)
ಕನ್ನಡಪ್ರಭ ವಾರ್ತೆ ಬೆಂಗಳೂರು
ತರಕಾರಿ ವ್ಯಾಪಾರ ಕಡಿಮೆ ಆಗಿರುವುದರಿಂದ ಬೆಲೆಯೂ ಕಡಿಮೆಯಾಗಿದೆ. ಇದರಿಂದ ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತರಕಾರಿ ಮಾರಾಟದಲ್ಲಿ ಮತ್ತಷ್ಟು ಕುಸಿತವಾಗುವ ಆತಂಕ ಎದುರಾಗಿದೆ.
‘ಕಳೆದ ಎರಡ್ಮೂರು ದಿನಗಳಿಂದ ತರಕಾರಿ ವ್ಯಾಪಾರದಲ್ಲಿ ಕುಸಿತವಾಗಿದೆ. ಶನಿವಾರ ಅರ್ಧದಷ್ಟು ವ್ಯಾಪಾರ ಕಡಿಮೆಯಾಗಿದೆ. ಎಲ್‌ಪಿಜಿ ಕೊರತೆಯಿಂದ ಹೊಟೇಲ್‌ಗಳು ಮುಚ್ಚಿವೆ. ಕೆಲವು ಹೊಟೇಲ್‌ಗಳು ಕಡಿಮೆ ಆಹಾರ ತಯಾರಿಸುತ್ತಿವೆ. ಹೀಗಾಗಿ, ಕಡಿಮೆ ತರಕಾರಿ ಖರೀದಿ ಮಾಡುತ್ತಿದ್ದಾರೆ. ಸಗಟು ರೂಪದಲ್ಲಿ ಹೋಟೆಲ್‌ನವರು ಪ್ರಮುಖವಾಗಿ ತರಕಾರಿ ಖರೀದಿಸುತ್ತಾರೆ. ಅವರೇ ನಮಗೆ ಪ್ರಮುಖ ಗ್ರಾಹಕರು ಎಂದು ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯ ಸಗಟು ವ್ಯಾಪಾರಿ ರಾಜು ಹೇಳಿದರು.ಖರೀದಿ ಕಡಿಮೆಯಾಗಿರುವುದರಿಂದ ಬೆಲೆ ಕುಸಿತವಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಕ್ಯಾರೇಟ್ 20 ರು. ಕೆ.ಜಿ, ಮೂಲಂಗಿ 10 ರು. ಕೆ.ಜಿ. ಬದನೆಕಾಯಿ 20 ರು.ಯಿಂದ 30 ರು. ಕೆ.ಜಿಯಾಗಿದೆ. ಉಳಿದ ಬಹುತೇಕ ತರಕಾರಿಗಳ ಬೆಲೆ 40 ರು. ಆಸುಪಾಸು ಇದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಿಯೇ ಇರುತ್ತದೆ. ಆದರೆ, ಎಲ್‌ಪಿಜಿ ಸಮಸ್ಯೆಯಿಂದ ಬೆಲೆ ಕುಸಿತವಾಗಿದೆ. ಆದಷ್ಟು ಬೇಗ ಯುದ್ಧ ಮುಗಿಯಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ರಾಜು ಹೇಳಿದರು.
ಕಳೆದ ಒಂದು ವಾರದಿಂದ ವ್ಯಾಪಾರ ಕಡಿಮೆಯಾಗಿದೆ. ಹೊಟೇಲ್‌ಗಳು ಮುಚ್ಚಿರುವುದರಿಂದ ನಮಗೆ ವ್ಯಾಪಾರ ಬಹಳಷ್ಟು ಕಡಿಮೆಯಾಗಿದೆ. ಮಾರಾಟಕ್ಕೆ ತಂದ ತರಕಾರಿ ಹಾಗೆಯೇ ಉಳಿದುಕೊಳ್ಳುತ್ತಿವೆ. ನಾವು ಕೂಡ ಇನ್ಮುಂದೆ ಕಡಿಮೆ ತರಬೇಕು ಎಂದು ನುಗ್ಗೇಕಾಯಿ ಸೇರಿದಂತೆ ಇನ್ನಿತರ ತರಕಾರಿ ಮಾರುವ ರತ್ನಮ್ಮ ಅಳಲು ತೋಡಿಕೊಂಡರು.
ರೈತರ ಮೇಲೂ ಪರಿಣಾಮಮಾರುಕಟ್ಟೆಯಲ್ಲಿ ತರಕಾರಿ ಖರೀದಿ, ಮಾರಾಟವಾಗದಿದ್ದರೆ ಅದರ ಪರಿಣಾಮ ತರಕಾರಿ ಬೆಳೆಯುವ ರೈತರ ಮೇಲೂ ಬೀಳುತ್ತದೆ. ತರಕಾರಿ ಖರೀದಿಯಾಗದಿದ್ದರೆ, ರೈತರು ಬೆಳೆದ ತರಕಾರಿಗಳು ಮಾರುಕಟ್ಟೆಗೆ ಬರಲು ಸಮಸ್ಯೆ ಆಗುತ್ತದೆ. ಗ್ಯಾಸ್ ಪೂರೈಕೆ ಕೊರತೆ ಪರಿಣಾಮ ಆರಂಭದಲ್ಲಿ ಹೊಟೇಲ್ ಉದ್ಯಮದ ಮೇಲೆ ಬಿದ್ದಿದ್ದರೂ ಮುಂದಿನ ದಿನಗಳಲ್ಲಿ ಅನ್ನದಾತರನ್ನು ಕಾಡುವ ಆತಂಕ ಶುರುವಾಗಿದೆ.