ಮಂಡ್ಯ ಬಿಟ್ಟು ಬೇರೆ ಕ್ಷೇತ್ರದ ಆಫರ್ ಒಪ್ಪೋಲ್ಲ: ಸುಮಲತಾ

KannadaprabhaNewsNetwork | Updated : Nov 04 2023, 12:32 AM IST

ಸಾರಾಂಶ

ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಈ ಮಾತನ್ನು ನೂರಾರು ಬಾರಿ ಹೇಳಿದ್ದೇನೆ. ಇನ್ನು ರಕ್ತದಲ್ಲಿ ಬರೆದುಕೊಡಬೇಕಾ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದರು.
ನೂರಾರು ಬಾರಿ ಹೇಳಿರುವೆ, ಇನ್ನು ರಕ್ತದಲ್ಲಿ ಬರೆದುಕೊಡಬೇಕಾ? । ರಾಜಕಾರಣದಲ್ಲಿ ಸವಾಲಿಗೆ ಹೆದರುವ ಸ್ವಭಾವ ನನ್ನದಲ್ಲ ಕನ್ನಡಪ್ರಭ ವಾರ್ತೆ ಮಂಡ್ಯ ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಈ ಮಾತನ್ನು ನೂರಾರು ಬಾರಿ ಹೇಳಿದ್ದೇನೆ. ಇನ್ನು ರಕ್ತದಲ್ಲಿ ಬರೆದುಕೊಡಬೇಕಾ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದರು. ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮಂಡ್ಯ ಸೊಸೆ, ಯಾವತ್ತಿಗೂ ಮಂಡ್ಯ ನನ್ನ ರಾಜಕೀಯ ಕ್ಷೇತ್ರ. ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ. ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಹೋಗೋಲ್ಲ ಎಂದು ಪುನರುಚ್ಚರಿಸಿದರು. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಆಫರ್ ನೀಡಿದ್ದರು. ಅದನ್ನು ನಾನು ನಿರಾಕರಿಸಿದ್ದೆ. ಮಂಡ್ಯ ಕ್ಷೇತ್ರವನ್ನೇ ಪ್ರತಿನಿಧಿಸಲು ನಿರ್ಧರಿಸಿದೆ. ನನ್ನ ನಿರೀಕ್ಷೆಯಂತೆ ಲೋಕಸಭೆಯಲ್ಲಿ ಸ್ಥಾನಮಾನ ಕೊಟ್ಟಿದ್ದು ಮಂಡ್ಯ ಜನರು. ಮುಂದೆಯೂ ಬೇರೆ ಕ್ಷೇತ್ರದ ಆಫರ್‌ನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಂಡ್ಯ ಜಿಲ್ಲೆ ರಾಜಕಾರಣ ಯಾವಾಗಲೂ ಸವಾಲೇ. ಆದರೆ, ಸವಾಲಿಗೆ ಹೆದರುವ ಸ್ವಭಾವ ನನ್ನದಲ್ಲ. ರಾಜಕಾರಣ ಬಿಟ್ಟರೂ ನಾನು ನಂಬಿರುವ ಸ್ವಾಭಿಮಾನ, ಸಿದ್ದಾಂತ ಬಿಡಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ, ನನಗೆ ಆ ವಿಶ್ವಾಸವಿದೆ. ಈ ಕ್ಷೇತ್ರ ಬೇಕು, ಆ ಕ್ಷೇತ್ರ ಬೇಕು ಎಂದು ಯಾವ ಪಕ್ಷವನ್ನು ಯಾವಾಗಲೂ ಕೇಳಿಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ ಎಂದು ನುಡಿದರು. ಜೆಡಿಎಸ್ ಬಿಜೆಪಿ ಮೈತ್ರಿ ಕುರಿತು ಪ್ರತಿಕ್ರಿಯಿಸಿ, ಜೆಡಿಎಸ್-ಬಿಜೆಪಿ ಮೈತ್ರಿ ನಿರ್ಧಾರ ಆಗಿದೆ. ಅದರ ರೂಪುರೇಷೆಗಳು ಹೇಗಿರುತ್ತದೆ, ಕ್ಷೇತ್ರ ಹಂಚಿಕೆ ಆಗಬೇಕಿದೆ. ಅದಕ್ಕೆ ಮುನ್ನವೇ ಈಗ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡುವುದಿಲ್ಲ. ನಾನು ದುಡುಕಿನ ನಿರ್ಧಾರ ಮಾಡುವುದಿಲ್ಲವೆಂದು ಖಡಕ್ಕಾಗಿ ಹೇಳಿದರು. ಕ್ಷೇತ್ರ ಹಂಚಿಕೆ ಬಗ್ಗೆ ಸಂಬಂಧ ವರಿಷ್ಠರ ಸಮ್ಮುಖದಲ್ಲಿ ಅನೇಕ ಬಾರಿ ಮಾತುಕತೆ ನಡೆದಿರಬಹುದು. ಆದರೆ, ಇನ್ನು ಸ್ಪಷ್ಟ ನಿರ್ಧಾರಕ್ಕೆ ಯಾರೂ ಬಂದಿಲ್ಲ. ಮೈತ್ರಿ ಕುರಿತಂತೆ ಈಗ ಏನೇ ಮಾತನಾಡಿದರೂ ಅರ್ಥವಿರುವುದಿಲ್ಲ ಎಂದು ಆ ವಿಷಯವಾಗಿ ಮಾತು ಮುಂದುವರೆಸಲು ನಿರಾಕರಿಸಿದರು. ಸಿಎಂ ಬದಲಾವಣೆ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅದು ಅವರವರ ಪಕ್ಷದ ಆಂತರಿಕ ವಿಚಾರ. ನಾನು ಕಮೆಂಟ್ ಮಾಡುವುದಿಲ್ಲ. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಹಾಗೂ ನೀರಿನ ಸಮಸ್ಯೆ ಇದೆ. ಅನುದಾನ ಸಿಗದ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಕೊಟ್ಟರೆ ಅಭಿವೃದ್ಧಿ ಕೆಲಸ ಆಗಲ್ಲ ಎಂದು ಮೊದಲೇ ಹೇಳಿದ್ದೆವು. ಚುನಾವಣೆ ಗೆಲ್ಲುವ ಉದ್ದೇಶದಿಂದ ಬರೀ ಫ್ರೀ ಫ್ರೀ ಎಂದು ಕೊಟ್ಟರೆ ತೊಂದರೆ ಆಗುತ್ತದೆ. ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಎಲ್ಲಿಂದ ತರ್ತೀರಾ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಹುಟ್ಟಿಹಾಕಲಾಗುವುದಿಲ್ಲ. ಇರುವುದರಲ್ಲೇ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರ ಕೂಡ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲನ್ನು ಎದುರಿಸುತ್ತಿದೆ ಎಂದರು.

Share this article