ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...

Follow Us

ಸಾರಾಂಶ

 ಜೀವಪೋಷಕ ಧರ್ಮದಿಂದ ಮಾತ್ರ ಮನುಕುಲದ ಒಳಿತು ಈ ನಡುವೆ ಮನುಷ್ಯನನ್ನು ಮತ್ತೆ ಮನುಷ್ಯನನ್ನಾಗಿ ರೂಪಿಸಿಕೊಳ್ಳಲು ಇರುವ ಮಾರ್ಗಶೋಧದಲ್ಲಿ ‘ಧರ್ಮವೇ’ ದೀಪವಾಗಿ ತೋರಿತು.

 ಜೀವಪೋಷಕ ಧರ್ಮದಿಂದ ಮಾತ್ರ ಮನುಕುಲದ ಒಳಿತು ಈ ನಡುವೆ ಮನುಷ್ಯನನ್ನು ಮತ್ತೆ ಮನುಷ್ಯನನ್ನಾಗಿ ರೂಪಿಸಿಕೊಳ್ಳಲು ಇರುವ ಮಾರ್ಗಶೋಧದಲ್ಲಿ ‘ಧರ್ಮವೇ’ ದೀಪವಾಗಿ ತೋರಿತು. ಈ ಹಣತೆಗೆ ಹನಿ ಎಣ್ಣೆ ಸುರಿದು ಅದೇ ಬೆಳಕಿನಲ್ಲಿ ಬದುಕುವ ಪ್ರಯತ್ನವನ್ನು ನಿರಂತರವಾಗಿ ಜಾರಿಯಲ್ಲಿಟ್ಟ ಮನುಷ್ಯನಿಗೆ, ಅದೇ ಮತಧರ್ಮಗಳು ಸಂಕೋಲೆಗಳಾಗಿ‌ ಪರಿಣಮಿಸಿದ್ದು ಮಾತ್ರ ವಿಪರ್ಯಾಸವೇ ಸರಿ!

 -ಡಾ। ಸಂಗಮೇಶ ಎಸ್.ಗಣಿ, ಕನ್ನಡ ಪ್ರಾಧ್ಯಾಪಕ,

ಎಚ್.ಕೆ.ಬಿ.ಕೆ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು.

ಎಲ್ಲೆಡೆಯೂ ಯುದ್ಧಕಾರ್ಮೋಡ ಕವಿದಿದೆ. ಶಾಂತಿ- ಸಮಾಧಾನದ ಬೆಳಕಿಗಾಗಿ ತಡಕಾಡುವಂತಾಗಿದೆ. ನೆರೆಯ ರಾಷ್ಟ್ರ ಪಾಕಿಸ್ತಾನದೊಂದಿಗೆ ಈಗ ಯುದ್ಧವಿರಾಮ ಘೋಷಣೆಯಾಗಿದೆ. ಯುದ್ಧದ ವಿಧ್ವಂಸಕತೆ ಎಂದಿಗೂ ಜೀವನಾಶಕ. ಯುದ್ಧ ನಡೆಯುವುದು ಯಾವತ್ತೂ ಪ್ರಭುತ್ವಗಳ ನಡುವೆ. ಆದರೆ ಬಲಿಯಾಗುವುದು ಮಾತ್ರ ಅಮಾಯಕರು. ಜೀವಬಲಿ ಪಡೆಯುವ ಯುದ್ಧಗಳು ಎಂದಿಗೂ ಮಾನವಕುಲಕ್ಕೆ ಅಪಾಯಕರವೇ. ಇಂಥ ಅಪಾಯ ಮತ್ತು ಅವಘಡಗಳು ಸಂಭವಿಸಬಾರದೆಂದರೆ ಮನುಷ್ಯ ಆಳದಲ್ಲಿ ಪರಿಶುದ್ಧನಾಗಬೇಕು. ಶುದ್ಧವಾಗುವುದು ಎಂದರೆ ಬುದ್ಧನಾಗುವುದೆಂದರ್ಥ. ಗಾಢಾಂಧಕಾರಕ್ಕೆ ಬುದ್ಧ ಬೆಳಕು, ಬದುಕು.

