ಈ ಬಾರಿ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದು, ಗುಂಪು ಹಂತದಲ್ಲೇ ಹೊರಬಿದ್ದಿದೆ. ಟಿ20ಯಲ್ಲಿ ತಂಡದ ಕಳಪೆ ಪ್ರದರ್ಶನ ಈ ಬಾರಿ ಹೊಸದೇನಲ್ಲ

ಬೆಂಗಳೂರು : ಈ ಬಾರಿ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದು, ಗುಂಪು ಹಂತದಲ್ಲೇ ಹೊರಬಿದ್ದಿದೆ. ಟಿ20ಯಲ್ಲಿ ತಂಡದ ಕಳಪೆ ಪ್ರದರ್ಶನ ಈ ಬಾರಿ ಹೊಸದೇನಲ್ಲ. ತಂಡ ಸತತ 3 ಆವೃತ್ತಿಗಳಲ್ಲೂ ನಾಕೌಟ್‌ ಪ್ರವೇಶಿಸಲು ವಿಫಲವಾಗಿದ್ದು, ಚುಟುಕು ಕ್ರಿಕೆಟ್‌ನಲ್ಲಿ ಕರ್ನಾಟಕ ಕ್ರಿಕೆಟ್‌ನ ಗುಣಮಟ್ಟ ಕುಸಿಯುತ್ತಿದೆಯೇ ಎಂಬ ಅನುಮಾನ ಕಾಡುವುದು ಸಹಜ.

2018-19, 2019-20ರಲ್ಲಿ ಸತತವಾಗಿ ಚಾಂಪಿಯನ್‌ ಆಗಿದ್ದ ಕರ್ನಾಟಕ, 2022-23ರಲ್ಲಿ ಕೊನೆ ಬಾರಿ ಕ್ವಾರ್ಟರ್‌ ಫೈನಲ್‌ಗೇರಿತ್ತು. ಆ ಬಳಿಕ ತಂಡ ನಾಕೌಟ್‌ಗೇರಿಲ್ಲ. 2023-24ರಲ್ಲಿ 3, 2024-25ರಲ್ಲಿ 3 ಪಂದ್ಯ ಗೆದ್ದಿದ್ದ ತಂಡ, ಈ ಬಾರಿ ಕೇವಲ 2ರಲ್ಲಿ ಜಯಗಳಿಸಿದೆ. ಟೂರ್ನಿಯಲ್ಲಿ ಒಟ್ಟು 32 ತಂಡಗಳಿದ್ದು, 2 ಅಥವಾ ಅದಕ್ಕಿಂತ ಕಡಿಮೆ ಪಂದ್ಯದಲ್ಲಿ ಗೆದ್ದ ತಂಡಗಳು 8. ಇದರಲ್ಲಿ ಕರ್ನಾಟಕವೂ ಒಳಗೊಂಡಿದೆ.

ಕೈಕೊಟ್ಟ ಸ್ಟಾರ್‌ಗಳು:

ಈ ಬಾರಿ ಟೂರ್ನಿಯ ಅಂಕಿ ಅಂಶ ಗಮನಿಸಿದರೆ ದೇವದತ್‌ ಪಡಿಕ್ಕಲ್‌(309 ರನ್‌) ಮತ್ತು ಆರ್‌.ಸ್ಮರಣ್‌(319 ರನ್‌) ಹೊರತುಪಡಿಸಿ ಇತರೆಲ್ಲರೂ ವಿಫಲರಾಗಿದ್ದಾರೆ. ನಾಯಕ ಮಯಾಂಕ್‌ 7 ಪಂದ್ಯದಲ್ಲಿ 135, ಕರುಣ್‌ ನಾಯರ್‌ 6 ಪಂದ್ಯದಲ್ಲಿ 71 ರನ್‌, ಶ್ರೀಜಿತ್‌ 3 ಪಂದ್ಯದಲ್ಲಿ 13, ಅಭಿನವ್‌ ಮನೋಹರ್‌ 4 ಪಂದ್ಯದಲ್ಲಿ 27 ರನ್‌ ಕಲೆಹಾಕಿದ್ದಾರೆ. ಬೌಲರ್‌ಗಳೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ವೈಶಾಖ್‌ 8.9ರ ಎಕಾನಮಿಯಲ್ಲಿ 9 ವಿಕೆಟ್‌, ವಿದ್ವತ್‌ 10.5ರ ಎಕಾನಮಿಯಲ್ಲಿ 3, ವಿದ್ಯಾಧರ್‌ ಪಾಟೀಲ್‌ 10.34ರ ಎಕಾನಮಿಯಲ್ಲಿ 8 ವಿಕೆಟ್‌ ಪಡೆದಿದ್ದಾರೆ.

ವಿಜಯ್‌ ಹಜಾರೆಯಲ್ಲಿ ತಂಡಕ್ಕೆ ಅಗ್ನಿಪರೀಕ್ಷೆ

ವಿಜಯ್ ಹಜಾರೆ ಏಕದಿನ ಟೂರ್ನಿ ಡಿ.24ರಿಂದ ಆರಂಭಗೊಳ್ಳಲಿದ್ದು, ಕರ್ನಾಟಕಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ. ಕಳೆದ ಬಾರಿ ಚಾಂಪಿಯನ್‌ ಆಗಿದ್ದರೂ ಈ ಬಾರಿ ತಾರಾ ಆಟಗಾರರು ಫಾರ್ಮ್‌ನಲ್ಲಿಲ್ಲ. ದೇವದತ್‌, ಸ್ಮರಣ್‌ ಮಾತ್ರವಲ್ಲದೆ ಕರುಣ್‌ ನಾಯರ್‌, ಮಯಾಂಕ್‌, ಅಭಿನವ್‌, ಶ್ರೇಯಸ್‌ ಕೂಡಾ ಮಿಂಚಿದರಷ್ಟೇ ತಂಡ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಲಿದೆ.