ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದ ವ್ಯಾಪಾರ ವಹಿವಾಟು, ಜನಜೀವನದ ಮೇಲೆ ಪರಿಣಾಮ ಬೀರಿದ್ದು ಮಾತ್ರವಲ್ಲದೇ, ವಿಶ್ವದ ಹಲವು ಭಾಗಗಳಲ್ಲಿ ಕ್ರೀಡಾಪಟುಗಳು, ಕ್ರೀಡಾ ಚಟುವಟಿಕೆ ಮೇಲೂ ಕಾರ್ಮೋಡ ಕವಿದಿದೆ. 

 ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದ ವ್ಯಾಪಾರ ವಹಿವಾಟು, ಜನಜೀವನದ ಮೇಲೆ ಪರಿಣಾಮ ಬೀರಿದ್ದು ಮಾತ್ರವಲ್ಲದೇ, ವಿಶ್ವದ ಹಲವು ಭಾಗಗಳಲ್ಲಿ ಕ್ರೀಡಾಪಟುಗಳು, ಕ್ರೀಡಾ ಚಟುವಟಿಕೆ ಮೇಲೂ ಕಾರ್ಮೋಡ ಕವಿದಿದೆ. ಟಿ20 ವಿಶ್ವಕಪ್‌, ಫುಟ್ಬಾಲ್‌, ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಐಪಿಎಲ್‌ ಸೇರಿದಂತೆ ವಿವಿಧ ಕ್ರೀಡೆ ಹಾಗೂ ಕೆಲ ಕ್ರೀಡಾಪಟುಗಳಿಗೆ ವೈಯಕ್ತಿಕವಾಗಿಯೂ ಸಮಸ್ಯೆ ಎದುರಾಗಿದೆ. ಇದರ ವಿವರ ಇಲ್ಲಿದೆ.

ರೊನಾಲ್ಡೋ ಆಡಬೇಕಿದ್ದ ಪಂದ್ಯವೂ ಮುಂದೂಡಿಕೆ

ಅರಬ್‌ ದೇಶಗಳ ಮೇಲೆ ಇರಾನ್‌ ದಾಳಿಯಿಂದಾಗಿ ಕೆಲ ಫುಟ್ಬಾಲ್‌ ಪಂದ್ಯಗಳು ಮುಂಡೂಡಿಕೆಯಾಗಿವೆ. ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಂಡ ಅಲ್‌-ನಸ್ರ್ ದುಬೈನಲ್ಲಿ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌-2 ಟೂರ್ನಿಯ ಪಂದ್ಯ ಆಡಬೇಕಿತ್ತು. ಟೂರ್ನಿಯ ಕೆಲ ಪಂದ್ಯಗಳನ್ನು ಮುಂದೂಡಲಾಗಿದೆ. ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ ಎಲೈಟ್‌, ಎಫ್‌ಸಿ ಚಾಲೆಂಜ್ ಲೀಗ್‌ನ ಹಲವು ಪಂದ್ಯಗಳು ಕೂಡಾ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಕತಾರ್‌ ಫುಟ್ಬಾಲ್‌ ಫೆಡರೇಷನ್‌ ಕೂಡಾ ತನ್ನೆಲ್ಲಾ ಪಂದ್ಯಗಳನ್ನು ಮುಂದೂಡಿದೆ.

ಇಂಗ್ಲೆಂಡ್‌-ಪಾಕಿಸ್ತಾನ ಕ್ರಿಕೆಟ್‌ ಮ್ಯಾಚ್‌ ರದ್ದು

ಅಬುಧಾಬಿಯಲ್ಲಿ ಪಾಕಿಸ್ತಾನ ಶಹೀನ್ಸ್ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಭಾನುವಾರ ನಡೆಯಬೇಕಿದ್ದ 2ನೇ ಅನಧಿಕೃತ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಅಭ್ಯಾಸ ಶಿಬಿರವನ್ನೂ ರದ್ದುಗೊಳಿಸಲಾಗಿದ್ದು, ಆಟಗಾರರು, ಸಹಾಯಕ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳದಲ್ಲಿರಿಸಲಾಗಿದೆ.