ಸ್ವಾರ್ಥ, ಮೋಸ, ವಂಚನೆ, ಅನ್ಯಾಯ, ಅನಾಚಾರಗಳ ಕೂಪವಾಗಿರುವ ಮನುಷ್ಯ ತನ್ನೊಳಗಿನ ‘ಇರ’ವನ್ನು ಮರೆಗೆ ಸರಿಸಿ, ತನ್ನ ವಿರುದ್ಧವೇ ತಾನು ನಡೆದುಕೊಳ್ಳಲು ಹವಣಿಸಿದ. ತನ್ನನ್ನು ತಾನು ವಂಚಿಸಿಕೊಳ್ಳುತ್ತಲೇ ಪ್ರಕೃತಿ ಮೇಲೆ‌ ನಿತ್ಯವೂ ತನ್ನ ಹತಾರಗಳನ್ನು ಬಳಸುತ್ತಲೇ ನಡೆದ. ಪರಿಣಾಮ ಶೋಷಣೆ, ಕೊಲೆ ಸುಲಿಗೆ, ಹಿಂಸೆ, ರಕ್ತಪಾತ, ಕ್ರೌರ್ಯ, ಇತ್ಯಾದಿ ಜೀವವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡ. ಮಾನವೀಯತೆ ಅಂತಾರಲ್ಲಾ ‘ಅದು’ ಇದೆ ಎಂಬುದರ ಬಗ್ಗೆಯೇ ಸಂಶಯಿಸುವ ಸಂದಿಗ್ಧತೆ ಸೃಷ್ಟಿಯಾಯಿತು. ಮನುಷ್ಯನಿಗೆ ಧರ್ಮದ ಸಂಕೋಲೆ

ಈ ನಡುವೆ ಮನುಷ್ಯನನ್ನು ಮತ್ತೆ ಮನುಷ್ಯನನ್ನಾಗಿ ರೂಪಿಸಿಕೊಳ್ಳಲು ಇರುವ ಮಾರ್ಗಶೋಧದಲ್ಲಿ ‘ಧರ್ಮವೇ’ ದೀಪವಾಗಿ ತೋರಿತು. ಈ ಹಣತೆಗೆ ಹನಿ ಎಣ್ಣೆ ಸುರಿದು ಅದೇ ಬೆಳಕಿನಲ್ಲಿ ಬದುಕುವ ಪ್ರಯತ್ನವನ್ನು ನಿರಂತರವಾಗಿ ಜಾರಿಯಲ್ಲಿಟ್ಟ ಮನುಷ್ಯನಿಗೆ, ಅದೇ ಮತಧರ್ಮಗಳು ಸಂಕೋಲೆಗಳಾಗಿ‌ ಪರಿಣಮಿಸಿದ್ದು ಮಾತ್ರ ವಿಪರ್ಯಾಸವೇ ಸರಿ! ಮತಧರ್ಮಗಳು ಸಾಂಸ್ಥಿಕ ಸ್ವರೂಪದಿಂದ ಬಿಡಿಸಿಕೊಳ್ಳದಿದ್ದರೆ ಅವು ಜಡವಾಗುತ್ತವೆ, ಜೀವವಿರೋಧಿಯಾಗುತ್ತವೆ. ಪ್ರಭುತ್ವಕ್ಕೆ ಅಂಟಿಕೊಂಡ ಧರ್ಮಗಳು ಹಿಂಸೃಕ ರೂಪತಾಳುತ್ತವೆ. ಹಿಂಸೆಗೆ ನೆಲೆಯಾಗುವ ಯಾವ ಧರ್ಮಗಳಿಗೂ ಉಳಿಗಾಲವಿಲ್ಲ ಎಂಬುದೂ ಚರಿತ್ರೆಯಿಂದಲೇ ಸ್ಪಷ್ಟವಾಗುತ್ತದೆ.

