ಸೃಜನಶೀಲ ಲೇಖಕರ ಅನುವಾದ ಓದುಗರಿಗೆ ಹತ್ತಿರ : ಶಾನಭಾಗ

Published : Jan 19, 2026, 11:42 AM IST
Vivek Shanbogh

ಸಾರಾಂಶ

ಅನುವಾದ ಎಂದರೆ ಭಾಷೆ ಬದಲಾಯಿಸುವುದಲ್ಲ. ಒಂದು ಭಾಷೆಯಲ್ಲಿ ಇರುವ ಅನುಕ್ತ ಸಂಗತಿಗಳನ್ನು ಮತ್ತೊಂದು ಭಾಷೆಗೆ ದಾಟಿಸುವುದು. ಅದನ್ನು ಸೃಜನಶೀಲ ಲೇಖಕರಿಂದಷ್ಟೇ ಮಾಡಲು ಸಾಧ್ಯ. ಹಾಗೆ ಮಾಡಿದಾಗ ಅನುವಾದ ಓದುಗರಿಗೆ ಹತ್ತಿರವಾಗುತ್ತದೆ’.

ಜೋಗಿ

 ಜೈಪುರ

‘ಅನುವಾದ ಎಂದರೆ ಭಾಷೆ ಬದಲಾಯಿಸುವುದಲ್ಲ. ಒಂದು ಭಾಷೆಯಲ್ಲಿ ಇರುವ ಅನುಕ್ತ ಸಂಗತಿಗಳನ್ನು ಮತ್ತೊಂದು ಭಾಷೆಗೆ ದಾಟಿಸುವುದು. ಅದನ್ನು ಸೃಜನಶೀಲ ಲೇಖಕರಿಂದಷ್ಟೇ ಮಾಡಲು ಸಾಧ್ಯ. ಹಾಗೆ ಮಾಡಿದಾಗ ಅನುವಾದ ಓದುಗರಿಗೆ ಹತ್ತಿರವಾಗುತ್ತದೆ’.

- ಜೈಪುರ ಸಾಹಿತ್ಯ ಸಮ್ಮೇಳನದ ನಾಲ್ಕನೇ ದಿನ ನಡೆದ ‘ಅನುವಾದಗಳ ಪ್ರಕಟಣೆಯ ಹೊಸಹಾದಿ’ ಕುರಿತ ಸಂವಾದದಲ್ಲಿ ವಿವೇಕ ಶಾನಭಾಗ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

‘ಅನುವಾದ ಮಾಡುವುದರಿಂದ ಇಂಗ್ಲಿಷ್ ಭಾಷೆಗೂ ಕನ್ನಡದ ಸಂವೇದನೆ ದಾಟಿಕೊಳ್ಳುತ್ತದೆ. ಅನುವಾದಿತ ಕೃತಿ ಹೊಸ ಕೃತಿಯೇ ಆಗಿರುತ್ತದೆ. ಅದಕ್ಕೆ ತನ್ನದೇ ಆದ ಜಾಯಮಾನ ಇರಬೇಕು. ಅದು ಸಾಧ್ಯವಾಗಲು ಸೃಜನಶೀಲ ಲೇಖಕರೇ ಬೇಕು’ ಎಂದು ಶಾನಭಾಗ ಪ್ರತಿಪಾದಿಸಿದರು.

ಭಾರತೀಯ ಭಾಷೆಗಳ ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದಿಸುವ ಸಲುವಾಗಿ ‘ಹೈಫನ್’ ಎಂಬ ಸಂಸ್ಥೆ ಆರಂಭಿಸಿರುವ ವಿವೇಕ ಶಾನಭಾಗ, ‘ಹೈಫನ್ ಹೆಸರಿನ ಸಾಹಿತ್ಯ ಪತ್ರಿಕೆ ಹೊರತರಲಿದ್ದೇವೆ. ಅದರಲ್ಲಿ ಇಪ್ಪತ್ತು ಲೇಖಕರ ಬರಹಗಳಿರುತ್ತವೆ. ಅದರಿಂದಾಗಿ ಹಲವು ಲೇಖಕರು ಇಂಗ್ಲಿಷಿಗೆ ಪರಿಚಯವಾಗುತ್ತಾರೆ’ ಎಂದರು.

