;Resize=(412,232))
-ಆದರ್ಶ್ ಕುಮಾರ್ ಎಚ್.ಎನ್.
ರಾಜಕೀಯ ಸಂವಹನ ತಜ್ಞ
ಸರಿಸುಮಾರು 100 ವರ್ಷಗಳ ತನ್ನ ಇತಿಹಾಸದಲ್ಲಿ ತಾನು ಎಂದೂ ಎದುರಿಸದ ಸವಾಲೊಂದನ್ನು ಆರ್.ಎಸ್.ಎಸ್ ಇಂದು ಎದುರಿಸುತ್ತಿದೆ. ಅಧಿಕಾರ ವಹಿಸಿಕೊಂಡ ತಕ್ಷಣ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅದರ ನೋದಣಿ, ಹಣಕಾಸಿನ ವ್ಯವಹಾರ ಹಾಗೂ ಆಸ್ತಿಗಳ ಕುರಿತು ಎತ್ತಿರುವ ಪ್ರಶ್ನೆಗಳಿಗೆ ಕಾನೂನಿನ ಮಾನ್ಯತೆ ಸಿಗಲಿ ಬಿಡಲಿ, ಆದರೆ ಆ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ‘ಆರ್.ಎಸ್.ಎಸ್ ತೋರುತ್ತಿರುವ ಹಿಂಜರಿಕೆ’ ಕುತೂಹಲಕಾರಿ ವಿಚಾರವಾಗಿ ಜನರನ್ನು ಮುಟ್ಟಿದೆ.
ತನ್ನ ಪ್ರೌಢಿಮೆಯ ಪಾಠವನ್ನು ಇಡೀ ದೇಶಕ್ಕೆ ಹೇಳುವ ಸಂಘಟನೆ, ಯಕಶ್ಚಿತ್ ಒಂದು ಪತ್ರಕ್ಕೆ ಉತ್ತರಿಸಲು ತೋರುತ್ತಿರುವ ಹಿಂದೇಟು ಆರ್.ಎಸ್.ಎಸ್‌ನ ಕಟ್ಟಾ ಅನುಯಾಯಿಗಳಿಗೂ ನುಗಲಾರದ ಬಿಸಿತುಪ್ಪ. ಇದಕ್ಕೆ ಮತ್ತೊಂದು ಕಾರಣ ಸಂಘ ಪರಿವಾರದ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸಿದರೆ ಅಗತ್ಯ ಪ್ರಚಾರ ಹಾಗೂ ಹೈಕಮಾಂಡ್‌ನ ಅಭಯ ಹಸ್ತ ತಮಗೆ ಸಿಕ್ಕೇಸಿಗಲಿದೆ ಎಂದು ಕಾಂಗ್ರೆಸ್‌ನ ಎರಡನೇ ಹಂತದ ನಾಯಕತ್ವಕ್ಕೆ ರವಾನೆಯಾಗಿರುವ ಸಂದೇಶ.
2019ರಲ್ಲಿ ತನ್ನ ತಂದೆ ಸೋಲು ಕಂಡ ನಂತರ 7 ವರ್ಷಗಳಿಂದ ಸತತವಾಗಿ ಪ್ರಿಯಾಂಕ್ ಖರ್ಗೆ ತೋರಿರುವ ನಿಷ್ಠೂರ ನಿಲುವು ಹಾಗೂ ಸೈದ್ಧಾಂತಿಕ ಬದ್ಧತೆ ಆರ್.ಎಸ್.ಎಸ್‌ಗೇ ನಾಚಿಕೆ ತರುವಂತದ್ದು. ಸಂಘ ಪರಿವಾರದ ರಾಜಕೀಯ ನಾಯಕರ ಅಪ್ರಬುದ್ದತೆಯನ್ನು ಜನರ ಮುಂದೆ ಬಿಚ್ಚಿಟ್ಟು ಸೈದ್ಧಾಂತಿಕ ಹೋರಾಟದ ಬದ್ಧತೆಯನ್ನು ತನ್ನ ಸಮುದಾಯಕ್ಕೆ ಯಶಸ್ವಿಯಾಗಿ ಪ್ರಿಯಾಂಕ್ ಖರ್ಗೆ ಪರಿಚಯಿಸಿ ಕೊಟ್ಟಿದ್ದಾರೆ. ಅದು ಬಿಜೆಪಿ ಸರ್ಕಾರ ತಂದಿದ್ದ ‘ಗೋ ದತ್ತು’ ಯೋಜನೆಯಲ್ಲಿ ಬಿಜೆಪಿ ಶಾಸಕರ, ನಾಯಕರ ನೀರಸ ಭಾಗವಹಿಸುವಿಕೆ ಇರಲಿ, ‘ಹಿಜಾಬ್ ನಿಷೇಧ’ ವಿಚಾರ ಮುನ್ನೆಲೆಗೆ ಬಂದಾಗ ಆರ್.