ಡಾ. ಅರಕಲಗೂಡು ನೀಲಕಂಠಮೂರ್ತಿ ಅವರ ‘ಸಮಯದ ನೀರು ಮತ್ತೆ ಹರಿವ ಹೊತ್ತು’ ಚಿಂತನೆಗೆ ದೂಡುವ ಕವನಗಳು

KannadaprabhaNewsNetwork | Updated : Oct 18 2024, 07:26 AM IST

ಸಾರಾಂಶ

ಡಾ. ಅರಕಲಗೂಡು ನೀಲಕಂಠಮೂರ್ತಿ ಅವರ ‘ಸಮಯದ ನೀರು ಮತ್ತೆ ಹರಿಯುವ ಹೊತ್ತು’- ಕವನ ಸಂಕಲನ, ‘ಹೆಣ್ಣೊಬ್ಬಳು ಗರ್ಭಕೋಶಗಳೆರಡು’- ವೈದ್ಯಕೀಯ ಲೇಖನಗಳು, ‘ಮುಖದಿಂದೆದ್ದು ಎತ್ತಲೋ ನಡೆದ ಕಣ್ಣು’- ಕವನ ಸಂಕಲನವನ್ನು ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ ಬಿಡುಗಡೆ ಮಾಡುವರು.

 ಮೈಸೂರು : ವೃತ್ತಿಯಿಂದ ವೈದ್ಯರೂ ಪ್ರವೃತಿಯಿಂದ ಸಾಹಿತಿಗಳೂ ಆಗಿರುವ ಡಾ.ಅರಕಲಗೂಡು ನೀಲಕಂಠಮೂರ್ತಿ ಅವರು ‘ಸಮಯದ ನೀರು ಮತ್ತೆ ಹರಿವ ಹೊತ್ತು’ ಕವನ ಸಂಕಲನವನ್ನು ಹೊರತಂದಿದ್ದಾರೆ.

1976 ರಿಂದ1989 ರವರೆಗೆ ಸೋಮಾಲಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿರುವ ಅವರು, ‘ಕಗ್ಗತ್ತಲೆಯ ಖಂಡದಲ್ಲಿ’ ಸೋಮಾಲಿಯಾದಲ್ಲಿ 13 ವರ್ಷಗಳು ಪ್ರವಾಸ ಕಥನ ರಚಿಸಿದ್ದರು. ‘ನಮ್ಮಂಗಳದ ಹರಳುಗಳು’ ಕವನ ಸಂಕಲನವನ್ನು ಕೂಡ ಪ್ರಕಟಿಸಿದ್ದರು. ಎರಡು ದಶಕಗಳ ಕಾಲ ಮೌನವಾಗಿದ್ದ ನೀಲಕಂಠಮೂರ್ತಿ ಅವರು ಇದೀಗ ಮತ್ತೆ ಬರವಣಿಗೆ ಕಡೆ ಮುಖ ಮಾಡಿದ್ದು, ಎರಡು ಕವನ ಸಂಕಲನ, ಒಂದು ವೈದ್ಯಕೀಯ ಲೇಖನಗಳ ಸಂಕಲನವನ್ನು ಹೊರತಂದಿದ್ದಾರೆ.

‘ಸಮಯದ ನೀರು ಮತ್ತೆ ಹರಿವು ಹೊತ್ತು’ ಸಂಕಲನದಲ್ಲಿ ಪ್ರಾರ್ಥನೆ, ಅಮಾವಾಸ್ಯೆಯ ದಿನ, ಆ ರಕ್ಕಸ ರಾತ್ರಿಗಳು, ಇವಳು, ಈ... ಬೆಳಕು, ಕಂಸ, ಕಣ್ಣುಕೊಡಿ, ಕಾಲ, ಕುರಿಮರಿ, ಗೆಳೆಯ, ಗೆಳೆಯನೊಬ್ಬ ಸತ್ತ ಸುದ್ದಿ, ನಮ್ಮ ಮನೆ, ನಮ್ಮೂರ ಕೆರೆ, ನೆನಪುಗಳು, ಪ್ರಸಿದ್ಧಿ, ಪ್ರೇಮ ವ್ಯೋಮಯಾನ, ಪವರ್‌ ಲೂಮ್‌, ಒಂಧು ಒಂದು ಮನವಿ, ಭ್ರೂಣ ಹತ್ಯೆ, ಮರಕುಟಿಕ, ಮಾನ್ಸೂನ್‌ ಮಳೆ, ಮೂಟೆ, ವಾಸನೆಗಳ ಹುತ್ತ, ವಾಹನ, ಸುಡಬೇಡಿ ನಮ್ಮ, ಸೊಪ್ಪಿನ ಸಾಕಮ್ಮ, ಹರೆಯದ ಸೊಬಗು, ಹಿಂತಿರುಗಿ ನೋಡು, ಹೃದಯ- ಈ 30 ಕವನಗಳಿವೆ.

ದುರಾತ್ಮನೊಬ್ಬನ ಕ್ರೂರ ಮನಸ್ಸಿಗೆ ಅತ್ಯಂತ ಹೇಯವಾಗಿ ಬಲಿಯಾದ ಎಳೆಯ ಕಂದಮ್ಮನಿಗೆ ಶಾಂತಿ ಕೋರಿ ರಚಿಸಿರುವ ಹಸುಳೆಯೊಂದು ಅಸುನೀಗಿದೆ

ಒಂದು ಪೊದೆಯೊಳಗೆ

ಅನಾಥ

ಬೆತ್ತಲೆ-

ಬೀಭತ್ರ ಕೊಲೆಗೆ...!

ಎಂದು ಆರಂಭವಾಗುವ ‘ಕಂಸ’ ಎಂಬ ಕವನ ಕ್ರೌರ್ಯವನ್ನು ಬಿಂಬಿಸುತ್ತದೆ.

ಅದೇ ರೀತಿ ‘ಗೆಳೆಯ’ ಕವನದಲ್ಲಿರುವ

ಆಗ ಇಂಟರ್ನೆಟ್‌

ಟಿ.ವಿ ಮನೋರಂಜನೆ

ಮತ್ತು ನನ್ನ ಕಿವಿಗೆ ನೀನು

ನಿನ್ನ ಕಿವಿಗೆ ನಾವು

ಮೊಬೈಲ್‌ ಫೋನ್‌!

ಸಾಲುಗಳು ಪ್ರಸ್ತುತ ಮೊಬೈಲ್‌ ಹಾವಳಿಯನ್ನು ಮಾರ್ಮಿಕವಾಗಿ ಅನಾವರಣ ಮಾಡುತ್ತದೆ.

ಪವರ್‌ ಲೂಮ್‌..! ಕವನದಲ್ಲಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನೇಕಾರನ ಸ್ವಗತವಿದೆ.

ಎಲ್ಲರೆದೆಯೊಳು ಒಂಟಿ ಗುಮ್ಮನಂತಡಗಿ

ಸೂರ್ಯ ಚಂದ್ರರ ನಿಷ್ಠೆಯಲಿ

ಅಹರ್ನಿಶಿ ತುಡಿವ ಬಡಿವ

ಓ ಹೃದಯವೇ

ಮನುಜ ಕುಲ ನಿನಗೆ ಧನ್ಯ!

ಕವನವು ಹೃದಯದ ಮಹತ್ವವನ್ನು ತಿಳಿಸಿಕೊಡುತ್ತದೆ.

ಹೀಗೆ ಅತ್ಯಂತ ಸರಳ, ಸುಂದರ ಶೈಲಿಯಲ್ಲಿರುವ ಕವನಗಳನ್ನು ಓದಿದಾಗ ಚಿಂತನೆಗೆ ದೂಡುತ್ತವೆ.

ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡರ ಮುನ್ನುಡಿ, ಡಾ.ಎಂಜಿಆರ್‌ ಅರಸು ಅವರ ಬೆನ್ನುಡಿ ಇದೆ.

ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿದ್ದು, ಆಸಕ್ತರು ಮೊ. 94484 02092 ಸಂಪರ್ಕಿಸಬಹುದು.

20 ರಂದು ಬಿಡುಗಡೆ

ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್‌ ಟ್ರಸ್ಟ್‌, ವೈದ್ಯವಾರ್ತಾ ಪ್ರಕಾಶನವು ಅ.20 ರಂದು ಬೆಳಗ್ಗೆ 11ಕ್ಕೆ ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಡಾ. ಅರಕಲಗೂಡು ನೀಲಕಂಠಮೂರ್ತಿ ಅವರ ‘ಸಮಯದ ನೀರು ಮತ್ತೆ ಹರಿಯುವ ಹೊತ್ತು’- ಕವನ ಸಂಕಲನ, ‘ಹೆಣ್ಣೊಬ್ಬಳು ಗರ್ಭಕೋಶಗಳೆರಡು’- ವೈದ್ಯಕೀಯ ಲೇಖನಗಳು, ‘ಮುಖದಿಂದೆದ್ದು ಎತ್ತಲೋ ನಡೆದ ಕಣ್ಣು’- ಕವನ ಸಂಕಲನವನ್ನು ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ ಬಿಡುಗಡೆ ಮಾಡುವರು. ಕೃತಿ ಕುರಿತು ಮೈಸೂರು ವೈದ್ಯಕೀಯ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ. ಪ್ರಸನ್ನಕುಮಾರ್‌ ಮಾತನಾಡುವರು. ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಎಚ್‌ಎಂಟಿ ಲಿಂಗರಾಜೇ ಅರಸು ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಡಾ.ಎಂಜಿಆರ್‌ ಅರಸು ಉಪಸ್ಥಿತರಿರುವರು.

Share this article