ಚುನಾವಣೇಲಿ ಕರಡಿಗೆ ಚಡ್ಡಿ ಹಾಕಿಸಬಾರ್ದು ರೀ...

KannadaprabhaNewsNetwork | Updated : Mar 25 2024, 02:36 PM IST

ಸಾರಾಂಶ

ಮೋದಿ ಇದ್ದ ವೇದಿಕೆಯಲ್ಲಿ ಅಶೋಕ್‌ ಹಾಡಿದ ಆಶುಕವಿತೆ ಕೇಳಿ ಜನ ನಕ್ಕಿದ್ದೇಕೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ

ಒಬ್ಬ ಅಭಿಮಾನಿ, ಸಂಗಣ್ಣನಿಗೆ ವಯಸ್ಸಾಗಿದೆ ವಯಸ್ಸಾಗಿದೆ ಎನ್ನುವವರು ಯಾರ್ಯಾರು ಇದ್ದೀರಿ ಬಂದುಬಿಡ್ರಿ, ಅವರಿಗೆ ಚಡ್ಡಿ ಹಾಕಿಸುತ್ತೇವೆ, ಬನ್ರೀ ಅಂದರು. 

ಜತೆಗೆ, ಅಮಿತ್ ಶಾ ಅವರನ್ನು ಕರೆಸ್ರಿ, ಅವರು ಚಡ್ಡಿ ಹಾಕಿಕೊಂಡು ಬರಲಿ ಎಂದು ಕೂಗತೊಡಗಿದರು. ಅಲ್ಲದೆ ಪ್ರಧಾನಿ ಮೋದಿ ಇದ್ದ ವೇದಿಕೆಯಲ್ಲಿ ಪ್ರತಿಪಕ್ಷ ನಾಯಕ ಅಶೋಕ್‌ ಹಾಡಿದ ಆಶುಕವಿತೆ ಕೇಳಿ ಜನ ನಕ್ಕಿದ್ದೇಕೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ

ಇದು ಟಿಕೆಟ್‌ ಹಂಚಿಕೆ ಸಮಯ. ಈ ಸಮಯದಲ್ಲಿ ಯಾರು ಯಾರಿಗೆ ಟೋಪಿ ಹಾಕುತ್ತಾರೆ, ಯಾರಿಗೆ ಯಾರು ಚೊಂಬು ಕೊಡುತ್ತಾರೆ, ಯಾರ ಬಾಯಿಗೆ ಲಡ್ಡು ಬಂದು ಬೀಳುತ್ತದೆ ಅಂತ ಹೇಳೋದು ಕಷ್ಟ.

ಇಂತಹ ಸಂಕಷ್ಟದ ಸಮಯದಲ್ಲಿ ಕೊಪ್ಪಳದ ಮಾಜಿ ಸಂಸದ ಕರಡಿ ಸಂಗಣ್ಣ ಅವರ ಅಭಿಮಾನಿಗಳು ಮಾತ್ರ ಕರಡಿಗೆ ಚಡ್ಡಿ ಹಾಕ್ರಿ, ಬನ್ರೀ ಕರಡಿಗೆ ಚಡ್ಡಿ ಹಾಕ್ರಿ ಅಂತ ಕೂಗಾಡತೊಡಗಿದ್ದಾರೆ.

ಇದಾಗಿದ್ದು ಟೆಕೆಟ್ ತಪ್ಪಿದ ಬೇಸರದಲ್ಲಿ ಕರಡಿ ಸಂಗಣ್ಣ ಅವರೇ ಕರೆದಿದ್ದ ಪತ್ರಿಕಾಗೋಷ್ಠಿ ನಂತರ. ಗೋಷ್ಠಿ ಮುಗಿಯುತ್ತಿದ್ದಂತೆಯೇ ಅಲ್ಲಿಯೇ ನೆರೆದಿದ್ದ ಅಭಿಮಾನಿಗಳು ಪತ್ರಕರ್ತರನ್ನು ನಿಲ್ಲಿಸಿ, ತಮ್ಮ ತಮ್ಮ ಹೇಳಿಕೆ ನೀಡುವುದು, ಕರಡಿ ಪರವಾಗಿ ಕೂಗಾಡುವುದು ಶುರು ಮಾಡಿದರು. 

ಒಬ್ಬ ಅಭಿಮಾನಿ, ಸಂಗಣ್ಣನಿಗೆ ವಯಸ್ಸಾಗಿದೆ ವಯಸ್ಸಾಗಿದೆ ಎನ್ನುವವರು ಯಾರ್ಯಾರು ಇದ್ದೀರಿ ಬಂದುಬಿಡ್ರಿ, ಅವರಿಗೆ ಚಡ್ಡಿ ಹಾಕಿಸುತ್ತೇವೆ, ಬನ್ರೀ ಅಂದರು. 

ಜತೆಗೆ, ಬಿಜೆಪಿಯ ಯಾವ ನಾಯಕರು ಬರ್ತಿರಿ ಬರ್ರಿ, ಅಮಿತ್ ಶಾ ಅವರನ್ನು ತಂದು ನಿಲ್ಲಿಸಿ, ಅವರು ಚಡ್ಡಿ ಹಾಕಿಕೊಂಡು ಬರಲಿ ಎಂದು ಕೂಗತೊಡಗಿದರು.

