ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ನೇ ಸಾಲಿನ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಪಂದ್ಯಾವಳಿ ವೇಳೆ ಅನುಸರಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳು, ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು, ಷರತ್ತುಗಳನ್ನು ಒಳಗೊಂಡಂತೆ ಸ್ಪಷ್ಟ ಮಾರ್ಗಸೂಚಿಯನ್ನು ಕುನ್ಹಾ ವರದಿ ಆಧರಿಸಿ ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಹೆಗಲಿಗೆ ವಹಿಸಲಾಗಿದೆ.

- ಕಾಲ್ತುಳಿತ ಕಾರಣ ನಿಂತಿದ್ದ ಪಂದ್ಯಗಳು

- ಕಠಿಣ ಷರತ್ತು ವಿಧಿಸಿ ಪಂದ್ಯಕ್ಕೆ ಒಪ್ಪಿಗೆ

====

- ಚಿನ್ನಸ್ವಾಮಿಯಲ್ಲಿ ಕ್ರಿಕೆಟ್‌ ಪಂದ್ಯದ ಬಗ್ಗೆ ಮಾರ್ಗಸೂಚಿ

- ಮಾರ್ಗಸೂಚಿ ಜಾರಿ ಹೊಣೆ ಗೃಹ ಸಚಿವ ಪರಂ ಹೆಗಲಿಗೆ

- ಕ್ರಿಕೆಟ್‌ ಪ್ರೇಮಿಗಳ ಪರ ನಿರ್ಧಾರ ಕೈಗೊಂಡ ಸರ್ಕಾರ

==

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ನೇ ಸಾಲಿನ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಪಂದ್ಯಾವಳಿ ವೇಳೆ ಅನುಸರಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳು, ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು, ಷರತ್ತುಗಳನ್ನು ಒಳಗೊಂಡಂತೆ ಸ್ಪಷ್ಟ ಮಾರ್ಗಸೂಚಿಯನ್ನು ಕುನ್ಹಾ ವರದಿ ಆಧರಿಸಿ ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಹೆಗಲಿಗೆ ವಹಿಸಲಾಗಿದೆ.

ನ್ಯಾ.ಕುನ್ಹಾ ವರದಿಯ ಶಿಫಾರಸಿನಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಅವುಗಳನ್ನು ಚಾಚೂತಪ್ಪದೆ ಅನುಸರಿಸಬೇಕೆಂಬ ಕಟ್ಟಾಜ್ಞೆ ವಿಧಿಸಬೇಕು, ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು ಎನ್ನುವ ಬಗ್ಗೆ ವಿವರವಾದ ನಿಯಮಗಳನ್ನು ರೂಪಿಸಿ ಐಪಿಎಲ್‌ ಪಂದ್ಯಾವಳಿಗಳಿಗೆ ಅನುಮತಿ ನೀಡಬೇಕು ಸಂಪುಟ ಸಭೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಆರ್‌ಸಿಬಿ ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಅಸುನೀಗಿದ ಘಟನೆ ಬಳಿಕ ಎಚ್ಚೆತ್ತ ಸರ್ಕಾರ ಇದರ ತನಿಖೆಗೆ ನ್ಯಾ.ಕುನ್ಹಾ ಸಮಿತಿ ರಚಿಸಿತ್ತು. ಸಮಿತಿ ತನ್ನ ವರದಿಯಲ್ಲಿ ಮುಂದೆ ಇಂಥ ಘಟನೆ ಜರುಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿವರವಾದ ಶಿಫಾರಸುಗಳನ್ನು ನೀಡಿತ್ತು.

ಆ ಶಿಫಾರಸುಗಳ ಅನುಸಾರ ಐಪಿಎಲ್‌ ಪಂದ್ಯಾವಳಿ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಶಿಯೇಷನ್‌(ಕೆಎಸ್‌ಸಿಎ), ಆರ್‌ಸಿಬಿ ಸೇರಿ ಕ್ರಿಕೆಟ್‌ ತಂಡಗಳು, ಪೊಲೀಸರು ಸೇರಿ ಸಂಬಂಧಪಟ್ಟ ಎಲ್ಲರ ಜವಾಬ್ದಾರಿಗಳನ್ನು ನಿಗದಿಪಡಿಸಿ ವಿವರವಾದ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸುವುದು, ಆ ಮಾರ್ಗಸೂಚಿ ಅನುಸರಿಸಲು ಒಪ್ಪಿದರಷ್ಟೇ ಐಪಿಎಲ್‌ ಪಂದ್ಯಾವಳಿಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಾರ್ಗಸೂಚಿ ಸಿದ್ಧಪಡಿಸುವುದು ಅವುಗಳ ಸಮರ್ಪಕ ಅನುಷ್ಠಾನದ ಹೊಣೆಯನ್ನು ಗೃಹ ಸಚಿವ ಪರಮೇಶ್ವರ್‌ ಅವರ ಹೆಗಲಿಗೆ ಹೊರಿಸಲಾಗಿದೆ ಎಂದು ತಿಳಿದು ಬಂದಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ನಂತರ ಬೆಂಗಳೂರಿನ ಐಪಿಎಲ್‌ ಪದ್ಯಾವಳಿಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸಲಾಗಿತ್ತು. ಇದು ರಾಜ್ಯದ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು. ಈ ಮಧ್ಯೆ, ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಆರ್‌ಸಿಬಿ ಪಂದ್ಯಾವಳಿಗಳನ್ನು ಮತ್ತೆ ಬೆಂಗಳೂರಿನಲ್ಲಿ ನಡೆಸಲು ಅವಕಾಶ ನೀಡುವುದಾಗಿ ಘೋಷಿಸಿದ್ದರು. ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನೂ ನಗರಕ್ಕೆ ತರಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಸಂಪುಟ ಸಭೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳ ಪರವಾದ ನಿರ್ಧಾರ ತೆಗೆದುಕೊಂಡಿದೆ.