ಈಗ ಪ್ರಭುತ್ವವನ್ನು ಪೋಷಿಸುತ್ತಿರುವ ಧರ್ಮ, ಧರ್ಮದ ರಕ್ಷಣೆಗೆ ನಿಂತಿರುವ ಪ್ರಭುತ್ವದಿಂದಾಗಿ ‘ಧರ್ಮ ರಾಜಕಾರಣ’ ತಲೆಯೆತ್ತಿದೆ. ಕೊಲ್ಲುವವನಿಗ್ಯಾವ ಧರ್ಮ? ಉಗ್ರವಾದಕ್ಕೂ ಧರ್ಮ ಇದೆಯೇ? ಜೀವನಾಶಕವಾದುದನ್ನು ಧರ್ಮ ಎನ್ನಲಾದೀತೆ? ಧರ್ಮವನ್ನು ಪೋಷಿಸುವ ಪ್ರಭುತ್ವದ ವೈಭವೀಕರಿಸುವ ಚಿತ್ರಣ ಚರಿತ್ರೆಯಲ್ಲಿ ಢಾಳವಾಗಿ ದಾಖಲಾಗಿರುವುದು ವೇದ್ಯ ಸಂಗತಿ. ಯಾವ ಧರ್ಮವು ಜೀವಪೋಷಕವಾಗಿರುವುದಿಲ್ಲವೋ ಅದು ಆಳದಲ್ಲಿ ಜೀವವಿರೋಧಿಯಾಗಿರುತ್ತದೆ. ಮತವು ‘ಮಿತಿ’ಯಾಗದೇ ಅದು ಜೀವ ಮತ್ತು ಜೀವನದ ಉತ್ತೇಜಕಾಂಶವಾಗಿ ಮಾರ್ಪಾಡಾಗಬೇಕು. ಆಗ ಅದು ನಿಜವಾದ ಧರ್ಮವಾಗುತ್ತದೆ. ಅಂಥ ಧರ್ಮವೇ ಜೀವಂತವಾಗಿರಲು ಸಾಧ್ಯ, ಅಲ್ಲದೇ ‘ಜೀವ ರಕ್ಷಕ’ವೂ ಆಗಿರುತ್ತದೆ.

ಮನುಷ್ಯ ಧರ್ಮವೇ ಮೂಲೆಗೆ ಸರಿದು ಮನುಷ್ಯ ಸೃಷ್ಟಿತ ಧರ್ಮವು ತನ್ನದೆಯಾದ ವಿಧಿ, ನಿಯಮ, ಆಚರಣೆಗಳಿಗೆ ಸೀಮಿತಗೊಂಡು ಸಂಕುಚಿತಗೊಳ್ಳುತ್ತಿರುವುದು ಅಪಾಯಕರವೇ ಆಗಿದೆ. ಮನುಷ್ಯನಲ್ಲಿ ಕರುಣೆ, ಅನುಕಂಪ, ಜೀವದಯೆ, ಪ್ರೇಮ, ತ್ಯಾಗ, ನೈತಿಕತೆ ಇತ್ಯಾದಿ ಧರ್ಮದ ಮೂಲ ಅಂಶಗಳು ಅಳವಡಬೇಕಿರುವುದು ಇಂದಿನ ಅಗತ್ಯ. ಕ್ರೌರ್ಯ, ಕ್ರೂರತೆ, ನಿರ್ದಯಿತನ, ಸ್ವಾರ್ಥ, ಮೋಸ, ವಂಚನೆ, ಕೊಲೆ-ಸುಲಿಗೆ, ಕೋಮು ಸಂಘರ್ಷಗಳು, ಅನೈತಿಕತೆ, ದೌರ್ಜನ್ಯ, ದಬ್ಬಾಳಿಕೆ, ಕ್ಷುಲ್ಲಕ ರಾಜಕಾರಣ, ಕೋಮುಸಂಘರ್ಷ ಇತ್ಯಾದಿ ಕಾರಣಗಳಿಂದಾಗಿ ಮನುಷ್ಯ ಬದುಕು ತೀರ ಅಧಃಪತನ ಕಾಣುತ್ತಿದೆ. ಈ ಕರಾಳ ಕತ್ತಲೆಗೆ ಬುದ್ಧ ಬೆಳಕಾಗಿ ತೋರುತ್ತಾನೆ. ಅನುಯಾಯಿಗಳು ಇಲ್ಲದ ಧರ್ಮವನ್ನು ಸ್ಥಾಪಿಸಿ, ಧರ್ಮಪಾಲಕರೇ ನಿಜ ಅನುಯಾಯಿಗಳು ಎಂದು ಸಾರಿದ ಘನಮಹಿಮ ಪುರುಷ ಗೌತಮ ಬುದ್ಧ.