ಎಸ್.ಎಸ್ ಶಾಖೆಗೆ ತಮ್ಮ ಮಕ್ಕಳನ್ನು ಕಳುಹಿಸದೇ, ಬಿಜೆಪಿಗರು ಅಮಾಯಕ ವಿದ್ಯಾರ್ಥಿಗಳ ಕೈಗೆ ಕೇಸರಿ ಶಾಲು ನೀಡಿದ್ದನ್ನು ಪ್ರಶ್ನಿಸಿದ್ದಿರಬಹುದು ಹಾಗೂ ಸಾವರ್ಕರ್ ವಿಚಾರದಲ್ಲಿ ಬಿಜೆಪಿ ನಾಯಕರು ಸದನದಲ್ಲಿ ತೋರ್ಪಡಿಸಿದ ವಿಚಾರ ಕೊರತೆಯನ್ನು ಎತ್ತಿ ಹಿಡಿದ್ದಿರಬಹುದು.
ಬಿಜೆಪಿಗರ ಸೈದ್ಧಾಂತಿಕ ದಿವಾಳಿತನವನ್ನ ಯಶಸ್ವಿಯಾಗಿ ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆ ಈಗ ಆರ್.ಎಸ್.ಎಸ್ ತನ್ನನ್ನು ನೋಂದಣಿ ಮಾಡಿಕೊಳ್ಳದಿರುವುದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಈ ನೂತನ ಹೋರಾಟಕ್ಕೆ ಬುನಾದಿ ಹಾಕಿದ್ದೂ ಮತ್ತದೇ ಬಿಜೆಪಿ ನಾಯಕರ ಅಪ್ರಬುದ್ಧತೆ ಹಾಗೂ ಆರ್.ಎಸ್.ಎಸ್‌ನ ಅತಿಯಾದ ಆತ್ಮವಿಶ್ವಾಸ. ತನ್ನ 100ನೇ ವರ್ಷದ ಸಂಭ್ರಮಾಚರಣೆಗೆ ದೇಶದಾದ್ಯಂತ ಪಥ ಸಂಚಲನ ಮಾಡುವುದಾಗಿ ಘೋಷಿಸಿದ್ದ ಆರ್.ಎಸ್.ಎಸ್, ತಾನೂ ಸಹ ಎಲ್ಲಾ ಸಂಘಟನೆಗಳಂತೆ ಪೊಲೀಸ್ ಇಲಾಖೆಯ ಅನುಮತಿ ಪಡೆದೇ ಈ ಕೆಲಸ ಮಾಡಬೇಕು ಎಂಬುದನ್ನು ಮರೆತಂತಿತ್ತು. ಈ ಮರೆವು ಇಂದು ನಿನ್ನೆಯದ್ದಲ್ಲ, ಇತಿಹಾಸದಲ್ಲೇ ತನ್ನ ಪಥ ಸಂಚಲವನ್ನು ಯಾರೂ ತಡೆದು ನಿಲ್ಲಿಸಿದ ಉದಾಹರಣೆ ಆರ್.ಎಸ್.ಎಸ್‌ಗೆ ಇರಲಿಲ್ಲ. ಆ ಅತಿಯಾದ ಆತ್ಮವಿಶ್ವಾಸ, ಚಿತ್ತಾಪುರದಲ್ಲಿ ಪೊಲೀಸರಿಗೆ ಅವರು ‘ನಾವು 300 ಜನ ನಮಗೆ ಬೇಕಾದ ರಸ್ತೆಯಲ್ಲಿ ಪಥ ಸಂಚಲನ ಮಾಡುತ್ತೇವೆ, ಇದು ನಿಮ್ಮ ಮಾಹಿತಿಗಾಗಿ’ ಎಂದು ಪತ್ರ ನೀಡಿಸುವ ಕೆಲಸ ಮಾಡಿಸಿತ್ತು.
