ಕಾಡಿನ ಆರೋಗ್ಯ ಕಾಪಾಡಲು ಮರ ಕಟಾವು ಯೋಜನೆ

Published : Oct 17, 2026, 11:53 AM IST
forest dept

ಸಾರಾಂಶ

ಒಂದು ನೂರು ವರ್ಷ ಹಳೆದ ಮರದ ಒಂದು ಘನ ಮೀಟರ್‌ ದಿಮ್ಮಿಯಲ್ಲಿ 1 ಟನ್‌ ಇಂಗಾಲದ ಡೈ ಆಕ್ಸೈಡ್‌ ಸಂಗ್ರಹವಾಗಿರುತ್ತದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಮರದ ದಿಮ್ಮಿಯಲ್ಲಿ ಶೇ50 ರಷ್ಟು ಇಂಗಾಲವೇ ತುಂಬಿರುತ್ತದೆ.

ಒಂದು ನೂರು ವರ್ಷ ಹಳೆದ ಮರದ ಒಂದು ಘನ ಮೀಟರ್‌ ದಿಮ್ಮಿಯಲ್ಲಿ 1 ಟನ್‌ ಇಂಗಾಲದ ಡೈ ಆಕ್ಸೈಡ್‌ ಸಂಗ್ರಹವಾಗಿರುತ್ತದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಮರದ ದಿಮ್ಮಿಯಲ್ಲಿ ಶೇ50 ರಷ್ಟು ಇಂಗಾಲವೇ ತುಂಬಿರುತ್ತದೆ. ಈ ಮರದ ದಿಮ್ಮಿಯನ್ನು ಕಟಾವು ಮಾಡಿ ಅದನ್ನು ಪೀಠೋಪಕರಣಕ್ಕೆ ಬಳಸಿದಲ್ಲಿ, ಅದರೊಳಗೆ ಇರುವ ಇಂಗಾಲವು ವಾತಾವರಣಕ್ಕೆ ಬಿಡುಗಡೆಯಾಗದೇ ಅದರೊಳಗೇ ಅದನ್ನು ಬಂಧಿಸಿದಂತಾಗುತ್ತದೆ.

ಕಾಡು ಆರೋಗ್ಯವಾಗಿದ್ದರೆ, ನಾಡು ಆರೋಗ್ಯವಾಗಿರುತ್ತದೆ. ಕಾಡು ಸಮತೋಲಿತವಾಗಿದ್ದರೆ ನಮ್ಮ ಸುತ್ತಮುತ್ತಲಿನ ಹವಾಮಾನ ಚೆನ್ನಾಗಿರುತ್ತದೆ. ಅತ್ಯುತ್ತಮವಾಗಿ ಅರಣ್ಯವನ್ನು ನಿರ್ವಹಣೆ ಮಾಡಿದರೆ, ಅದು ಇಡೀ ಜೀವಸಂಕುಲವನ್ನು ಸಲಹುವುದರ ಜೊತೆಗೆ ಆದಾಯವನ್ನೂ ತಂದು ಕೊಡುತ್ತದೆ.

ಅರಣ್ಯ ಇಲಾಖೆ ಈಗ 100 ವರ್ಷಗಳಷ್ಟು ಹಳೆಯದಾದ ಬೃಹತ್‌ ಟಿಂಬರ್‌ ಮರಗಳನ್ನು ತೆರವು ಮಾಡಲು ಶುರು ಮಾಡಿದೆ. ಅದಕ್ಕಾಗಿ ಅತ್ಯಂತ ವೈಜ್ಞಾನಿಕ, ವಿಸ್ತೃತ ಕಾರ್ಯಯೋಜನೆಯನ್ನು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಕಾಡಿನ ಆರೋಗ್ಯವನ್ನು ಸುಧಾರಿಸುವ ಕೆಲಸದ ಜೊತೆಗೆ ಆದಾಯವನ್ನೂ ಹೆಚ್ಚಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಜಾಗತಿಕ ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ಹತೋಟಿಯಲ್ಲಿಡುವ ಮಹತ್ಕಾರ್ಯವನ್ನೂ ಮಾಡುತ್ತಿದೆ ಎಂದರೆ ಆಶ್ಚರ್ಯವಾಗುತ್ತದೆ. ಅಲ್ಲವೇ..?

