ಬೆಂಗಳೂರು : ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) 2026ರ ಐಪಿಎಲ್‌ನಲ್ಲಿ ಎಂದಿನಂತೆ ಚಿನ್ನಸ್ವಾಮಿ ಕ್ರೀಡಾಂಗಣವನ್ನೇ ತನ್ನ ತವರು ಮೈದಾನವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಕಳೆದ ವರ್ಷ ಜೂ.4ರ ಕಾಲ್ತುಳಿತ ಪ್ರಕರಣದ ಬಳಿಕ ಶುರುವಾಗಿದ್ದ ಅನಿಶ್ಚಿತತೆ ದೂರವಾಗಿದೆ.

ಉದ್ಘಾಟನಾ ಪಂದ್ಯ ಸೇರಿ ಗುಂಪು ಹಂತದ 5 ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ನಿರ್ಧರಿಸಿರುವ ಆರ್‌ಸಿಬಿ, ಉಳಿದ 2 ಪಂದ್ಯಗಳನ್ನು ರಾಯ್ಪುರದ ವೀರ್‌ ನಾರಾಣಯ ಸಿಂಗ್‌ ಕ್ರೀಡಾಂಗಣದಲ್ಲಿ ಆಡುವುದಾಗಿ ಮಂಗಳವಾರ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.

ಇದರೊಂದಿಗೆ ಪ್ಲೇ-ಆಫ್‌ ಹಂತದಲ್ಲಿ 1 ಪಂದ್ಯ (ಬಹುತೇಕ ಕ್ವಾಲಿಫೈಯರ್‌-2) ಹಾಗೂ ಫೈನಲ್‌ ಪಂದ್ಯವನ್ನು ಬೆಂಗಳೂರಲ್ಲೇ ನಡೆಸುವುದಾಗಿ ಬಿಸಿಸಿಐ ಮಾತುಕೊಟ್ಟಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ತಿಳಿಸಿದೆ.


ಲೀಗ್‌ ಹಂತದಲ್ಲಿ ಆರ್‌ಸಿಬಿಯ ಯಾವ್ಯಾವ ಪಂದ್ಯಗಳು ಬೆಂಗಳೂರಲ್ಲಿ, ಯಾವ ಪಂದ್ಯಗಳು ರಾಯ್ಪುರದಲ್ಲಿ ನಡೆಯಲಿದೆ ಎನ್ನುವುದು ಐಪಿಎಲ್‌ ವೇಳಾಪಟ್ಟಿ ಪ್ರಕಟಗೊಂಡ ಬಳಿಕವಷ್ಟೇ ತಿಳಿಯಲಿದೆ.

ಕಾಲ್ತುಳಿತ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪ್ರಮುಖ ಪಂದ್ಯಗಳು ನಡೆದಿಲ್ಲ. ಮಹಿಳಾ ಏಕದಿನ ವಿಶ್ವಕಪ್‌, ಡಬ್ಲ್ಯುಪಿಎಲ್‌, ವಿಜಯ್‌ ಹಜಾರೆ, ರಣಜಿ ಟ್ರೋಫಿ ಪಂದ್ಯಗಳು ಮಾತ್ರವಲ್ಲದೇ, ಕೆಎಸ್‌ಸಿಎ ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯೂ ಆಯೋಜನೆಗೊಂಡಿರಲಿಲ್ಲ. ಕಳೆದ 8 ತಿಂಗಳಿಂದ ಕ್ರಿಕೆಟ್‌ ಚಟುವಟಿಕೆಗಳಿಲ್ಲದೆ ಸ್ತಬ್ಧವಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣ ಸದ್ಯದಲ್ಲೇ ಕ್ರಿಕೆಟ್‌ ಅಭಿಮಾನಿಗಳಿಗೆ ಮತ್ತೆ ತೆರೆಯಲಿದೆ.

‘ಬೆಂಗಳೂರಿಗೆ ಕ್ರಿಕೆಟ್‌ ಮರಳಬೇಕು ಎನ್ನುವ ಏಕೈಕ ಗುರಿಯೊಂದಿಗೆ ನೂರಾರು ಜನರ ನಿರಂತರ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಲಿದೆ. ಅಗತ್ಯ ಸಲಹೆ, ಮಾರ್ಗದರ್ಶನ, ಬೆಂಬಲ ನೀಡಿದ ಕರ್ನಾಟಕ ಸರ್ಕಾರ, ಕೆಎಸ್‌ಸಿಎ, ಕರ್ನಾಟಕ ಪೊಲೀಸ್‌ ಇಲಾಖೆ ಹಾಗೂ ಬೆಂಗಳೂರಿಗೆ ಕ್ರಿಕೆಟ್‌ ಮರಳುವಂತೆ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇವೆ’ ಎಂದು ಆರ್‌ಸಿಬಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.

