ಹೆಣ ಹುಡುಕಿಕೊಂಡು ಹೋದ ಪೊಲೀಸರಿಗೆ ಸಿಕ್ಕಿದ್ದೇನು?

Published : Jun 15, 2026, 12:34 PM IST
Police

ಸಾರಾಂಶ

ಯಾವುದೋ ಹೊಸ ಕೇಸ್‌ ಸಿಗಬಹುದು ಎಂದು ಭಾವಿಸಿ ಒಬ್ಬೊಬ್ಬ ಪೊಲೀಸರು ಮನೆಯ ಸುತ್ತ ಶೋಧ ಮಾಡತೊಡಗಿದಾಗ ದುರ್ವಾಸನೆಯ ಮೂಲ ಸಿಕ್ಕಿದೆ. ನೋಡಿದರೆ ಅದೊಂದು ಶವ. ಗಾಬರಿಯಾಗಬೇಡಿ ಹೆಗ್ಗಣದ ಶವ.

ಮನಿ ಸುತ್ತಲಿನ ದುರ್ವಾಸನೆಗೆ ಕಾರಣ ಹೆಣವೋ, ಹೆಗ್ಗಣವೋ.. ಸ್ವಲ್ಪ ಬಂದ್ನೋಡಿ ಪೊಲೀಸರೇ...! ಎಂದು ಮಹಿಳೆಯೊಬ್ಬಳ ತುರ್ತು ಕರೆಗೆ ಪೊಲೀಸರು ಸುಸ್ತಾಗಿ ಹೋದ ಪ್ರಸಂಗ ಕಲಬುರಗಿ ಸಾಕ್ಷಿಯಾಗಿದೆ.

ತಮ್ಮ ಮನೆ ಹಿಂದಿನಿಂದ ಮೂರು ದಿನದಿಂದ ದುರ್ವಾಸನೆ ಬರುತ್ತಿರುವುದಕ್ಕೆ ಮೊದಲು ಕಾರ್ಪೋರೇಷನ್‌ಗೆ ಮಹಿಳೆ ಕರೆ ಮಾಡಿ ದೂರಿದರೂ ಪ್ರಯೋಜನವಾಗಿಲ್ಲ, ಚಾಲಾಕಿ ಮಹಿಳೆ 112 ಗೆ ಕರೆ ಮಾಡಿ, ಅಯ್ಯೋ ಪೊಲೀಸರೇ, ನಮ್ಮನೆ ಸುತ್ತಮುತ್ತ ಅದೇನ್‌ ಬಿದ್ದಿದೆಯೋ, ಕೆಟ್ಟ ವಾಸನೆ ಬರ್ತಿದೆ, ಬೇಗ ಬಂದು ಪರಿಶೀಲಿಸಿರೆಂದು ಗಾಬರಿಯಿಂದ ಹೇಳಿದ್ದಾಳೆ.

ಪಾಪ ಪೊಲೀಸರು, ಹೆಣ ಇರಬಹುದೆಂದು ತಕ್ಷಣ ವಾಹನದ ಸೈರನ್‌ ಹಾಕಿಕೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ಮಾಮೂಲಿನಂತೆ ಎಲ್ಲಿ, ಯಾವಾಗಿನಿಂದ ವಾಸನೆ ಬರುತ್ತಿದೆ ಎಂದೆಲ್ಲ ಪ್ರಶ್ನಿಸಿ ಮಾಹಿತಿ ಪಡೆದ ಪೊಲೀಸರು ಸರ್ಚ್‌ ಆಪರೇಷನ್‌ ಶುರು ಇಟ್ಟುಕೊಂಡರು. ಈ ಮಧ್ಯೆ ಮಹಿಳೆಯ ಮನೆಗೆ ಪೊಲೀಸರು ಬಂದಿದ್ದನ್ನು ನೋಡಿದ ಸಮೀಪದ ಜನರು ಕುತೂಹಲದಿಂದ ಮನೆಯತ್ತ ಕಣ್ಣು ಹಾಯಿಸತೊಡಗಿದರು.