ಎಲ್ಲವನ್ನೂ ಅನುವಾದ ಮಾಡಲು ಅಸಾಧ್ಯ:

‘ಅನುವಾದ ಸುಲಭದ ಕೆಲಸ ಅಲ್ಲ. ಯಾರನ್ನು ಅನುವಾದಿಸಬೇಕು, ಹೇಗೆ ಅನುವಾದಿಸಬೇಕು ಮುಂತಾದ ಅನೇಕ ಪ್ರಶ್ನೆಗಳಿವೆ. ಎಲ್ಲವನ್ನೂ ಅನುವಾದ ಮಾಡಲಿಕ್ಕಾಗುವುದಿಲ್ಲ. ಒಂದು ಭಾಷೆಯ ಸನ್ನಿವೇಶ ಮತ್ತೊಂದು ಭಾಷೆಗೆ ಹೋಗುವಾಗ ಕಳೆದುಹೋಗುತ್ತದೆ. ಅನುವಾದಗೊಂಡ ಭಾಷೆಯೊಳಗೆ ಮೂಲಕೃತಿ ನಿಲ್ಲುವಂತೆ ಮಾಡಲು ಬೇರೊಂದು ಸನ್ನಿವೇಶ ಸೃಷ್ಟಿ ಮಾಡಬೇಕಾಗುತ್ತದೆ. ಇವೆಲ್ಲ ಸಾಧ್ಯವಾಗಬೇಕಿದ್ದರೆ ಒಂದು ಕೃತಿ ಮುಖ್ಯವಾಗಿ ಸಾಹಿತ್ಯಿಕ ಆಗಿರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ಅನುವಾದಗೊಂಡ ಪುಸ್ತಕಗಳೆಲ್ಲ ಗೆಲ್ಲುವುದಿಲ್ಲ. ಅನುವಾದ ಮಾಡುವುದು ಎಂದರೆ ತಳವಿಲ್ಲದ ಬಾವಿಗೆ ಪುಸ್ತಕ ಎಸೆದಂತೆ. ಎಷ್ಟೋ ಕೃತಿಗಳು ಮೂರೇ ದಿನಕ್ಕೆ ಕಣ್ಮರೆಯಾಗುತ್ತವೆ. ಇಂಥ ಹೊತ್ತಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಾನು ಕಳೆದ ಎರಡು ವರ್ಷಗಳಲ್ಲಿ 125-150 ಕೃತಿಗಳನ್ನು ಇಂಗ್ಲಿಷಿಗೆ ತಂದಿದ್ದೇನೆ. ಅವುಗಳಲ್ಲಿ ಐದು ಹೆಸರು ಹೇಳುವುದಕ್ಕೂ ನಾನು ಕಷ್ಟಪಡಬೇಕಿದೆ’ ಎಂದು ಚೌರಂಗಿ ಪ್ರೆಸ್‌ನ ಅರುಣವ್‌ ಸಿನ್ಹಾ ಕಳವಳ ವ್ಯಕ್ತಪಡಿಸಿದರು.

‘ಪ್ರಮುಖ ಪುಸ್ತಕ ಪ್ರಕಾಶನ ಸಂಸ್ಥೆಗಳ ಅಬ್ಬರದಲ್ಲಿ ಸಣ್ಣ ಸಂಸ್ಥೆಗಳ ಅನುವಾದ ಕಳೆದುಹೋಗುತ್ತದೆ. ಆ ಸಂಸ್ಥೆಗಳು ಎಲ್ಲ ಪ್ರಕಾರದ ಪುಸ್ತಕಗಳನ್ನೂ ಪ್ರಕಟಿಸುತ್ತವೆ. ಹೀಗಾಗಿ ಓದುಗರಿಗೆ ಸ್ಪಷ್ಟತೆ ಸಿಗುವುದಿಲ್ಲ. ಅದರಿಂದಾಗಿ ಅನುವಾದಗೊಂಡ ಪುಸ್ತಕಗಳಿಗೂ ಅನ್ಯಾಯ ಆಗುತ್ತದೆ’ ಎಂದು ಅರುಣವ್ ಅಭಿಪ್ರಾಯಪಟ್ಟರು.

