ಮುರಳೀಧರ್ ಶಾಂತಳ್ಳಿ ಸೋಮವಾರಪೇಟೆ: ಇಲ್ಲಿನ ಡಾಲ್ಫಿನ್ಸ್ ಸೋರ್ಟ್ಸ್ ಕ್ಲಬ್, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ದಿ. ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಸ್ಮಾರಕ ಹಾಕಿ ಪಂದ್ಯಾವಳಿಯಲ್ಲಿ ಸ್ಥಳೀಯ ಡಾಲ್ಪೀನ್ಸ್ ಕ್ಲಬ್, ಬೇರ್ಲಿನಾಡ್, ಕೂಡಿಗೆ ಕ್ರೀಡಾ ನಿಲಯ ಮತ್ತು ಕಕ್ಕಬ್ಬೆ ಮಲ್ಮ ಸ್ಪೋರ್ಟ್ಸ್ ಕ್ಲಬ್ ತಂಡಗಳು ಸೆಮೀಫೈನಲ್ ಪ್ರವೇಶಿಸಿವೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಜರುಗಿದ ಪಂದ್ಯಾಟದಲ್ಲಿ ಕೂಡಿಗೆ ಕ್ರೀಡಾ ನಿಲಯ ತಂಡ ಮಡಿಕೇರಿಯ ಚಾರ್ಮರ್ಸ್ ತಂಡವನ್ನು ೧-೦ ಗೋಲುಗಳಿಂದ ಮಣಿಸಿ ಮೊದಲ ತಂಡವಾಗಿ ಸೆಮಿಸ್ ಪ್ರವೇಶಿಸಿತು. ಕೂಡಿಗೆ ಕ್ರೀಡಾ ನಿಲಯ ತಂಡದ ಪರ ವಿಶ್ವಜಿತ್ ಗೋಲು ಗಳಿಸಿದರು.ಕಕ್ಕಬ್ಬೆಯ ಮಲ್ಮ ತಂಡವು ಕೋಣನಕಟ್ಟೆಯ ತಂಡವನ್ನು ಪೆನಾಲ್ಟಿ ಷೂಟ್ ಔಟ್ ನಲ್ಲಿ ಮಣಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಎರಡು ತಂಡಗಳು ಪಂದ್ಯ ಮುಗಿದಾಗ ೪-೪ ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿದ್ದವು. ಮಲ್ಮ ತಂಡದ ಪರವಾಗಿ ಅದ್ಭುತ ಆಟ ಪ್ರದರ್ಶಿಸಿದ ರಜಂತ್ ಮತ್ತು ನಿತೇಶ್ ತಲಾ ೨ ಗೋಲುಗಳನ್ನು ಬಾರಿಸಿದರು. ಕೋಣನಕಟ್ಟೆ ತಂಡದ ಪರವಾಗಿ ಪ್ರಧಾನ್ ಸೋಮಣ್ಣ ೨, ಚೇತನ್ ಮತ್ತು ಸೋಮಯ್ಯ ತಲಾ ಒಂದು ಗೋಲುಗಳನ್ನು ಗಳಿಸಿದರು. ಅಂತಿಮವಾಗಿ ಪೆನಾಲ್ಟಿ ಷೂಟ್ ನಲ್ಲಿ ೩-೧ ಗೋಲುಗಳಿಂದ ಮಲ್ಮ ತಂಡ ಗೆಲುವು ಸಾಧಿಸಿತು.ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ಬೇರ್ಲಿನಾಡು ತಂಡವು ಕುಂದ ತಂಡವನ್ನು ೭-೨ ಗೋಲುಗಳ ಭಾರೀ ಅಂತರದಲ್ಲಿ ಜಯಶಾಲಿಯಾಯಿತು. ಮಿಂಚಿನ ಆಟ ಪ್ರದರ್ಶಿಸಿದ ಮಹಮ್ಮದ್ ರಾಹಿಲ್ ಮತ್ತು ವಿನೇಶ್ ಪೂವಣ್ಣ ತಲಾ ೨ಗೋಲುಗಳನ್ನು ಬಾರಿಸುವ ಮೂಲಕ ಗಮನಸೆಳೆದರು. ಉಳಿದಂತೆ ನಮನ್, ಧನುಷ್, ವೆಂಕಟೇಶ್ ಕಂಜಿ ತಲಾ ಒಂದು ಗೋಲುಗಳನ್ನು ಗಳಿಸಿದರು.
ಮಧ್ಯಾಹ್ನದ ನಂತರ ನಡೆದ ಪಂದ್ಯದಲ್ಲಿ ಸ್ಥಳೀಯ ತಂಡವಾದ ಡಾಲ್ಫೀನ್ಸ್ ಕ್ಲಬ್ ತಂಡವು ಅಂಜಿಗೇರಿನಾಡ್ ತಂಡವನ್ನು ೪-೩ ಗೋಲುಗಳಿಂದ ಮಣಿಸುವ ಮೂಲಕ ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. ಡಾಲ್ಫಿನ್ಸ್ ತಂಡದ ಪರವಾಗಿ ಅಂತಾರಾಷ್ಟ್ರೀಯ ಆಟಗಾರ ಆಭರಣ್ ಸುದೇವ್ ೨, ತ್ರಿಶೂಲ್ ೧ ಹಾಗೂ ಶ್ರೀಜಿತ್ ೧ ಗೋಲುಗಳನ್ನು ಗಳಿಸಿದರು. ಅಂಜಿಗೇರಿನಾಡ್ ತಂಡದ ಪರವಾಗಿ ರಿಷಬ್ ೩ ಗೋಲುಗಳನ್ನು ಗಳಿಸುವ ಮೂಲಕ ಕ್ರೀಡಾಕೂಟದಲ್ಲಿ ಪ್ರಥಮ ಹ್ಯಾಟ್ರಿಕ್ ಗಳಿಸಿದರೂ ಕೂಡ ಅಂತಿಮವಾಗಿ ಡಾಲ್ಪಿನ್ಸ್ ತಂಡದ ಎದುರು ಸೋಲನುಭವಿಸಬೇಕಾಯಿತು. ಮ್ಯಾಚ್ ರೆಫರಿಗಳಾಗಿ ಬೊಳ್ಳಚಂಡ ನಾಣಯ್ಯ, ದೀಕ್ಷಿತ್, ಅಯ್ಯಪ್ಪ, ವಿನೋದ್ ಜೆಸಿಬಿ, ಪೊನ್ನಣ್ಣ, ಸುಪ್ರೀತ್ ವಹಿಸಿದ್ದರು.ಇಂದು ಸೆಮಿಫೈನಲ್ ಪಂದ್ಯಾಟ: ಶನಿವಾರ ನಡೆಯುವ ಕೂಡಿಗೆ ಕ್ರೀಡಾ ನಿಲಯ ತಂಡವು ಬೇರ್ಲಿನಾಡ್ನ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ತಂಡಗಳು ನಡುವೆ ಪ್ರಥಮ ಸೆಮಿಫೈನಲ್ ಪಂದ್ಯ ಮತ್ತು ಎರಡನೇ ಸೆಮಿಫೈನಲ್ ಪಂದ್ಯವು ಡಾಲ್ಪೀನ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಕ್ಕಬ್ಬೆಯ ಮಲ್ಮ ತಂಡಗಳ ನಡುವೆ ನಡೆಯಲಿದೆ. ಗುರುವಾರ ಪ್ರಾರಂಭವಾದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ಮಾಜಿ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕ್ರೀಡಾಜಿಲ್ಲೆ ಕೊಡಗಿನಲ್ಲಿ ಕ್ರೀಡಾಂಗಣಗಳ ಸಮಸ್ಯೆ ಇದ್ದ ಸಂದರ್ಭ ತಾವು ಕ್ರೀಡಾ ಸಚಿವನಾಗಿದ್ದೆ. ಅಂದು ಸೋಮವಾರಪೇಟೆ, ಕೂಡಿಗೆ ಕ್ರೀಡಾಶಾಲೆ ಹಾಗೂ ಪೊನ್ನಂಪೇಟೆ ಕ್ರೀಡಾ ಶಾಲೆಯ ಮೈದಾನಕ್ಕೆ ೧೬ ಕೋಟಿ ರು. ವೆಚ್ಚದ ಸಿಂಥೆಟಿಕ್ ಟರ್ಫ್ ಮೈದಾನಕ್ಕೆ ಅನುದಾನ ಕಲ್ಪಿಸಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದ ಮೈದಾನಗಳು ಕ್ರೀಡಾಪಟುಗಳಿಗೆ ದೊರಕುವಂತಾಯಿತು ಎಂದು ಸ್ಮರಿಸಿದರು.