ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ‘ಕಾಂಗ್ರೆಸ್‌ ಕುಟುಂಬ’

KannadaprabhaNewsNetwork | Updated : May 28 2024, 04:05 AM IST

ಸಾರಾಂಶ

ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲವರ್ಧನೆಗಾಗಿ ‘ಕಾಂಗ್ರೆಸ್ ಕುಟುಂಬ’ ಎಂಬ ಹೊಸ ಕಾರ್ಯಕ್ರಮ ರೂಪಿಸಲು ನಿರ್ಧರಿಸಿದ್ದು, ಜೂ.1 ರಂದು ಪಕ್ಷದ ಪದಾಧಿಕಾರಿಗಳ ಸಭೆ ಕರೆದು ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು :  ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲವರ್ಧನೆಗಾಗಿ ‘ಕಾಂಗ್ರೆಸ್ ಕುಟುಂಬ’ ಎಂಬ ಹೊಸ ಕಾರ್ಯಕ್ರಮ ರೂಪಿಸಲು ನಿರ್ಧರಿಸಿದ್ದು, ಜೂ.1 ರಂದು ಪಕ್ಷದ ಪದಾಧಿಕಾರಿಗಳ ಸಭೆ ಕರೆದು ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಪ್ರತಿ ಬೂತ್‌ನಲ್ಲೂ 50 ಮಂದಿ ಸದಸ್ಯರನ್ನು ಒಳಗೊಂಡ ‘ಕಾಂಗ್ರೆಸ್‌ ಕುಟುಂಬ’ ರೂಪಿಸಿ ಬೂತ್‌ ಹಾಗೂ ಗ್ರಾಮಗಳಲ್ಲಿ ಯಾವುದೇ ಕಾರ್ಯಕ್ರಮ ಆದರೂ 50 ಮಂದಿ ಸದಸ್ಯರು ಸೇರಿ ತೀರ್ಮಾನ ಮಾಡುವಂತಾಗಬೇಕು. ಯಾರು ಎಷ್ಟೇ ದೊಡ್ಡ ನಾಯಕರಾದರೂ ಈ ಜವಾಬ್ದಾರಿ ತೆಗೆದುಕೊಂಡು ಕಾಂಗ್ರೆಸ್ ಕುಟುಂಬವನ್ನು ಬೆಳೆಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಸೋಮವಾರ ನಡೆದ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೂನ್ 1ರಂದು ಪಕ್ಷದ ಪದಾಧಿಕಾರಿಗಳ ಸಭೆ ಕರೆದಿದ್ದು ‘ಕಾಂಗ್ರೆಸ್ ಕುಟುಂಬ’ ಎಂಬ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ ಮಾಡಬೇಕು. ಇದಕ್ಕೆ ನೀವೆಲ್ಲಾ ಸಜ್ಜಾಗಬೇಕು ಎಂದು ಕರೆ ನೀಡಿದರು.

ತಿಂಗಳಿಗೊಮ್ಮೆ ಸಿಎಂ, ಡಿಸಿಎಂ ಕಾಂಗ್ರೆಸ್‌ ಕಚೇರಿಗೆ ಭೇಟಿ ಇನ್ನು ಪ್ರತಿ ತಿಂಗಳಿಗೊಮ್ಮೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಂದ ಒಂದು ದಿನ ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡುವ ಕೆಲಸ ಆಗಲಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಈ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ಮಾಡಿದ್ದು, ಪ್ರತಿ ತಿಂಗಳು ಒಂದು ದಿನ ಕಾಂಗ್ರೆಸ್ ಕಚೇರಿಯಲ್ಲಿ ಕೂತು ಕಾರ್ಯಕರ್ತರನ್ನು ಭೇಟಿ ಮಾಡುವ ಕೆಲಸ ಮಾಡಲಿದ್ದೇವೆ. ಇದನ್ನು ಸರಿಯಾದ ವ್ಯವಸ್ಥೆ ಮೂಲಕ ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕೇವಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇನ್ನು ಮಂತ್ರಿಗಳು ವಾರ ಮುಂಚಿತವಾಗಿ ದಿನಾಂಕ ನಿಗದಿ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ಸೂಚನೆ ನೀಡಿದರು.

ಎಷ್ಟೋ ಬಾರಿ ಕಾರ್ಯಕರ್ತರು ನಮ್ಮನ್ನು ಭೇಟಿ ಮಾಡಲು ದೂರದ ಊರುಗಳಿಂದ ಬರುತ್ತಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಆಗುವುದಿಲ್ಲ. ಪ್ರಮುಖರನ್ನೇ ಮೊದಲು ಕರೆದು ಮಾತನಾಡಿಸುತ್ತೇವೆ. ಇದರಿಂದ ನಮಗೂ ಮುಜುಗರವಾಗುತ್ತದೆ. ನಮ್ಮನ್ನು ವಿಧಾನಸೌಧದಲ್ಲಿ ಕೂರಿಸಿದವರ ಜತೆ ನಮಗೆ ಮಾತನಾಡಲು ಆಗುವುದಿಲ್ಲ. ಹೀಗಾಗಿ ಈ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

10 ವರ್ಷ ಪೂರೈಸಿದವರು ಅಧಿಕಾರ ಬಿಡಿ:

ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್‌ನಲ್ಲಿ ಯಾರೆಲ್ಲಾ 2 ಅವಧಿ ಹಾಗೂ 10 ವರ್ಷಗಳ ಅಧಿಕಾರ ಮಾಡಿದ್ದಾರೋ ಅವರು ಅಧಿಕಾರ ಬಿಟ್ಟುಕೊಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಜತೆಗೆ ಎಲ್ಲರೂ ಒಟ್ಟಾಗಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ ಎದುರಿಸಬೇಕು. ನಮ್ಮ ಪಕ್ಷ ಆರಕ್ಕೆ ಆರು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಆಮೂಲಕ ಮೇಲ್ಮನೆಯಲ್ಲಿ ನಮಗೆ ಬಹುಮತ ಸಿಗಬೇಕು. ಆಗ ಮಾತ್ರ ಮಸೂದೆಗಳು ಪಾಸಾಗುತ್ತವೆ ಎಂದು ಕರೆ ನೀಡಿದರು.

ಹಳೆ ಜೆಡಿಎಸ್‌ ಕಚೇರಿ ಕೆಡವಿ ಹೊಸ ಕಾಂಗ್ರೆಸ್ ಭವನ: ಡಿಸಿಎಂ

ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್‌ ಭವನ (ಹಳೆ ಜೆಡಿಎಸ್‌ ಕಚೇರಿ) ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡುತ್ತೇವೆ. ಜತೆಗೆ ಪ್ರತಿ ಜಿಲ್ಲೆಯಲ್ಲೂ ಒಂದು ವರ್ಷದಲ್ಲಿ ಕಾಂಗ್ರೆಸ್‌ ಕಚೇರಿ ನಿರ್ಮಾಣ ಮಾಡಲು ಅಡಿಪಾಯ ಹಾಕುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಇದರ ಹೊಣೆ ಹೊರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

Share this article