ಬೆಂಗಳೂರು: 2ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಗೆ ಮೈಸೂರು ವಾರಿಯರ್ಸ್ ಮಹಿಳಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ತಂಡದ ನಾಯಕತ್ವವನ್ನು ರಾಜ್ಯದ ಪ್ರತಿಭಾವಂತ ಆಟಗಾರ್ತಿ ಶುಭಾ ಸತೀಶ್‌ಗೆ ವಹಿಸಲಾಗಿದೆ.
ಕರುಣಾ ಜೈನ್ ಮುಖ್ಯ ತರಬೇತುದಾರರಾಗಿ ಆಯ್ಕೆ
ಜೊತೆಗೆ ಇದೇ ವೇಳೆ ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ ಕರುಣಾ ಜೈನ್ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.ಎನ್‌ಆರ್ ಗ್ರೂಪ್ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಒಡೆತನದ ಈ ಫ್ರಾಂಚೈಸಿಯ ಉದ್ಘಾಟನಾ ಸಮಾರಂಭದಲ್ಲಿ, ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡದ ನಾಯಕಿ ದೀಪಿಕಾ ಟಿ.ಸಿ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಂಡಕ್ಕೆ ಶುಭ ಹಾರೈಸಿದರು.
ಜುಲೈ 22 ರಿಂದ ಆಗಸ್ಟ್ 2ರವರೆಗೆ
ಜುಲೈ 22 ರಿಂದ ಆಗಸ್ಟ್ 2ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದ್ದು, ಮೈಸೂರು, ಬೆಂಗಳೂರು, ಹುಬ್ಬಳ್ಳಿ ಹಾಗೂ ಗುಲ್ಬರ್ಗ ತಂಡಗಳು ಕಪ್‌ಗಾಗಿ ಸೆಣಸಾಡಲಿವೆ.ತಂಡದ ಮಾಲೀಕರು ಹಾಗೂ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ ಮಾತನಾಡಿ, "ಮೈಸೂರು ವಾರಿಯರ್ಸ್‌ನ ಉದ್ದೇಶ ಕೇವಲ ಸ್ಪರ್ಧಿಸುವುದಷ್ಟೇ ಅಲ್ಲ, ಪ್ರತಿಭಾವಂತ ಮಹಿಳಾ ಕ್ರಿಕೆಟಿಗರಿಗೆ ವೃತ್ತಿಪರ ವೇದಿಕೆಯಲ್ಲಿ ಮಿಂಚಲು ಅವಕಾಶಗಳನ್ನು ಸೃಷ್ಟಿಸುವುದಾಗಿದೆ.
ಮೊದಲ ಸೀಸನ್ ಗೆ ಸಿಕ್ಕ ಪ್ರತಿಕ್ರಿಯೆ ನಮಗೆ ಪ್ರೋತ್ಸಾಹ ನೀಡಿದ್ದು, ಈ ವರ್ಷದ ತಂಡವು ಮತ್ತಷ್ಟು ಯುವತಿಯರು ಕ್ರಿಕೆಟ್ ಕಡೆಗೆ ಆಕರ್ಷಿತರಾಗಲು ಪ್ರೇರಣೆಯಾಗಲಿದೆ ಎಂಬ ವಿಶ್ವಾಸವಿದೆ " ಎಂದು ಆಟಗಾರರಿಗೆ ಶುಭ ಹಾರೈಸಿದರು.
ಈ ವೇಳೆ ತಂಡದ ನಾಯಕಿ ಶುಭಾ ಸತೀಶ್ ಮಾತನಾಡಿ, ‘ಈ ಬಾರಿ ನಾವು ಸಂಪೂರ್ಣವಾಗಿ ಸಜ್ಜಾಗಿದ್ದು, ಕಪ್ ಗೆಲ್ಲಲು ಕಠಿಣ ತರಬೇತಿ ಪಡೆದಿದ್ದೇವೆ. ಪ್ರತಿಯೊಬ್ಬ ಆಟಗಾರ್ತಿಯೂ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಬದ್ಧರಾಗಿದ್ದು, ನಾವು ಭಯವಿಲ್ಲದ ಪಾಸಿಟಿವ್ ಕ್ರಿಕೆಟ್ ಆಡಲಿದ್ದೇವೆ. ಮಹಿಳಾ ಕ್ರಿಕೆಟ್ ಮೇಲಿಟ್ಟ ನಂಬಿಕೆಗಾಗಿ ಮ್ಯಾನೇಜ್ ಮೆಂಟ್ ಗೆ ಧನ್ಯವಾದಗಳು. ಈ ಬಾರಿ ಮೈಸೂರಿಗೆ ಟ್ರೋಫಿ ತರುವುದೇ ನಮ್ಮ ಏಕೈಕ ಗುರಿ'' ಎಂದಿದ್ದಾರೆ.