ಕಬ್ಬು ಬೆಳೆಗಾರರು ಸಿಡಿದೆದ್ದಿರುವುದು ಯಾಕೆ?
--
- ಮಹಾಬಲೇಶ್ವರ ಹೊನ್ನೆಮಡಿಕೆಬ್ಲರ್ಬ್:86 ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಕರ್ನಾಟಕ, ಕಬ್ಬಿನ ಉತ್ಪಾದನೆಯಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ. ಉತ್ತರ ಕರ್ನಾಟಕದ ಸಕ್ಕರೆ ಕಣಜ ಎಂದೇ ಖ್ಯಾತಿವೆತ್ತ ಬೆಳಗಾವಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬನ್ನು ಬೆಳೆಯುವ ಜಿಲ್ಲೆ ಎನಿಸಿಕೊಂಡಿದೆ. ಉಳಿದಂತೆ, ಬಾಗಲಕೋಟೆ, ಮಂಡ್ಯ ಸೇರಿ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಬ್ಬನ್ನು ಬೆಳೆಯಲಾಗುತ್ತದೆ.++++++++
ಸ್ವಾತಂತ್ರ್ಯಾನಂತರ ಗ್ರಾಮೀಣ ಸಬಲೀಕರಣದ ದೃಷ್ಟಿಯಿಂದ ದೇಶದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ರೈತರೇ ಮಾಲೀಕರಾಗಬೇಕು ಎಂಬ ಆಶಯ ಇದರ ಹಿಂದಿತ್ತು. ಆದರೆ, ಕಾಲಕ್ರಮೇಣ ರಾಜಕೀಯ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಸಹಕಾರ ಸಂಸ್ಥೆಗಳ ಪ್ರಮುಖ ಹುದ್ದೆಗಳನ್ನು ಹಿಡಿಯುವ ಮೂಲಕ ಅವುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದು ಮುಂದೆ ಸಕ್ಕರೆ ಲಾಬಿಗೆ ಮೂಲವಾಯಿತು.ವಿಶ್ವದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ಮತ್ತು ರಫ್ತು ಮಾಡುವ ಬ್ರೆಜಿಲ್ನಲ್ಲಿ ಕಬ್ಬಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇದೆ. ಇದು ಜಾಗತಿಕ ಸಕ್ಕರೆ ಮಾರುಕಟ್ಟೆ ಮತ್ತು ಎಥೆನಾಲ್ನ ಬೆಲೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ಕೂಡ ವಹಿಸುತ್ತದೆ. ಆದರೆ, ಬ್ರೆಜಿಲ್ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿರುವ ಭಾರತದಲ್ಲಿ ಕಬ್ಬಿಗೆ ಮುಕ್ತ ಮಾರುಕಟ್ಟೆ ದರವನ್ನು ಕಲ್ಪಿಸಲಾಗಿಲ್ಲ. ಕೇಂದ್ರ ಸರ್ಕಾರವೇ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಹಾಗೂ ಕೋಟಾ ನೀಡುವ ಮೂಲಕ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದೆ. ರಂಗರಾಜನ್ ಸಮಿತಿಯಂತಹ (2012) ಹಲವು ತಜ್ಞರ ಸಮಿತಿಗಳು ಕಬ್ಬು ವಲಯವನ್ನು ಮುಕ್ತ ಮಾರುಕಟ್ಟೆಗೆ ಒಳಪಡಿಸಲು ಶಿಫಾರಸ್ಸು ಮಾಡಿವೆಯಾದರೂ, ಸರ್ಕಾರ ಈ ಶಿಫಾರಸ್ಸುಗಳನ್ನು ಮಾನ್ಯ ಮಾಡಿಲ್ಲ. ಇದಕ್ಕೆ ಸರ್ಕಾರ ಕೊಡುವ ಕಾರಣ ರೈತರು, ಗ್ರಾಹಕರು ಹಾಗೂ ಸಕ್ಕರೆ ಕಾರ್ಖಾನೆಗಳ ಹಿತದೃಷ್ಟಿ.
ಕಬ್ಬಿಗೆ ಮುಕ್ತ ಮಾರುಕಟ್ಟೆ ಏಕೆ ಇಲ್ಲ?