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಭಾಗದ ಅರಣ್ಯಭೂಮಿಯಲ್ಲಿ ಬ್ರಿಟೀಷರು ಶತಮಾನಗಳ ಹಿಂದೆ ಸುಮಾರು 7000 ಹೆಕ್ಟೇರ್‌ ಪ್ರದೇಶದಲ್ಲಿ ನೆಟ್ಟಿದ್ದ ತೇಗದ ಮರಗಳ ಬೃಹತ್‌ ನೆಡುತೋಪುಗಳಿವೆ. ಇಲ್ಲಿನ 180 ಹೆಕ್ಟೇರ್‌ನಲ್ಲಿ ಬೆಳೆದಿದ್ದ 969 ತೇಗದ ಮರಗಳನ್ನು ಕಟಾವು ಮಾಡಿ ದಾಂಡೇಲಿ ಡಿಪೋದಲ್ಲಿ 2026ರ ಜುಲೈನಲ್ಲಿ 3900 ಟಿಂಬರ್‌ ಲಾಟ್‌ಗಳನ್ನು ಹರಾಜು ಹಾಕಲಾಯಿತು. ಈ ಮರಗಳ ಮಾರಾಟದಿಂದ ಬಂದ ಹಣ ಸರಿ ಸುಮಾರು 37 ಕೋಟಿ ರೂಪಾಯಿ. ಅಷ್ಟೇ ಅಲ್ಲ ಬಿಲ್ಲೆಟ್‌ ಹಾಗೂ ಉರುವಲು ಸೌದೆಯ ಮಾರಾಟದಿಂದ ಸೇರಿ ಒಟ್ಟು 55 ಕೋಟಿ ರೂಪಾಯಿಗಳ ಆದಾಯ ಸಿಕ್ಕಿದೆ.

ಅರಣ್ಯ ಇಲಾಖೆ ಮರಗಳನ್ನು ಉಳಿಸುವುದನ್ನು ಬಿಟ್ಟು, ಕಡಿದು ಮಾರಾಟ ಮಾಡುತ್ತಿದೆ ಎಂದು ನಿಮಗನ್ನಿಸಿದರೆ, ಅದು ತಪ್ಪು. ಅರಣ್ಯ ಸಂರಕ್ಷಣೆಯಲ್ಲಿ ಅತ್ಯಂತ ವೈಜ್ಞಾನಿಕವಾದ ನಿರ್ವಹಣಾ ಯೋಜನೆ ಇದೆ. ಅದೇನೆಂದರೆ, ಕಾಡಿನಲ್ಲಿ ಅತ್ಯಂತ ಹಳೆಯ ಮರಗಳು ಇದ್ದರೆ, ಅವುಗಳ ಪ್ರಕೃತಿದತ್ತವಾದ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಹಳೆಯ ಮರಗಳಿಗೆ ಬೇರಿನಿಂದ ಗೆದ್ದಲು ಹುಳ ಒಳಗೊಳಗೆ ಕೊರೆದು, ದುರ್ಬಲ ಮಾಡುತ್ತವೆ. ಇತರೆ ರೋಗ ರುಜಿನ ಬಂದು ಶಿಥಿಲಗೊಂಡು ಆ ಮರಗಳು ಬಿದ್ದು ಹೋಗುತ್ತವೆ ಅಥವಾ ಒಂದೊಮ್ಮೆ ಕಾಡಿಗೆ ಬೆಂಕಿ ಬಿದ್ದರೆ ಹೆಚ್ಚಿನ ಅನಾಹುತ ಸೃಷ್ಟಿಸುವ ಸಾಧ್ಯತೆಗಳಿವೆ. ಪ್ರಾಕೃತಿಕವಾಗಿ ಮರವನ್ನು ಪುನಃ ಕಾಡಿನೊಳಗೆ ಗೊಬ್ಬರವಾಗುವಂತೆ ಬಿಟ್ಟು ಬಿಡುವುದು ಉತ್ತಮವಾದರೂ, ಆ ನೆಡುತೋಪು ಮತ್ತು ಮರದ ಲಾಭವನ್ನು ಪಡೆದುಕೊಳ್ಳುವುದು ಸಹ ಜಾಣತನ ಎನ್ನುತ್ತದೆ ಇಲಾಖೆ.

