾಜವನ್ನು ಕಟ್ಟುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯವನ್ನು ಕಾಂಗ್ರೆಸ್ ಬಹಳ ಹಿಂದಿನಿಂದ ಮಾಡುತ್ತಲೇ ಇದೆ.

ಅದರ ಮುಂದುವರಿದ ಭಾಗವಾಗಿ ಇಟ್ಟ ಕ್ರಾಂತಿಕಾರಿ ಹೆಜ್ಜೆ ಎಂದರೆ, ಅದು- ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ( ಪ್ರತಿಬಂಧಕ) ಮಸೂದೆ 2025’.

ರಾಹುಲ್‌ ಗಾಂಧಿ ಆಶಯವೂ ಹೌದು

ಕೋಮು ಗಲಭೆ ಆದಾಗಲೆಲ್ಲ ಮೊದಲು ಪೊಲೀಸರು ಹೊಡೆದಾಡುವವರನ್ನು ಬಂಧನ ಮಾಡುತ್ತಾರೆ. ಇದು ಸಾಮಾನ್ಯವಾದ ಕಾನೂನು ಕ್ರಮ. ಇದರ ಹಿಂದೆ ಇದ್ದವರು, ಸೂತ್ರಧಾರಿಗಳು, ಉದ್ವೇಗದ ಭಾಷಣಗಳ ಮೂಲಕ ಇದಕ್ಕೆ ಇಂಬು ನೀಡಿದವರನ್ನು ಮರೆತೇ ಹೋಗುತ್ತೇವೆ. ಸಮುದಾಯಗಳ ಮೇಲೆ ದ್ವೇಷ ಕಾರುವ ಇಂತಹ ವ್ಯಕ್ತಿಗಳು ತೆರೆಯಲ್ಲೇ ಇರುತ್ತಾರೆ. ಇಂತಹವರು ಮತ್ತೆ ಪುಟಿದೆದ್ದು ಯುವ ಪೀಳಿಗೆಯ ಹಾದಿ ತಪ್ಪಿಸುತ್ತಾರೆ. ಇಂತಹವರನ್ನು ಮಟ್ಟ ಹಾಕದೇ ಹೋದರೆ ಸಮಾಜದಲ್ಲಿ ಸಾಮರಸ್ಯ ತರಲು ಸಾಧ್ಯವಿಲ್ಲ. ರಾಷ್ಟ್ರಕವಿ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟʼ ಎಂಬುದು ಕೇವಲ ನಾಡಗೀತೆಯಲ್ಲಿ ವೇದಿಕೆ ಮೇಲೆ ಹಾಡುವ ಸಾಲಾಗಿ ಉಳಿಯಬಾರದು. ಅದು ನಿಜಾರ್ಥದಲ್ಲಿ ಅನುಷ್ಠಾನವಾಗಬೇಕು. ಅದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಈ ಕಾನೂನು ತಂದಿದೆ.

ಇದು ಕಾಂಗ್ರೆಸ್ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರ ಆಶಯ ಕೂಡ ಹೌದು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ರಾಹುಲ್ ಗಾಂಧಿಯವರ ನೇತೃತ್ವದ ‘ಭಾರತ್ ಜೋಡೋʼ ಕೂಡ ಪ್ರಮುಖ ಕಾರಣವಾಗಿತ್ತು. ಆ ಯಾತ್ರೆಯಲ್ಲಿ ದ್ವೇಷವನ್ನು ಮರೆತು ಪ್ರೀತಿಯನ್ನು ಹರಡುವ ಸಂದೇಶ ಸಾರಲಾಗಿತ್ತು. ಅಂತಹ ಸಂದೇಶವನ್ನು ಈ ಕಾನೂನು ಸಾರುತ್ತದೆ.

ಬಿಜೆಪಿಯಿಂದ ವಿರೋಧವೇಕೆ?