- ಕಬ್ಬು ಮತ್ತು ಸಕ್ಕರೆ ಎರಡೂ ದೇಶದಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಬರುವುದರಿಂದ ಸರ್ಕಾರವೇ ಪ್ರತಿ ತಿಂಗಳು ಕಾರ್ಖಾನೆಗಳು ಎಷ್ಟು ಸಕ್ಕರೆ ಮಾರಾಟ ಮಾಡಬೇಕು ಎಂಬ ಕೋಟಾವನ್ನು ನಿರ್ಧರಿಸುತ್ತದೆ. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು ಸಕ್ಕರೆ ವ್ಯಾಪಾರಿಗಳ ದಾಸ್ತಾನು ಮಿತಿ, ಆಮದು ಮತ್ತು ರಫ್ತು ನೀತಿಗಳನ್ನು ನಿಯಂತ್ರಿಸುತ್ತದೆ. ಆ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಯಾಗದಂತೆ ತಡೆಯುತ್ತದೆ, ಬೆಲೆ ಏರಿಕೆಯನ್ನು ನಿಯಂತ್ರಿಸುತ್ತದೆ. - ಕಬ್ಬಿನಿಂದ ಇಂಧನಕ್ಕೆ ಬಳಸುವ ಎಥೆನಾಲ್ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸುವ ಬಗಾಸ್ ತಯಾರಿಸಲಾಗುತ್ತದೆ. ದೇಶದ ಇಂಧನ ಭದ್ರತೆ ಮತ್ತು ತೈಲ ಆಮದು ಕಡಿಮೆ ಮಾಡುವ ಉದ್ದೇಶದಿಂದ ಎಥೆನಾಲ್ ಉತ್ಪಾದನೆಗೆ ಕಬ್ಬನ್ನು ಎಷ್ಟು ಬಳಸಬೇಕು ಮತ್ತು ಅದಕ್ಕೆ ಎಷ್ಟು ದರ ನೀಡಬೇಕು ಎಂಬುದನ್ನು ಸರ್ಕಾರದ ಮೂಲಕ ನಿಯಂತ್ರಿಸಬಹುದು.- ಸರ್ಕಾರದ ನೀತಿಯಿಂದಾಗಿಯೇ ಕಬ್ಬು ಬೆಳೆಗೆ ಇತರ ಬೆಳೆಗಳಿಗಿಂತ ಹೆಚ್ಚಿನ ಬೆಲೆ ಮತ್ತು ಮಾರುಕಟ್ಟೆ ಗ್ಯಾರಂಟಿ ಸಿಗುತ್ತಿದೆ.
ಆದರೆ, ಕಬ್ಬಿಗೆ ಮುಕ್ತ ಮಾರುಕಟ್ಟೆ ಕಲ್ಪಿಸದಿರಲು ಸಕ್ಕರೆ ಕಾರ್ಖಾನೆಗಳ ಮಾಲೀಕರ ಪ್ರಭಾವಶಾಲಿ ಲಾಬಿ, ರಾಜಕೀಯ ಹಿತಾಸಕ್ತಿಗಳು ಪ್ರಮುಖ ಕಾರಣ ಎಂಬುದು ರೈತ ಸಂಘಟನೆಗಳು ಮತ್ತು ಆರ್ಥಿಕ ತಜ್ಞರ ವಾದ.
ರೈತರಿಗೀಗ ಸಂಕಷ್ಟದ ದಿನಗಳು:ಸಾಮಾನ್ಯವಾಗಿ ತಳಿಯನ್ನಾಧರಿಸಿ 10 ರಿಂದ 14 ತಿಂಗಳುಗಳಲ್ಲಿ ಕಬ್ಬು ಕಟಾವಿಗೆ ಬರುತ್ತದೆ. ಆದರೆ, ಕಬ್ಬು ಕಟಾವಿನ ವೇಳೆ ಕಾರ್ಮಿಕರ ಕೊರತೆ, ಹೆಚ್ಚಿನ ಕೂಲಿ, ಅಧಿಕ ಸಾಗಾಣಿಕೆ ವೆಚ್ಚ ರೈತರಿಗೆ ದೊಡ್ಡ ಸವಾಲಾಗುತ್ತಿದೆ. ಪರ್ಯಾಯವಾಗಿ ಕಬ್ಬು ಕಟಾವಿಗೆ ದುಬಾರಿ ಬೆಲೆಯ ಕಟಾವು ಯಂತ್ರಗಳನ್ನು ಬಳಸುವುದು ಸಣ್ಣ ಹಿಡುವಳಿದಾರರಿಗೆ ಆರ್ಥಿಕವಾಗಿ ಸಾಧ್ಯವಾಗುತ್ತಿಲ್ಲ.