ಯಾವುದೋ ಹೊಸ ಕೇಸ್‌ ಸಿಗಬಹುದು ಎಂದು ಭಾವಿಸಿ ಒಬ್ಬೊಬ್ಬ ಪೊಲೀಸರು ಮನೆಯ ಸುತ್ತ ಶೋಧ ಮಾಡತೊಡಗಿದಾಗ ದುರ್ವಾಸನೆಯ ಮೂಲ ಸಿಕ್ಕಿದೆ. ನೋಡಿದರೆ ಅದೊಂದು ಶವ.... ಗಾಬರಿಯಾಗಬೇಡಿ ಹೆಗ್ಗಣದ ಶವ.

ಸತ್ತ ಹೆಗ್ಗಣ ನೋಡಿದ ಪೊಲೀಸರಿಗೆ ನಗಬೇಕೋ, ಸಿಟ್ಟಾಗಬೇಕೋ ಎಂದು ಗೊತ್ತಾಗದೇ, ಜೊತೆ ಇದ್ದ ಪೊಲೀಸ್‌ ಅಧಿಕಾರಿಗೆ ಸಾರ್‌ ಸತ್ತ ಹೆಗ್ಗಣದ ವಾಸನೆ, ಬೇರೆ ಏನೂ ಇಲ್ಲ ಎಂದು ಹೇಳಿದಾಗ ಮುಸಿ ಮುಸಿ ನಗುವ ಸರದಿ ಮನೆ ಮುಂದೆ ನಿಂತುಕೊಂಡಿದ್ದ ಜನರದ್ದಾಗಿತ್ತು.

ಜನವಸತಿ ಪ್ರದೇಶದಲ್ಲಿನ ನೈರ್ಮಲ್ಯ ಕಾಪಾಡಬೇಕಾದ ಸಿಟಿ ಕಾರ್ಪೋರೇಷನ್‌ ತನ್ನ ಪ್ರಾಥಮಿಕ ಕರ್ತವ್ಯದಿಂದ ವಿಮುಖವಾದಾಗ ಜನ ಪರೇಶಾನ್‌ ಆಗೋದಲ್ದೇ ಪೊಲೀಸರೂ ಪರೇಶಾನ್‌ ಆದ ಪ್ರಸಂಗ ಇದು. ಆದರೆ ಪೊಲೀಸ್‌ ತುರ್ತು ಸಹಾಯವಾಣಿ 112 ಕರೆ ತೋಳ ಬಂತಲೇ ತೋಳ ಕಥೆಯಂತಾಗದಿರಲಿ ಎನ್ನುತ್ತಿದ್ದಾರೆ ಜನರು.

ಇಎನ್‌ಟಿ ಡಾಕ್ಟರ್ ಮೂತ್ರ ಪರೀಕ್ಷೆ ಮಾಡ್ತಾರಾ?

ಗಾಂಜಾ ಸೇವನೆ ಪ್ರಕರಣದ ಆರೋಪಿ ತನ್ನ‌‌ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು.‌ ಆರೋಪಿ ಪರ ವಕೀಲರು, ಸ್ವಾಮಿ... ಗಾಂಜಾ ಸೇವನೆ ಆರೋಪ ಅರ್ಜಿದಾರನ ಮೇಲಿದೆ. ಆರೋಪಿ ಗಾಂಜಾ ಸೇವನೆ ಮಾಡಿಲ್ಲ. ತನಿಖಾಧಿಕಾರಿಗಳು ಎಫ್‌ಎಸ್ ಎಲ್ ರಿಪೋರ್ಟ್ ಇಲ್ಲದೆಯೇ ಚಾರ್ಜ್ ಶೀಟ್ ಹಾಕಿದ್ದಾರೆ‌. ಪ್ರಕರಣ ರದ್ದುಪಡಿಸಬೇಕು‌‌‌‌ ಎಂದು ಕೋರಿದರು.

ಅದಕ್ಕೆ ನ್ಯಾಯಮೂರ್ತಿಗಳು, ಈ ಅಂಶ ಪ್ರಕರಣ ರದ್ದತಿ ಅಥವಾ ತಡೆಯಾಜ್ಞೆ ನೀಡಲು ಆಧಾರವಾಗುವುದಿಲ್ಲ‌.‌ ಎಫ್‌ಎಸ್ ಎಲ್ ರಿಪೋರ್ಟ್ ಇಲ್ಲದೆಯೂ ಚಾರ್ಜ್ ಶೀಟ್ ಹಾಕಿದರೂ ವಿಚಾರಣೆ ಪ್ರಕ್ರಿಯೆ ಕಲುಷಿತವಾಗುವುದಿಲ್ಲ ಎಂದು ಆರೋಪಿ ವಕೀಲರ ವಾದವನ್ನು ತಳ್ಳಿಹಾಕಿದರು.