‘ಭಾರತೀಯ ಸಾಹಿತ್ಯವನ್ನು ಚಿನ್ನದ ಗಣಿ ಅಂತ ಕರೆಯುತ್ತಾರೆ. ಆದರೆ ಗಣಿಯಲ್ಲಿ ಬಂಗಾರದ ನಾಣ್ಯ ಸಿಗುವುದಿಲ್ಲ. ಒಂದು ಬಂಗಾರದ ನಾಣ್ಯಕ್ಕಾಗಿ ಸಾವಿರ ಕಿಲೋ ಅದಿರನ್ನು ಅಗೆಯಬೇಕಾಗುತ್ತದೆ. ನಾನು ದೇಶಕಾಲ ಪತ್ರಿಕೆ ನಡೆಸುತ್ತಿದ್ದಾಗ ಭಾರತೀಯ ಭಾಷೆಯ ಕೃತಿಯ ಅನುವಾದಕ್ಕೆ ಮೀಸಲಾಗಿಟ್ಟ 20 ಪುಟಗಳನ್ನು ನಿಭಾಯಿಸಲು ಇಡೀ ಸಂಚಿಕೆಯ ಶೇ.80ರಷ್ಟು ಶ್ರಮ ಖರ್ಚು ಮಾಡುತ್ತಿದ್ದೆ’ ಎಂದು ಶಾನಭಾಗ ಹೇಳಿದರು.

ಪ್ರಿಂಟ್‌ ಆನ್‌ ಡಿಮ್ಯಾಂಡ್‌:

‘ಅನುವಾದ ಮಾಡುವವರಿಗೆ ಇಲ್ಲಿ ಶ್ರಮಕ್ಕೆ ತಕ್ಕ ಸಂಭಾವನೆ ಸಿಗುವುದಿಲ್ಲ ಎಂದು ಹೇಳಿದ ಅರುಣವ್, ಈಗ ಪ್ರಿಂಟ್ ಆನ್ ಡಿಮ್ಯಾಂಡ್ ವ್ಯವಸ್ಥೆ ಬಂದಿದೆ. ನಾನು ಆರಂಭಿಸಿದ ಸ್ಟಾಟ್‌ಬುಕ್ ಮೂಲಕ ಎಷ್ಟು ಬೇಕೋ ಅಷ್ಟು ಪ್ರತಿಗಳನ್ನು ಪ್ರಿಂಟ್ ಮಾಡಬಹುದು. ಅನುವಾದಕರು ಪುಸ್ತಕ ಮಾರಾಟ ಆಗುತ್ತಿದ್ದಂತೆ ಅವರ ಪಾಲಿನ ಸಂಭಾವನೆ ಪಡೆಯುತ್ತಾರೆ. ವಿದೇಶಗಳಲ್ಲಿ ಒಂದು ಪುಸ್ತಕ ಮಾರಾಟ ಆದರೆ ಅನುವಾದಕರಿಗೆ 400-500 ರು. ದೊರೆಯುತ್ತದೆ. ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಕೂಡ ಈ ಮೊತ್ತ ಕೊಡುವುದಿಲ್ಲ. ಆದರೆ ನಾನು ಯಾರಿಗೂ ಮುಂಗಡ ಹಣ ಕೊಡುವ ಪದ್ಧತಿ ಇಟ್ಟುಕೊಂಡಿಲ್ಲ’ ಎಂದು ತನ್ನ ಸಂಸ್ಥೆಯ ಕಾರ್ಯವಿಧಾನವನ್ನು ಬಿಚ್ಚಿಟ್ಟರು.

ಅನುವಾದ ಮಾಡಲು ಎಐ ಬಳಸುವ ಕುರಿತೂ ಚರ್ಚೆ ನಡೆಯಿತು. ವಿವೇಕ ಶಾನಭಾಗ ಮತ್ತು ಅರುಣವ್ ಇಬ್ಬರೂ ಎಐ ಸಮರ್ಥವಾಗಿ ಅನುವಾದ ಮಾಡುವಷ್ಟು ಮುಂದುವರಿದಿಲ್ಲ ಎಂದು ಅಭಿಪ್ರಾಯಪಟ್ಟರು. ಅಶೋಕ ವಿಶ್ವವಿದ್ಯಾಲಯದ ಅನುವಾದ ಕೇಂದ್ರದ ರೀಟಾ ಕೊಠಾರಿ ಸಂವಾದ ನಡೆಸಿಕೊಟ್ಟರು.

PREV
Read more Articles on

Recommended Stories

ಬೇಡ್ತಿಗಾಗಿ ಪಶ್ಚಿಮ ಘಟ್ಟ- ಬಯಲುಸೀಮೆ ಜಲ ಸಂಘರ್ಷ!
ಯಾವಾಗ ಕಾಂಗ್ರೆಸ್‌ ಸೇರಿದ್ರೋ ಆವಾಗ ಕೆಟ್ಟು ಹೋದ್ರು : ಸಿಎಂ ಬಗ್ಗೆ ನಕ್ಕೊಂತ ಹೇಳಿದ ಹಳೇ ದೋಸ್ತು