ದುರ್ಬಲ ಮರಗಳನ್ನು ಕಳ್ಳಕಾಕರು ಅವುಗಳನ್ನು ಹೊತ್ತೊಯ್ಯುವ ಸಾಧ್ಯತೆಗಳಿರುತ್ತವೆ. ಅಷ್ಟೇ ಅಲ್ಲ, ವಯಸ್ಸಾದ ಮತ್ತು ದುರ್ಬಲ ಮರಗಳು ಇಂಗಾಲವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುವ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಇನ್ನೊಂದು ವಿಚಾರ ಏನೆಂದರೆ, ಒಂದು ನೂರು ವರ್ಷ ಹಳೆದ ಮರದ ಒಂದು ಘನ ಮೀಟರ್‌ ದಿಮ್ಮಿಯಲ್ಲಿ 1 ಟನ್‌ ಇಂಗಾಲದ ಡೈ ಆಕ್ಸೈಡ್‌ ಸಂಗ್ರಹವಾಗಿರುತ್ತದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಮರದ ದಿಮ್ಮಿಯಲ್ಲಿ ಶೇ50 ರಷ್ಟು ಇಂಗಾಲವೇ ತುಂಬಿರುತ್ತದೆ.

ಈ ಮರದ ದಿಮ್ಮಿಯನ್ನು ಕಟಾವು ಮಾಡಿ ಅದನ್ನು ಪೀಠೋಪಕರಣಕ್ಕೆ ಬಳಸಿದಲ್ಲಿ, ಅದರೊಳಗೆ ಇರುವ ಇಂಗಾಲವು ವಾತಾವರಣಕ್ಕೆ ಬಿಡುಗಡೆಯಾಗದೇ ಅದರೊಳಗೇ ಅದನ್ನು ಬಂಧಿಸಿದಂತಾಗುತ್ತದೆ. ಆ ಪೀಠೋಪಕರಣ ಇನ್ನೂ 100 ವರ್ಷ ಬಾಳಿಕೆ ಬರುತ್ತದೆ. ಅಲ್ಲಿಯವರೆಗೂ ಇಂಗಾಲ ಅದರೊಳಗೇ ಇರುತ್ತದೆ. ಒಂದೊಮ್ಮೆ ಅದನ್ನು ಸುಟ್ಟರೆ ಅಥವಾ ಆಮ್ಲಜನಕರ ಸಂಪರ್ಕಕ್ಕೆ ಬರದೇ ಕೊಳೆತರೆ ತನ್ನೊಳಗಿನ ಇಂಗಾಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

ಅದೇ ಜಾಗದಲ್ಲಿ ಬೇರೆ ಸಸಿ

ಹೀಗೆ, 100 ವರ್ಷ ಹಳೆಯ ಮರವನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಬೇರೆ ಸಸಿಯನ್ನು ನೆಟ್ಟರೆ ಅಥವಾ ಆ ಜಾಗದಲ್ಲಿ ಸ್ಥಳೀಯ ಸಸ್ಯಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟರೆ, ಆ ಹೊಸ ಸಸ್ಯ ಇಂಗಾಲವನ್ನು ಅತಿ ಹೆಚ್ಚು ಹೀರಿ ಆಮ್ಲಜನಕವನ್ನು ನೀಡುವ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿ ಮಾಡುತ್ತದೆ. ಅಷ್ಟೇ ಅಲ್ಲ, ಅರಣ್ಯದೊಳಗೆ ಹೊಸ ಸಸ್ಯಗಳ ಪುನರುತ್ಪಾದನೆಗೆ, ಹೊಸ ನೈಸರ್ಗಿಕ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ರಾಜ್ಯದಲ್ಲಿ ಸದ್ಯಕ್ಕೆ ಹಳಿಯಾಳ, ಯಲ್ಲಾಪುರ, ಹೊನ್ನಾವರ, ಶಿರಸಿ, ಸಾಗರ, ಶಿವಮೊಗ್ಗ, ಭದ್ರಾವತಿ, ಕೊಪ್ಪ, ಚಿಕ್ಕಮಗಳೂರು, ಮಡಿಕೇರಿ, ವೀರಾಜಪೇಟೆ ಮತ್ತು ಬೆಳಗಾವಿಯ ಕೆಲ ಆಯ್ದ ಪ್ರದೇಶಗಳಲ್ಲಿ ತೇಗ, ಹೊನ್ನೆ, ಬೀಟೆ, ನಂದಿ, ಮತ್ತಿ ಹಾಗೂ ನೀಲಗಿರಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಜಾತಿಯ 100 ವರ್ಷ ವಯಸ್ಸಿನ ಮರಗಳ ಕಟಾವಿಗೆ ಕಾರ್ಯ ಯೋಜನೆ ರೂಪಿಸಿ ಅನುಮೋದನೆ ಪಡೆಯಲಾಗುತ್ತಿದೆ. ಈ ಮರಗಳನ್ನು ತೆಗೆಯಲು ಸಹ ಒಂದು ಮಾರ್ಗಸೂಚಿ ಇದೆ.

