10 ದಿನಗಳ ಕಾಲ ಜಾಗತಿಕ ಮಟ್ಟದ ಕ್ರೀಡಾಪಟುಗಳ ಮಹಾಸಂಗಮಕ್ಕೆ ವೇದಿಕೆ ಒದಗಿಸಿಕೊಟ್ಟ 2026ರ ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ತೆರೆ ಕಂಡಿದೆ. ಸ್ಕಾಟ್ಲೆಂಡ್‌ನ ಪ್ರಸಿದ್ಧ ನಗರ ಗ್ಲಾಸ್ಗೋದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತ 13 ಚಿನ್ನ ಸೇರಿದಂತೆ ಒಟ್ಟು 39 ಪದಕ ಗೆದ್ದಿದೆ
ಗ್ಲಾಸ್ಗೋ(ಸ್ಕಾಟ್ಲೆಂಡ್): 10 ದಿನಗಳ ಕಾಲ ಜಾಗತಿಕ ಮಟ್ಟದ ಕ್ರೀಡಾಪಟುಗಳ ಮಹಾಸಂಗಮಕ್ಕೆ ವೇದಿಕೆ ಒದಗಿಸಿಕೊಟ್ಟ 2026ರ ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ತೆರೆ ಕಂಡಿದೆ. ಸ್ಕಾಟ್ಲೆಂಡ್‌ನ ಪ್ರಸಿದ್ಧ ನಗರ ಗ್ಲಾಸ್ಗೋದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತ 13 ಚಿನ್ನ ಸೇರಿದಂತೆ ಒಟ್ಟು 39 ಪದಕ ಗೆದ್ದಿದ್ದು, ಪದಕ ಪಟ್ಟಿಯಲ್ಲಿ 4ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. ಇದರೊಂದಿಗೆ ಕಾಮನ್‌ವೆಲ್ತ್ ಗೇಮ್ಸ್ ಈಗ ಸ್ಕಾಟ್ಲೆಂಡ್‌ನ ಕ್ಲೈಡ್ ನದಿ ತೀರದಿಂದ ಸಾಬರಮತಿ ನದಿ ಹರಿಯುವ ಅಹಮದಾಬಾದ್‌ನತ್ತ ಮುಖ ಮಾಡಿದೆ.
2030ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ಗೆ 100 ವರ್ಷ ತುಂಬಲಿದ್ದು, ಅದರ ಆತಿಥ್ಯ ಭಾಗ್ಯ ಭಾರತಕ್ಕೆ ಲಭಿಸಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಕ್ರೀಡಾಕೂಟ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ಭಾನುವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾರತಕ್ಕೆ ಗೇಮ್ಸ್‌ನ ಧ್ವಜ ಹಸ್ತಾಂತರ ಕೂಡಾ ನಡೆಯಿತು. ಭಾರತೀಯ ಸಂಸ್ಕೃತಿ ಬಿಂಬಿಸುವ ನೃತ್ಯ, ಸಂಗೀತ ಕಾರ್ಯಕ್ರಮಗಳೂ ನೆರವೇರಿದವು. 150ನೇ ವರ್ಷಾಚರಣೆ ಪ್ರಯುಕ್ತ ವಂದೇ ಮಾತರಂ ಗೀತೆಗೆ ಗೌರವ ಸಲ್ಲಿಸಲಾಯಿತು.
ಶ್ರೇಷ್ಠ ಪ್ರದರ್ಶನ:
2022 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿದ್ದ ಕ್ರೀಡೆಗಳ ಪೈಕಿ ಈ ಬಾರಿ ಅರ್ಧದಷ್ಟನ್ನು ಹೊರಗಿಡಲಾಗಿತ್ತು. ಬ್ಯಾಡ್ಮಿಂಟನ್, ಹಾಕಿ, ಕುಸ್ತಿ, ಕ್ರಿಕೆಟ್ ನಡೆದಿರಲಿಲ್ಲ. ಇದರ ಹೊರತಾಗಿಯೂ ಭಾರತ ಬಾಕ್ಸಿಂಗ್, ಜುಡೊ, ಅಥ್ಲೆಟಿಕ್ಸ್, ಪ್ಯಾರಾ ಗೇಮ್ಸ್, ವೇಟ್‌ಲಿಫ್ಟಿಂಗ್‌ನಲ್ಲಿ ಅತ್ಯುತ್ಯಮ ಪ್ರದರ್ಶನ ನೀಡಿದೆ. ಬಾಕ್ಸಿಂಗ್, ಜುಡೊ ವಿಭಾಗದಲ್ಲಿ ಸಾರ್ವಕಾಲಿಕ ಶ್ರೇಷ್ಠ ಪದಕ ದಾಖಲೆ ಬರೆದಿದೆ. ಶನಿವಾರ ಒಂದೇ ದಿನ 8 ಚಿನ್ನ ಸೇರಿದಂತೆ 19 ಪದಕ ಬಾಚಿ, ತನ್ನ ಸಾಮರ್ಥ್ಯ ಸಾಬೀತುಪಡಿಸಿತ್ತು.
ಆಸ್ಟ್ರೇಲಿಯಾ 69 ಚಿನ್ನ ಸೇರಿದಂತೆ 167 ಪದಕ
ಆಸ್ಟ್ರೇಲಿಯಾ 69 ಚಿನ್ನ ಸೇರಿದಂತೆ 167 ಪದಕ ಗೆದ್ದು ಮತ್ತೆ ಅಗ್ರಸ್ಥಾನಿಯಾಗಿದ್ದು, ಇಂಗ್ಲೆಂಡ್ 29 ಚಿನ್ನ ಸೇರಿದಂತೆ 109 ಪದಕ ಜಯಿಸಿ 2ನೇ ಸ್ಥಾನ ಪಡೆದುಕೊಂಡಿತು. 19 ಚಿನ್ನ ಸೇರಿ 62 ಪದಕ ತನ್ನದಾಗಿಸಿಕೊಂಡ ಕೆನಡಾ 3ನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತು.