ಅರ್ಜಿದಾರ ಪರ ವಕೀಲರು, ಗಾಂಜಾ ಸೇವನೆಗೆ ಯಾವುದೇ ಪೂರಕ ದಾಖಲಾತಿಗಳಿಲ್ಲ ಎಂದಾಗ ಈ ಅಂಶವನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸುತ್ತದೆ. ಬೇರೆ ಪಾಯಿಂಟ್ ಇದ್ರೆ ಹೇಳಿ ಎಂದು ಸೂಚಿಸಿದರು. ಪಟ್ಟು ಬಿಡದ ಆರೋಪಿ ಪರ ವಕೀಲರು, ಸ್ವಾಮಿ.... ಪ್ರಕರಣದಲ್ಲಿ ಆರೋಪಿಯ ಮೂತ್ರ ಪರೀಕ್ಷೆಯನ್ನು ಇಎನ್ ಟಿ ಡಾಕ್ಟರ್ (ಕಣ್ಣು , ಮೂಗಿ, ಕಿವಿ ತಜ್ಞ) ಮಾಡಿದ್ದಾರೆ ಎಂದು ಲಾ ಪಾಯಿಂಟ್ ಹಾಕಿದ್ರು.

ಈ ಹೇಳಿಕೆ ಕೇಳಿ ಅವಕ್ಕಾದ ನ್ಯಾಯಮೂರ್ತಿಗಳು, ಇಎನ್‌ಟಿ ಡಾಕ್ಟರ್ ಯೂರಿನ್ ಟೆಸ್ಟ್ ಮಾಡಿದ್ದಾರೆಯೇ ಎಂದು ಅಚ್ಚರಿ ವ್ಯಕ್ತಪಡಿಸಿ, ಮೂತ್ರ ಪರೀಕ್ಷೆಯನ್ನು ಲ್ಯಾಬೋರೇಟರಿ ಟೆಕ್ನಿಷಿಯನ್ ಮಾಡಬಹುದು ಬಿಡಿ‌‌. ಈ ಅಂಶ ಆಧರಿಸಿ ಪ್ರಕರಣ ರದ್ದುಪಡಿಸಲಾಗದು ಎಂದು ತಿರುಗೇಟು ನೀಡಿದರು.

ಬಳಿಕ ಪ್ರಕರಣದ ತನಿಖಾಧಿಕಾರಿಯನ್ನು ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ, ನೀವೇನು ಮೂತ್ರವನ್ನು ಪರೀಕ್ಷೆಗಾಗಿ ಇನ್ಎನ್ ಟಿ ಡಾಕ್ಟರ್ ಗೆ ಕೊಡೋಕೆ ಆರಂಭಿಸಿದ್ದೀರಾ? ಎಂದು ನ್ಯಾಯಮೂರ್ತಿಗಳು ಕೇಳಿದಾಗ ಕೋರ್ಟ್ ಹಾಲ್ ನಗೆಗಡಲಲ್ಲಿ ತೇಲಿತು.

ಗನ್‌ ಮ್ಯಾನ್‌ ವಾಪಸ್‌ ತಗೋಬಾರ್ದು ಅಂದ್ರೆ ವಿವಾದಾತ್ಮಕ ಹೇಳಿಕೆ ನೀಡಬೇಕಾ.....

ರಾಜ್ಯದಲ್ಲಿ ಹಲವು ಸಾಹಿತಿಗಳು, ಹೋರಾಟಗಾರರಿಗೆ ಜೀವ ಬೆದರಿಕೆ ಇದೆ ಎಂದು ಸರ್ಕಾರದ ವತಿಯಿಂದ ‘ಗನ್‌ ಮ್ಯಾನ್‌’ ರಕ್ಷಣೆ ನೀಡಲಾಗಿದೆ. ಇದು ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರಿಗೆ ಇರುವಂತೆ ‘ಕಾಯಂ’ ಆಗಿ ಅಲ್ಲ!. ಸಾಹಿತಿಗಳಿಗೆ, ಹೋರಾಟಗಾರರಿಗೆ ಪರಿಸ್ಥಿತಿಗನುಗುಣವಾಗಿ ನೀಡಲಾಗಿರುತ್ತದೆ. ಯಾವುದೇ ಬೆದರಿಕೆ ಇಲ್ಲ ಎಂದು ಗೊತ್ತಾದಾಗ ವಾಪಸ್‌ ಪಡೆಯಲಾಗುತ್ತದೆ.