‘ಚಿನ್ನಸ್ವಾಮಿ ಕ್ರೀಡಾಂಗಣ ಕೇವಲ ನಮ್ಮ ತವರು ಮೈದಾನವಲ್ಲ. ನಮ್ಮ ಅಸ್ತಿತ್ವಕ್ಕೆ ಜೀವಕಳೆ ಬರುವುದೇ ಅಲ್ಲಿ. ಹೀಗಾಗಿ, ಇದೊಂದು ಐತಿಹಾಸಿಕ ದಿನ’ ಎಂದು ಆರ್‌ಸಿಬಿ ಸಿಇಒ ರಾಜೇಶ್‌ ಮೆನನ್‌ ಹೇಳಿದ್ದಾರೆ.

ಕೆಎಸ್‌ಸಿಎ ಹರ್ಷ

ಮಂಗಳವಾರ ಮಧ್ಯಾಹ್ನ ಆರ್‌ಸಿಬಿ ಅಧಿಕೃತವಾಗಿ ಬೆಂಗಳೂರಲ್ಲಿ ಆಡುವ ಬಗ್ಗೆ ಘೋಷಿಸಿದ ಬಳಿಕ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌, ಕಾರ್ಯದರ್ಶಿ ಸಂತೋಷ್‌ ಮೆನನ್‌ ಹಾಗೂ ಅಧಿಕೃತ ವಕ್ತಾರ ವಿನಯ್‌ ಮೃತ್ಯುಂಜಯ ಅವರು ಸುದ್ದಿಗೋಷ್ಠಿ ನಡೆಸಿ ಹರ್ಷ ವ್ಯಕ್ತಪಡಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರಿಕೆಟ್‌ ವಾಪಸ್‌ ತರುವ ಆಶ್ವಾಸನೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿ, ಗೆಲುವು ಸಾಧಿಸಿದ ಪ್ರಸಾದ್‌ ಬಳಗ, ಕಳೆದ ಎರಡೂವರೆ ತಿಂಗಳಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ವಿವರಿಸಿತು. ಗೆದ್ದ ದಿನದಿಂದಲೇ ಕಾರ್ಯೋನ್ಮುಖವಾದ ತಂಡದ ಮುಂದೆ ಇದ್ದ ಸವಾಲುಗಳು, ಸರ್ಕಾರದ ಜೊತೆಗಿನ ಮಾತುಕತೆ, ಆರ್‌ಸಿಬಿಯ ಮನವೊಲಿಸಲು ಕೈಗೊಂಡ ಕ್ರಮಗಳನ್ನು ಪ್ರಸಾದ್‌ರ ತಂಡ ಎಳೆ ಎಳೆಯಾಗಿ ವಿವರಿಸಿತು.

ಅತ್ಯಂತ ಸಂಭ್ರಮದ ಕ್ಷಣ

ನನ್ನ ಪಾಲಿಗೆ ಇದು ಬಹುದೊಡ್ಡ ಸಾಧನೆ. ಬಹುಶಃ ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್‌ ಟೆಸ್ಟ್‌ನಲ್ಲಿ 5 ವಿಕೆಟ್‌ ಗೊಂಚಲು (1996ರಲ್ಲಿ 5/76) ಪಡೆದಿದ್ದಕ್ಕಿಂತ ದೊಡ್ಡದು. ಆರ್‌ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಒಪ್ಪಿಕೊಂಡಿದೆ ಎಂದು ತಿಳಿಸಲು ಬಹಳ ಖುಷಿಯಾಗುತ್ತದೆ. ಸಿಎಂ, ಡಿಸಿಎಂ, ಗೃಹ ಸಚಿವರು ಸೇರಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ.

- ವೆಂಕಟೇಶ್‌ ಪ್ರಸಾದ್‌, ಕೆಎಸ್‌ಸಿಎ ಅಧ್ಯಕ್ಷ

- ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಉದ್ಘಾಟನಾ ಪಂದ್ಯ, ಫೈನಲ್‌ ಮ್ಯಾಚ್‌!

- ಆರ್‌ಸಿಬಿಯ 5 ಪಂದ್ಯಗಳು ಆಯೋಜನೆ । 8 ತಿಂಗಳ ಬಳಿಕ ಮತ್ತೆ ಕ್ರಿಕೆಟ್‌

- ಆರ್‌ಸಿಬಿ ವಿಜಯೋತ್ಸವ ವೇಳೆ ಕಳೆದ ಜೂನ್‌ನಲ್ಲಿ ಕಾಲ್ತುಳಿತ ದುರಂತ ಸಂಭವಿಸಿತ್ತು

- ಆ ಬಳಿಕ ಯಾವುದೇ ಪ್ರಮುಖ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದಿಲ್ಲ

- ಈ ವರ್ಷ ಐಪಿಎಲ್‌ ಪಂದ್ಯಗಳು ನಡೆಯುವುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು

- ಆದರೆ ಈಗ ಉದ್ಘಾಟನಾ ಪಂದ್ಯ ಸೇರಿ ಆರ್‌ಸಿಬಿಯ ಐದು ಮ್ಯಾಚ್‌ ಬೆಂಗಳೂರಿನಲ್ಲೇ

- ಜತೆಗೆ 1 ಪ್ಲೇ ಆಫ್‌ ಹಾಗೂ ಫೈನಲ್‌ ಮ್ಯಾಚ್‌ ಅನ್ನು ನಡೆಸುವುದಾಗಿ ಬಿಸಿಸಿಐ ಭರವಸೆ

- ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