ಬೌದ್ಧಧರ್ಮದ ಮೂಲ ಸತ್ವ

ದಾನ(ಕೊಡುವುದರಲ್ಲಿನ ಗುಣ), ಶೀಲ(ನೈತಿಕತೆ), ನಿಕ್ಕಮ್ಮ(ತ್ಯಾಗ), ಪನ್ನಾ(ವಿವೇಕ), ವಿರಿಯಾ(ತಾಳ್ಮೆ), ಕ್ರಾಂತಿ(), ಸಕ್ಕಾ(ಸತ್ಯ ಸಂಧತೆ), ಅಧಿತಾನಾ(ನಿರ್ಧಾರ), ಮೆಟ್ಟಾ(ಎಲ್ಲ ಒಳಗೊಂಡ ಪ್ರೀತಿ), ಉಪೇಕ್ಕಾ(ಸಮಭಾವ) ಈ ಗುಣಗಳನ್ನು ಒಳಗೊಂಡಿದೆ. ದೇಹಸಂಬಂಧೀ ಗುಣಗಳ ಅನುಸರಣೆಯಿಂದ ಕ್ಲೇಶಬಾಧೆಗೊಳಗಾಗುವ ಮನುಷ್ಯನನ್ನು ಅಜ್ಞಾನದಿಂದ ಪಾರುಮಾಡಿ ಸಾಮಾನ್ಯ ಪ್ರಜ್ಞೆ ಮತ್ತು ಅನುಕಂಪಗಳಿಂದ ಸಕಾರಾತ್ಮಕ ನೆಲೆಗೆ ಕೊಂಡೊಯ್ಯುವ ದಿವ್ಯ ಜ್ಞಾನಿಯನ್ನಾಗಿಸುವ ಅದಮ್ಯ ಹಂಬಲ ಬುದ್ಧನಿಗಿತ್ತು. ಮನುಷ್ಯ ಬದುಕಿನ ಘನತೆಗೆ ಅಷ್ಟಾಂಗ ಮಾರ್ಗಗಳನ್ನು ತಿಳಿಹೇಳಿದ ಗೌತಮನು, ಆಶಯ ದುಃಖದಿಂದ ಮನುಷ್ಯನನ್ನು ದೂರಮಾಡಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದನು.

ಅಸಹಿಷ್ಣುತೆ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಬುದ್ಧಗುರುವಿನ ‘ಕರುಣೆ’ ಮತ್ತು ‘ಮೈತ್ರಿ’ ಎನ್ನುವ ಅಮೂಲ್ಯ ತತ್ವಗಳು ಹೆಚ್ಚು ಪ್ರಸ್ತುತವಾಗುತ್ತವೆ. ಪರಸ್ಪರ ಪ್ರೀತಿ, ದಯೆ, ಕರುಣೆ, ಸ್ನೇಹಪರತೆ ಮುಂತಾದ ಅನುಸರಿಸಬಹುದಾದ ಸರಳ ಗುಣಗಳನ್ನು ಬೋಧಿಸುವುದಲ್ಲದೆ, ದಯೆ ಇಲ್ಲದ ಧರ್ಮ ಮತ್ತು ಸ್ನೇಹಶೀಲತೆ ಇಲ್ಲದ ಮನುಷ್ಯನಿಂದ ಏನೂ ಪ್ರಯೋಜನವಾಗಲಾರದು ಎಂಬುದನ್ನು ಬುದ್ಧಗುರು ಪ್ರತಿಪಾದಿಸಿದನು. ಬಡತನ, ಸಾವು, ಮುಪ್ಪು, ಅನಾರೋಗ್ಯ ಇತ್ಯಾದಿ ಕೆಡುಕುಗಳಿಗೆ ಗುರಿಯಾಗುವ ಮನುಷ್ಯನಿಗೆ ಅಜ್ಞಾನವೇ ಕಾರಣ ಎಂಬುದನ್ನು ತಿಳಿಹೇಳುತ್ತಾನೆ ಬುದ್ಧ. ಅಧರ್ಮದ ಕೂಪಕ್ಕೆ ಬಲಿಯಾಗುವ ಮನುಷ್ಯನನ್ನು ಜೀವಪರವಾಗಿ ಮಿಡಿಯುವಂತೆ ಮಾಡುವುದೇ ನಿಜವಾದ ಧರ್ಮ ಎಂಬುದನ್ನು ಗೌತಮನು ಉದ್ದಕ್ಕೂ ಸಾರಿದ್ದಾನೆ.