ಬಿಜೆಪಿ ನಾಯಕರು ಈ ಕಾನೂನನ್ನು ವಿರೋಧ ಮಾಡುತ್ತಿರುವುದರಲ್ಲೇ ಅವರ ಅಂತಃಸಾಕ್ಷಿಯನ್ನು ನೋಡಬಹುದು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡ ಎಂಬಂತೆ, ದ್ವೇಷದ ಕಾರ್ಖಾನೆಯನ್ನು ತೆರೆದಿರುವ ಬಿಜೆಪಿ ನಾಯಕರು ಈಗ ಕಾನೂನು ಬಂತೆಂದು ಹೆದರುತ್ತಾರೆ. ಇವರ ಮುಖ್ಯ ಟೀಕೆ ಇರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ. ಭಾರತದ ಸಂವಿಧಾನದ ವಿಧಿ 19(1) ರಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಇದು ಜನರಿಗೆ ನೀಡಿದ ಹಕ್ಕು. ಮಾಧ್ಯಮಗಳು ಕೂಡ ಇದೇ ವಿಧಿಯಡಿ ಕಾರ್ಯನಿರ್ವಹಿಸುತ್ತಿವೆ.

ಬಿಜೆಪಿ ಇದನ್ನೇ ಹಿಡಿದುಕೊಂಡು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಕಾನೂನು ಎಂದಿಗೂ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದಿಲ್ಲ. ಒಂದು ಕಾನೂನು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರೂಪಿತ ಸಂವಿಧಾನದ ಶ್ರೇಷ್ಠ ಹಕ್ಕನ್ನು ಕಸಿಯಲು ಸಾಧ್ಯವೇ ಇಲ್ಲ. ಇದು ದ್ವೇಷದ ಭಾಷಣಕ್ಕೆ ಸೀಮಿತವಾದ ಕಾನೂನು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯವೇ ಬರುವುದಿಲ್ಲ.

ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯನ್ನು ಎಲ್ಲ ರಾಜ್ಯಗಳು ಪಾಲಿಸುತ್ತಿವೆ. ಆದರೆ ಇದರಲ್ಲಿ ದ್ವೇಷ ಭಾಷಣಕ್ಕೆ ಪೂರಕವಾದಂತಹ ಅಂಶಗಳು ಇಲ್ಲ. ಸಾಮಾಜಿಕ ಜಾಲತಾಣದಲ್ಲಿ, ಡಿಜಿಟಲ್ ವೇದಿಕೆಗಳ ಮೂಲಕ ಹರಡುವ ದ್ವೇಷವನ್ನು ನಿಯಂತ್ರಣಕ್ಕೆ ತರಲು ಕಠಿಣ ಕ್ರಮಗಳಿಲ್ಲ. ಸಮುದಾಯಗಳ ನಡುವೆ ಬೆಂಕಿ ಹಚ್ಚುವ, ಉದ್ವಿಗ್ನತೆ ಸೃಷ್ಟಿಸುವ ಹಾಗೂ ಇಂತಹ ಕೆಲಸ ಮಾಡುವವರನ್ನು ಹೊಣೆಗಾರರನ್ನಾಗಿಸುವ ಬಗ್ಗೆ ಯಾವುದೇ ಅಂಶಗಳಿಲ್ಲ. ಆದ್ದರಿಂದ ನಮ್ಮ ಕಾನೂನು, ಬಿಎನ್ಎಸ್‌ಎಸ್‌ಗೆ ಸೇರ್ಪಡೆಯಂತೆ ತಂದ ಕಾನೂನೇ ಹೊರತು, ಇಡೀ ಬಿಎನ್ಎಸ್ಎಸ್‌ಗೆ ಧಕ್ಕೆಯಾಗುವಂತಹ ಅಂಶ ಇಲ್ಲಿ ಇಲ್ಲ.