ಅದೇ ರೀತಿ ಮೈಸೂರಿನಲ್ಲಿ ಕೂಡ ಕೆಲವರಿಗೆ ಗನ್‌ಮ್ಯಾನ್‌ ಒದಗಿಸಲಾಗಿದೆ. ಗನ್‌ಮ್ಯಾನ್‌ ಜೊತೆ ಸಭೆ, ಸಮಾರಂಭಗಳಿಗೆ ಹೋಗುವುದು, ‘ಇವರ ಪ್ರಾಣಕ್ಕೆ ಬೆದರಿಕೆ ಇದೆಯಂತೆ, ಅದಕ್ಕೆ ಸರ್ಕಾರವೇ ಗನ್‌ಮ್ಯಾನ್‌ ನೀಡಿದೆಯಂತೆ’ ಎಂದು ಜನ ಮಾತನಾಡಿಕೊಳ್ಳುವುದನ್ನು ಕೇಳುವುದು ಒಂದು ರೀತಿಯ ಪ್ರತಿಷ್ಠೆ!. ಆದರೆ ಈ ಗನ್‌ ಮ್ಯಾನ್‌ ಗಳಿಗೆ ಯಾವುದೇ ಕೆಲಸ ಇಲ್ಲ. ನಿಯೋಜಿಸಿದವರ ‘ಮನೆವಾರ್ತೆ’ ನೋಡಿಕೊಂಡು ಆರಾಮವಾಗಿ ಕಾಲಕಳೆಯುತ್ತಿದ್ದಾರೆ.

ಇಂತಿರುವಾಗ ಅಕಟಕಟಾ!. ಕೆಲವರಿಗೆ ‘ಐಡೆಂಟಿಟಿ ಕ್ರೈಸಿಸ್!’ ನಮಗೆ ವಯಸ್ಸಾಯಿತು. ಯಾರು ಗುರುತಿಸುತ್ತಿಲ್ಲ. ಯಾರೂ ಕರೆಯುತ್ತಿಲ್ಲ. ಹೀಗಿರುವಾಗ ಗನ್‌ ಮ್ಯಾನ್‌ ವಾಪಸ್‌ ಪಡೆಯಬಾರದು ಎಂದರೆ ಆಗಾಗ್ಗೆ ವಿವಾದಾತ್ಮಕ ಹೇಳಿಕೆ ನೀಡಬೇಕು. ಇದರ ವಿರುದ್ಧ ಖಂಡನಾ ಹೇಳಿಕೆಗಳು ಪ್ರಕಟವಾಗಬೇಕು. ಪೊಲೀಸರಿಗೆ ದೂರು ನೀಡಿ, ಎನ್‌ಸಿಆರ್‌ ಪಡೆಯಬೇಕು ಇಲ್ಲವೇ ಎಫ್‌ಐಆರ್‌ ಆಗಿ, ಮಾಧ್ಯಮಗಳಲ್ಲಿ ಸುದ್ದಿಯಾಗಬೇಕು ಎಂಬಂತೆ ಕೆಲವರು ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

-ಶೇಷಮೂರ್ತಿ ಅವಧಾನಿ

-ವೆಂಕಟೇಶ್‌ ಕಲಿಪಿ

-ಅಂಶಿ ಪ್ರಸನ್ನಕುಮಾರ್‌

PREV
Read more Articles on

Recommended Stories

ವಿಶ್ವ ತೊನ್ನು ಜಾಗೃತಿ ದಿನ.. ಜೂನ್ 13 - ತೊನ್ನು ಏನಿದರ ಮರ್ಮ?
ಸುಧಾರಣೆ ಪರ್ವ ನಿರ್ಮಿಸಿದ ಮೋದಿ 12 ವರ್ಷ