ಈ ಮನುಷ್ಯ ತನ್ನ ತಾನರಿಯುವುದು ಮುಖ್ಯ. ಜೊತೆಗೆ ಸಮಾಜವನ್ನೂ ನೋಡುವ ದೃಷ್ಟಿಕೋನವೂ ಅತ್ಯವಶ್ಯ. ಇದನ್ನು ಬುದ್ಧನು ‘ವಿಪಾಸನಾ’ ಎಂಬುದಾಗಿ ತಿಳಿಸುತ್ತಾನೆ. ‘ವಿಪಾಸನಾ’ ಎಂದರೆ ಸೂಕ್ಷ್ಮವಾಗಿ ನೋಡುವುದು, ವಿಶ್ಲೇಷಿಸುವುದು, ಒಳನೋಟ ಬೀರುವುದು, ಸಂಶೋಧಿಸುವುದು ಎಂಬ ಅರ್ಥವನ್ನು ಹೊಂದಿದೆ. ಇದನ್ನು ‘ಅಂತರ್ ದೃಷ್ಟಿ’ ಎಂದೂ ಕರೆಯಲಾಗುತ್ತದೆ. ವ್ಯಷ್ಟಿ ಮತ್ತು ಸಮಷ್ಟಿ ಹಿತಕ್ಕೆ ಈ ಮಾತು ಹೆಚ್ಚು ಅನುಷ್ಠಾನ ಯೋಗ್ಯವಾಗಿದೆ. ಈ ಜೀವನವನ್ನು ಇರುವಂತೆ ಸ್ವೀಕರಿಸಿ, ಸಹಜತೆಯನ್ನು ಉಳಿಸಿಕೊಂಡೂ ಘನವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂಬುದನ್ನು ಬುದ್ಧ ಸ್ವತಃ ಕಂಡುಕೊಂಡವನಾಗಿದ್ದನು. ಬುದ್ಧನ ಸಾವಿನ ಬಗೆಗಿನ ವಿವೇಚನೆಯೂ ಇಲ್ಲಿ ಉಲ್ಲೇಖಾರ್ಹ; ನಾವು ಜೀವಿಸುತ್ತಿರುವಾಗಲೇ ಸಾವಿನ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಸಾವು ನಿಶ್ಚಿತ. ಈ ಸಾವು ಬೇರೊಂದು ಜೀವನದ ಅಧ್ಯಾಯದ ಆರಂಭವೇ ಆಗಿದೆ ಎನ್ನುತ್ತಾನವನು.