ಚಿಕ್ಕ ಗೃಹ ಪ್ರವೇಶ ಮಾಡಿದರೂ ಪುರಸಭೆ ಅನುಮತಿ ಪಡೆಯಬೇಕು ಅನ್ನುವ ನಿಯಮ ಇರುವಾಗ, ಲಾಠಿ ಹಿಡಿದು ರಸ್ತೆಯಲ್ಲಿ ಪಥಸಂಚಲನ ಮಾಡುವುದಕ್ಕೆ ಸರ್ಕಾರದ ಅನುಮತಿ ಪಡೆದು ಕಾರ್ಯಕ್ರಮ ಮಾಡಬೇಕಾದವರು, ‘ನಿಮ್ಮ ಮಾಹಿತಿಗಾಗಿ’ ಎಂದು ಕೊಟ್ಟರೆ ಹೇಗೆ? ಎಂದು, ಆ ಪಥ ಸಂಚಲನವನ್ನು ಅಂದು ತಡೆದು ನಿಲ್ಲಿಸಲಾಗಿತ್ತು. ಅದು ಸ್ಟೇಷನ್ ಮಟ್ಟದಲ್ಲಿಯೇ ಸರಿ ಹೋಗಬಹುದಾದ ಚಿಕ್ಕ ವಿಚಾರವಾದರೂ ಅಂದಿನ ಬಿಜೆಪಿ ನಾಯಕರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರ ಪರಿಣಾಮ ಅದು ಹೈಕೋರ್ಟ್ ಕಟಕಟೆಗೆ ಏರಿತ್ತು. ಕೋರ್ಟ್ ಕೂಡ ಆರ್.ಎಸ್.ಎಸ್, ಸ್ಥಳೀಯ ಆಡಳಿತದ ನಿರ್ಧಾರದ ಪ್ರಕಾರ ಅನುಮತಿ ಪಡೆದೇ ಮಾಡಬೇಕು ಎಂದು ಆದೇಶಿಸಿತು.
ಅಂದು ಚಿತ್ತಾಪುರದಲ್ಲಿ ನಡೆದ ಪಥಸಂಚಲನ ಆರ್.ಎಸ್.ಎಸ್‌ದಾಗಿದ್ದಾದರೂ, ಅದರಲ್ಲಿ ಯಾರು ಭಾಗವಹಿಸಬೇಕು, ಎಷ್ಟು ಜನ ಭಾಗವಹಿಸಬೇಕು, ಆ ಪಥಸಂಚಲನ ಯಾವ ರಸ್ತೆಯಲ್ಲಿ ಸಾಗಬೇಕು, ಅದು ಯಾವ ದಿನ ನಡೆಯಬೇಕು ಎಲ್ಲವನ್ನೂ ತೀರ್ಮಾನಿಸಿದ್ದು ಚಿತ್ತಾಪುರದ ಸ್ಥಳೀಯ ಆಡಳಿತ ಯಂತ್ರ, ಅರ್ಥಾತ್ ಪ್ರಿಯಾಂಕ್ ಖರ್ಗೆ.
ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ಮೋಹನ್ ಭಾಗವತ್ ಅವರಿಗೆ, ಅದಕ್ಕೆ ಉತ್ತರಿಸುವುದು ಬಿಡುವುದು ಆರ್‌ಎಸ್‌ಎಸ್ ಸಂಘಟನೆಗೆ ಬಿಟ್ಟ ವಿಚಾರ, ಪ್ರಶ್ನೆ ಮಾಡುವುದನ್ನೇ ಮಹಾಪರಾಧ ಎನ್ನುವಂತೆ ಬಿಂಬಿಸುವ ಬಿಜೆಪಿ ನಾಯಕರ ವರ್ತನೆ, ಈಗಾಗಲೇ ಜನರ ಮನಸ್ಸಲ್ಲಿ ಸೃಷ್ಟಿ ಆಗಿರುವ ಅನುಮಾನದ ಹುತ್ತಕ್ಕೆ ಮತ್ತಷ್ಟು ಹಾಲೆರೆದಂತೆ. ಚಿಕ್ಕ ವಿಚಾರಗಳನ್ನು ಅನಗತ್ಯವಾಗಿ ದೊಡ್ಡದಾಗಿಸಿದ್ದ ಬಿಜೆಪಿ ನಾಯಕರ ಅಪ್ರಬುದ್ಧ ಪ್ರಸಂಗಗಳೇ ಇಂದು ‘ಆರ್.ಎಸ್.ಎಸ್ ಪ್ರಶ್ನಾತೀತ ಆಗಿದ್ದು ಹೇಗೆ?’ ಎಂಬ ಚರ್ಚೆಗೆ ನಾಂದಿ ಹಾಡಿರುವಂತಿದೆ. ದೇಶಪ್ರಮಿಗಳು ದೇಶದ ಕಾನೂನು ತಮಗೆ ಅನ್ವಯಿಸುವುದಿಲ್ಲ ಎನ್ನುತ್ತಿರುವುದೇಕೆ? ಕಾನೂನಿನ ಲೋಪದೋಷ ಮುಂದಿಟ್ಟು ನಮಗೆ ನೋಂದಣಿ ಮಾಡುವ ಅಗತ್ಯವಿಲ್ಲ ಎನ್ನುವ ಭಂಡತನ ತೋರುವ ಪ್ರಮೇಯ ಸೃಷ್ಟಿಸಿರುವುದೇಕೆ? ಎನ್ನುವ ಪ್ರಶ್ನೆಗಳು ಇಂದು ಜನಸಾಮಾನ್ಯರಲ್ಲಿ ಜನಜನಿತ.
‘ಕಾನೂನು ಸೃಷ್ಟಿ’ಯ ಭಯ:
ಹೀಗೆಲ್ಲಾ ಇರುವಾಗ, ಆರ್.ಎಸ್.ಎಸ್‌ನಲ್ಲಿ ಇಂದು ಮನೆ ಮಾಡಿರುವ ಮತ್ತೊಂದು ಆತಂಕ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರಕ್ಕೆ ತಾನು ಅಧಿಕೃತವಾಗಿ ಉತ್ತರ ನೀಡಿದರೆ ಸರ್ಕಾರಗಳಿಗೆ ಆ ಲೋಪದೋಷಗಳನ್ನು ಸರಿಪಡಿಸುವ ನೂತನ ಕಾಯ್ದೆ ಜಾರಿ ಮಾಡುವ ‘ಪ್ರಿಸಿಡೆಂಟ್’ ಸೃಷ್ಟಿಸಿದಂತಾಗುತ್ತದೆ ಎನ್ನುವ ಅಂಶ. ಆರ್.ಎಸ್.ಎಸ್‌ನ ನಾಯಕರು ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಉತ್ತರಿಸದೇ, ಅದರ ಅಗತ್ಯತೆಯನ್ನು ಪ್ರಶ್ನಿಸಿದ್ದಷ್ಟೂ ಸಲ ಅದು ಜನರಲ್ಲಿ ಸೃಷ್ಟಿ ಆಗಿರುವ ಅನುಮಾನದ ಹುತ್ತಕ್ಕೆ ಮತ್ತೆ ಮತ್ತೆ ಹಾಲೆರೆದಂತೆ. ಬಿಜೆಪಿ ನಾಯಕರು ಆರ್.ಎಸ್.ಎಸ್ ಪ್ರಶ್ನಾತೀತ, ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲಾ ಎಂದಷ್ಟೂ ಅವರ ಅಹಂ ಪ್ರದರ್ಶಿಸಿದಂತೆ. ಈ ಎಲ್ಲಾ ಕಾರಣಗಳಿಗಾಗಿಯೇ, ಹತ್ತಾರು ಸುಪ್ರೀಂ ಕೋರ್ಟ್, ಹೈಕೋರ್ಟ್ ಹಿರಿಯ ವಕೀಲರನ್ನು ಪತ್ರಿಕಾ ಲೇಖನಗಳ ಮೂಲಕ ತನ್ನ ಸಮರ್ಥಿಸಿಕೊಳ್ಳಲು ಮುಂದೆ ಬಿಟ್ಟಿರುವುದು ಆರ್.ಎಸ್.ಎಸ್‌ನಲ್ಲಿ ಮನೆ ಮಾಡಿರುವ ‘ಭಯ’ಕ್ಕೆ ಜೀವಂತ ಉದಾಹರಣೆಗಳು.