ಐಪಿಎಲ್‌ಗೆ ವಿದೇಶಿಗರ ಭಾರತ ಪಯಣ ವಿಳಂಬ

ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಬೇಕಿರುವ ಐಪಿಎಲ್‌ಗಾಗಿ ಕೆಲ ತಂಡಗಳು ಈಗಾಗಲೇ ಅಭ್ಯಾಸ ಶಿಬಿರ ಆರಂಭಿಸಿದೆ. ಇದಕ್ಕಾಗಿ ಕೆಲ ವಿದೇಶಿ ಆಟಗಾರರು ಭಾರತಕ್ಕೆ ಪ್ರಯಾಣಿಸುವ ಸಿದ್ಧತೆಯಲ್ಲಿದ್ದರು. ಆದರೆ ಯುದ್ಧ ಸ್ಥಿತಿ ನಿರ್ಮಾಣವಾಗಿರುವುದರಿಂದ ಅವರ ಭಾರತ ಪ್ರಯಾಣ ವಿಳಂಬಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ನಾವಿದ್ದ ಸ್ಥಳದ ಸಮೀಪವೇ ಸ್ಫೋಟವಾಯಿತು: ಸಿಂಧು!

ಇರಾನ್‌-ಇಸ್ರೇಲ್‌ ಸಂಘರ್ಷದಿಂದಾಗಿ ದುಬೈನಲ್ಲಿಯೇ ಬಾಕಿಯಾಗಿರುವ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅಲ್ಲಿನ ಕರಾಳ ಅನುಭವ ಹಂಚಿಕೊಂಡಿದ್ದಾರೆ, ‘ಕೆಲವು ಕ್ಷಣ ಆತಂಕ, ಭಯದಿಂದ ಕೂಡಿತ್ತು. ನಾವು ಏರ್ಪೋರ್ಟ್‌ನಲ್ಲಿ ಸಿಲುಕಿದ್ದ ವೇಳೆ ಸಮೀಪದಲ್ಲಿಯೇ ಸ್ಫೋಟ ಸಂಭವಿಸಿತ್ತು’ ಎಂದಿದ್ದಾರೆ.

ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಆಡಲು ಇಂಗ್ಲೆಂಡ್‌ಗೆ ತೆರಳುವ ವೇಳೆ ಸಿಂಧು ಹಾಗೂ ಅವರ ಕೋಚ್‌ ಇರ್ವಾನ್ಸಯಾ ಆದಿ ಪ್ರತಾಮ ದುಬೈನಲ್ಲಿಯೇ ಬಾಕಿಯಾಗಿದ್ದಾರೆ. ಈ ಬಗ್ಗೆ ಸಿಂಧು ಪ್ರತಿಕ್ರಿಯಿಸಿದ್ದು, ‘ನಮ್ಮ ವಿಮಾನ ದುಬೈನಲ್ಲಿ ಇಳಿದ ನಂತರ ವಾಯುಪ್ರದೇಶ ಸ್ಥಗಿತಗೊಳಿಸಲಾಗಿತ್ತು. ಕೆಲವು ಗಂಟೆ ಆತಂಕಕಾರಿಯಾಗಿತ್ತು. ಸ್ಫೋಟದ ಶಬ್ಧಗಳು ಕೇಳಿ ಬಂದಿತ್ತು. ನಾವು ಸಿಲುಕಿದ್ದ ದುಬೈ ವಿಮಾನ ನಿಲ್ದಾಣ ಸಮೀಪ ಸ್ಫೋಟ ಸಂಭವಿಸಿತ್ತು, ಅದು ಸಂಭವಿಸಿದಾಗ ಕೋಚ್‌ ಕೇವಲ 100 ಮೀ. ದೂರದಲ್ಲಿದ್ದರು’ ಎಂದು ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಎಫ್‌1 ಮೇಲೂ ಪರಿಣಾಮ

ಫಾರ್ಮುಲಾ1 ಕಾರು ರೇಸ್‌ನ ಋತು ಮುಂದಿನ ಭಾನುವಾರ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಆರಂಭಗೊಳ್ಳಬೇಕಿದೆ. ಬಳಿಕ ಬಹರೈನ್‌, ಸೌದಿಯಲ್ಲೂ ರೇಸ್‌ ನಡೆಯಬೇಕಿದೆ. ಆದರೆ ಯುದ್ಧ ಪರಿಸ್ಥಿತಿಯಿಂದಾಗಿ ಚಾಲಕರು, ಸಿಬ್ಬಂದಿ ತಮ್ಮ ಪ್ರಯಾಣ ಯೋಜನೆ ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ರೇಸ್‌ ನಿಗದಿಯಂತೆ ನಡೆಯುವ ನಿರೀಕ್ಷೆಯಿದೆ.