;Resize=(412,232))
ಸದ್ಯಕ್ಕೆ ಕಾಕ್ರೋಚ್ ಜನತಾ ಪಾರ್ಟಿಯನ್ನು(ಸಿಜೆಪಿ) ರಾಜಕೀಯ ಪಕ್ಷವನ್ನಾಗಿಸುವ ಯಾವುದೇ ಯೋಚನೆಯಿಲ್ಲ. ಆದರೆ ನಾವು ರಾಜಕೀಯ ಒತ್ತಡ ಗುಂಪಾಗಿ (ಪ್ರೆಶರ್ ಗ್ರೂಪ್) ಮುಂದುವರಿಯುತ್ತೇವೆ. ಎಲ್ಲರೂ ರಾಜಕೀಯದಲ್ಲಿ ಸಕ್ರಿಯರಾಗಿರಬೇಕು. ಹಾಗೆಂದು ನಮ್ಮ ಗಮನ ಕೇವಲ ಶಿಕ್ಷಣದ ಮೇಲೆ ಇರುವುದಿಲ್ಲ. ನಿರುದ್ಯೋಗ ಸಮಸ್ಯೆ, ಆರ್ಥಿಕ ಅಸಮಾನತೆಯ ಬಗ್ಗೆ ಧ್ವನಿ ಎತ್ತುತ್ತೇವೆ.
ಇಂದು ಜನರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನವಿರುವುದಕ್ಕೆ ಪ್ರಮುಖ ಕಾರಣ ಅವರ ಬಳಿ ಕನಿಷ್ಠ ವೇತನ ಕೊಡುವ ಕೆಲಸ ಕೂಡಾ ಇಲ್ಲದಿರುವುದು. ಜತೆಗೆ ಯುವಕರು ಈ ಕಾಲದ ರಾಜಕೀಯ ವ್ಯವಸ್ಥೆ ಹಾಗೂ ಸಂಸ್ಥೆಗಳಿಂದ ನಿರಾಶರಾಗಿದ್ದಾರೆ. ಜನರಿಗೀಗ ಯಾರನ್ನು ನಂಬುವುದು ಎಂದೇ ತಿಳಿಯುತ್ತಿಲ್ಲ. ನ್ಯಾಯಾಲಯಕ್ಕೆ ಹೋದರೆ ನ್ಯಾಯ ಸಿಗದು. ಒಂದು ಪಕ್ಷದವರಿಗೆ ಮತ ಹಾಕಿ ಚುನಾಯಿಸಿದರೆ ಅವರು ಪಕ್ಷ ಬದಲಿಸಿಬಿಡುತ್ತಾರೆ. ಇನ್ನು ತನಿಖಾ ಸಂಸ್ಥೆಗಳ ಕತೆಯನ್ನಂತೂ ಕೇಳುವುದೇ ಬೇಡ. ಜನರಿಗಾಗಿ ಕೆಲಸ ಮಾಡಬೇಕಿದ್ದ ಅವು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿವೆ. ಅವರ ವಿರುದ್ಧ ಮಾತಾಡಿದವರ ಮೇಲೆ ದಾಳಿ ನಡೆಸುವುದಕ್ಕೆ ಸೀಮಿತವಾಗಿವೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಇದೇ ಆಕ್ರೋಶ ಭುಗಿಲೆದ್ದಿತ್ತು.
ನಮ್ಮ ಕೆಲಸವೀಗ ಜನರ ನಂಬಿಕೆಯನ್ನು ಪುನಃ ಸ್ಥಾಪಿಸುವುದಾಗಿದೆ. ಹಾಗೆ ಮಾಡದಿದ್ದರೆ ನಾಗರಿಕರ ಕೋಪ ಪ್ರಜಾಪ್ರಭುತ್ವಕ್ಕೇ ಮಾರಕವಾದೀತು. ಹಾಗಾಗಲು ನಾವು ಬಿಡುವುದಿಲ್ಲ.