ಘನತೆಯ ಆಲೋಚನೆ ಅಗತ್ಯ

ಟಿಬೇಟಿನ ಕವಿ ಮಿಲರೇವಾ ಹೇಳುವಂತೆ, ‘ನನ್ನ ಜೀವನ ಎಂದರೆ ಬದುಕುವುದು ಮತ್ತು ಸಾಯುವುದು; ಅದಕ್ಕೆ ಯಾವುದೇ ವಿಷಾದ ಇರೋದಿಲ್ಲ, ಇರಬಾರದು’ ಎಂಬ ಮಾತ ಗಮನೀಯ. ದೇಶದೇಶಗಳ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಮನುಷ್ಯರು ಬಲಿಯಾಗುತ್ತಿರುವ ಈ ಹೊತ್ತಿನಲ್ಲಿ ಬುದ್ಧನ ಈ ವಿಚಾರಗಳು ಹೆಚ್ಚು ಯೋಚನಾ ಪ್ರಚೋದನಕಾರಿಯಾಗಿವೆ. ಮನುಷ್ಯ ತನ್ನ ಅಲ್ಪತೆಯನ್ನು ಮರೆತು ಘನತೆಯ ಕಡೆಗೆ ಹೆಚ್ಚು ಆಲೋಚಿಸಬೇಕು. ಹೀಗಾಗಿ ಬುದ್ಧನ ಸರಳ ಮಾರ್ಗವೇ ಧರ್ಮದ ಸಾರವಾಗಿ‌ ಇಡೀ ಮನುಕುಲವನ್ನೇ ಪೊರೆಯುವ ಬೆಳಕಾಗಿದೆ. ಮನುಷ್ಯ ತನ್ನ ಸ್ವಾರ್ಥ, ದ್ವೇಷ, ಅನ್ಯಾಯ, ಅನಾಚರಗಳನ್ನು ಮಾಡುತ್ತ ಮತಗಳ ಕೂಪದ ಕ್ರೌರ್ಯತೆಯಲ್ಲಿ ನಲುಗಿ ಹೋಗುತ್ತಿರುವಾಗ ಒಳಗಿನ ಆಳದ ಬೇಗುದಿಗಳಿಗೆ ಮದ್ದಾಗಿ ಒದಗುವ ವೈದ್ಯನಾಗಿ ಬುದ್ಧ ನಮಗೆ ಬೆಳಕಾಗಿದ್ದಾನೆ. ಈ ಹಿನ್ನೆಲೆಯಲ್ಲಿ ‘ಜಗತ್ತಿನ ಎಲ್ಲಾ ಧರ್ಮಗಳು ದೇವರು, ಆತ್ಮ, ಸಾವಿನ ನಂತರದ ಜೀವನದ ಬಗೆಗೆ ಗಮನಕೊಡುತ್ತವೆ. ಆದರೆ ಬೌದ್ಧ ಧರ್ಮವು ಪ್ರಜ್ಞಾ, ಕರುಣಾ, ಸಮತಾ ತತ್ವಗಳಿಗೆ ಪ್ರಾಮುಖ್ಯತೆ ಕೊಡುತ್ತದೆ. ಈ ಭೂಮಿಯ ಮೇಲೆ ನೆಮ್ಮದಿಯ ಉತ್ತಮ ಜೀವನಕ್ಕೆ ಬೇಕಾಗಿರುವುದು ಈ ಮೂರೇ. ಈ ತತ್ವಗಳು ನನ್ನನ್ನು ಆಕರ್ಷಿಸಿವೆ. ಇವು ವಿಶ್ವವನ್ನು ಆಕರ್ಷಿಸಬೇಕು. ದೇವರಾಗಲಿ, ಆತ್ಮವಾಗಲಿ ಈ ಪ್ರಪಂಚವನ್ನು ಕಾಪಾಡಲಾರವು’ ಎಂಬ ಡಾ। ಅಂಬೇಡ್ಕರ್ ಅವರ ಮಾತು ಬೌದ್ಧ ಧರ್ಮದ ಸತ್ವ ಸಂಕೇತ.‌ ಈ ಸತ್ವವೇ ಇಡೀ ಮನುಕುಲಕ್ಕೆ ಅವಶ್ಯವೂ ಆಗಿದೆ.

‘ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು

ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು ದೇವರಿಲ್ಲ! ಭಕ್ತರಿಲ್ಲ! ನಾನೂ ಇಲ್ಲ! ನೀನೂ ಇಲ್ಲ!

ಗುಹೇಶ್ವರ ಪೂಜಿಸುವವರೂ ಇಲ್ಲ! ಎಂಬ ಅಲ್ಲಮಪ್ರಭುವಿನ ವಚನವು ಬುದ್ಧನ ಅನುಭಾವದ ಅಭಿವ್ಯಕ್ತಿಯಾಗಿದೆ.

ಈಗ ಎಲ್ಲೆಡೆಯೂ ಯುದ್ಧ ಕಾರ್ಮೋಡ ಕವಿದಿದೆ. ಬುದ್ಧ ಎಂಬ ಅಪರಿಮಿತ, ಅನಂತ ಬೆಳಕಿನಲ್ಲಿ ಬದುಕು ಕಟ್ಟಿಕೊಳ್ಳುವುದೇ ಬುದ್ಧ ಪೂರ್ಣಿಮೆಯ ಸಾರ್ಥಕತೆಯಾಗಿದೆ