ಬೇರೆ ರಾಜ್ಯಗಳಿಗೂ ಮಾದರಿ

ಕಾಂಗ್ರೆಸ್ ತಂದ ಹೊಸ ಕಾನೂನು ಬೇರೆ ರಾಜ್ಯಗಳಿಗೂ ಮಾದರಿಯಾಗಲಿದೆ. ಏಕೆಂದರೆ ಕೋಮು ಭಾಷಣದಿಂದ ಹುಟ್ಟಿಕೊಳ್ಳುವ ಅಶಾಂತಿ ಎಲ್ಲ ರಾಜ್ಯಗಳನ್ನೂ ಕಾಡುತ್ತಿದೆ. ಇಂಡಿಯಾ ಹೇಟ್ ಲ್ಯಾಬ್ ಸಂಸ್ಥೆ ಬಿಡುಗಡೆ ಮಾಡಿದ್ದ ವರದಿ ಪ್ರಕಾರ, 2023 ರಲ್ಲಿ ಭಾರತದಲ್ಲಿ 668 ದ್ವೇಷ ಭಾಷಣ ಆಗಿರುವುದು ದಾಖಲಾಗಿದೆ. ಇದರಲ್ಲಿ 498 ಅಂದರೆ ಶೇ.75 ರಷ್ಟು ಭಾಷಣ ಕಂಡುಬಂದಿರುವುದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ. ಹಿಂದುತ್ವ ವಾಚ್ ಎಂಬ ಸಂಸ್ಥೆ ಪ್ರಕಟಿಸಿದ ವರದಿ ಪ್ರಕಾರ, 2022, 2023ರ ಸಮಯದಲ್ಲಿ 255 ದ್ವೇಷ ಭಾಷಣಗಳು ಕಂಡುಬಂದಿದ್ದು, ಇದರಲ್ಲಿ ಶೇ.80ರಷ್ಟು ಆಗಿರುವುದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ. ಇದರಲ್ಲಿ ಬಹುತೇಕ ಅಲ್ಪಸಂಖ್ಯಾತರ ವಿರುದ್ಧವೇ ಇರುತ್ತದೆ. ಕೈಯಲ್ಲಿ ಅಧಿಕಾರವಿದ್ದಾಗಲೂ ಇಂತಹ ಭಾಷಣಗಳನ್ನು ತಡೆಯಲಾಗದ ಬಿಜೆಪಿ ಇಂದು ಈ ಕಾನೂನು ವಿರೋಧ ಮಾಡುತ್ತಿದೆ. ಅಂದರೆ ಬಿಜೆಪಿ ಬಯಸುವುದು ಇದನ್ನೇ ಅಂತಾಯಿತು. ಈ ಹಿಂದೆ ಬಿಜೆಪಿ ನಾಯಕ ಅನಂತಕುಮಾರ್ ಹೆಗಡೆ ಸಂವಿಧಾನವನ್ನೇ ಬದಲಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸದ ಬಿಜೆಪಿ ನಾಯಕರು, ನಾವು ತರುವ ಕಾನೂನನ್ನು ಸಂವಿಧಾನದ ವಿರೋಧಿ ಎಂದು ಬಣ್ಣಿಸುತ್ತಿದ್ದಾರೆ.

ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಘಟನೆಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿವೆ. ಅಮಾಯಕ ಯುವಕರು ರಕ್ತ ಸುರಿಸಿ ಜೀವ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾವಂತರಾಗಿ ಉದ್ಯೋಗ ಪಡೆದು, ದೇಶದ ಭವಿಷ್ಯವನ್ನು ಬೆಳಗಬೇಕಾದ ಯುವಜನರು ಬೀದಿಗಳಲ್ಲಿ ಹೆಣವಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣವಾಗುತ್ತಿರುವುದೇ ದ್ವೇಷ ಭಾಷಣಗಳು. ಇದು ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕಾನೂನಲ್ಲ. ಇದು ಯುವ ಜನರ ಬದುಕನ್ನು ಉಜ್ವಲಗೊಳಿಸಿ ಸರಿದಾರಿ ತೋರುವ ಮಾರ್ಗಸೂಚಿ.