ನಾನು ರಾಜಕಾರಣಿಯಾಗಲು ಬಯಸುವುದಿಲ್ಲ. ಒಂದೊಮ್ಮೆ ಆದರೂ ಏನುಪಯೋಗ? ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಮ್ಮ ಕಡೆಯವರ ಮತಗಳು ಡಿಲೀಟ್ ಆಗುತ್ತವೆ. ನನ್ನ ಬೆಂಬಲಿಗರ ಮೇಲೆ ಇ.ಡಿ. ದಾಳಿ ಆಗುತ್ತದೆ. ಇದರ ಗೊಡವೆಯೇ ಬೇಡ ಎಂದಿದ್ದೇನೆ. ಇಂದು ದೇಶದಲ್ಲಿ ಸುಧಾರಣೆ ತರುವ ಶಕ್ತಿ ಇರುವುದು ಸಾರ್ವಜನಿಕ ಚಳವಳಿಗಳಿಗೆ ಮಾತ್ರ. ನಾವೂ ಅದೇ ಹಾದಿ ಹಿಡಿಯುತ್ತೇವೆ.
ಈಗಾಗಲೇ ಮುಂದೆ ಯಾವ ಸಮಸ್ಯೆಯ ಬಗ್ಗೆ ಧ್ವನಿ ಎತ್ತಬೇಕೆಂಬ ಬಗ್ಗೆ ಯೋಚಿಸುತ್ತಿದ್ದೇವೆ. ನೀಟ್ ಪೇಪರ್ ಪೀಕ್ ವಿರುದ್ಧದ ಪ್ರತಿಭಟನೆ ವೇಳೆ ನಮ್ಮ ಬೆಂಬಲಕ್ಕಿದ್ದ ಸ್ವಯಂಸೇವಕರನ್ನು ಮತ್ತೆ ಸಂಪರ್ಕಿಸಿ ಸಂಘಟಿಸಬೇಕಿದೆ. ಆ ಕೆಲಸ ಕೆಲ ದಿನಗಳಲ್ಲೇ ಆಗುವುದು.
ಕಾಂಗ್ರೆಸ್ ಬೆಂಬಲ ಇತ್ತು:
ನಾವು ಪ್ರತಿಭಟಿಸುತ್ತಿದ್ದ ಜಾಗಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಂದಿರಲಿಲ್ಲ, ನಿಜ. ಹಾಗೆಂದು ಕಾಂಗ್ರೆಸ್ ಬೆಂಬಲ ಇರಲಿಲ್ಲವೆಂದು ಅರ್ಥವಲ್ಲ. ಪಕ್ಷದ ಪರವಾಗಿ ಪವನ್ ಖೇರಾ ಬಂದಿದ್ದರು. ಜತೆಗೆ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಲ್ಲಿ ಅನೇಕರು ಜಂತರ್ ಮಂತರ್‌ಗೆ ಬಂದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನನಗೆ ವೈಯಕ್ತಿಕ ದ್ವೇಷ ಇಲ್ಲ. ಅವರು ಪ್ರಧಾನಮಂತ್ರಿ ಆಗಿರುವ ಕಾರಣ, ದೇಶದಲ್ಲಿ ಏನೇ ಆದರೂ ಅವರು ಹೊಣೆಗಾರರಾಗುತ್ತಾರೆ. ಹಾಗಾಗಿಯೇ ಅವರ ವಿರುದ್ಧ ಪ್ರತಿಭಟಿಸಿದ್ದೆವು.