ಇಷ್ಟಕ್ಕೂ ಅವರಿಗೆಲ್ಲ ಚಡ್ಡಿ ಯಾಕಪ್ಪ ಹಾಕಸೋಕೆ ಹಟ ತೊಟ್ಟಿದ್ದಿಯಾ ಅಂದರೆ, ಸಂಗಣ್ಣನವರಿಗೆ ವಯಸ್ಸಾಗಿದೆ ಎನ್ನುವವರು ಪಕ್ಕದಲ್ಲಿ ನಿಂತು ಓಡಲಿ, ಕರಡಿ ಅವರಿಗೆ ಚಡ್ಡಿ ಹಾಕಿಸಿ ಓಡಿಸುತ್ತೇವೆ. 

ಅವರ ಜೊತೆ ಯಾರ್‌ ಬೇಕಾದ್ರೂ ಓಡಿ ಗೆಲ್ರಿ. ಅಮಿತ್‌ ಶಾ ಬಂದು ಓಡಲಿ.. ಯಾರ್‌ ಫಸ್ಟ್‌ ಬರ್ತಾರೆ ಅವರಿಗೆ ಟಿಕೆಟ್‌ ಕೊಡಲಿ ಅಂತ ಸವಾಲು ಹಾಕಿದರು.ಈ ಸವಾಲು ಕೇಳಿ ಕರಡಿ ಸಂಗಣ್ಣನ ದಿಲ್‌ ಖುಷ್‌.

ನೀರಿಲ್ಲ, ನೀರಿಲ್ಲ... ಅಶೋಕಣ್ಣಗೆ ಬೇರೆ ಹಾಡು ಗೊತ್ತಿಲ್ಲಈ ಹಾಡು ರೀಲ್ಸ್‌ ಆಗಿ ಇಡೀ ನಾಡನ್ನು ಕುಣಿಸಿ ಕುಣಿಸಿ ಸಾಕಾಗಿ ಈಗ ಸವಕಲು ನಾಣ್ಯ ಆಗಿದ್ದು ನಿಮಗೆಲ್ಲ ಗೊತ್ತೆ ಇದೆ. ಆದರೆ, ಚುನಾವಣಾ ಪ್ರಚಾರ ಆರಂಭವಾಗುತ್ತಿದ್ದಂತೆ ಜನರ ಸೆಳೆಯಲು ಇದೇ ಹಾಡನ್ನು ರಾಜಕಾರಣಿಗಳು ಮತ್ತೆ ಗುನುಗಲು ಶುರು ಮಾಡಿದ್ದಾರೆ.

ರಾಜ್ಯದ ವಿಪಕ್ಷ ನಾಯಕ ಆರ್.ಅಶೋಕ್‌ ಅವರು ಕಲಬುರಗಿಗೆ ಪ್ರಧಾನಿ ಮೋದಿ ಬಂದಾಗ ವೇದಿಕೆಯಲ್ಲಿ ಈ ಹಳೆ ಟ್ಯೂನ್‌ ಎಳೆದಾಡುತ್ತಿದ್ದುದು ಖುದ್ದು ಮೋದಿ ಅವರಿಗೂ ಸೋಜಿಗ ಉಂಟುಮಾಡಿತು ಎಂಬುದು ಸುಳ್ಳು ಸುದ್ದಿಯಂತೆ!‍‍

ವೇದಿಕೆ ಹತ್ತಿ ನಿಂತ ಅಶೋಕ್‌ ರಾಜ್ಯವನ್ನು ಕಾಡುತ್ತಿರುವ ಬರಗಾಲ, ನೀರಿನ ಸಂಕಷ್ಟವನ್ನು ಸಾರಿ ಹೇಳಲು, ನೀರಿಲ್ಲ, ನೀರಿಲ್ಲ... ಎಲ್ಲೆಲ್ಲೂ ನೀರಿಲ್ಲ... ಎನ್ನತೊಡಗಿದರು. 

ಸಿದ್ದರಾಮಯ್ಯ ಕಾಲಿಟ್ಟಿದ್ದೇ ಇಟ್ಟಿದ್ದು ರಾಜ್ಯದಲ್ಲಿ ಬರಗಾಲ. ನೀರಿಲ್ಲ, ನೀರಿಲ್ಲ... ಎಲ್ಲೆಲ್ಲೂ ನೀರಿಲ್ಲ, ನೀರಿಲ್ಲ... ಎಂದು ಹಾವಭಾವ ತೋರುತ್ತ ಹಾಡು ಗುನುಗಿದರು.ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ತೆಗಳುತ್ತ, ಹಿಂದೆಯೂ ಸಿದ್ದರಾಮಯ್ಯ ಇದ್ದಾಗ ಬರಗಾಲ. 

ನೀರಿಲ್ಲ, ನೀರಿಲ್ಲ. ಆಮೇಲೆ ಯಡಿಯೂರಪ್ಪ ಸಿಎಂ ಆದರು. ಆವಾಗ ಎಲ್ಲೆಲ್ಲೂ ಮಳೆ. ಮಳೆ ಎಲ್ಲಾ , ಮಳೆ ಎಲ್ಲಾ... ಎಂದು ಹೇಳುತ್ತ ಆ ಹಾಡಿಗೆ ತಮ್ಮದು ಹೊಸತೊಂದು ಸಾಲನ್ನು ಸೇರಿಸಿಬಿಟ್ಟರು.

ಇದನ್ನು ಕೇಳಿ ಜನಸ್ತೋಮ- ನೀರಿಲ್ಲ, ನೀರಿಲ್ಲ. ನಿಜ. ನಮ್‌ ಅಶೋಕಣ್ಣಂಗೆ ಬೇರೆ ಹಾಡು ಗೊತ್ತಿಲ್ಲ ಅಂತ ಮತ್ತೊಂದು ಸಾಲು ಸೇರಿಸಿಬಿಟ್ರಂತೆ!

Share this article