ಬಿಜೆಪಿಯಿಂದ ದೊಡ್ಡ ಸುಳ್ಳು ಪ್ರಸರಣ

ಸರ್ಕಾರದ ವಿರುದ್ಧ ಮಾತನಾಡುವವರನ್ನು ಕಾನೂನಿನಡಿ ಬಂಧಿಸಲಾಗುತ್ತದೆ ಎಂಬ ದೊಡ್ಡ ಸುಳ್ಳನ್ನು ಬಿಜೆಪಿ ಹರಿಬಿಟ್ಟಿದೆ. ಸರ್ಕಾರದ ವಿರುದ್ಧ ಬರುವ ಟೀಕೆ ಟಿಪ್ಪಣಿಗಳನ್ನು ಕಾಂಗ್ರೆಸ್ ಮುಕ್ತವಾಗಿ ಸ್ವೀಕರಿಸುತ್ತದೆ. ಬಿಜೆಪಿ ಹೇಳುವಂತೆ ಪೊಲೀಸರಿಗೆ ಇದು ಸ್ವೇಚ್ಛೆ ನೀಡುವುದಿಲ್ಲ. ಅಂತಹ ಯಾವುದೇ ಅವಕಾಶ ಇಲ್ಲಿಲ್ಲ. ಅಭಿವ್ಯಕ್ತಿ, ವಾಕ್ ಎಂಬ ಎರಡು ಪದಗಳನ್ನೇ ಎತ್ತಿ ಹಿಡಿದು ಕಾನೂನಿನ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ.

ವಿರೋಧ ಪಕ್ಷದವರನ್ನು ನಿಯಂತ್ರಿಸಲು ಈ ಕಾನೂನು ತರಲಾಗಿದೆ ಎಂಬುದು ಮತ್ತೊಂದು ಆರೋಪ. ಆದರೆ ಕಾಂಗ್ರೆಸ್ ತಂದಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ಎಂದೂ ತಂದಿಲ್ಲ. ಬಿಜೆಪಿ ನಾಯಕರಿಗೆ ದ್ವೇಷ ಭಾಷಣ ಹಾಗೂ ಕೋಮುಗಲಭೆಗಳೇ ಜೀವಾಳ. ಇವುಗಳು ಇಲ್ಲವಾದರೆ ಬಿಜೆಪಿಗೆ ಚುನಾವಣೆಯಲ್ಲಿ ವಿಷಯಗಳೇ ಇರುವುದಿಲ್ಲ. ಕೋಮುಗಲಭೆ ನಡೆಸಿ ಜನರಲ್ಲಿ ಭಯ ತುಂಬಿ ಚುನಾವಣೆ ಗೆಲ್ಲಬೇಕಾದ ಅನಿವಾರ್ಯ ಅವರಿಗಿದೆ. ಆದರೆ ನಮಗೆ ಅಭಿವೃದ್ಧಿ, ಸಮಾನತೆ, ಶಾಂತಿ, ಸೌಹಾರ್ದತೆಯೇ ಜೀವಾಳ. ನೆಮ್ಮದಿಯಿಂದ ಬದುಕುವ ಗ್ಯಾರಂಟಿ ನೀಡುವುದೇ ಹೊಸ ಕಾನೂನಿನ ಗುರಿ.

PREV
Read more Articles on

Recommended Stories

ವಿರೋಧಿಗಳನ್ನು ಹತ್ತಿಕ್ಕಲು ಅಸ್ತ್ರ ಆಗುತ್ತೆ ದ್ವೇಷ ಬಿಲ್‌
‘ಕೋಕಾ’ ಸೇರಿಸದಿದ್ದರೆ ಈ ಬಿಲ್‌ ಹಲ್ಲಿಲ್ಲದ ಹಾವು