ಮರಕ್ಕೆ 100 ವರ್ಷ ವಯಸ್ಸಾಗಿರಬೇಕು

ಮರಕ್ಕೆ 100 ವರ್ಷ ವಯಸ್ಸಾಗಿರಬೇಕು. ಅದರ ಸುತ್ತಳತೆ 165 ಸೆಂಟಿ ಮೀಟರ್‌ ದಪ್ಪ ಇರಬೇಕು ಮತ್ತು ಆ ಭಾಗದಲ್ಲಿರುವ ಒಟ್ಟು ಮರಗಳ ಪೈಕಿ ಗರಿಷ್ಠ ಶೇ10ರಷ್ಟು ಮರಗಳನ್ನು ಮಾತ್ರ ಕಟಾವಿಗೆ ಅವಕಾಶವಿದೆ.

2016ರಲ್ಲಿ ತೇಗ ಸೇರಿದಂತೆ ಕೆಲ ಟಿಂಬರ್‌ ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದಾದ ಮೇಲೆ ಆ ಯೋಜನೆಯನ್ನು ಕೈಬಿಡಲಾಗಿತ್ತು. ನಂತರ ಅರಣ್ಯ ಇಲಾಖೆ ಸುಸ್ಥಿರ ಅರಣ್ಯ ನಿರ್ವಹಣೆ ಮಾಡುವ ಉದ್ದೇಶದಿಂದ ಸಲಹೆಗಳನ್ನು ನೀಡುವಂತೆ ಕೋರಿ ನಿವೃತ್ತ ಪಿಸಿಸಿಎಫ್‌ ದೀಪಕ್‌ ಶರ್ಮಾ ನೇತೃತ್ವದಲ್ಲಿ ಸಮಿತಿಯೊಂದನ್ನು 2025ರಲ್ಲಿ ರಚನೆ ಮಾಡಿತ್ತು. ಆ ಸಮಿತಿ ನೀಡಿದ ವರದಿಯ ಜೊತೆ ಸಮಗ್ರ ಮತ್ತು ವೈಜ್ಞಾನಿಕ ಕಾರ್ಯ ಯೋಜನೆಯನ್ನು ರೂಪಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿ, ಅನುಮೋದನೆ ಪಡೆದ ನಂತರವೇ ಈ ಕಟಾವು ಕೆಲಸಕ್ಕೆ ಕೈ

ಹಾಕಲಾಗಿದೆ. ಇಲ್ಲಿ ಸತ್ತಿರುವ ಮತ್ತು ಬಿದ್ದಿರುವ ಮರಗಳನ್ನೂ ಸಹ ತೆಗೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ವನ್ಯಜೀವಿ ವಿಭಾಗಗಳಿಗೂ ವಿಸ್ತರಿಸುವ ಯೋಜನೆಯನ್ನು ಅಧಿಕಾರಿಗಳು ಹೊಂದಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಸಮೀಕ್ಷೆ ಮಾಡಲಾದ ಪ್ರಾದೇಶಿಕ ವಲಯದಲ್ಲಿರುವ ತೇಗ ಮತ್ತಿತರ ಮರಗಳ ವೈಜ್ಞಾನಿಕ ಕಟಾವಿನಿಂದಲೇ ಅರಣ್ಯ ಇಲಾಖೆಗೆ ಸುಮಾರು 500 ರಿಂದ 600 ಕೋಟಿ ರೂಪಾಯಿ ಆದಾಯ ಸಿಗಲಿದೆ. ಈ ಹಣವನ್ನು ಅರಣ್ಯ ಅಭಿವೃದ್ಧಿ ಸೇರಿದಂತೆ ಇಲಾಖೆಯ ಅಗತ್ಯ ನಿರ್ವಹಣಾ ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ. ಅರಣ್ಯ ಇಲಾಖೆ ಇದನ್ನು ಹಸಿರು ಆರ್ಥಿಕತೆ ಎಂದು ಕರೆಯುತ್ತಿದೆ.

PREV
Read more Articles on

Recommended Stories

ಬಂದಿದೆ ಜಂಪಿಂಗ್‌ ಟೆಸ್ಲಾ ಕಾರು!
ಒಂಬತ್ತರ ಬೆಂಬತ್ತಿನ ವೈಎನ್ಕೆ - ಇಂದು ವೈಎನ್ಕೆ ಪುಣ್ಯಸ್ಮರಣೆ