ಭಾರತ ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯ ಹಕ್ಕು ಪಡೆಯುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್‌ನಲ್ಲಿ ಕ್ರೀಡಾಕೂಟ ನಡೆಯಲಿದೆ.
ಗ್ಲಾಸ್ಗೋ: ಭಾರತ ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯ ಹಕ್ಕು ಪಡೆಯುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್‌ನಲ್ಲಿ ಕ್ರೀಡಾಕೂಟ ನಡೆಯಲಿದೆ. ಈ ಮೂಲಕ ಭಾರತ 2 ದಶಕಗಳ ಬಳಿಕ ಕಾಮನ್‌ವೆಲ್ತ್ ರಾಷ್ಟ್ರಗಳ ನಡುವೆ ನಡೆಯಲಿರುವ ಬಹುಕ್ರೀಡಾ ಕೂಟಕ್ಕೆ ಆತಿಥ್ಯ ವಹಿಸಲಿದೆ.
ಬುಧವಾರ ನಡೆದ ಕಾಮನ್‌ವೆಲ್ತ್ ಸ್ಪೋರ್ಟ್ಸ್‌ನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. 74 ಸದಸ್ಯರಿದ್ದ ಸಭೆಯಲ್ಲಿ ಭಾರತ ಸಲ್ಲಿಸಿದ್ದ ಉಮೇದುವಾರಿಕೆಗೆ ಸರ್ವಾನುಮತದಿಂದ ಒಪ್ಪಿಗೆ ದೊರಯಿತು. ನೈಜೀರಿಯಾದ ಅಬುಜಾ ಕೂಡ ರೇಸನ್‌ನಲ್ಲಿತ್ತು. ಆದರೆ ಅಹಮದಾಬಾದ್ ಪರ ಸದಸ್ಯರು ಒಲವು ತೋರಿದರು.
ಕಾಮನ್‌ವೆಲ್ತ್ ಗೇಮ್ಸ್‌ನ ಆತಿಥ್ಯ ಹಕ್ಕು ಸಿಕ್ಕಿರುವುದರಿಂದ 2036ರರ ಒಲಿಂಪಿಕ್ಸ್ ಆಯೋಜಿಸಬೇಕು ಎನ್ನುವ ಭಾರತದ ಕನಸಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ. 2010ರಲ್ಲಿ ಭಾರತ ಕಡೆಯದಾಗಿ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸಿತ್ತು.
ಬಹಳ ಖುಷಿಯಾಗುತ್ತಿದೆ
ಕಾಮನ್‌ವೆಲ್ತ್ ಗೇಮ್ಸ್‌ನ 100 ವರ್ಷ ತುಂಬುವ ಸಂದರ್ಭದಲ್ಲೇ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿರುವುದು ಬಹಳ ಖುಷಿ ಮೂಡಿಸಿದೆ. ಭಾರತದ ಜನ ಹಾಗೂ ದೇಶದ ಕ್ರೀಡಾ ವ್ಯವಸ್ಥೆಗೆ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮೆಲ್ಲರ ಬದ್ಧತೆ ಹಾಗೂ ಕ್ರೀಡಾ ಸ್ಫೂರ್ತಿಯಿಂದಾಗಿ ಜಾಗತಿಕ ಕ್ರೀಡಾ ಭೂಪಟದಲ್ಲಿ ಭಾರತದ ಸ್ಥಾನ ಗಟ್ಟಿಯಾಗುತ್ತಿದೆ. ಈ ಐತಿಹಾಸಿಕ ಕ್ರೀಡಾಕೂಟವನ್ನು ಬಹಳ ಉತ್ಸಾಹದಿಂದ ಆಯೋಜಿಸಿ, ಸಂಭ್ರಮಿಸಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ಸ್ಪರ್ಧಿಸುವ ಎಲ್ಲಾ ರಾಷ್ಟ್ರಗಳನ್ನು ಭಾರತಕ್ಕೆ ನಾನು ಸ್ವಾಗತಿಸುತ್ತೇನೆ.
- ನರೇಂದ್ರ ಮೋದಿ, ಪ್ರಧಾನಿ
- ಭಾರತಕ್ಕೆ ಹೆಮ್ಮೆಯ ಕ್ಷಣ
ಭಾರತವು ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ಕ್ಷಣ. ಭಾರತ 2047ರ ವೇಳೆಗೆ ಅಗ್ರ 5 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಲಿದೆ.
- ಮಾನ್ಸೂಖ್ ಮಾಂಡವೀಯ, ಕೇಂದ್ರ ಕ್ರೀಡಾ ಸಚಿವ