ವಿದ್ಯಾರ್ಥಿಗಳ ಕೈ ಬಿಟ್ಟಿಲ್ಲ:
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದಿಗೆ ನಮ್ಮ ಕೆಲಸ ಮುಗಿಯಿತು ಎಂದಲ್ಲ. ನಾವು ಯಾವಾಗಲೂ ವಿದ್ಯಾರ್ಥಿಗಳ ಜತೆ ನಿಲ್ಲುತ್ತೇವೆ. ನನ್ನ ತಂಡವು ಎಲ್ಲಾ ಯುವಕರೊಂದಿಗೆ ಸಂಪರ್ಕದಲ್ಲಿದೆ. ಯಾರ್ಯಾರ ಮೇಲೆ ಎಫ್‌ಐಆರ್ ದಾಖಲಾಗಿದೆಯೋ, ಅವರಿಗೆ ಖಂಡಿತವಾಗಿ ಕಾನೂನು ನೆರವು ಒದಗಿಸುತ್ತೇವೆ. ಇದಕ್ಕಾಗಿ ಕಪಿಲ್ ಸಿಬಲ್ ಅವರ ನೆರವು ಪಡೆಯುತ್ತೇವೆ. ಶಾಂತಿಯುತವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುವುದನ್ನು ಸರ್ಕಾರ ಮುಂದುವರಿಸಿದರೆ ನಾವು ಮತ್ತೆ ಬೀದಿಗಿಳಿಯುತ್ತೇವೆ.
ಮೇ 16ರಂದು, ‘ಜಿರಳೆಗಳು ಒಟ್ಟಾದರೆ ಏನಾದೀತು’ ಎಂದು ನಾನು ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ ಈ ಪರಿಯ ಪ್ರತಿಕ್ರಿಯೆ ಬರುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ನಾನಾಗ ಅಮೆರಿಕದಲ್ಲಿದ್ದೆ. ಅದನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರ ನನ್ನನ್ನು ‘ರಾಷ್ಟ್ರೀಯ ಭದ್ರತೆಗೆ ಬೆದರಿಕೆ’ ಎಂದು ಕರೆಯಿತು. ಹಾಗಾಗಿ ನಾನು ತವರಿಗೆ ಮರಳಬೇಕಾಯಿತು.
ವಾಂಗ್ಚುಕ್ ಜತೆ ಮುನಿಸಿಲ್ಲ:
ನಮ್ಮ ಹೋರಾಟ ಮುಗಿದ ವೇಳೆ ನಾನು ಸೋನಂ ವಾಗ್ಚುಕ್‌ರ ಹೆಸರನ್ನು ಉಲ್ಲೇಖಿಸದೆ ಇದ್ದುದರಿಂದ, ಇಬ್ಬರ ನಡುವೆ ವೈಮನಸ್ಯ ಇದೆ ಎಂಬ ವಿಶ್ಲೇಷಣೆಗಳು ಶುರುವಾಗಿದ್ದವು. ಅದು ನಿಜವಲ್ಲ. ನಾವಿನ್ನೂ ಒಟ್ಟಾಗಿದ್ದೇವೆ. ನಾನು ಅವರಿಗೆ ಕರೆ ಮಾಡಿ ಮಾತಾಡಿದ್ದೆ. ಜು.20ರ ಸಂಸತ್ ಚಲೋ ವಿದ್ಯಾರ್ಥಿಗಳ ಪ್ರತಿಭಟನೆಯಾಗಿತ್ತು. ಲಾಠಿಯೇಟು ತಿಂದವರು ಯುವಕರು. ಹಾಗಾಗಿ ನಾನವರಿಗೆ ಧನ್ಯವಾದ ತಿಳಿಸಿದ್ದೆ.
ಹಾಗೆಂದು, ತಮ್ಮ ಪ್ರಾಣವನ್ನು ಒತ್ತೆಯಿಟ್ಟು 26 ದಿನ ಉಪವಾಸ ಕುಳಿತ ಸೋನಂರ ತ್ಯಾಗವನ್ನು ಮರೆಯಲಾಗದು. ಅವರ ನಿರಶನದಿಂದಲೇ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಲು ಸಾಧ್ಯವಾಗಿದ್ದು. ಅವರು ಉಪವಾಸ ಮುರಿದ ದಿನ ನಾನು ನಿರಾಳನಾಗಿದ್ದೆ. ನಮ್ಮ ದೇಶದ ಭವಿಷ್ಯಕ್ಕೆ ಅವರ ಜೀವ ಅತ್ಯಮೂಲ್ಯವಾದುದು.