ಹೊಸದಾಗಿ ಕೆಎಸ್‌ಸಿಎ ಸದಸ್ಯತ್ವ ನೀಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ನಡೆಸಲಾಗುವುದು. ಮಹಿಳೆಯರ ಕ್ರಿಕೆಟ್ ಉತ್ತೇಜನಕ್ಕೆ ಕ್ರಮಕೈಗೊಳ್ಳುತ್ತೇವೆ. ಕ್ರಿಕೆಟ್ ಬೆಳವಣಿಗೆ ಬೇಕಾದ ಎಲ್ಲ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದು ವೆಂಕಟೇಶ ಪ್ರಸಾದ್ ತಿಳಿಸಿದರು.
ಹುಬ್ಬಳ್ಳಿ:
ಶೀಘ್ರದಲ್ಲಿಯೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಪುನಾರಂಭವಾಗಲಿವೆ. ಈ ಕುರಿತು ಶೀಘ್ರವೇ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ ಪ್ರಸಾದ್ ಹೇಳಿದರು.ಇಲ್ಲಿನ ರಾಜ್ ನಗರದಲ್ಲಿರುವ ಕೆಎಸ್‌ಸಿಎ ಮೈದಾನಕ್ಕೆ ಅಧ್ಯಕ್ಷರಾದ ಬಳಿಕ ಬುಧವಾರ ಭೇಟಿ ನೀಡಿ, ಕಟ್ಟಡ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಕುರಿತು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಮನವಿಗೆ ಸ್ಪಂದಿಸಿರುವ ಅವರು ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದರು.ಈ ಹಿಂದಿನ ಆಡಳಿತ ಮಂಡಳಿ ಮಾಡಿರುವ ತಪ್ಪುಗಳನ್ನು ತಿದ್ದುಕೊಂಡು ಮುಂದಡಿ ಇಡುತ್ತೇವೆ. ರಾಜ್ಯದಲ್ಲಿ ಕ್ರಿಕೆಟ್‌ನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಹಲವಾರು ಯೋಜನೆ ಹಾಕಿಕೊಳ್ಳುತ್ತೇವೆ ಎಂದ ವೆಂಕಟೇಶ ಪ್ರಸಾದ್, ಕೆಎಸ್‌ಸಿಎ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ನಡೆಯುತ್ತಿರುವ ಕ್ಲಬ್‌ಹೌಸ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡ ಬಗ್ಗೆ ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ತಾಂತ್ರಿಕ ತಂಡದ ಜತೆಗೆ ಚರ್ಚಿಸಿ ಕ್ಲಬ್‌ಹೌಸ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಹೊಸದಾಗಿ ಕೆಎಸ್‌ಸಿಎ ಸದಸ್ಯತ್ವ ನೀಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ನಡೆಸಲಾಗುವುದು. ಮಹಿಳೆಯರ ಕ್ರಿಕೆಟ್ ಉತ್ತೇಜನಕ್ಕೆ ಕ್ರಮಕೈಗೊಳ್ಳುತ್ತೇವೆ. ಕ್ರಿಕೆಟ್ ಬೆಳವಣಿಗೆ ಬೇಕಾದ ಎಲ್ಲ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು.ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ-ಹೊಸ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಜತೆಗೆ ಹುಬ್ಬಳ್ಳಿ ಮೈದಾನದಲ್ಲಿ ಹೆಚ್ಚು ಕ್ರಿಕೆಟ್ ಪಂದ್ಯ ಆಯೋಜಿಸುವ ಜತೆಗೆ ಮಹಿಳಾ ಪಂದ್ಯಾವಳಿಗೆ ಅವಕಾಶ ನೀಡಲಾಗುವುದು ಎಂದ ಅವರು, ಮಹಿಳಾ ತಂಡ ವಿಶ್ವಕಪ್ ಗೆದ್ದ ಬಳಿಕ ಮಹಿಳಾ ಕ್ರಿಕೆಟರ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಹೀಗಾಗಿ ನಾವು ಅವರನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಪಂದ್ಯ ಆಯೋಜಿಸಲಾಗುವುದು ಎಂದರು.
ತಂಡದಲ್ಲಿ ಆಯ್ಕೆಯಾಗಲು ಅಡ್ಡದಾರಿಗಳಿಲ್ಲ. ಸತತ ಪ್ರಯತ್ನ, ಅತ್ಯುತ್ತಮ ಪ್ರದರ್ಶನ ತೋರಿದರೆ ಅವಕಾಶ ತಾನಾಗಿಯೇ ಒಲಿದು ಬರಲಿದೆ ಎಂದ ವೆಂಕಟೇಶ ಪ್ರಸಾದ್, ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಉತ್ತಮ ಅವಕಾಶವಿದ್ದು ಹುಬ್ಬಳ್ಳಿ ಮೈದಾನದಲ್ಲೂ ಪಂದ್ಯಾವಳಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಉಪಾಧ್ಯಕ್ಷ ಸುಜಿತ್ ಸೋಮಸುಂದರ್ ಹಾಗೂ ಜನರಲ್ ಸೆಕ್ರೆಟರಿ ಸಂತೋಷ ಮೆನನ್ ಮಾತನಾಡಿ, ಝೋನಲ್ ಅಕಾಡೆಮಿ ನಿರ್ಮಾಣ, ಉತ್ತಮ ತರಬೇತಿ, ಮೂಲಭೂತ ಸೌಕರ್ಯ, ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಕೆಎಸ್‌ಸಿಎ ಕಾರ್ಯದರ್ಶಿ ವಿನಯ ಮೃತ್ಯುಂಜಯ್, ಧಾರವಾಡ ವಲಯ ಸಂಯೋಜಕ ವೀರಣ್ಣ ಸವಡಿ, ವೀರೇಶ ಉಂಡಿ, ಅಮನ್ ಕಿತ್ತೂರ ಹಾಗೂ ಮುಖಂಡರಾದ ಅಲ್ತಾಫ್ ಕಿತ್ತೂರ ಸೇರಿದಂತೆ ಹಲವರಿದ್ದರು.