ಟ್ರೋಫಿ ಮತ್ತು ನಗದು ದಾನಿಗಳಾದ ಬಿ.ಆರ್. ವೇಣು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಹಾಕಿ ಪಂದ್ಯಾಟಗಳು ನಡೆದಿರಲಿಲ್ಲ. ಈ ನಿಟ್ಟಿನಲ್ಲಿ ಪಂದ್ಯಾಟ ಆಯೋಜನೆ ಮಾಡಲಾಗಿದೆ. ಇಂತಹ ಕ್ರೀಡಾಕೂಟಗಳು ಸಾಕಷ್ಟು ಯುವ ಪ್ರತಿಭೆಗಳ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಲ್ಫಿನ್ಸ್ ಕ್ಲಬ್ ಅಧ್ಯಕ್ಷ ಎಂ.ಈ. ಮಹೇಶ್ ವಹಿಸಿದ್ದರು. ವೇದಿಕೆಯಲ್ಲಿ ದಾನಿಗಳಾದ ಲಲಿತಾ ರಂಗಸ್ವಾಮಿ, ಬಿ.ಆರ್. ವಿನಯ್, ಬಿ.ಆರ್. ವಿಜಯ್, ಹಿರಿಯ ಹಾಕಿ ಆಟಗಾರರಾದ ಬಿ.ಕೆ. ಹಾಲಪ್ಪ, ಜೈಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಇ. ಈರಪ್ಪ, ಮಾಜಿ ಯೋಧ ಎಂ.ಪಿ. ಪೂವಯ್ಯ ಉಪಸ್ಥಿತರಿದ್ದರು. ಅದೃಷ್ಟವಂಚಿತ ಕೂರ್ಗ್ ಚಾಲೆಂಜರ್ಸ್: ಮೈಮರೆತ ಗೋಲ್ ಕೀಪರ್ ಸೋಮಣ್ಣ ಗುರುವಾರ ನಡೆದ ಪಂದ್ಯಾಟದಲ್ಲಿ ನಾಲ್ಕನೇ ಕ್ವಾರ್ಟರ್ ಆರಂಭವಾಗುವಾಗ ೨-೨ ಗೋಲುಗಳಿಂದ ಸಮಬಲ ವಾಗಿದ್ದ ಪಂದ್ಯಾಟದಲ್ಲಿ, ಕೊನೆಯ ೨ ನಿಮಿಷವಿರುವಂತೆ ಕೋಣನಕಟ್ಟೆ ತಂಡಕ್ಕೆ ದೊರೆತ ಪೆನಾಲ್ಟಿಯನ್ನು ತಂಡದ ಪೃಥ್ವಿ ಗೋಲಿನ ಪೆಟ್ಟಿಗೆ ಕಡೆ ಹಾಕಿದರು. ಇದನ್ನು ತಡೆದ ಗೋಲು ಕೀಪರ್ ಸೋಮಣ್ಣ, ತಡೆದ ಸಂಭ್ರಮದಲ್ಲಿ ಮೈಮರೆತರು, ಆ ಕ್ಷಣ ಚೆಂಡು ಇದ್ದಕ್ಕಿಂದ್ದಂತೆ ಸ್ಪಿನ್ ಆಗಿ ಗೋಲು ಪೆಟ್ಟಿಗೆಗೆ ಸೇರಿತು. ಇದರಿಂದ ವಿಚಲಿತರಾದ ಸೋಮಣ್ಣ ಮತ್ತು ತಂಡ ಬೇಸರದಿಂದ ಹೊರ ನಡೆದರು. ಅದೃಷ್ಠದಾಟದಲ್ಲಿ ಕೋಣನಕಟ್ಟೆ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿತು.ಕೋಣನಕಟ್ಟೆ ತಂಡದ ಪರ ಪ್ರಧಾನ್ ಸೋಮಣ್ಣ ೨ ಮತ್ತು ಪೃಥ್ವಿ ೧ ಗೋಲನ್ನು ಬಾರಿಸಿದರು. ಕೂರ್ಗ್ ಚಾಲೆಂಜರ‍್ಸ್ ತಂಡದ ಪರವಾಗಿ ದೇಶ್ ಪೂವಯ್ಯ ಮತ್ತು ಸೋಮವಾರಪೇಟೆಯ ಲಿಖಿತ್ ಮಲ್ಲಪ್ಪ ತಲಾ ಒಂದು ಗೋಲು ಬಾರಿಸಿದರು.