ಕಬ್ಬು ಹೆಚ್ಚು ನೀರನ್ನು ಬೇಡುವ ಬೆಳೆಯಾಗಿದ್ದು, ಇತ್ತೀಚಿನ ಬರಗಾಲ ಕಬ್ಬಿನ ಇಳುವರಿಯನ್ನು ನಾಶಪಡಿಸುತ್ತಿದೆ. ಕಬ್ಬನ್ನು ಕಾಡುವ ಕೆಂಪು ಕೊಳೆ ರೋಗ ಮತ್ತು ಇತರ ಕೀಟಬಾಧೆಗಳು ನಷ್ಟಕ್ಕೆ ಕಾರಣವಾಗುತ್ತಿವೆ. ಕಾರ್ಖಾನೆಗಳು ರೈತರಿಂದ ಕಬ್ಬು ಪಡೆದರೂ ತಿಂಗಳುಗಟ್ಟಲೆ, ವರ್ಷಗಟ್ಟಲೆ ಹಣ ಪಾವತಿಸದೆ ರೈತರನ್ನು ಸತಾಯಿಸುತ್ತವೆ. ಕೇಂದ್ರ ಸರ್ಕಾರದ ಕಬ್ಬು ನಿಯಂತ್ರಣ ಕಾಯ್ದೆ–1966 ಹಾಗೂ ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ-2013ರ ಪ್ರಕಾರ, ಕಬ್ಬು ಪೂರೈಸಿದ14 ದಿನಗಳ ಒಳಗೆ ಕಾರ್ಖಾನೆಗಳು ಹಣ ಪಾವತಿಸಬೇಕು. ವಿಳಂಬವಾದರೆ 15% ಬಡ್ಡಿ ನೀಡಬೇಕು. ಆದರೆ, ಈ ಕಾನೂನು ಪಾಲನೆಯಾಗುತ್ತಿಲ್ಲ.
ರೈತರಿಗೆ ಪರಿಹಾರ ಏನು?ಕಬ್ಬು ಬೆಳೆಗಾರರ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಆದರೆ, ರೈತರ ನಡುವೆ ಜಾತಿ, ರಾಜಕೀಯ ಭಿನ್ನಾಭಿಪ್ರಾಯ ಸೃಷ್ಟಿಸಿ ಹೋರಾಟವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಹೀಗಾಗಿ, ರೈತರು ಪರ್ಯಾಯ ಮಾರ್ಗಗಳತ್ತ ಯೋಚಿಸಬೇಕಿದೆ. ಸ್ಥಳೀಯವಾಗಿ ಬೆಲ್ಲದ ಗಾಣಗಳನ್ನು ಪ್ರೋತ್ಸಾಹಿಸಿ, ರೈತರೇ ಒಕ್ಕೂಟಗಳನ್ನು ರಚಿಸಿಕೊಂಡು ಸಾವಯವ ಬೆಲ್ಲ, ಕಬ್ಬಿನ ಜ್ಯೂಸ್ ಮತ್ತಿತರ ಪದಾರ್ಥಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವತ್ತ ಹೆಜ್ಜೆ ಹಾಕಬೇಕಿದೆ. ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿಕೊಂಡು ನೇರವಾಗಿ ಮಾರುಕಟ್ಟೆಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಂದರೆ ಸಕ್ಕರೆ ಲಾಬಿಯ ಮೇಲಿನ ಅವಲಂಬನೆ ಕಡಿಮೆ ಆಗಲಿದೆ.